ಆಳಂದ: ಪಟ್ಟಣದಲ್ಲಿ ಆರಂಭವಾಗಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಭಾರತದ ಮುಂಚೂಣಿಯ ಕೈಗಾರಿಕಾ ಕಂಪನಿ ಟಾಟಾ ಟೆಕ್ನಾಲಜಿಸ್ ರಾಜ್ಯ ಸರ್ಕಾರದ ಜೊತೆ ಮಾಡಿಕೊಂಡಿರುವ ಒಪ್ಪಂದದಂತೆ ತನ್ನ ಅತ್ಯಾಧುನಿಕ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಶೀಘ್ರದಲ್ಲಿಯೇ ಆರಂಭಿಸಲಿದೆ.
ಈ ಕುರಿತು ಇತ್ತೀಚಿಗೆ ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಅವರನ್ನು ಭೇಟಿ ಆದ ಕಂಪನಿಯ ವಕ್ತಾರ ಶಿವರಾಜ ಗೊಬ್ಬುರ, ಟಾಟಾ ಟೆಕ್ನಾಲಜಿಸ್ ಕಂಪನಿ ಆರಂಭಿಸಲಿರುವ ಕೌಶಲ್ಯ ಅಭಿವೃದ್ಧಿ ಕೇಂದ್ರದ ಮಾಹಿತಿಯನ್ನು ಶಾಸಕರ ಜೊತೆ ಹಂಚಿಕೊಂಡರು.
ಕೌಶಲ್ಯ ಕೇಂದ್ರವು ೮ ಅಡವಾನ್ಸಡ್ ಸರ್ಟಿಫೀಕೆಟ್ ಕೊರ್ಸನ್ನು ನಡೆಸಲಿದೆ ಇದಕ್ಕಾಗಿ ಪ್ರಯೋಗಾಲಯ ಆರಂಭಿಸಲು ೩೧ ಕೋಟಿ ರೂಪಾಯಿ ವೆಚ್ಚ ಮಾಡಲಿದೆ. ಇದರಿಂದ ಈ ಭಾಗದ ವಿದ್ಯಾರ್ಥಿಗಳು ಉನ್ನತ ಮಟ್ಟದ ಕೈಗಾರಿಕಾ ತರಬೇತಿಯ ಲಾಭ ಪಡೆಯಲಿದ್ದಾರೆ.
ಕೊರಳ್ಳಿ ಹತ್ತಿರ ಲಭ್ಯವಿರುವ ಸರ್ಕಾರಿ ಜಮೀನಿನಲ್ಲಿ ಈಗಾಗಲೇ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದ ನೂತನ ಕಟ್ಟಡ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ ಅದರ ಜೊತೆಯಲ್ಲಿಯೇ ನಮ್ಮ ತರಬೇತಿ ಕೇಂದ್ರದ ಉಪಕರಣಗಳನ್ನು ಅಳವಡಿಸುವ ಕಾರ್ಯ ಜರುಗಲಿದೆ ಎಂದು ತಿಳಿಸಿದ್ದಾರೆ.
ಈ ಯೋಜನೆಯ ಮುಖ್ಯ ಉದ್ದೇಶ ಸರ್ಕಾರದ ಅಧೀನದ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರಗಳನ್ನು ಉನ್ನತಿಕರಿಸುವುದು ಆ ಮೂಲಕ ಉತ್ಕೃಷ್ಟ ಗುಣಮಟ್ಟದ ತರಬೇತಿ ಈ ಭಾಗದ ವಿದ್ಯಾರ್ಥಿಗಳಿಗೆ ನೀಡಿ ಅವರಲ್ಲಿ ವೃತ್ತಿ ಕೌಶಲ್ಯವನ್ನು ಬಲಪಡಿಸುವುದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಹರ್ಷಾನಂದ ಗುತ್ತೇದಾರ, ಡಾ. ರಾಘವೇಂದ್ರ ಚಿಂಚನಸೂರ ಇದ್ದರು.