ಕಲಬುರಗಿ: ಜಿಲ್ಲೆಯ ಮೂರು ಪ್ರತ್ಯೇಕ ಸ್ಥಳಗಳಲ್ಲಿ ರಸ್ತೆ ಅಪಘಾತಗಳು ಸಂಭವಿಸಿ, ಇಬ್ಬರು ಅಸುನೀಗಿ, ಹಲವರು ಗಾಯಗೊಂಡಿದ್ದಾರೆ. ಮೃತರನ್ನು ಮುದ್ದೇಬಿಹಾಳ್ ಮೂಲದ ಶಿವಪ್ರಸಾದ್ ಬಳಗಾನೂರು ಎಂದು ಗುರುತಿಸಲಾಗಿದೆ. ಇನ್ನೋರ್ವನ ಹೆಸರು ಹಾಗೂ ಗುರುತು ಪತ್ತೆಯಾಗಿಲ್ಲ.
ಶಿವಪ್ರಸಾದ್ ಯಡ್ರಾಮಿ ತಾಲ್ಲೂಕಿನಲ್ಲಿ ಬರುವ ಕಾಚಾಪೂರ್ ಗ್ರಾಮದಲ್ಲಿನ ತಮ್ಮ ಜಮೀನಕ್ಕೆ ಹೋಗಿ ಮರಳಿ ನಗರಕ್ಕೆ ದ್ವಿಚಕ್ರವಾಹನದ ಮೇಲೆ ಬರುವಾಗ ತಾಲ್ಲೂಕಿನ ಫಿರೋಜಾಬಾದ್ ದರ್ಗಾ ಸಮೀಪ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟ. ಈ ಕುರಿತು ಮೃತನ ಪತ್ನಿ ಅನುಶ್ರೀ ಗಂಡ ಶಿವಪ್ರಸಾದ್ ಬಳಗಾನೂರು ದೂರು ಸಲ್ಲಿಸಿದ್ದು, ಸಂಚಾರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇನ್ನೊಂದು ಘಟನೆಯಲ್ಲಿ ಜಿಲ್ಲೆಯ ಆಳಂದ್ ತಾಲ್ಲೂಕಿನ ವಾಗ್ದರ್ಗಿ- ರಿಪ್ಪನಪಲ್ಲಿ ಮುಖ್ಯ ರಸ್ತೆಯ ಖಾನಾಪೂರ್ ಕ್ರಾಸ್ ಹತ್ತಿರ ನಡೆದುಕೊಂಡು ಹೋಗುತ್ತಿದ್ದ ಅಪರಿಚಿತ ವ್ಯಕ್ತಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಅಸುನೀಗಿದ್ದಾನೆ. ಅಪಘಾತ ಸಂಭವಿಸಿದಾಗ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದ. ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದ ಆತನಿಗೆ ಆಳಂದ್ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆತ ಅಸುನೀಗಿದ ಎಂದು ಆಳಂದ್ ತಾಲ್ಲೂಕಿನ ನಾಗಲೇಗಾಂವ್ ಗ್ರಾಮದ ವಿಶ್ವನಾಥ್ ಕಂಬಾರ್ ದೂರು ಸಲ್ಲಿಸಿದ್ದು, ಆಳಂದ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಮತ್ತೊಂದು ಘಟನೆಯಲ್ಲಿ ಜೇವರ್ಗಿ ತಾಲ್ಲೂಕಿನ ಚಿಗರಳ್ಳಿ ಕ್ರಾಸ್ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ವ್ಯಕ್ತಿಯ ಮೇಲೆ ಈಚರ್ ಕಂಪೆನಿ ಗೂಡ್ಸ್ ವಾಹನ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ. ಗಾಯಾಳುವನ್ನು ರಮೇರ್ಶ ತಂದೆ ಹೊಬು ಜಾಧವ್ ಎಂದು ಗುರುತಿಸಲಾಗಿದೆ. ಬಿತ್ತನಗೆ ಹತ್ತಿ ಬೀಜ ಖರೀದಿಸಿಕೊಂಡು ಬರಲು ಹೋದಾಗ ಅಪಘಾತ ಸಂಭವಿಸಿದೆ ಎಂದು ಗಾಯಾಳುವಿನ ಪತ್ನಿ ಮಾಲಾಶ್ರೀ ಜಾಧವ್ ದೂರು ಸಲ್ಲಿಸಿದ್ದು, ಈ ಕುರಿತು ಜೇವರ್ಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.