ನೈಸರ್ಗಿಕ, ಸಾವಯವ, ಶೂನ್ಯ ಬಂಡವಾಳ ಮತ್ತು ರಾಸಾಯನಿಕ ಕೃಷಿಯೂ..!

0
81

ಮೊನ್ನೆ ಅಂದರೆ ಒಂದು ತಿಂಗಳ ಹಿಂದೆ ನನ್ನ ಗೆಳೆಯ ಪತ್ರಕರ್ತನಾಗಿದ್ದ ಮತ್ತು ಕೃಷಿಕ, ಸಾಹಿತಿ ಚಂದ್ರಶೇಖರ ಪಾಟೀಲ ಬಂದಿದ್ದ. ಅವನು ಹಾವೇರಿಗೆ ಬಂದಿದ್ದರ ಕಾರಣವೆಂದರೆ, ತನ್ನ ಹೊಸದಾಗಿ ಹೊರಬಂದ ಪುಸ್ತಕ ‘ಬೇಸಾಯದ ಕತಿ’ ಕೃತಿಯನ್ನು ಸಾಹಿತಿ ಸತೀಶ ಕುಲಕರ್ಣಿಯವರಿಗೆ ಕೊಡಲು ಬಂದಿದ್ದ. ಹಾಗೆಯೇ ‘ಬೇಸಾಯದ ಕತಿ’ಯ‌ ಒಂದು ಪ್ರತಿಯನ್ನು ನನಗೂ ಕೊಟ್ಟ.‌

ಆಗ ಉಭಯ ಕುಸಲೋಪರಿ ಮಾತುಗಳು ಮುಗಿದ ಮೇಲೆ ನಾವಿಬ್ಬರೂ ಒಂದು ಬೈಟಕ್ ಕುಳತುಕೊಳ್ಳೋಣವೆಂದು ಹೋದೆವು. ಬೈಟೆಕ್ ಅಂದರೆ ತುಸು ಗುಂಡು ಹಾಕೋಕುವುದೆಂದು ಹಾವೇರಿಗಯ ಬಸ್ ನಿಲ್ದಾಣದ ಸಮೀಪದ ಬಾರ್ ಗೆ ಹೋದೆವು.

Contact Your\'s Advertisement; 9902492681

ಆಗ ನನ್ನದೊಂದು ಪ್ರಶ್ನೆಗೆ ಉತ್ತರಿಸಿದ ಕೃಷಿಕ ಸಾಹಿತಿ ಚಂದ್ರಶೇಖರ ಪಾಟೀಲ. ಅವನು ಮೊದಲು ‘ಸಂಯುಕ್ತ ಕರ್ನಾಟಕ’ದ ವಿಶೇಷ ಪುರವಣಿಯ ಉಪ ಸಂಪಾದಕನಾಗಿದ್ದ. ಹಾಗೆ ‘ಸಂಯುಕ್ತ ಕರ್ನಾಟಕ’ವನ್ನು ಬಿಟ್ಟು ಬರಲು ಕಾರಣವನ್ನು ವಿವರಿಸಿದ. ಅದೇನೆಂದರೆ ‘ಸಾವಯವ ಕೃಷಿ’ಯಲ್ಲಿ ಒಂದು ಪ್ರಯೋಗವನ್ನು ಮಾಡಲೆಂದೇ ‘ಸಂಯುಕ್ತ ಕರ್ನಾಟಕ’ವನ್ನು ಬಿಟ್ಟು ಬಂದಿದ್ದನಂತೆ.

ಆಗ ನಮ್ಮಿಬ್ಬರ ನಡುವೆಯೇ ಒಂದು ಚರ್ಚೆಯಾಯಿತು. ಇರಲಿ ಮಾರಾಯ ನೀನು ಪತ್ರಿಕೆ ಬಿಟ್ಡಿದ್ದರ ಬಗೆಗೆ ನನಗೆ ತಕರಾರು ಇಲ್ಲ. ಆದರೆ ‘ಸಾವಯವ ಕೃಷಿ’ಯನ್ನೇ ಏಕೆ ಆಯ್ಕೆ ಮಾಡಿಕೊಂಡೆ ಎಂದು ನಾನು ಗುಂಡು ಹಾಕುತ್ತಲೇ ಕೇಳಿದೆ. ಅದಕ್ಕವನು ಗುಂಡು ಹಾಕುತ್ತಲೇ ಹೇಳಿದ ಸುಭಾಷ್ ಪಾಳೇಕಾರರ ಸಹಜ ಕೃಷಿಗಿಂತ ಉತ್ತಮ ಸಾವಯವ ಕೃಷಿಯು ಎಂದು ಒತ್ತಿಒತ್ತಿ ಹೇಳಿದ.
ನಾನು ಸುಭಾಷ್ ಪಾಳೇಕರರ ಸಹಜ ಕೃಷಿಯೇ ಎಲ್ಲಕ್ಕಿಂತಲೂ ಉತ್ತಮ ಎಂದು ನಾನು ವಾದಿಸಿದೆ. ಆಗ ನಾನು ನಮ್ಮ ‘ಆರ್.ಸ್ವಾಮಿ ಆನಂದ’ರ ಸುಭಾಷ್ ಪಾಳೇಕಾರರ ಸಹಜ ಕೃಷಿಯ ಪುಸ್ತಕವನ್ನು ಊದಾಹರಿಸಿದೆ. ಆಗ ನಮ್ಮ ನಡುವೆ ಒಂದು ದೊಡ್ಡ ಚರ್ಚೆಯೇ ಆಯಿತು. ಆಗ ನಡೆದ ಚರ್ಚೆಯ ಸಾರಾಂಶವೇ ಈ ಲೇಖನ..!

ಕೃಷಿಯಲ್ಲಿ ಸಾಧನೆ ಮಾಡಿದವರು ಸಾವಿರಾರು ಜನರು. ಕೃಷಿ ಸಾಧಕರ ಬಾಯಲ್ಲೇ ಕೇಳುತ್ತ ಹೋದರೆ ಒಬ್ಬೊಬ್ಬರದೂ ಒಂದೊಂದು ಸ್ವರೂಪದ ಕೃಷಿಯಾಗಿರುತ್ತದೆ. ರಾಸಾಯನಿಕ ಕೃಷಿ ಅತ್ಯಂತ ಸಾಮಾನ್ಯವಾಗಿ ಕಂಡುಬರುತ್ತಿರುವ ವಿಧಾನವಾಗಿದ್ದರೆ. ಅದರಾಚೆ ಅನೇಕರು ಸಾವಯವ ಪದ್ಧತಿಯನ್ನು ಅಳವಡಿಸಿಕೊಂಡು ಹಸನಾಗಿದ್ದಾರೆ. ಇನ್ನೂ ಹಲವು ರೈತರು ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

ಹಾಗಾದರೆ ಶೂನ್ಯ ಬಂಡವಾಳ ನೈಸರ್ಗಿಕ (ಸಹಜ) ಕೃಷಿ, ಸಾವಯವ ಕೃಷಿ ಮತ್ತು ರಾಸಾಯನಿಕ ಕೃಷಿ ಪದ್ಧತಿಗಳ ನಡುವೆ ಇರುವ ವ್ಯತ್ಯಾಸವೇನು? ಹೇಗಿರುತ್ತದೆ ಇವುಗಳ ಪದ್ಧತಿಗಳು. ಇಲ್ಲಿದೆ ವಿವರ ನೋಡಿ ವಿವರವು.

ಶೂನ್ಯ ಬಂಡವಾಳ ಕೃಷಿ: ಕೃಷಿಯ ಈ ವಿಧಾನ ದೇಶದ ವಿವಿಧ ರಾಜ್ಯಗಳಲ್ಲಿ ಬಳಕೆಯಲ್ಲಿದ್ದರೂ, ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಕರ್ನಾಟಕದಲ್ಲಿಯೇ ಅಂದಾಜು ಲಕ್ಷ ರೈತರು ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಕೃಷಿ ತಜ್ಞ ಸುಭಾಷ್​ ಪಾಲೇಕರ್​ ಅವರು ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯ ಹರಿಕಾರರು. ಈ ಕೃಷಿಯಲ್ಲಿ ರಾಸಾಯನಿಕ ಬಳಕೆ ಇರುವುದಿಲ್ಲ. ಕೈಯಿಂದ ಬಂಡವಾಳ ಹಾಕುವ ಕೆಲಸವಿಲ್ಲ, ಶ್ರಮವೂ ಕಡಿಮೆ. ಶೂನ್ಯ ಬಂಡವಾಳ ಕೃಷಿಯ ನಾಲ್ಕು ಆಧಾರಸ್ತಂಭಗಳೆಂದರೆ ಜೀವಾಮೃತ, ಬೀಜಾಮೃತ, ಹೊದಿಕೆ ಮತ್ತು ಆರ್ದ್ರತೆ…

ಜೀವಾಮೃತ-:ಜೀವಾಮೃತವೆಂದರೆ ಬೆಳೆಗಳಿಗೆ ಪೋಷಕಾಂಶ ಒದಗಿಸುವ ಕ್ರಮ. ಇದು ಶೂನ್ಯಬಂಡವಾಳ ಕೃಷಿಯಲ್ಲಿ ಪ್ರಮುಖ ಪದ್ಧತಿ. ಇದಕ್ಕೇನೂ ಹೆಚ್ಚಿಗೆ ಖರ್ಚು ಬೇಕಾಗಿಲ್ಲ. ಹಸುವಿನ ಸೆಗಣಿ, ಮೂತ್ರ, ಬೆಲ್ಲ, ದ್ವಿದಳಧಾನ್ಯದ ಹಿಟ್ಟು, ಒಂದು ಹಿಡಿ ಮಣ್ಣನ್ನು ನೀರಿನಲ್ಲಿ ಕಲಸಿ, 48 ಗಂಟೆಗಳ ಕಾಲ ಹುದುಗಲು ಬಿಡಬೇಕು. ಈ ದ್ರಾವಣವೇ ಜೀವಾಮೃತ. ಒಂದು ಎಕರೆ ಕೃಷಿ ಭೂಮಿಗೆ 200 ಲೀಟರ್​ ಜೀವಾಮೃತ ಸಾಕಾಗುತ್ತದೆ. ಅಂದರೆ ರಾಸಾಯನಿಕ ಔಷಧಗಳ ಬದಲು ನೈಸರ್ಗಿಕವಾಗಿ ತಯಾರಿಸಲಾದ ಈ ದ್ರಾವಣವನ್ನು ಬೆಳೆಗೆ ಸಿಂಪಡಣೆ ಮಾಡುವುದರಿಂದ ಸಸ್ಯಗಳಿಗೆ ಪೋಷಕಾಂಶ ಸಿಗುವ ಜತೆ, ಬ್ಯಾಕ್ಟೀರಿಯಾ, ಶಿಲೀಂದ್ರಗಳಿಂದ ಬರುವ ರೋಗವೂ ನಿಯಂತ್ರಣವಾಗುತ್ತದೆ.

ಬೀಜಾಮೃತ: ಬೀಜಕ್ಕೆ ಉಪಚಾರ ಮಾಡುವ ಕ್ರಮ ಬೀಜಾಮೃತ. ನಾಟಿ ಮಾಡಿದ ಬೀಜಗಳನ್ನು ಹುಳು ತಿನ್ನದಂತೆ ಕಾಪಾಡುವ ವಿಧಾನ. ಮಾನ್ಸೂನ್ ನಂತರ​ ಎಳೆಯ ಬೇರುಗಳು ಮಣ್ಣು ಮತ್ತು ಬೀಜಗಳಿಂದ, ಶಿಲೀಂಧ್ರಗಳಿಂದ (ಫಂಗಸ್) ಹರಡುವ ರೋಗಗಳಿಂದ ಹಾಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಬೀಜಾಮೃತ ದ್ರಾವಣ ಅಂಥ ರೋಗಗಳನ್ನು ತಡೆದು, ಬೇರುಗಳನ್ನು ಸದೃಢಪಡಿಸುವಲ್ಲಿ ಪರಿಣಾಮಕಾರಿ. ಹಸುವಿನ ಸಗಣಿ (ಇದೊಂದು ನೈಸರ್ಗಿಕವಾಗಿ ಸಿಗುವ ಶಕ್ತಿಯುತ ಶಿಲೀಂದ್ರನಾಶಕ), ಗೋಮೂತ್ರ, ಲಿಂಬು, ಸುಣ್ಣ, ಹಿಡಿ ಮಣ್ಣು ಕಲೆಸಿ ಇದನ್ನು ತಯಾರಿಸಲಾಗುತ್ತದೆ. ನಾಟಿ ಮಾಡಬೇಕಾದ ಬೀಜಕ್ಕೆ ಈ ಮಿಶ್ರಣವನ್ನು ಸವರಿ, ಒಣಗಲು ಬಿಟ್ಟು ಭೂಮಿಯಲ್ಲಿ ನೆಟ್ಟರೆ, ಬೆಳೆ ಸದೃಢವಾಗಿರುತ್ತದೆ.

ಹೊದಿಕೆ: ಕಳೆ ನಿಯಂತ್ರಣ ಮತ್ತು ಮಣ್ಣಿನ ಪೋಷಕಾಂಶ ರಕ್ಷಣೆಗೆ ಇದು ಅತ್ಯಗತ್ಯ. ಬಿತ್ತನೆ ಅಥವಾ ನಾಟಿಯ ನಂತರ ಬೆಳೆಗಳ ಮಧ್ಯೆ ಮೂರು ವಿಧದ ಹೊದಿಕೆ ಮಾಡಬೇಕು. ಒಂದು ಮಣ್ಣಿನ ಹೊದಿಕೆ, ಇನ್ನೊಂದು ಒಣ ಹುಲ್ಲುಗಳು ಅಥವಾ ವ್ಯರ್ಥ ಪದಾರ್ಥಗಳ ಹೊದಿಕೆ, ಮೂರನೆಯದು ಜೈವಿಕ ಹೊದಿಕೆ. ಈ ಹೊದಿಕೆಗಳಿಂದ ಬೆಳೆಗಳಿಗೆ ಬಲ ಸಿಗುತ್ತದೆ ಮತ್ತು ತೇವಾಂಶ ರಕ್ಷಣೆಯಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಸೂರ್ಯನ ತೀಕ್ಷ್ಣ ಕಿರಣಗಳು ನೆಲವನ್ನು ಸ್ಪರ್ಶಿಸದ ಕಾರಣ ನೆಲದ ಪೋಷಕಾಂಶಗಳು ವ್ಯರ್ಥವಾಗುವುದಿಲ್ಲ, ಕಳೆ ಬೆಳೆಯುವುದಿಲ್ಲ, ಭೂಮಿಯಲ್ಲಿರುವ ಸೂಕ್ಷ್ಮಜೀವಿಗಳಿಗೂ ಇದು ಪೂರಕ.

ಆರ್ದ್ರತೆ (ಪಸೆ): ಸಸ್ಯಗಳ ಬೇರುಗಳಿಗೆ ಒಂದು ಹದದಲ್ಲಿ ನೀರು ಬೇಕು. ನೀರು ಜಾಸ್ತಿಯಾದರೂ ಬೇರು ಕೊಳೆಯುವ, ರೋಗ ಬರುವ ಸಾಧ್ಯತೆ ಇರುತ್ತದೆ. ಶೂನ್ಯ ಬಂಡವಾಳ ಕೃಷಿಯಲ್ಲಿ ನೀರಿನ ನಿರ್ವಹಣೆಗೆ ಜಾಣತನ ಬೇಕು. ಮಣ್ಣಿನ ಸ್ಪರ್ಶ ಮತ್ತು ವಾಸನೆಯಿಂದಲೇ ಪಸೆಯ ಹದ ಅರಿಯುವ ಅನುಭವ ಬೇಕು. ಮುಚ್ಚಿಗೆ ವ್ಯವಸ್ಥಿತವಾಗಿದ್ದರೆ ಬೇರಿನ ಸುತ್ತಲಿನ ಆರ್ದ್ರತೆ ಸುಲಭಕ್ಕೆ ಹೋಗುವುದಿಲ್ಲ. ಮಳೆನೀರು ಸಹ ಬೇಗನೇ ಆವಿಯಾಗದೇ, ಜಮೀನಿನ ವಾತಾವರಣದಲ್ಲಿ ತೇವಾಂಶ ಹರಡಿ, ಗಿಡಗಳನ್ನು ಸಲಹುತ್ತದೆ.

ಒಟ್ಟಾರೆ ಶೂನ್ಯ ಬಂಡವಾಳ ಕೃಷಿ ಪದ್ಧತಿಯಲ್ಲಿ ನೈಸರ್ಗಿಕ, ಜೈವಿಕ, ಸಾವಯವ ಪದ್ಧತಿಯೇ ಇರುತ್ತದೆ ಹೊರತು, ರಾಸಾಯನಿಕಗಳ ಒಂದಂಶವೂ ಪ್ರಯೋಗವಾಗುವುದಿಲ್ಲ. ಹಾಗೇ ಒಂದು ಎಕರೆ ಭೂಮಿಯಲ್ಲಿ ಮಾಡುವ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯಿಂದ ವಾರ್ಷಿಕವಾಗಿ ರೂಪಾಯಿ 3-6 ಲಕ್ಷ ಆದಾಯಗಳಿಸಬಹುದು ಎಂಬುದು ಸುಭಾಷ್​ ಪಾಲೇಕರ್ ಅಭಿಪ್ರಾಯ.

ಸಾವಯವ ಕೃಷಿ: ಸಾವಯವ ಕೃಷಿ ಪದ್ಧತಿ ಆರೋಗ್ಯಕರ ಕೃಷಿ ಪದ್ಧತಿ. ಭೂಮಿ ಮತ್ತು ಆರೋಗ್ಯಕ್ಕೆ ಮಾರಕವಾಗಿರುವ ಕೀಟನಾಶಕ, ರಾಸಾಯನಿಕಗಳನ್ನು ದೂರವಿಡಲು ವಿಶ್ವದಾದ್ಯಂತ ಈ ಕೃಷಿ ಪದ್ಧತಿಗೆ 20ನೇ ಶತಮಾನದ ಪ್ರಾರಂಭದಿಂದ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈಗಿನ ಸರ್ಕಾರಗಳೂ ಸಹ ಸಾವಯವ ಕೃಷಿಗೇ ಹೆಚ್ಚಿನ ಒತ್ತು ಕೊಡುವ ಯೋಜನೆಗಳನ್ನು ತರುತ್ತಿವೆ. ಜಾಗತಿಕವಾಗಿ ಸುಮಾರು 70 ದಶಲಕ್ಷ ಹೆಕ್ಟೇರ್​ ಪ್ರದೇಶಗಳಲ್ಲಿ ಪ್ರಮಾಣೀಕೃತ ಸಾವಯವ ಕೃಷಿ ಪದ್ಧತಿ ಇದೆ. ಇಂದು ಅನೇಕ ಸಂಸ್ಥೆಗಳು ಸಾವಯವ ಕೃಷಿ ಅಭಿವೃದ್ಧಿ ಪಡಿಸುವತ್ತ ಕಾರ್ಯನಿರ್ವಹಿಸುತ್ತಿವೆ. ಹೆಚ್ಚೆಚ್ಚು ರೈತರು ಈ ಕೃಷಿ ಪದ್ಧತಿಯತ್ತಲೂ ಮುಖ ಮಾಡುತ್ತಿದ್ದಾರೆ.

ಸಾವಯವ ಕೃಷಿಯಲ್ಲಿ ಯಾವುದೇ ಕೃತಕಗೊಬ್ಬರಗಳು, ರಾಸಾಯನಿಕಗಳ ಬಳಕೆ ಇರುವುದಿಲ್ಲ. ಇಳುವರಿ ಸ್ವಲ್ಪ ಕಡಿಮೆ ಇದ್ದರೂ ಆರೋಗ್ಯಕ್ಕೆ ಮಾರಕ ಆಗಿರುವುದಿಲ್ಲ. ಸಾವಯವ ಗೊಬ್ಬರ ಅಂದರೆ, ಪ್ರಾಣಿ ತ್ಯಾಜ್ಯ ಮತ್ತು ಸಸ್ಯಗಳ ಕೊಳೆತ ತ್ಯಾಜ್ಯಗಳಿಂದಲೇ ಗೊಬ್ಬರ ತಯಾರು ಮಾಡಲಾಗುತ್ತದೆ. ದನದ ಸೆಗಣಿಯೂ ಇದರಲ್ಲಿ ಒಂದು. ಸಾವಯವ ಪದ್ಧತಿಯಲ್ಲಿ ಪ್ರಮುಖವಾಗಿ ಬಳಸುವ ಗೊಬ್ಬರವೆಂದರೆ ಕಾಂಪೋಸ್ಟ್​. ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಬೇರೆಬೇರೆ ರೀತಿಯಲ್ಲಿ ಕಾಂಪೋಸ್ಟ್ ತಯಾರಿಸುತ್ತಾರೆ. ದನಕರುಗಳ ಸಗಣಿ, ಮೂತ್ರ ಸಸ್ಯಗಳ ತ್ಯಾಜ್ಯ, ಕೆಲವು ಸೂಕ್ಷ್ಮಾಣು ಜೀವಿಗಳಿಂದ ಸಿದ್ಧಗೊಳಿಸಲಾಗುತ್ತದೆ. ಇದರಲ್ಲಿ ಎರೆಹುಳು ಗೊಬ್ಬರವೂ ಒಂದು.

ಇನ್ನು ಸಾವಯವ ಕೃಷಿಯಲ್ಲಿ ಕೀಟನಾಶಕಗಳನ್ನಾಗಿ ಯಾವುದೇ ರಾಸಾಯನಿಕಗಳನ್ನು ಬಳಕೆ ಮಾಡಲಾಗುವುದಿಲ್ಲ. ಬದಲಿಗೆ ಪರಿಸರದಲ್ಲೇ ಸಿಗುವ ವಸ್ತುಗಳನ್ನು ಬಳಸಿ ಮಾಡಿದ ದ್ರಾವಣವನ್ನು ಸಿಂಪಡಿಸಲಾಗುತ್ತದೆ.. ಬೇವು, ಅರಿಶಿಣ, ಬೆಳ್ಳುಳ್ಳಿ, ಈರುಳ್ಳಿ, ಹಸುವಿನ ಗಂಜಲ (ಗೋಮೂತ್ರ), ಹಸಿಮೆಣಸಿನ ಕಾಯಿಗಳ ದ್ರಾವಣವನ್ನೂ ರೈತರು ಸಿದ್ಧಪಡಿಸುತ್ತಾರೆ. ಬೆಳೆಗಳಿಗೆ ಬಿದ್ದ ಹುಳ, ಕೀಟ ಯಾವುದು ಎಂಬ ಆಧಾರದ ಮೇಲೆ, ಎಕರೆಗೆ ಇಂತಿಷ್ಟು ಎಂಬ ಪ್ರಮಾಣದಲ್ಲಿ ಅಗತ್ಯ ಇರುವ ದ್ರಾವಣವನ್ನು ತಯಾರು ಮಾಡಲಾಗುತ್ತದೆ. ಇನ್ನು ಕಳೆನಾಶಕಗಳನ್ನು ಉಪಯೋಗಿಸುವ ಬದಲು ಕೈಯಿಂದಲೇ ಕೀಳಲಾಗುತ್ತದೆ.

ರಾಸಾಯನಿಕ ಕೃಷಿ: ರೈತರಿಗೆ ಲಾಭ ತಂದುಕೊಟ್ಟ, ಮತ್ತು ಕೊಡುತ್ತಿರುವ ಕೃಷಿ ಪದ್ಧತಿ ರಾಸಾಯನಿಕ ಕೃಷಿ. ಇಲ್ಲಿ ಬೀಜ ನಾಟಿಯಿಂದ ಹಿಡಿದು. ಪ್ರತಿಹಂತದಲ್ಲೂ ರಾಸಾಯನಿಕಗಳೇ ಮೇಲುಗೈ ಸಾಧಿಸುತ್ತವೆ. ಹುಳುಬೀಳದಂತೆ, ರೋಗ ಬಾರದಂತೆ, ಬೆಳೆ ಸದೃಢವಾಗಿರುವಂತೆ ಎಲ್ಲದಕ್ಕೂ ರಾಸಾಯನಿಕಗಳದ್ದೇ ಪ್ರಯೋಗ. ಬೇಗನೇ ಬೆಳೆ ಕೈಸೇರಿ, ಮಾರಾಟವೂ ಆಗಿ ಲಾಭ ಪಡೆಯುವ ದೃಷ್ಟಿಯಿಂದ ಒಂದಲ್ಲ ಒಂದು ರೀತಿಯ ಔಷಧಗಳ ಸಿಂಪಡಣೆ ನಡೆಯುತ್ತದೆ. ಹೆಚ್ಚು ಇಳುವರಿ ತಂದುಕೊಂಡುವ ಈ ಪದ್ಧತಿ ಮನುಷ್ಯ ಮತ್ತು ಭೂಮಿಗಳೆರಡರ ಆರೋಗ್ಯಕ್ಕೂ ಮಾರಕವಾಗಿರುತ್ತದೆ. ಆದರೂ ಬಹುಪಾಲು ರೈತರು ಲಾಭದಾಯಕ ರಾಸಾಯನಿಕ ಪದ್ಧತಿಯ ಕಡೆಗೇ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ.

ಶೂನ್ಯ ಬಂಡವಾಳ-ನೈಸರ್ಗಿಕ ಕೃಷಿಯ ನಡುವಿನ ವ್ಯತ್ಯಾಸ–

ನೈಸರ್ಗಿಕ ಕೃಷಿಯೆಂದರೆ ಪ್ರಕೃತಿಯ ನಿಯಮಗಳನ್ನು ಕೃಷಿ ಪದ್ಧತಿಗೂ ಅನ್ವಯ ಮಾಡುವ ಒಂದು ಕ್ರಮ. ಜಪಾನ್​ನ ಮಸನೋಬು ಫುಕುಯೋಕಾ ಎಂಬುವರು ಇದರ ಹರಿಕಾರರು. ಇದರಲ್ಲಿ ಕೂಡ ರಾಸಾಯನಿಕದ ಲವಲವೇಶವೂ ಇರುವುದಿಲ್ಲ. ಆಯಾ ಕೃಷಿ ಪ್ರದೇಶದ ಜೀವವೈವಿದ್ಯತೆಯೊಂದಿಗೆ ಮಿಳಿತವಾಗಿರುವ ನೈಸರ್ಗಿಕ ಕೃಷಿ ಪದ್ಧತಿ, ಜೀವಸಂಕೀರ್ಣತೆಗೆ ಒತ್ತು ನೀಡುತ್ತದೆ. ವಾಸ್ತವದಲ್ಲಿ ಶೂನ್ಯ ಬಂಡವಾಳ ಕೃಷಿ ಮತ್ತು ನೈಸರ್ಗಿಕ ಕೃಷಿಗಳೆರಡೂ ಒಂದೇ ಆಗಿವೆ. ನೈಸರ್ಗಿಕ ಕೃಷಿಯಲ್ಲಿ ಉಳುಮೆ, ಕೀಟನಾಶಕ, ಕಳೆನಾಶಕಗಳು ಇಲ್ಲ. ಶೂನ್ಯ ಬಂಡವಾಳ ಪದ್ಧತಿಯಲ್ಲಿ ಅಲ್ಪಾವಧಿ ಬೆಳೆಗಳಿಗೆ ಉಳುಮೆ ಮಾಡಲಾಗುತ್ತದೆ. ಜೀವಾಮೃತ, ಬೀಜಾಮೃತದ, ಹೊದಿಕೆಗಳ ಮೂಲಕ ಬೆಳೆ ರಕ್ಷಣೆ ಕಾರ್ಯ ನಡೆಯುತ್ತದೆ.

ಇನ್ನು ಶೂನ್ಯಬಂಡವಾಳ ಕೃಷಿ ಮತ್ತು ಸಾವಯವ ಕೃಷಿ ನಡುವಿನ ವ್ಯತ್ಯಾಸ ನೋಡುವುದಾದರೆ, ಸಾವಯವ ಕೃಷಿ ತುಂಬ ಶ್ರಮ ಬೇಡುತ್ತದೆ. ಶೂನ್ಯ ಬಂಡವಾಳ ಕೃಷಿಗೆ ಅಷ್ಟೊಂದು ಶ್ರಮದ ಅಗತ್ಯ ಇರುವುದಿಲ್ಲ. ಸಾವಯವ ಕೃಷಿಯಲ್ಲಿ ಉಳುಮೆ ಹಂತದಿಂದಲೂ ಹೆಚ್ಚೆಚ್ಚು ಕೆಲಸ ಬೇಕು. ಕೆಲಸಗಾರರ ಅಗತ್ಯವೂ ಇದೆ. ಹಾಗೇ ಕೈಯಿಂದ ಖರ್ಚೂ ಆಗುತ್ತದೆ. ಆದರೆ ಶೂನ್ಯ ಬಂಡವಾಳ ಬೇಸಾಯ ಪದ್ಧತಿಯಲ್ಲಿ ಬಂಡವಾಳದ ಅಗತ್ಯವೇ ಇರುವುದಿಲ್ಲ. ಉಳುಮೆ ಅಗತ್ಯವಿಲ್ಲದೆ ನೇರವಾಗಿ ಬಿತ್ತನೆ ಮಾಡಲಾಗುತ್ತದೆ.

ಹಾಗೇ ರಾಸಾಯನಿಕ ಕೃಷಿ ಪದ್ಧತಿ ಉಳಿದೆಲ್ಲವುಗಳಿಗಿಂತಲೂ ಭಿನ್ನ. ಇದರಲ್ಲಿ ಲಾಭ, ಇಳುವರಿ ಹೆಚ್ಚಾದರೂ ಭೂಮಿಯ ಫಲವತ್ತತೆ ಬೇಗನೇ ಹಾಳಾಗುತ್ತದೆ. ಸಾವಯವ, ನೈಸರ್ಗಿಕ ಕೃಷಿ ಪದ್ಧತಿಗಳೂ ಭೂ ಫಲವತ್ತತೆಯನ್ನು ಹೆಚ್ಚಿಸುತ್ತವೆ. ರಾಸಾಯನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡವರು ಹೆಚ್ಚು ಗೊಬ್ಬರ, ಕೀಟನಾಶಕ, ಕಳೆನಾಶಕಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ವೆಚ್ಚವನ್ನೂ ಮಾಡಬೇಕಾಗುತ್ತದೆ.

ಸಾವಯವ, ನೈಸರ್ಗಿಕ ಪದ್ಧತಿಯನ್ನು ಅಳವಡಿಸಿಕೊಂಡು ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಿರುವ ನಮ್ಮ ಗೆಳೆಯ ಚಂದ್ರಶೇಖರ ಪಾಟೀಲ ಹೇಳುವ ಪ್ರಕಾರ, ರಾಸಾಯನಿಕ ಕೃಷಿಯಿಂದ ಆಗುವ ಹಾನಿ ಅಪಾರವಾದುದು. ಸಾವಯವ ಕೃಷಿಯೇ ಉತ್ತಮ ಎಂದು ಅವನು ಹೇಳುತ್ತಾನೆ.

ಶೂನ್ಯ ಬಂಡವಾಳ ಪದ್ಧತಿ ಮೊದಲಿನಿಂದ ಇದ್ದರೂ ಅದಕ್ಕೊಂದು ರೂಪಕೊಟ್ಟು ಆಂದೋಲನ ಶುರು ಮಾಡಿದವರು ಸುಭಾಷ್ ಪಾಲೇಕರ್​. ಇನ್ನು ಸಾವಯವ ಕೃಷಿ ಪೂರ್ವದಿಂದಲೇ ಇತ್ತು. ಈಗ ರಾಸಾಯನಿಕ ಕೃಷಿಯಿಂದಾಗುತ್ತಿರುವ ತೊಂದರೆಯನ್ನು ಅರಿತ ಸರ್ಕಾರ ನಾವು ಸಾವಯವ ಕೃಷಿಗೆ ಉತ್ತೇಜನ ನೀಡುತ್ತೇವೆ ಎನ್ನುತ್ತಾನೆ ಚಂದ್ರಶೇಖರ ಪಾಟೀಲ. ರಾಸಾಯನಿಕಗಳನ್ನಾದರೂ ಇಂತಿಷ್ಟೇ ಪ್ರಮಾಣದಲ್ಲಿ ಹಾಕಬೇಕು ಎಂದು ಹೇಳುತ್ತಿದೆ. ಆದರೆ ಬಹುತೇಕ ರೈತರು ನಿಯಮ ಪಾಲನೆ ಮಾಡುತ್ತಿಲ್ಲ. ಬೆಳೆಗಳಿಗೆ ರಾಸಾಯನಿಕಗಳ ಅಭಿಷೇಕವನ್ನೇ ಮಾಡಲಾಗುತ್ತಿದೆ.

ನಾನಂತೂ ಮೊದಲಿನಿಂದಲೂ ಸಾವಯವ ಕೃಷಿಯನ್ನು ಮಾಡುತ್ತಿದ್ದೇನೆ. ನನ್ನ ಭೂಮಿಯೂ ಅದಕ್ಕೆ ಹೊಂದಿಕೊಂಡಿದೆ. ಆದರೆ ಹೊಸದಾಗಿ ಸಾವಯವ ಕೃಷಿ ಮಾಡುತ್ತೇನೆ ಎಂದು ಹೊರಟರೆ 6-7 ವರ್ಷ ನಿರೀಕ್ಷಿತ ಬೆಳೆ ಬರುವುದಿಲ್ಲ. ಹಾಕಿರುವ ಬಂಡವಾಳವೂ ಬರುವುದಿಲ್ಲ. ಆದರೆ ರಾಸಾಯನಿಕ ಕೃಷಿಯಲ್ಲಿ ಒಳ್ಳೆಯ ಆದಾಯ ಬರುತ್ತದೆ. ಹಾಗಾಗಿ ಜೀವಕ್ಕೆ, ಭೂಮಿಗೆ ತೊಂದರೆ ಇದ್ದರೂ ರೈತರು ಅನಿವಾರ್ಯವಾಗಿ ರಾಸಾಯನಿಕ ಕೃಷಿ ಮೊರೆ ಹೋಗುತ್ತಿದ್ದಾರೆ. ಇದು ಕೃಷಿಯಲ್ಲಿಯ ಅಪಾಯಕಾರಿ ಬೆಳವಣಿಗೆ ಎಂದೂ ಹೇಳುತ್ತಾನೆ ಚಂದ್ರಶೇಖರ ಪಾಟೀಲ.

ಅದೆಷ್ಟು ಅಪಾಯ ತಂದುಕೊಳ್ಳುತ್ತಿದ್ದಾರೆಂದರೆ. ಯಾವುದೇ ಬೆಳೆಗೆ ರಾಸಾಯನಿಕ ಸಿಂಪಡಣೆ ಮಾಡಿದರೆ 24 ರಿಂದ 48 ಗಂಟೆಗಳ ಕಾಲ ಅದನ್ನು ಮುಟ್ಟಬಾರದು ಎಂದು ಹೇಳಲಾಗುತ್ತದೆ. ಆದರೆ ನಮ್ಮ ರೈತರು ಒಂದು ಗಂಟೆಯೂ ಕಾಯುವುದಿಲ್ಲ. ಈಗ ಹೋಗಿ ಕೆಮಿಕಲ್ ಸಿಂಪಡಣೆ ಮಾಡುತ್ತಾರೆ. ಸ್ವಲ್ಪ ಹೊತ್ತಿಗೇ ಹೋಗಿ ಆ ಗಿಡದ ಹೂವನ್ನೋ, ಕಾಯನ್ನೋ ಕೀಳುತ್ತಾರೆ. ಇದರಿಂದ ಅವರ ಆರೋಗ್ಯದ ಮೇಲೆಯೇ ಕೂಡ ಗಂಭೀರ ಪ್ರಭಾವ ಬೀರುತ್ತಿದೆ ಎಂದು ಕಳಕಳಿ ವ್ಯಕ್ತಪಡಿಸುತ್ತಾನೆ ಚಂದ್ರಶೇಖರ ಪಾಟೀಲ.

ಆರೋಗ್ಯ, ಭೂ ಫಲವತ್ತತೆ ದೃಷ್ಟಿಯಿಂದ ನೋಡಿದರೆ ಸಾವಯವ, ನೈಸರ್ಗಿಕ, ಶೂನ್ಯ ಬಂಡವಾಳ ಕೃಷಿಗಳು ಅತ್ಯುತ್ತಮ. ಆದರೆ ಲಾಭ, ಆದಾಯದ ದೃಷ್ಟಿಯಿಂದ ರೈತರಿಗೆ ರಾಸಾಯನಿಕ ಕೃಷಿಯೇ ಅನಿವಾರ್ಯವಾಗಿಬಿಟ್ಟಿದೆ ಈಗ ಎಂದೂ ಮರಗುತ್ತಾನೆ ಚಂದ್ರಶೇಖರ ಪಾಟೀಲ.

ಇಷ್ಟರ ಮೇಲೆ ರೈತರು ತಮ್ಮ ಬೆಳೆಗಳನ್ನು ಹೇಗೆ ಬೆಳೆಯಬೇಕು ಎಂಬುದು ಅವರ ವಿವೇಚನೆಗೆ ಬಿಟ್ಟ ವಿಚಾರವಾಗಿದೆ ಎನ್ನುತ್ತಾನೆ ನನ್ನ ಗೆಳೆಯ ರೈತ ಸಾಹಿತಿ ಚಂದ್ರಶೇಖರ ಪಾಟೀಲ..!

# ಕೆ.ಶಿವು.ಲಕ್ಕಣ್ಣವರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here