ಕಲಬುರಗಿ: ಕಲಬುರಗಿ-ಬೀದರ ಜಿಲ್ಲೆಯ ಗಡಿಯಲ್ಲಿ ದಟ್ಟ ಕಾಡಿನೊಳಗಿರುವ ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ಜಲಾಶಯ ಮತ್ತು ಅದರ ಸುತ್ತಮುತ್ತ ಪ್ರದೇಶ ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದಲು ಸೂಕ್ತ ಸ್ಥಳವಾಗಿದ್ದು, ಇಲ್ಲಿ ಜಂಗಲ್ಸ್ ಲಾಡ್ಜಸ್, ರೆಸಾರ್ಟ್ ನಿರ್ಮಾಣ ಸೇರಿದಂತೆ ಜಲ ಕ್ರೀಡೆ ಆಯೋಜನೆ ಮಾಡಲಾಗುವುದು ಎಂದು ಪ್ರವಾಸೋದ್ಯಮ, ಪರಿಸರ ಹಾಗೂ ಜೀವಶಾಸ್ತ್ರ ಸಚಿವ ಸಿ.ಪಿ.ಯೋಗೇಶ್ವರ ಅವರು ಹೇಳಿದರು.
ಸೋಮವಾರ ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ಜಲಾಶಯ ವೀಕ್ಷಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಚಂದ್ರಂಪಳ್ಳಿ ಜಲಾಶಯಕ್ಕೆ ಹೊಂದಿಕೊಂಡಂತೆ ಕೊಳ್ಳೂರ ಸರ್ವೇ ವ್ಯಾಪ್ತಿಯ 200 ಎಕರೆ ಡೀಮ್ಡ್ ಅರಣ್ಯ ಪ್ರದೇಶವಿದ್ದು, ಯಾವುದೇ ಮೂಲಸೌಕರ್ಯ ಕೈಗೊಳ್ಳಲು ಅಡ್ಡಿಯಿಲ್ಲ. ಜಲಾಶಯದ ಸುತ್ತಮುತ್ತ ಪ್ರವಾಸೋದ್ಯಮ ಅಭಿವೃದ್ಧಿಗೆ ಹಕ್ಕನ್ನು ಪಡೆದು ಪ್ರವಾಸಿ ಮೂಲಸೌಕರ್ಯ ಕಲ್ಪಿಸಲಾಗುವುದು. ತುಂಗಾಭದ್ರ, ನಾರಾಯಣಪುರ, ಆಲಮಟ್ಟಿ, ಮೈಸೂರಿನ ಕೆ.ಆರ್.ಎಸ್. ಸೇರಿದಂತೆ ರಾಜ್ಯದ 10-12 ಜಲಾಶಯಗಳ ವ್ಯಾಪ್ತಿ ಪ್ರದೇಶ ಪ್ರವಾಸೋದ್ಯಮ ಇಲಾಖೆಯು ಪ್ರವಾಸೋದ್ಯಮ ಅಭಿವೃದ್ಧಿಗೆ ಹಕ್ಕನ್ನು ಪಡೆದು ಅಲ್ಲಿ ಪ್ರವಾಸಿ ಮೂಲಸೌಕರ್ಯಗಳನ್ನು ಮಾಡಿದೆ. ಅದೇ ಮಾದರಿಯಲ್ಲಿ ಚಂದ್ರಂಪಳ್ಳಿ ಜಲಾಶಯ ಸುತ್ತಮುತ್ತ ಪ್ರದೇಶವನ್ನು ಸಹ ಹಕ್ಕನ್ನು ಪಡೆದು ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವ ಸಿ.ಪಿ.ಯೋಗೇಶ್ವರ ತಿಳಿಸಿದರು.
ಕ.ಸಾ.ಪ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಭಕರೆ ನಾಮಪತ್ರ ಸಲ್ಲಿಕೆ
ಚಂದ್ರಂಪಳ್ಳಿ ಜಲಾಶಯ ಸುತ್ತಮುತ್ತ ಅರಣ್ಯ ಮತ್ತು ಗುಡ್ಡಗಾಡು ಪ್ರದೇಶ ಹೊಂದಿರುವುದರಿಂದ ಇಲ್ಲಿ ಜಂಗಲ್ಸ್ ಲಾಡ್ಜಸ್, ರೆಸಾರ್ಟ್, ವಾಚ್ ಟವರ್, ಜಲ ಕ್ರೀಡೆ, ಸಾಹಸ ಕ್ರೀಡೆ, ನೀರಿನ ಕಾರಂಜಿ, ಬೋಟಿಂಗ್ ವ್ಯವಸ್ಥೆ ಮಾಡಲಾಗುವುದು. ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಇಲ್ಲಿಗೆ ಬಂದು ಪ್ರಕೃತಿಯ ಸೌಂದರ್ಯ ಸವಿಯಲು ಎಲ್ಲಾ ರೀತಿಯ ಪ್ರವಾಸೋದ್ಯಮ ಅಭಿವೃದ್ಧಿಯನ್ನು ಹಂತ-ಹಂತವಾಗಿ 100-200 ಕೋಟಿ ರೂ. ನಲ್ಲಿ ಮುಂದಿನ ಎರಡ್ಮೂರು ವರ್ಷದಲ್ಲಿ ಅಭಿವೃದ್ಧಿಪಡಿಸಲಾಗುವುದು. ಈ ಸಂಬಂಧ ಅಧಿಕಾರಿಗಳಿಂದ ಸರ್ವೇ ಮಾಡಿಸಿ ನೀಲಿ ನಕ್ಷೆ ರೂಪಿಸಿ ಯೋಜನೆ ಜಾರಿಗೆ ತರಲಾಗುವುದು ಎಂದರು.
ಪ್ರತಿ ವರ್ಷ ರಾಷ್ಟ್ರಕೂಟರ ಉತ್ಸವ: ಕನ್ನಡದ ಮೊದಲ ಉಪಲಬ್ದ ಗ್ರಂಥ “ಕವಿರಾಜ ಮಾರ್ಗ” ನೀಡಿದ ನೃಪತುಂಗನ ನಾಡು ಮಳಖೇಡದಲ್ಲಿ ಪ್ರತಿ ವರ್ಷ “ರಾಷ್ಟ್ರಕೂಟರ ಉತ್ಸವ” ಆಚರಿಸಲಾಗುವುದು ಮತ್ತು ಇದಕ್ಕೆ ಬೇಕಾಗುವ ಅನುದಾನವನ್ನು ಸಹ ನೀಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಶಹಾಬಾದ: ಬಾಬು ಜಗಜೀವನರಾಮ ಅವರ ೧೧೪ನೇ ಜಯಂತಿ ಆಚರಣೆ
ಪತ್ರಿಕಾಗೋಷ್ಠಿಯಲ್ಲಿ ಕಲಬುರಗಿ ಸಂಸದ ಡಾ.ಉಮೇಶ ಜಾಧವ, ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ, ಐನೊಳ್ಳಿ ಜಿಲ್ಲಾ ಪಂಚಾಯತ ಸದಸ್ಯ ಗೌತಮ ಪಾಟೀಲ್, ತಹಶೀಲ್ದಾರ ಅರುಣ ಕುಲಕರ್ಣಿ, ಎಸಿಎಫ್ ಬಾಬುರಾವ ಪಾಟೀಲ್ ಇದ್ದರು.
ಇದಕ್ಕೂ ಮುನ್ನ ಗೊಟ್ಟಂಗೊಟ್ಟ ಜಲಪಾತಕ್ಕೆ ಭೇಟಿ ನೀಡಿ ವಾಚ್ ಟವರ್ ಮೂಲಕ ಚಂದ್ರಂಪಳ್ಳಿ ಜಲಾಶಯದ ಹಿನ್ನೀರನ್ನು ವೀಕ್ಷಿಸಿದ ಸಚಿವರು ಮಹಾತಪಸ್ವಿ ಬಕ್ಕಮಹಾಪ್ರಭು ಅವರ ದೇವಸ್ಥಾನಕ್ಕೂ ಭೇಟಿ ನೀಡಿದರು.