ಕಲಬುರಗಿ: ಭಾಗವು ಶರಣ, ಸಂತ, ಸೂಫಿಗಳ ತವರೂರು ಆಗಿರುವಂತೆ ಸಾಹಿತ್ಯ-ಸಂಗೀತದ ನೆಲೆಬೀಡಾಗಿದೆ. ಶ್ರೀವಿಜಯ, ಜೇಡರ ದಾಸಿಮಯ್ಯ, ಕಡಕೋಳ ಮಡಿವಾಳಪ್ಪ ಅವರಂತಹ ಸಂತ ಮಹಾಂತರಿಂದ ಆರಂಭವಾಗಿ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯವರೆಗೂ ಕಲಬುರ್ಗಿ ತನ್ನ ಹಿರಿಮೆಯನ್ನು ಮೆರೆದಿದೆ ಎಂದು ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ವೀರೇಂದ್ರ ಪಾಟೀಲ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಎಂ. ಎಸ್.ಗಣಾಚಾರಿ ಅವರು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ ಕಾಲೇಜು ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಎಂ. ನದಾಫ್ ಅವರು ಮಾತನಾಡಿ ಕಾವ್ಯದ ಹುಟ್ಟಿಗೆ ಸಂವೇದನೆ ಮೂಲವಾಗಿರುತ್ತದೆ. ಸಂತಸದಲ್ಲಿ ದುಃಖದಲ್ಲಿ ಹುಟ್ಟುವ ಕಾವ್ಯವೇ ಹೆಚ್ಚು ಪರಿಣಾಮಕಾರಿ ಆಗಿರುವುದಕ್ಕೆ ಅನೇಕ ಉದಾಹರಣೆಗಳು ಇವೆ ಎಂದರು.
ಇನ್ನೊಬ್ಬ ಮುಖ್ಯ ಅತಿಥಿ ಭಾರತ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಶಂಕರಪ್ಪ ಮಣೂರ ಅವರು ಮಾತನಾಡಿದರು. ಶಿವಲಿಂಗೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಸಂಜಯಕುಮಾರ ದುಬೆ ಅವರು ಸಸಿಗೆ ನೀರೆರೆಯುವ ಮೂಲಕ ಕವಿಗೋಷ್ಠಿಯನ್ನು ಉದ್ಘಾಟಿಸಿದರು. ಡಾ. ರಾಜೇಶ್ ಅಲ್ಮೆಲ್ಕರ್ ರಾಹುಲ್ ಸಿಂಪಿ ಅತಿಥಿಯಾಗಿದ್ದರು.
ಪ್ರೇಮಿಗಳ ದಿನಾಚರಣೆ, ರೈತರ ಸಮಸ್ಯೆ, ದುಶ್ಚಟಗಳ ಪರಿಣಾಮ, ಸಾಮಾಜಿಕ ಜಾಲತಾಣ, ಕಲ್ಯಾಣ ಕರ್ನಾಟಕ ಮುಂತಾದ ವಿಷಯಗಳ ಕುರಿತು ಕವನಗಳನ್ನ
ಶ್ವೇತಾ ಹೊಸಮನಿ,ರಮೇಶ ಚಿಂಚೋಳಿ, ಸತೀಶ ವಾಲಿ, ರಾಜೇಶ ಆಲಮೇಲಕರ್, ಕೆ ನಾರಾಯಣ, ಅಶೋಕ ತಂಬಾಕೆ, ಚಂದ್ರು ಜಮ ಶೆಟ್ಟಿ, ಮಂಜುನಾಥ ಹದರಿ, ರಾಹುಲ್ ಸಿಂಗೆ ಇವರು ಕವನ ವಾಚನ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ರಾಹುಲ ಸಿಂಪಿ ಸ್ವಾಗತ ಗೀತೆ ಹಾಡಿದರು. ಕೆ. ನಾರಾಯಣ ಕಾರ್ಯಕ್ರಮ ನಿರ್ವಹಿಸಿದರು. ಅರುಣಕುಮಾರ್ ರಾಥೋಡ್ ವಂದಿಸಿದರು.