ವಾಡಿ: ಸಮರ್ಪಕವಾದ ಸಾರಿಗೆ ಸೌಲಭ್ಯ ಇಲ್ಲದ ಕಾರಣ ಕಾಲೇಜುಗಳಿಗೆ ಹೋಗಲು ಅನಾನುಕೂಲವಾಗುತ್ತಿದ್ದು, ಕೂಡಲೇ ವಾಡಿ-ಚಿತ್ತಾಪುರ ನಡುವೆ ಬಸ್ ಸೌಲಭ್ಯ ಒದಗಿಸಬೇಕು ಎಂದು ಅಗ್ರಹಿಸಿ ವಿದ್ಯಾರ್ಥಿಗಳು ಬುಧವಾರ ರಾವೂರ ವೃತ್ತ ಬಳಿಯ ಕಲಬುರಗಿ-ಯಾದಗಿರಿ ರಾಷ್ಟ್ರೀಯ ಹೆದ್ದಾರಿ-೧೫೦ ತಡೆದು ಪ್ರತಿಭಟನೆ ನಡೆಸಿದರು.
ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ) ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾದ ರಾವೂರ, ವಾಡಿ, ಇಂಗಳಗಿ, ಚಾಮನೂರ, ಕಡಬೂರ, ಹಳಕರ್ಟಿ, ಲಾಡ್ಲಾಪುರ, ಬಳವಡಗಿ, ಕೊಂಚೂರ ಗ್ರಾಮಗಳ ನೂರಾರು ಕಾಲೇಜು ವಿದ್ಯಾರ್ಥಿಗಳು ಸಾರಿಗೆ ಇಲಾಖೆಯ ವಿರುದ್ಧ ಘೋಷಣೆ ಕೂಗಿದರು. ವಾಡಿ-ಚಿತ್ತಾಪುರ ಹಾಗೂ ವಿವಿಧ ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ಸಾರಿಗೆ ಬಸ್ ಡಿಕ್ಕಿ: ಮೃತ ಕುಟುಂಬಕ್ಕೆ ಪರಿಹಾರಕ್ಕೆ ಒತ್ತಾಯಿಸಿ ರಸ್ತೆ ತಡೆದು ಪ್ರತಿಭಟನೆ
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಎಐಡಿಎಸ್‌ಒ ಅಧ್ಯಕ್ಷ ಗೌತಮ ಪರತೂರಕರ, ಸ್ಥಳೀಯವಾಗಿ ಕಾಲೇಜು ಸೌಲಭ್ಯ ಇಲ್ಲದ ಕಾರಣ ವಾಡಿ ಪಟ್ಟಣ ಹಾಗೂ ರಾವೂರ ಗ್ರಾಮ ಸೇರಿದಂತೆ ಅನೇಕ ಗ್ರಾಮಗಳಿಂದ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣಕ್ಕಾಗಿ ಪ್ರತಿನಿತ್ಯ ಚಿತ್ತಾಪುರಕ್ಕೆ ಹೋಗಿ ಬರುತ್ತಾರೆ. ಸಾರ್ವಜನಿಕರೂ ಕೂಡ ವಿವಿಧ ಸರಕಾರಿ ಕೆಲಸ ಕಾರ್ಯಗಳಿಗಾಗಿ ನಿತ್ಯ ತಾಲೂಕು ಕೇಂದ್ರಕ್ಕೆ ಹೋಗಿ ಬರುತ್ತಾರೆ. ಸಾರಿಗೆ ಸೌಲಭ್ಯ ಉತ್ತಮಪಡಿಸಬೇಕಾದ ಜನಪ್ರತಿನಿಧಿಗಳು ಹಾಗೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ.
ಶಹಾಬಾದ-ಚಿತ್ತಾಪುರ ಮಧ್ಯೆ ಬೆಳಗ್ಗೆ ಒಂದು ಬಸ್ ಬರುತ್ತಿದ್ದು, ಅದು ಪ್ರಯಾಣಿಕರಿಂದ ಕಿಕ್ಕಿರಿದಿರುತ್ತದೆ. ವಿದ್ಯಾರ್ಥಿಗಳು ಉಸಿರುಗಟ್ಟುವಂತಹ ಬಸ್ಸಿನಲ್ಲಿ ಪ್ರಯಾಣ ಬೆಳೆಸಿ ಹಿಂಸೆ ಅನುಭವಿಸುತ್ತಿದ್ದಾರೆ. ವಾಡಿ ನಗರದಿಂದ ಚಿತ್ತಾಪುರಕ್ಕೆ ಬಸ್ ಸೌಲಭ್ಯವಿಲ್ಲ. ಕಳೆದ ಹಲವು ದಶಕಗಳಿಂದ ಖಾಸಗಿ ವಾಹನಗಳನ್ನೇ ನಂಬಿಕೊಂಡು ತಾಲೂಕು ಕೇಂದ್ರಕ್ಕೆ ಹೋಗಬೇಕಾದ ದುಸ್ಥಿತಿಯಿದೆ. ಬಹುತೇಕ ಪೋಷಕರು ಬೈಕ್‌ಗಳ ಮೇಲೆ ಮಕ್ಕಳನ್ನು ಚಿತ್ತಾಪುರಕ್ಕೆ ಬಿಟ್ಟುಬರುತ್ತಾರೆ. ಇತ್ತೀಚೆಗೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದೆ.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕ ಪತ್ರ ನೀಡುವಂತೆ ಆಗ್ರಹ
ಅನೇಕ ಜನ ಅಪಘಾತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಆದರೂ ತಾಲೂಕು ಆಡಳಿತ ವಿದ್ಯಾರ್ಥಿಗಳ ಗೋಳಾಟ ತಪ್ಪಿಸಲು ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಪರತೂರಕರ, ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದೊಂದಿಗೆ ಚೆಲ್ಲಾಟವಾಡದೆ ವಾಡಿ-ಚಿತ್ತಾಪುರ ಮಧ್ಯೆ ಸಿಟಿ ಬಸ್ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು. ಬಸ್ ಸೌಲಭ್ಯ ಒದಗಿಸಲು ಹಿಂದೇಟು ಹಾಕಿದರೆ, ಚಿತ್ತಾಪುರ ಬಸ್ ಡಿಪೋ ಕಚೇರಿಗೆ ವಿದ್ಯಾರ್ಥಿಗಳು ಕೆಲವೇ ದಿನಗಳಲ್ಲಿ ಮುತ್ತಿಗೆ ಹಾಕಿ ಉಗ್ರ ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಎಐಡಿಎಸ್‌ಒ ಕಾರ್ಯದರ್ಶಿ ವೆಂಕಟೇಶ ದೇವದುರ್ಗಾ, ಮುಖಂಡರಾದ ಗೋವಿಂದ ಯಳವಾರ, ಅರುಣಕುಮಾರ ಹಿರೆಬಾನರ, ದತ್ತಾತ್ರೇಯ ಹುಡೇಕರ, ಸಿದ್ದರಾಜ ಮದ್ರಿ, ಮಹೆಬೂಬ ಖಾನ್, ಅನ್ವರಖಾನ್, ಜಗದೀಶ ಪೂಜಾರಿ, ವಿದ್ಯಾರ್ಥಿಗಳಾದ ವಿಶಾಲ, ವಿರೇಶ ಮಲ್ಕಂಡಿ, ಅರುಣ ಮಲ್ಕಂಡಿ, ಭಾಗ್ಯಶ್ರೀ, ಪಾರ್ವತಿ, ಮಲ್ಕಣ್ಣಾ, ರಾಜೇಶ, ಬಸಂತಕುಮಾರ, ಭೀಮರೆಡ್ಡಿ, ಶಾಂತಕುಮಾರ, ರಾಹುಲ, ಮಹ್ಮದ್ ಖೈಫ್, ಶೇರು, ರೋಷಣಿ ಸೇರಿದಂತೆ ನೂರಾರು ಜನ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮನವಿಪತ್ರ ಸ್ವೀಕರಿಸಲು ಪ್ರತಿಭಟನಾ ಸ್ಥಳಕ್ಕೆ ಒಂದುತಾಸು ತಡವಾಗಿ ಆಗಮಿಸಿದ ಅಸಿಸ್ಟೆಂಟ್ ಟ್ರಾಫಿಕ್ ಇನ್ಸ್‌ಫೆಕ್ಟರ್ ಭೋಜಪ್ಪ ಛಲವಾದಿ ಜತೆ ವಿದ್ಯಾರ್ಥಿ ನಾಯಕರು ವಾಗ್ವಾದ ನಡೆಸಿದ ಪ್ರಸಂಗ ನಡೆಯಿತು.