ಅಕ್ಕನ ವಚನ ಒಂದು; ಅರ್ಥ ಎರಡು 

0
651

12ನೇ ಶತಮಾನದ ಬಸವಾದಿ ಶರಣರು ರಚಿಸಿದ ಪ್ರತಿಯೊಂದು ವಚನಗಳು ಆತ್ಮಶುದ್ಧಿಯ ಜತೆಗೆ ಸಮಾಜ ಶುದ್ಧಿಯ ಉದ್ದೇಶವಿಟ್ಟುಕೊಂಡು ಬರೆದವುಗಳಾಗಿವೆ. ಸಮಾಜದಲ್ಲಿ ಬದಲಾವಣೆ ತರುವ ಮೂಲಕ ಹೊಸ ಸಮಾಜ ಕಟ್ಟುವ ನಿಟ್ಟಿನಲ್ಲಿ ಬರೆದ ಆ ವಚನಗಳು ವ್ಯಕ್ತಿ ಕಲ್ಯಾಣದ ಜತೆಗೆ ಸಮಾಜ ಕಲ್ಯಾಣ ಬಯಸುವಂತಾಗಿವೆ.

ಬದುಕಿನಲ್ಲಿ ಅದು ಬೇಕು, ಅದನ್ನು ತನ್ನದಾಗಿಸಿಕೊಳ್ಳಬೇಕು ಎಂಬ ವಯಸ್ಸಿನಲ್ಲೇ ಅದು ತನಗೆ ಬೇಡ, ಅದನ್ನು ತೆಗೆದುಕೊಂಡು ನಾನೇನು ಮಾಡಲಿ ಎಂಬ ಉನ್ನತ ಸ್ಥಿತಿ ತಲುಪಿ ಹಸಿವೆ ನೀನು ನಿಲ್ಲು, ತೃಷೆಯೇ ನೀನು ನಿಲ್ಲು ಕಾಮವೇ ನೀನು ನಿಲ್ಲು ಎಂದು ಹೊರಟ ಅಕ್ಕಮಹಾದೇವಿ ಆಸೆ ತೊರೆದು, ರೋಷ ಬಿಚ್ಚಿಟ್ಟು ಚನ್ನ ಮಲ್ಲಿಕಾರ್ಜುನನಿಗೆ ಮನವ ಮಾರಿದವಳು.

Contact Your\'s Advertisement; 9902492681

ನೂರು ಪೆಟ್ಟುಗಳನ್ನು ತಿಂದ ಒಂದು ಕಲ್ಲು ಅದ್ಭುತ ಶಿಲ್ಪಕಲೆ ಆಗುವಂತೆ ಮನೆ, ಮನೆಗೆ ತಪ್ಪದೆ ತಿರುಗಿ ಬಿಕ್ಷೆ ಬೇಡುವಂತೆ ಮಾಡು, ಬಿಕ್ಷೆ ಬೇಡಿದರೆ ಯಾರೂ ನೀಡದಂತೆ ಮಾಡು, ಒಂದುವೇಳೆ ಅಕಸ್ಮಾತ್ತಾಗಿ ಯಾರಾದರೂ ನೀಡಿದರೂ ಅದನ್ನು ನಾನು ಎತ್ತಿಕೊಳ್ಳುವ ಮುನ್ನ  ನಾಯಿ ಬಂದು ಅದನ್ನು ಎತ್ತಿಕೊಂಡು ಹೋಗುವಂತೆ ಮಾಡು ಎಂದು ತನ್ನ ಮನಸ್ಸನ್ನು ತಾನೇ ತಹಬಂದಿಗೆ ತಂದುಕೊಳ್ಳುವ ಅಕ್ಕ, ನಿನ್ನ (ದೇವರ) ದರ್ಶನ ಇಂತಹ ಕಷ್ಟದ ಸಮಯದಲ್ಲೇ ಆಗುತ್ತದೆ ಎಂದು ಹೇಳುತ್ತಾಳೆ.

ಸಾಕ್ಷಾತ್ ಚನ್ನಮಲ್ಲಿಕಾರ್ಜುನನೇ ತನ್ನ ನಲ್ಲ ಎಂದು ಶ್ರೀಶೈಲದ ಕದಳಿಯೆಡೆಗೆ ಹೊರಟಿದ್ದ ಆಕೆ ತನ್ನ ಮನದ ಮಹಾದೇವನನ್ನು ಹುಡುಕುವ ಪರಿ ಎಂಥವರನ್ನೂ ನಿಬ್ಬೆರಗಾಗುವಂತೆ ಮಾಡುತ್ತದೆ. ಇದಕ್ಕೆ ಉತ್ತಮ ಉದಾಹರಣೆಯಾಗಿ ಒಂದು ವಚನವನ್ನು ಇಲ್ಲಿ ಬಗೆದು ನೋಡಬಹುದು.

ಚಿಲಿಪಿಲಿ ಎಂದೋದುವ ಗಿಳಿಗಳಿರಾ

ನೀವು ಕಾಣಿರೆ

ಸರವೆತ್ತಿ ಪಾಡುವ ಕೋಗಿಲೆಗಳಿರಾ

ನೀವು ಕಾಣಿರೆ

ಗಿರಿ, ಗಂವ್ಹರದೊಳಗಾಡುವ ನವಿಲುಗಳಿರಾ

ನೀವು ಕಾಣಿರಾ

ಕೊಳದೊಳಗಾಡುವ ಹಂಸಗಳಿರಾ

ನೀವು ಕಾಣಿರೆ

ಎಂಬ ಈ ವಚನ ಮೇಲ್ನೋಟಕ್ಕೆ ಚನ್ನಮಲ್ಲಿಕಾರ್ಜುನನ್ನು ಕಾಣುವ ಉತ್ಕಟ ಹಂಬಲ ಆಕೆಯಲ್ಲಿ ಹೇಗಿತ್ತು ಎಂಬುದನ್ನು ವಿವರಿಸುವಂತಿದೆ ನಿಜ! ಅಂತೆಯೇ ಚಲಿಪಿಲಿ ಎಂದು ಹಾಡುವ ಗಿಳಿಗಳಿರಾ, ಗಿರಿಗಂವ್ಹರದೊಳಗಡುವ ನವಿಲುಗಳಿರಾ, ಕೊಳದೊಳಗಾಡುವ ಹಂಸಗಳಿರಾ ಎಂದು ಪ್ರಕೃತಿಯ ಚರಾಚರ ವಸ್ತುಗಳಿಗೆ ಪ್ರಶ್ನಿಸುತ್ತಾಳೆ. ಆದರೆ ಅದೇ ವೇಳೆಗೆ ಅಕ್ಕ, ಆ ಕಾಲದಲ್ಲಿ ಪುರಾಣ-ಪುಣ್ಯ ಕಥೆಗಳನ್ನು ಹೇಳುತ್ತ ಜನರನ್ನು ಮೋಸ ಮಾಡುತ್ತಿರುವ ಗಿಳಿ ಶಾಸ್ತ್ರ ಹೇಳುವವರನ್ನು ಉದ್ದೇಶಿಸಿ ಬರೆದ ವಚನ ಇದಾಗಿದೆ. ದೇವರ ಸ್ವರೂಪ, ಆತನ ಇರುವು ನಿಮಗೇನು ಗೊತ್ತು? ಸಾವಿಲ್ಲದ, ಕೇಡಿಲ್ಲದ, ರೂಹಿಲ್ಲದ ದೇವರ ಇರುವಿಕೆ ನಿಮಗೇನು ಗೊತ್ತು. ಗಿಳಿ ಪಾಠ ಕಲಿತ ನಿಮಗೆ ದೇವರ ನಿಜವಾದ ಸ್ವರೂಪ ಗೊತ್ತಿರಲು ಹೇಗೆ ಸಾಧ್ಯ ಎಂದು ಗಿಳಿಶಾಸ್ತ್ರ ಹೇಳಿ ತಮ್ಮ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಕೆಲವರನ್ನು ಪ್ರಶ್ನಿಸುವಂತಿದೆ.

ಬೆಟ್ಟ ಗುಡ್ಡಗಳಲ್ಲಿ ಗಡ್ಡ ಬಿಟ್ಟು ತಪಸ್ಸು ಮಾಡುವ, ಗೆಡ್ಡೆ ಗೆಣಸು ತಿಂದು ತಿರುಗಾಡುವ ಒಣ ಸಾಧಕರನ್ನು ಪ್ರಶ್ನಿಸುವ ಅಕ್ಕ, ಬರೀ ದೇಹ ದಂಡಿಸಿದವರಿಗೆ ಚನ್ನಮಲ್ಲಿಕಾರ್ಜುನನ ಇರುವಿಕೆ ಗೊತ್ತಾಗದು. ದೇವರು ದೇಹ ದಂಡಿಸುವ, ವ್ರತ, ನೇಮಗಳನ್ನು ಪಾಲಿಸು ಎಂದು ಕೇಳುವುದಿಲ್ಲ ಆತ ಬೇಡುವುದು ನಮ್ಮ ನಿರ್ಮಲವಾದ ಮನಸ್ಸು. ಹೀಗೆ ಕಾಡು, ಮೇಡು ಅಲೆದರೆ ಆತ ಕಾಣಸಿಗುವುದಿಲ್ಲ ಎಂದು ಗೇಲಿ ಮಾಡಿದಂತಿದೆ. ಮಧುರ ಕಂಠದಿಂದ ಹಾಡುವ ಕೋಗಿಲೆಗಳಿಗೇನು ಗೊತ್ತು? ಎಲ್ಲರೂ ನನ್ನ ಮಕ್ಕಳು ಎಂದು ಪೊರೆವ ಕಾಗೆಯ ಗುಣ ಎಂದು ವ್ಯಂಗ್ಯವಾಡಿದಂತಿದೆ. ಕೊಳದೊಳಗಾಡುವ ಹಂಸಗಳು ಎಂದರೆ ಯಾರೋ ಮಾಡಿಟ್ಟ, ಇಲ್ಲವೇ ಹೇಳಿದ್ದನ್ನೇ ಹೇಳುವ ಹಂಸಗಳಂತಿರುವ ನಿಮಗೆ ಕೊಳದೊಳಗಿನ ಕ್ರಿಮಿ ಕೀಟಗಳಷ್ಟೇ ಕಾಣಿಸುತ್ತವೆ. ಆ ದೇವರು ನಿಮಗೆ ಗೊತ್ತಿರಲು ಸಾಧ್ಯವೇ? ಎಂದು ಕೇಳಿದಂತಿದೆ.

ಹೀಗೆ ಅಕ್ಕ ಒಬ್ಬ ವ್ಯಕ್ತಿಯಾಗಿ ತನ್ನ ಮನದನ್ನನಾದ ಚನ್ನಮಲ್ಲಿಕಾರ್ಜುನನ ಗಿಳಿ, ನವಿಲು, ಕೋಗಿಲೆ, ಹಂಸಗಳಿಗೆ ನೀವು ಕಾಣಿರೆ ಎಂದು ಕೇಳಿದಂತಿರುವ ಈ ವಚನ, ಕೇವಲ ಹೊಟ್ಟೆಪಾಡಿಗಾಗಿ ವೇದ, ಶಾಸ್ತ್ರ, ಪುರಾಣ ಓದಿದವರಿಗೆ ಆತನ ಇರುವು ಗೊತ್ತಾಗುವುದಿಲ್ಲ. ದೇವರ ಇರುವಿಕೆ ಇಂಥದೇ ಸ್ಥಳದಲ್ಲಿ ಎಂದು ಗುರುತಿಸಲಾಗುವುದಿಲ್ಲ.

ಬಂಜೆ ಬೇನೆಯನರಿಯಳು

ಮಲತಾಯಿ ಮುದ್ದು ಬಲ್ಲಳೇ?

ನೊಂದ ನೋವನು ನೋಯದವರೆತ್ತ ಬಲ್ಲರು

ಚನ್ನಮಲ್ಲಿಕಾರ್ಜುನ

ಅದೇ ರೀತಿಯಾಗಿ ದೇವರು ಸರ್ವಾಂತರ್ಯಾಮಿ. ಇಡೀ ಸಮಷ್ಠಿಯಲ್ಲಿ ಆತನ ಇರುವಿಕೆ ಕಾಣಬೇಕು ವಿನಃ ಗಿಡ ಮರಗಳಲ್ಲಿ ಅಲ್ಲ. ಗಿರಿ ಗಂವ್ಹರದೊಳಗೆ ಆತನ ವಾಸವಿರುವುದಿಲ್ಲ. ನದಿ, ಕೊಳಗಲ್ಲಿ ಆತನಿರುವುದಿಲ್ಲ. ಆತ್ಮ-ಪರಮಾತ್ಮ ಎರಡಿರುವುದಿಲ್ಲ. ದೇವರನ್ನು ಹುಡುಕುತ್ತ ಹೋಗದೆ ಆತ್ಮದಲ್ಲಿ ಪರಮಾತ್ಮನನ್ನು ನೆಲೆಗೊಳಿಸಿಕೊಳ್ಳಬೇಕು. ಅದಕ್ಕೆ ಶರಣರ ಸುಳ್ನುಡಿಗಳ ಅಗತ್ಯವಿದೆ ಎಂದು ಹೇಳಿದ್ದಾರೆ.

(ಕೃಪೆ: ಶರಣ ಮಾರ್ಗ)

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here