ಕಲಬುರಗಿ: ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರಿಂದ ಹೇರೂರು (ಬಿ) ಗ್ರಾಮದಲ್ಲಿ ಶನಿವಾರ ನಡೆಯಬೇಕಿದ್ದ ಗ್ರಾಮ ವಾಸ್ತವ್ಯ ಮತ್ತು ಜನತಾ ದರ್ಶನ ಕಾರ್ಯಕ್ರಮ ಭಾರಿ ಮಳೆಯ ಕಾರಣ ಮೂಂದೂಡಲಾಗಿದೆ ಹೊರತು ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ಮುಂದೂಡಿಕೆಯಿಲ್ಲ. ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ಹೇರೂರು(ಬಿ) ಗ್ರಾಮದಲ್ಲಿ ವಿವಿಧ ಮೂಲಸೌಕರ್ಯಗಳನ್ನು ಕಲ್ಪಿಸಲು ನೀಡಲಾಗಿರುವ 28 ಭರವಸೆಗಳನ್ನು ಈಡೇರಿಸಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಶನಿವಾರ ಕಲಬುರಗಿ ತಾಲೂಕಿನ ಹೇರೂರು(ಬಿ) ಗ್ರಾಮಕ್ಕೆ ಭೇಟಿ ಜನತಾ ದರ್ಶನ ನಡೆಯಬೇಕಾಗಿದ್ದ ವೇದಿಕೆ ಸ್ಥಳ ವೀಕ್ಷಿಸಿದ ನಂತರ ಗ್ರಾಮ ಪಂಚಾಯತ ಆವರಣದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು. ಹೇರೂರು(ಬಿ) ಗ್ರಾಮದಲ್ಲಿನ ಕುಂದುಕೊರತೆಗಳು ನಮ್ಮ ಗಮನಕ್ಕೆ ಬಂದಿವೆ. ಮುಖ್ಯಮಂತ್ರಿಗಳ ಪ್ರವಾಸದ ಹಿನ್ನೆಲೆಯಲ್ಲಿ ಈಗಾಗಲೆ 6 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಯನ್ನು ಆರಂಭಿಸಲಾಗಿದೆ. ಇದಲ್ಲದೆ ಸಮಾಜ ಕಲ್ಯಾಣ ಸಚಿವನಾಗಿ ಇಲಾಖೆಯಿಂದ ಪ್ರಗತಿ ಕಾಲೋನಿ ಯೋಜನೆಯಡಿ ಗ್ರಾಮಕ್ಕೆ 1.5 ಕೋಟಿ ರೂ. ಮಂಜೂರು ಮಾಡಿದ್ದೇನೆ ಎಂದರು.
ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಕೆಲವು ಕಾಮಗಾರಿಗಳನ್ನು ತರಾತುರಿಯಲ್ಲಿ ಕೈಗೊಂಡಿದ್ದು, ಇದೀಗ ಅವುಗಳನ್ನು ನಿಧಾನವಾಗಿಯಾದರು ಪರವಾಗಿಲ್ಲ ಗುಣಮಟ್ಟದಿಂದ ಕೂಡಿರುವಂತೆ ಕಾಮಗಾರಿಗಳು ನಿಗದಿತ ಅವಧಿಯಲ್ಲಿಯೆ ಅನುಷ್ಠಾನವಾಗಬೇಕು ಮತ್ತು ಗ್ರಾಮ ವಾಸ್ತವ್ಯ ಮುಂದೂಡಿಕೆಯಾಗಿದೆ ಅಂತ ಯಾವುದೇ ಕಾಮಗಾರಿಗಳನ್ನು ಅರ್ಧಕ್ಕೆ ನಿಲ್ಲಿಸಬಾರದು ಎಂದು ಈಗಾಗಲೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು.
ಮುಖ್ಯಮಂತ್ರಿಗಳನ್ನು ಮುಂದಾದರು ಗ್ರಾಮ ವಾಸ್ತವ್ಯಕ್ಕೆ ಕರೆದುಕೊಂಡು ಬರಬೇಕು ಎಂಬ ಗ್ರಾಮಸ್ಥರ ಒತ್ತಾಯಕ್ಕೆ ಉತ್ತರಿಸಿದ ಸಚಿವರು, ೧೧೦ ಕೋಟಿ ರೂ. ವೆಚ್ಚದಲ್ಲಿ ಪಕ್ಕದ ಚಿನ್ನಮಳ್ಳಿ ಗ್ರಾಮದಲ್ಲಿ ಬ್ರಿಡ್ಜ್-ಕಂ-ಬ್ಯಾರೇಜ್ ಕಾಮಗಾರಿಯ ಅಡಿಗಲ್ಲು ಸಮಾರಂಭಕ್ಕೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗುತ್ತಿದ್ದು, ಅಂದೆ ಹೇರೂರು(ಬಿ) ಗ್ರಾಮಕ್ಕೆ ಮುಖ್ಯಮಂತ್ರಿಗಳನ್ನು ಕರೆದುಕೊಂಡು ಬಂದು ನಿಮ್ಮೊಂದಿಗೆ ಸಂವಾದಕ್ಕೆ ಅವಕಾಶ ಮಾಡಿಕೊಡಲಾಗುವುದು. ಸಾಧ್ಯವಾದರೆ ಗ್ರಾಮಸ್ಥರ ಕುಂದುಕೊರತೆ ಪರಿಹಾರಕ್ಕೆ ಮುಂದಿನ ದಿನದಲ್ಲಿ ಇಲ್ಲಿಯೆ ಜನಸ್ಪಂದನಾ ಸಭೆ ಸಹ ನಡೆಸಲಾಗುವುದು. ಜಿಲ್ಲೆಯಾದ್ಯಂತ ೮೫ ಸಾವಿರ ಜನರು ಸಾಲ ಮನ್ನಾ ಯೋಜನೆಯ ಪ್ರಯೋಜನೆ ಪಡೆದಿದ್ದು, ಯೋಜನೆಯನ್ವಯ ಎಲ್ಲಾ ಅರ್ಹ ರೈತರ ಸಾಲ ಮನ್ನಾ ಪ್ರಕ್ರಿಯೆ ಜಾರಿಯಲ್ಲಿದೆ ಎಂದರು.
ಅಫಜಲಪೂರ ಶಾಸಕ ಎಂ.ವೈ. ಪಾಟೀಲ್ ಮಾತನಾಡಿ ಇಂದು ಗ್ರಾಮದಲ್ಲಿ ೨೫ ಸಾವಿರ ಜನಸಂಖ್ಯೆಯಿಂದ ಹಬ್ಬದ ವಾತಾವರಣ ಇರಬೇಕಿತ್ತು. ಮಳೆ ಬಿದ್ದ ಕಾರಣ ಸಿ.ಎಂ.ಗ್ರಾಮ ವಾಸ್ತವ್ಯ ಮುಂದೂಡಿಕೆಯಾಗಿದೆ. ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಪಶು ಆಸ್ಪತ್ರೆ ಮೇಲ್ದರ್ಜೆಗೆ, ನೂತನ ಗ್ರಾಮ ಪಂಚಾಯಿತಿ ಕಟ್ಟಡ, ರಾಷ್ಟ್ರೀಕೃತ ಬ್ಯಾಂಕ್ ಮಂಜೂರು, ೧.೧೮ ಕೋಟಿ ರೂ ವೆಚ್ಚದಲ್ಲಿ ಪ್ರೌಢ ಶಾಲೆ ಕಟ್ಟಡ, ಹುಲಿಕಂಠೇಶ್ವರ ದೇವಸ್ಥಾನ ಬಳಿ ೨ ಕೊಟಿ ರೂ. ವೆಚ್ಚದಲ್ಲಿ ಸಾಂಸ್ಕೃತಿಕ ಸಮುದಾಯ ಭವನ ನಿರ್ಮಾಣ, ಫರತಾಬಾದ್ ಕ್ರಾಸ್-ಹಾಗರಗುಂಡಗಿ-ಹೇರೂರ(ಬಿ) ರಸ್ತೆ ಕಾಮಗಾರಿ ಸೇರಿದಂತೆ ಗ್ರಾಮದ ಪ್ರಮುಖ ೨೮ ಬೇಡಿಕೆಗಳ ಪಟ್ಟಿ ಈಗಾಗಲೆ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದು, ಅದೆಲ್ಲವು ಬರುವಂತಹ ದಿನಗಳಲ್ಲಿ ಹಂತ ಹಂತವಾಗಿ ಅನುಷ್ಠಾನಕ್ಕೆ ಬರಲಿವೆ ಎಂದರು.
ಜನರಿಂದ ಅರ್ಜಿ ಸ್ವೀಕರಿಸಿ:– ಮುಖ್ಯಮಂತ್ರಿಗಳ ಜನತಾ ದರ್ಶನಕ್ಕೆಂದು ಬಹುತೇಕರು ಅರ್ಜಿಯನ್ನು ಸಿದ್ದಪಡಿಸಿಕೊಂಡು ಕೈಯಲ್ಲಿಟ್ಟುಕೊಂಡಿರುವುದನ್ನು ಗಮನಿಸಿದ ಸಚಿವ ಪ್ರಿಯಾಂಕ ಖರ್ಗೆ ಅವರು ಸಾರ್ವಜನಿಕರು ಸಲ್ಲಿಸುವ ವೈಯಕ್ತಿಕ ಅರ್ಜಿಗಳನ್ನು ತಕ್ಷಣವೆ ಅವರಿಂದ ಪಡೆದುಕೊಂಡು ಜನಸ್ಪಂದನಾದಲ್ಲಿ ಸೂಕ್ತ ವಿಲೇವಾರಿ ಮಾಡುವಂತೆ ಸ್ಥಳದಲ್ಲಿದ್ದ ತಹಶೀಲ್ದಾರ ಕೆ.ಸಂಜೀವಕುಮಾರ ದಾಸರ ಅವರಿಗೆ ನಿರ್ದೇಶನ ನೀಡಿದ್ದರು.
ಶಾಲೆಗೂ ಭೇಟಿ ನೀಡಿದ ಸಚಿವರು- ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯದಲ್ಲಿ ಸಾಯಂಕಾಲದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಾಸ್ತವ್ಯಕ್ಕೆ ಗುರುತಿಸಲಾದ ಪ್ರಾಥಮಿಕ ಶಾಲೆಗೂ ಸಚಿವರು ಭೇಟಿ ನೀಡಿದರು. ೩ನೇ ತರಗತಿ ಅಭ್ಯಾಸ ಕೊಠಡಿಗೆ ತೆರಳಿದ ಸಚಿವರು ಹಾಜರಿದ್ದ ಮಕ್ಕಳನ್ನು ಆಪ್ತದಿಂದ ಮಾತಾಡಿಸಿ ಹೆಚ್.ಡಿ.ಕುಮಾರಸ್ವಾಮಿ ಯಾರು ಎಂದು ಪ್ರಶ್ನಿಸಿದರು. ಆಗ ೩ನೇ ತರಗತಿಯ ವಿದ್ಯಾರ್ಥಿನಿ ಮುಸ್ಕಾನ್ ನಮ್ಮ ರಾಜ್ಯದ ಮುಖ್ಯಮಂತ್ರಿ ಎಂದು ತಟ್ಟಂತೆ ಉತ್ತರಿಸಿದರು.
ನಂತರ ಸಚಿವರು ೮ನೇ ತರಗತಿ ಅಭ್ಯಾಸದ ಕೋಣೆಗೆ ಹೋಗಿ ಮಕ್ಕಳನ್ನು ಕಂಡು ಅವರ ಕುಂದುಕೊರತೆಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಗ್ರಾಮದ ಪ್ರೌಢ ಶಾಲೆಯಲ್ಲಿ ಬೆಂಚ್‌ಗಳಿಲ್ಲ ಮತ್ತು ನಮ್ಮ ಮುಂದಿನ ವ್ಯಾಸಂಗಕ್ಕೆ ಅನುಕೂಲವಾಗಲು ಇಲ್ಲಿಯೆ ಪದವಿ ಪೂರ್ವ ಕಾಲೇಜು ಆರಂಭಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದ್ದರು. ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ ಮುಂದೂಡಿಕೆ ಕುರಿತಂತೆ ವಿದ್ಯಾರ್ಥಿನಿ ಈರಮ್ಮ ಮಾತನಾಡಿ ಸಿ.ಎಂ. ಪ್ರೋಗ್ರಾಂ ಕ್ಯಾನ್ಸಲ್ ಆಗಿದ್ದು ಬಹಳ್ ಬೇಜಾರಾಗಿದೆ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಜ್ಜಾಗಿದ್ದೇವು. ಮಳೆ ಬಂದಿದ್ದು ಒಂದೆಡೆ ಖುಷಿ ಇದೆ, ಇನ್ನೊಂದೆಡೆ ಸಿ.ಎಂ. ಬರದಿರುವುದು ನಿರಾಸೆಯಾಗಿದೆ. ಅವರು ಬಂದಿದ್ದರೆ ಇನ್ನು ಖುಷಿಯಾಗಿರುತ್ತಿದ್ದೇವು ಎಂದು ಅಭಿಪ್ರಾಯ ವ್ಯಕ್ತಪಡಿಸಿದಳು. ನಿಮ್ಮ ಶಾಲೆಗೆ ೮ ಶೌಚಾಲಯ ಕೋಣೆಗಳನ್ನು ನಿರ್ಮಿಸಲಾಗಿದೆ. ಇಷ್ಟೊಂದು ಸಂಖ್ಯೆಯ ಶೌಚಾಲಯಗಳು ರಾಜ್ಯದ ಯಾವ ಶಾಲೆಗಳಲ್ಲಿಯೂ ಇಲ್ಲ ಎನ್ನುವ ಮೂಲಕ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಮಕ್ಕಳಿಗೆ ಶೌಚಾಲಯ ಬಳಸುವಂತೆ ಪ್ರೆರೇಪಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರ, ಜಿಲ್ಲಾ ಪಂಚಾಯತ್ ಸದಸ್ಯರಾದ ಶಿವಾನಂದ ಪಾಟೀಲ, ದಿಲೀಪ ಪಾಟೀಲ, ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಡಾ.ರಾಜಾ ಪಿ., ಸಹಾಯಕ ಆಯುಕ್ತ ರಾಹುಲ ಪಾಂಡ್ವೆ, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಮುಖಂಡರು ಇದ್ದರು.