ಕಲಬುರಗಿ: ವಿಶ್ವದಾದ್ಯಂತ ರೌದ್ರ ನರ್ತನ ತೋರುತ್ತಿರುವ ಕೊರೊನಾ ವೈರಸ್ ಇದೀಗ ಕೊರೊನಾ ವರಿಯರ್ಸ್‍ಗಳನ್ನೇ ಟಾರ್ಗೆಟ್ ಮಾಡಿದಂತಿದೆ.
ಶಹಾಬಾದ ನಗರ ಪೊಲೀಸ್ ಠಾಣೆಯ ಹಲವು ಪೊಲೀಸರಿಗೆ ಸರದಿಯಂತೆ ಕೊರೊನಾ ಸೋಂಕು ಹರಡುತ್ತಿದೆ. ಇದು ಪೊಲೀಸ್ ಇಲಾಖೆಯನ್ನ ಮಾತ್ರವಲ್ಲದೇ ತಾಲೂಕಾಡಳಿತವನ್ನು ಆತಂಕಕ್ಕೆ ದೂಡಿದೆ.
ಹಲವು ದಿನಗಳಿಂದ ನಗರದಲ್ಲಿ ನಿತ್ಯ 8ರಿಂದ9 ಜನರಿಗೆ ಕರೊನಾ ಸೊಂಕು ದೃಢಪಟ್ಟಿರುವ ವರದಿ ಬರುತ್ತಿತ್ತು.ಆದರೆ ಬುಧವಾರ ಮಾತ್ರ ಅದು 8ರಿಂದ 51ಕ್ಕೇರಿದ್ದು ಮಾತ್ರ ಶಹಾಬಾದ ತಾಲೂಕಿನಲ್ಲಿ ಆತಂಕದ ಮನೆ ಮಾಡಿದೆ. ಆ 51 ಜನರಲ್ಲಿ 13 ಜನ ಪೊಲೀಸ್ ಸಿಬ್ಬಂದಿಗಳು ಇರುವುದು ದೃಢಪಟ್ಟಿದೆ. ಕಳೆದ ಹದಿನೈದು ದಿನಗಳ ಹಿಂದಷ್ಟೆ ಪೊಲೀಸ್ ಪೆದೆಯೊಬ್ಬನಿಗೆ ಕೊರೊನಾ ದೃಢಪಟ್ಟಿರುವುದು ಕಂಡು ಬಂದಿತು. ನಂತರ ಕೆಲವು ದಿನಗಳ ನಂತರ ಠಾಣೆಯ ಪಿಎಸ್‍ಐ ಅವರಿಗೆ ಸೊಂಕು ತಗುಲಿರುವುದು ದೃಢಪಟ್ಟಿತ್ತು.
ಆಗ ನಗರ ಪೊಲೀಸ್ ಠಾಣೆಯ ಎಲ್ಲಾ ಸಿಬ್ಬಂದಿಗಳು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ಒಳಗಾದಾಗ ಸುಮಾರು 11 ದಿನಗಳ ನಂತರ ಠಾಣೆಯ 13 ಜನರಿಗೆ ಪಾಸಿಟಿವ್ ಇರುವ ವರದಿ ಬಂದಿದ್ದರಿಂದ ಎಲ್ಲರಿಗೂ ತಲೆನೋವಾಗಿದೆ. ಜನರನ್ನ ಕೊರೊನಾ ಸೋಂಕಿನಿಂದ ರಕ್ಷಿಸುತ್ತಿದ್ದ ವಾರಿಯರ್ಸ್‍ಗಳಿಗೆ ಇದೀಗ ಸೋಂಕು ವ್ಯಾಪಕವಾಗಿ ಹರಡುತ್ತಿರುವುದು ಮಾತ್ರ ದುರಂತ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಇನ್ನೊಂದು ವಿಪರ್ಯಾಸವೆಂದರೆ ಠಾಣೆಗೆ ಮುಖ್ಯ ಅಧಿಕಾರಿ ಸರ್ಕಲ್ ಇನ್ಸ್‍ಪೆಕ್ಟರ್ ಹುದ್ದೆಯೂ ಮೂರು ತಿಂಗಳಿನಿಂದ ಖಾಲಿ ಇದೆ.ಅಲ್ಲದೇ ಠಾಣೆಯ ಪಿಎಸ್‍ಐ ಇಬ್ಬರಿಗೂ ಸೊಂಕು ತಗುಲಿದೆ.ಅಲ್ಲದೇ ಸಿಬ್ಬಂದಿಗಳು ಕಡಿಮೆಯಿರುವುದು ಒಂದು ಕಡೆಯಾದರೆ, ಅದರ ಮಧ್ಯೆ 13 ಜನರಿಗೆ ಸೊಂಕು ತಗುಲಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ತೊಂದರೆಯಾಗುತ್ತಿದೆ.ಸದ್ಯ ಪಿಎಸ್‍ಐ ಒಬ್ಬರು ಗುಣಮುಖರಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಪೊಲೀಸರು ಇರದೇ ಹೋದರೆ ನಗರದಲ್ಲಿ ಸಾರ್ವಜನಿಕರು ಯಾವುದೇ ಭಯವಿಲ್ಲದೇ ಮನಸ್ಸಿಗೆ ಬಂದಂತೆ ಓಡಾಡುತ್ತಾರೆ.ಅನಾವಶ್ಯಕವಾಗಿ ಹೊರಗೆ ಬಂದು ಬೀದಿಯಲ್ಲಿ ನಿಲ್ಲುವ ಪ್ರಸಂಗಗಳು ಹೆಚ್ಚಾಗುತ್ತಿದೆ.ಇದರಿಂದ ತಾಲೂಕಾಡಳಿತಕ್ಕೆ ಎಲ್ಲಿಲ್ಲದ ಸಂಕಷ್ಟ ಎದುರಾಗಿದೆ.ನಗರ ಪೊಲೀಸ್ ಠಾಣೆಗೆ ಸರ್ಕಲ್ ಇನ್ಸ್‍ಪೆಕ್ಟರ್ ನೇಮಿಸಬೇಕೆಂದು ಸಾರ್ವಜನಿಕರ ಕೂಗಾಗಿದೆ.ಅಲ್ಲದೇ ಶಾಸಕರಿಗೂ ತಿಳಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.
ಈ ಕರೊನಾದಂತ ಸಂದಿಗ್ಧ ಪರಿಸ್ಥಿತಿಯಲ್ಲಿ ಇತರ ಇಲಾಖೆಗಳ ಸಿಬ್ಬಂದಿಗಳು ಸಾಕಷ್ಟು ಶ್ರಮಿಸುತ್ತಿದ್ದರೂ ಕೆಲವರು ಬೇಕಾಬಿಟ್ಟಿಯಾಗಿ ಹೊರಗಡೆ ಬಂದು ವಾದ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅಧಿಕಾರಿಗಳು ನೇಮಕವಾದರೆ ಇದಕ್ಕೆಲ್ಲಾ ಬ್ರೇಕ್ ಹಾಕಬಹುದು ಎಂಬುದು ಸರಕಾರಿ ಸಿಬ್ಬಂದಿಗಳ ಆಶಯವಾಗಿದೆ.
ನಗರ ಪೊಲೀಸ್ ಠಾಣೆಯ ಪೇದೆಗಳು ಪರೀಕ್ಷೆಗೆ ಒಳಪಟ್ಟ ನಂತರ ಕೆಲವು ದಿನಗಳ ನಂತರ ಕೊರೊನಾ ದೃಢಪಟ್ಟಿರುವುದಾಗಿ ತಿಳಿದುಬಂದಿದೆ. ಆಗ ಸುಮಾರು 12 ಪೆದೆಗಳು ಮತ್ತೆ ರ್ಯಾಪಿಡ್ ಪರೀಕ್ಷೆಗೆ ಒಳಗಾಗಿದ್ದೆವೆ. ಆದರೆ ಅಲ್ಲಿ ಎಲ್ಲರ ವರದಿ ನೆಗೆಟಿವ್ ಬಂದಿದ್ದು, ಏನು ಮಾಡುವುದು ಎಂದು ತಿಳಿಯದಾಗಿದೆ ಎಂದು ತಿಳಿಸಿದ್ದಾರೆ.ಅಲ್ಲದೇ ನನಗೆ ಕೋವಿಡ್-19ನ ಯಾವುದೇ ಲಕ್ಷಣಗಳು ಇಲ್ಲ. –ವಿಶ್ವನಾಥ ಹೂಗಾರ ಪೊಲೀಸ್ ಪೆದೆ.
ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಆತಂಕದ ಮನೆ ಮಾಡಿದೆ.ಆದ್ದರಿಂದ ಸಾರ್ವಜನಿಕರು ದಯಮಾಡಿ ಮನೆಯಲ್ಲಿರಿ. ಅನಾವಶ್ಯಕವಾಗಿ ಹೊರಗಡೆ ಬಾರದಿರಿ. ಈಗಾಗಲೇ ಸೊಂಕಿತರಿಗೆ ಬೆಡ್,ಆಕ್ಸಿಜನ್, ವೆಂಟಿಲೇಟರ್ ಸಿಗುತ್ತಿಲ್ಲ ಎಂಬುದು ಗೊತ್ತಿದೆ. ಎಷ್ಟೇ ಜಾಗೃತಿ ಮೂಡಿಸಿದರೂ ಕೆಲವರು ಅಸಡ್ಡೆ ತೋರುತ್ತಿದ್ದಾರೆ.ಇದೇ ರೀತಿ ಮುಂದುವರೆದರೆ ಗಂಡಾಂತರ ಎದುರಿಸಬೇಕಾಗುತ್ತದೆ. – ಸುರೇಶ ವರ್ಮಾ ತಹಸೀಲ್ದಾರ ಶಹಾಬಾದ.