ಕಲಬುರಗಿ: ಕಳೆದ ಬಾರಿ ಕೊರೋನಾ ಉಲ್ಬಣಿಸಿದ ಸಂದರ್ಭದಲ್ಲೇ ಕಾನ್ಸ್ಟೇಬಲ್ ನೇಮಕಾತಿ ಪ್ರಕ್ರಿಯೆ ಕೈಗೊಂಡ ಕಾರಣಕ್ಕಾಗಿ ಗ್ರಾಮೀಣ ಅಭ್ಯರ್ಥಿಗಳಲ್ಲಿ ಹಲವರು ಈ ಪ್ರಕ್ರಿಯೆಯಲ್ಲಿ ಪಾಲ್ಗೊಳಲು ಸಾಧ್ಯವಾಗದೆ ಅವರ ನಿಗದಿತ ಅರ್ಹತಾ ವಯಸ್ಸು ದಾಟಿ ಪರಿತಪಿಸುವಂತಾಗಿದ್ದು, ಒಂದೊಮ್ಮೆ ಮನವಿಗೆ ಸಕಾರಾತ್ಮಕ ಸ್ಪಂದನೆ ದೊರಕದಿದ್ದರೆ ಅವಕಾಶ ವಂಚಿತರು ನ್ಯಾಯಾಲಯದ ಕದತಟ್ಟುವ ಮೂಲಕ ಪ್ರಕ್ರಿಯೆ ಮುಂದಕ್ಕೆ ಹೋಗುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ ಎಂದು ಕರ್ನಾಟಕ ಪೊಲೀಸ್ ಮಹಾ ಸಂಘದ ಜಿಲ್ಲಾಧ್ಯಕ್ಷ ರವಿ ದೇಗಾಂವ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಇದೇ ಕಾರಣವನ್ನಿಟ್ಟುಕೊಂಡು ಉಪನಿರೀಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಪೂರ್ವಾನ್ವಯವಾಗುವಂತೆ ಸರ್ಕಾರ ದಿನಾಂಕ ನಿಗದಿಪಡಿಸಿದ ಉದಾಹರಣೆಯೂ ನಮ್ಮ ಮುಂದಿದೆ. ಇದೀಗ ೪೦೦೦ ಮಂದಿ ಕಾನ್ಸ್ಟೇಬಲ್ ಹುದ್ದೆ ಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಲಿದ್ದು ೧-೦೪-೨೦೨೦ ಕ್ಕೆ ಪೂರ್ವಾನ್ವಯವಾಗುವಂತೆ ದಿನಾಂಕ ನಿಗದಿಗೊಳಿಸಿ ನೋಟಿಫಿಕೇಶನ್ ಹೊರಡಿಸಲು ಪೊಲೀಸ್ ಮಹಾ ಸಂಘ ಆಗ್ರಹಪೂರ್ವಕ ಒತ್ತಾಯ ಮಾಡುತ್ತಲಿದೆ ಎಂದು ತಿಳಿಸಿದ್ದಾರೆ.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಋಷಿ ಬೆನಕನಹಳ್ಳಿ, ಜಿಲ್ಲಾ ಕಾರ್ಯಾಧ್ಯಕ್ಷ ಸಂದೀಪ್ ಭರಣಿ, ಮಹಿಳಾ ಘಟಕ ಅಧ್ಯಕ್ಷ ನಿರ್ಮಲ ಎಸ್ ಬರಗಲಿ ಹಾಗೂ ಮಹೇಶ್ ಪರ್ತಬಾದ ಅವಕಾಶ ವಂಚಿತರ ಮನವಿಗೆ ಸಕಾರಾತ್ಮಕ ಸ್ಪಂದನೆ ದೊರಕದಿದ್ದರೆ ನ್ಯಾಯಾಲಯದ ಕದತಟ್ಟುವ ಮೂಲಕ ಪ್ರಕ್ರಿಯೆ ಮುಂದಕ್ಕೆ ಹೋಗುವ ಸಾಧ್ಯತೆಗಳನ್ನೂ ತಳ್ಳಿಹಾಕುವಂತಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಗೃಹಸಚಿವರಿಗೆ ಒತ್ತಾಯಿಸಿದ್ದಾರೆ.