ಸರ್ವ ಧರ್ಮ ಸಮಾನತೆಯ ಕೇಂದ್ರ ಶ್ರೀ ಕ್ಷೇತ್ರ ಇಂಚಗೇರಿ ಮಠ ಅಂತ

0
34

ಅಖಂಡ ಭಾರತ ದೇಶದಲ್ಲಿ ಇಂದು ನಾವು ಹಲವಾರು ಮಠಮಾನ್ಯಗಳನ್ನು ಕಾಣುತ್ತೇವೆ. ಭಾರತವು ಋಷಿಮುನಿಗಳ ಜನನದ ಬಿಡು ಸದಾಕಾಲ ಜಗತ್ತಿಗೆ ಮಾರ್ಗದರ್ಶನ ಮಾಡುತ್ತಲಿದೆ ಇಲ್ಲಿ ಅನೇಕ ಜಾತಿ-ಮತ ಸಂಪ್ರದಾಯಗಳಿದ್ದವು ಅವುಗಳಲ್ಲಿ ಅನೇಕ ಜನ ಮಹಾತ್ಮರು ಜನತೆಯನ್ನು ಉದ್ಧರಿಸಿದ್ದಾರೆ ಭಾರತಮಾತೆ ಸದಾಕಾಲ ಅನರ್ಗ್ಯ ಮುತ್ತು ರತ್ನಗಳಂತಹ ಜ್ಞಾನಿಗಳನ್ನು ಜನತೆಗಿತ್ತು ಸಮಾಜೊದ್ಧಾರ ಕಾರ್ಯಗಳನ್ನು ಮುಂದುವರೆಸಿದ್ದಾಳೆ ಈ ಕಾರ್ಯಕ್ಕೆ ಎಂದಿಗೂ ಚ್ಯುತಿ ಬರುವದಿಲ್ಲ. ಅದರಂತೆ ಧರ್ಮ ಜಾತಿ ಮತ ಪಂಥ ಎನ್ನದೆ ದೇಶದ ಉದ್ದಗಲಕ್ಕೂ ಸಕಲ ಮಾನವರು ಒಂದೇ ಎಂಬಂತೆ ಸರ್ವ ಧರ್ಮ ಸಮಾನತೆಯನ್ನು ಸಾರುತ್ತಿರುವ ದಕ್ಷಿಣ ಭಾರತದ ಪ್ರಸಿದ್ಧ ಮಠವಾದ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಶ್ರೀ ಕ್ಷೇತ್ರ ಇಂಚಗೇರಿ ಮಠ.

ವಿಜಯಪುರದಿಂದ ಹೊರ್ತಿ ಸೊಲ್ಲಾಪುರ ಮಾರ್ಗದ ಮಧ್ಯೆ ಹೊರ್ತಿಯಿಂದ 11 ಕಿ.ಮೀ ಸಾಗಿದರೆ ಭವ್ಯವಾದ ಶ್ರೀ ಕ್ಷೇತ್ರ ಇಂಚಗೇರಿ ಮಠವನ್ನು ಕಾಣಬಹುದು.ಸುತ್ತಮುತ್ತಲು ಬೆಟ್ಟ ಗುಡ್ಡಗಳಿಂದ, ಹಸಿರು ಸೀರೆಯನ್ನು ಹೊದ್ದು ಮಲಗಿದಂತೆ ಪರಿಸರ ದೇವತೆ ನಳನಳಿಸುತ್ತಿದ್ದಾಳೆ. ಸುಮಾರು ಇನ್ನೂರು ವರ್ಷಗಳ ಇತಿಹಾಸವನ್ನು ಈ ಮಠ ಹೊಂದಿದೆ. ಸಮೀಪದ ನಿಂಬರಗಿಯ ಶ್ರೀ ಗುರುಲಿಂಗಜಂಗಮ ಮಹಾರಾಜರು ಈ ಮಠದ ಮೊದಲ ಗುರುಗಳು ಇವರ ಒಂದು ಧ್ಯಾನದ ಮಟ್ಟ ಯಾವ ರೀತಿ ಇತ್ತೆಂದರೆ ಕುರಿಗಳನ್ನು ಮೇಯಿಸುತ್ತ ಆತ್ಮ ಸಾಕ್ಷಾತ್ಕಾರವನ್ನು ಪಡೆದವರು.

Contact Your\'s Advertisement; 9902492681

ಇವರಿಂದ ಉಪದೇಶವನ್ನು ಪಡೆದು ಶ್ರೀ ಕ್ಷೇತ್ರ ಇಂಚಗೇರಿ ಮಠವನ್ನು ಸ್ಥಾಪಿಸಿದವರು ಮಹಾರಾಷ್ಟ್ರದ ಉಮದಿಯ ಶ್ರೀ ಭಾವುಸಾಹೇಬ ಮಹಾರಾಜರು ಮೊದಲೇ ಹೇಳಿದಂತೆ ಮಠದಲ್ಲಿ ಜಾತಿ ಮತ ಪಂಥ ಎಂಬ ಯಾವುದೇ ಭೇದವಿಲ್ಲ ಎಂಬಂತೆ ಇದನ್ನು ನಾವು ಗುರು ಶಿಷ್ಯರಲ್ಲಿಯೂ ನಾವು ಕಾಣಬಹುದು ಗುರುಲಿಂಗಜಗಮ ಮಹಾರಾಜರು ನೀಲಗಾರ ಜಾತಿಯವರದರೆ ಭಾವುಸಾಹೇಬ ಮಹಾರಾಜರು ಅಪ್ಪಟ ಬ್ರಾಹ್ಮಣ ಜಾತಿಯವರು.

ಆಗರ್ಭ ಶ್ರೀಮಂತ ಮನೆತನ ಹೊಂದಿದ್ದ ಇವರನ್ನು ದೇಶಪಾಂಡೆ ಮನೆತನದವರೇ ಎಂದು ಕರೆಯಲ್ಪಡುತ್ತಿದ್ದರು. ಸುಮಾರು 4500 ಎಕರೆ ಭೂಮಿಯನ್ನು ಹೊಂದಿದ್ದ ಇವರು 30 ಹಳ್ಳಿಗಳ ಜಹಾಗೀರರಾಗಿದ್ದರು.ಎಲ್ಲವನ್ನು ಬಡ ಬಗ್ಗರಿಗೆ ದೀನ ದಲಿತರಿಗೆ ದಾನ ಮಾಡಿ ಗುರುಗಳ ಉಪದೇಶ ಪಡೆದು ಆತ್ಮ ಸಾಕ್ಷಾತ್ಕಾರ ಮಾಡಿಕೊಂಡವರು. ಇವರ ಧ್ಯಾನ ಹೇಗಿತ್ತು ಎಂದರೆ ಒಂದು ಬಾವಿಯ ಕಟ್ಟೆಯ ಮೇಲೆ ಒಂಟಿ ಗಾಲಲ್ಲಿ ನಿಂತುಕೊಂಡು ಧ್ಯಾನ ಮಾಡುತ್ತಿದ್ದರು.ಧ್ಯಾನ ಮಾಡುತ್ತ ಸಮಾಧಿ ಸ್ಥಿತಿಗೆ ತಲುಪಿ ಬಾವಿಯಲ್ಲಿ ಬಿದ್ದಾಗ ಮತ್ತೆ ಎದ್ದು ಬಂದು ಅದೇ ಸ್ಥಿತಿಯಲ್ಲಿ ಧ್ಯಾನ ಮಾಡುತ್ತಿದ್ದರು.

ನಂತರ ಇವರಿಂದ ಪ್ರಭಾವಿತರಾದ ಜಮಖಂಡಿಯ ಶ್ರೀ ಗಿರಿಮಲ್ಲೇಶ್ವರ ಮಹಾರಾಜರು ಅಂದಿನ ಕಾಲದಲ್ಲಿ ಜಮಖಂಡಿಯ ಆಸ್ಥಾನದ ಅರಸನಿಗೆ ಆರ್ಥಿಕ ಕೊರತೆ ಉಂಟಾದಾಗ ಇವರೇ ಅವರಿಗೆ ಸಾಲವನ್ನು ನೀಡಿದರು.ಅಂದಿನ ಕಾಲದಲ್ಲಿ ಪ್ರಸಿದ್ಧ ಬಂಗಾರದ ವ್ಯಾಪಾರಿಗಳು ಆಗಿದ್ದರು ಅಂದರೆ ಎಷ್ಟು ಶ್ರೀಮಂತರು ಎಂಬುದು ಇಲ್ಲೇ ತಿಳಿದುಬರುತ್ತದೆ.14 ಮಕ್ಕಳನ್ನು ಹೊಂದಿದ್ದ ಇವರು ಧ್ಯಾನ,ಆತ್ಮ ಸಾಕ್ಷಾತ್ಕಾರ, ಮೋಕ್ಷದ ಹಿಂದೆ ಬಂದು ಇಂಚಗೇರಿ ಮಠದಲ್ಲಿ ಭಕ್ತಿ ಪ್ರಚಾರ ಮಾಡಿದರು.ಇವರ ಅಪ್ಪಟ ಶಿಷ್ಯರಾದ ಇಂದಿನ ಕೃಷ್ಣ ನದಿಯ ದಂಡೆಯ ಮೇಲೆ ವಿರಾಜಮಾನವಾಗಿ ಭಕ್ತರ ಪ್ರತಿಯೊಂದು ಬೇಡಿಕೆಯನ್ನು ಈಡೇರಿಸುವ ಹಿಪ್ಪರಗಿಯ ಶ್ರೀ ಸಂಗಮೇಶ್ವರ ಮಹಾರಾಜರು.

ಮುಂದೆ ಆರೋಗ್ಯದ ಸಮಸ್ಯೆಯಿಂದ ಇವರು ಗಿರಿಮಲ್ಲೇಶ್ವರ ಮಹಾರಾಜರ ತೊಡೆಯ ಮೇಲೆ ದೇಹ ತ್ಯಾಗ ಮಾಡಿದರು.14 ಮಕ್ಕಳು ತೀರಿ ಹೋದರೂ ಒಂದು ಹನಿ ಕಣ್ಣೀರು ಹಾಕದ ಗಿರಿಮಲ್ಲೇಶ್ವರರು ಶಿಷ್ಯ ದೇಹ ತ್ಯಾಗ ಮಾಡಿದಾಗ ಮಗುವಿನ ಹಾಗೆ ಗೊಳೋ ಎಂದು ಅತ್ತು ಬಿಟ್ಟರು. ನೋಡಿ ಗುರು ಶಿಷ್ಯರ ಸಂಬಂಧ ತಾಯಿ ಮಗುವಿನ ಹಾಗೆ ಇದೆ. ನಂತರ ಗಿರಿಮಲ್ಲೇಶ್ವರ ಮಹಾರಾಜರಿಂದ ಉಪದೇಶ ಪಡೆದ ಹುಬ್ಬಳ್ಳಿಯ ಮುರಗೋಡ ಮನೆತನದ ಶ್ರೀ ಶಿವಪ್ರಭು ಮಹಾರಾಜರು ಭಕ್ತಿ ಪ್ರಚಾರದಲ್ಲಿ ತೊಡಗಿದರು.

ನಂತರ ಇವರ ಮಗನಾಗಿ ಜನಿಸಿದ ಬಾಲ ಬ್ರಹ್ಮಚಾರಿ, ದೇವರು ಹೀಗೆ ನಾನಾ ಹೆಸರಿನಿಂದ ಭಕ್ತರಿಂದ ಕರೆಸಿಕೊಳ್ಳುತ್ತಿದ್ದ ಶ್ರೀ ಸದ್ಗುರು ಸಮರ್ಥ ಮಾಧವಾನಂದರು ನವೆಂಬರ್ 2 1915 ರಂದು ಶ್ರೀ ಶಿವಪ್ರಭು ಮಹಾರಾಜರು ಹಾಗೂ ಕಾಳಮ್ಮ ತಾಯಿಯ ಉದರದಲ್ಲಿ ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಜನಿಸಿದರು.ಚಿಕ್ಕ ವಯಸ್ಸಲ್ಲೇ ಹಲವಾರು ಪವಾಡಗಳನ್ನು ಮಾಡುತ್ತ ಭಕ್ತರಿಂದ ದೇವರೆಂದೆ ಕರೆಸಿಕೊಂಡವರು. ಒಮ್ಮೆ ಹುಬ್ಬಳ್ಳಿಯಿಂದ ಇಂಚಗೇರಿ ಮಠಕ್ಕೆ ದಿಂಡಿ ಪಲ್ಲಕ್ಕಿ ಪಾದಯಾತ್ರೆಯ ಮೂಲಕ ಬಂದಾಗ ಗಿರಿಮಲ್ಲೇಶ್ವರ ಮಹಾರಾಜರು ಪುರಾಣ ಪ್ರವಚನದ ಕೊನೆಯಲ್ಲಿ ‘ಯಾರು ಹುಬ್ಬಳ್ಳಿಯಿಂದ ಇಲ್ಲಿಯವರೆಗೆ ಒಂದು ಶ್ವಾಸವನ್ನು ಬಿಡದೆ ಗುರುವಿನ ನಾಮಸ್ಮರಣೆ ಮಾಡುತ್ತ ಬಂದಿದಿರಾ ಎದ್ದು ನಿಂತುಕೊಳ್ಳಿ’ ಎಂದು ಹೇಳಿದರು ಆಗ ಅಲ್ಲಿದ್ದವರು ಒಬ್ಬರ ಮುಖ ಒಬ್ಬರು ನೋಡಿಕೊಳ್ಳತೋಡಗಿದರು. ಪ್ರವಚನ ಕೇಳುತ್ತ ಕೊನೆಯಲ್ಲಿ ಕುಳಿತಿದ್ದ ಬಾಲ ಮಾಧವಾನಂದರು ಎದ್ದು ನಿಂತುಕೊಂಡರು. ಆಗ ಗಿರಿಮಲ್ಲೇಶ್ವರ ಮಹಾರಾಜರು ಕೈ ಮಾಡುತ್ತ ಭಕ್ತರಿಗೆ ‘ ಹಾ ಅಲ್ಲಿದಾನೆ ನೋಡಿ ದೇವರು’ ಎಂದು ಸಂತೋಷದಿಂದ ಉದ್ಘರಿಸಿದರು. ನಂತರ ಭಕ್ತರ ಪಾಲಿಗೆ ಮಾಧವಾನಂದರು ಮಹಾದೇವರಾಗಿ ಜನಪ್ರಿಯರಾದರು.

ಸಂಪ್ರದಾಯವನ್ನು ಬೆಳೆಸಲಿಕ್ಕೆ ಮುಖ್ಯ ಬೇಕಾದುದು ಧನ ಅದಕ್ಕಾಗಿ ಅನ್ಯರಿಗೆ ಅದನ್ನು ಕೇಳಲಿಲ್ಲ ಮನೆಯಿಂದಲೇ ಪ್ರಾರಂಭವಾಗಲಿ ಎಂದು ಇಡೀ ಮನೆಯ ಆಸ್ತಿಯನ್ನು ವ್ಯಯಿಸಿದರು.ಹುಬ್ಬಳ್ಳಿಯಲ್ಲಿ ಗುರುಗಳ ಹೆಸರಿನಲ್ಲಿ ಗಿರೀಶ ಆಶ್ರಮವನ್ನು ಕಟ್ಟಿಸಿದರು ಸಂಪ್ರದಾಯಸ್ಥರಿಗೆ ಸದಾಕಾಲ ಧ್ಯಾನ ಸಾಧನೆ ಭಕ್ತಿ ಮಾಡಲು ಹೇಳುತ್ತಿದ್ದರು. ಎಲ್ಲಿಯು ತಾವು ಗುರುಗಳೆಂದು ಹೇಳಿಕೊಳ್ಳಲಿಲ್ಲ. ತಮ್ಮ ಭಾವಚಿತ್ರ ಪೂಜೆ ತಮ್ಮ ಜೈಘೋಷಣೆ ಆತ್ಮಸ್ತುತಿ ಮಾಡಿಸಿ ಕೊಳ್ಳಲಿಲ್ಲ ಗಿರೀಶ ಆಶ್ರಮದಲ್ಲಿ ಅವರಿಲ್ಲದಾಗ ಗೋಡೆಯಲ್ಲಿ ಮೂಡಿಸಿದ ತಮ್ಮ ಮೂರ್ತಿ ಚಿತ್ರವನ್ನು ತಮ್ಮ ಕೈಯಿಂದ ತಾವೇ ಒಡೆದುಹಾಕಿದರು.

ಇತರ ಮಠದ ಸ್ವಾಮಿಗಳಂತೆ ಕಾವಿ ಬಟ್ಟೆ, ಕೊರಳಲ್ಲಿ ರುದ್ರಾಕ್ಷಿ ಮಾಲೆ, ಕೈಯಲ್ಲಿ ಉಂಗುರ ಹೀಗೆ ಆಡಂಬರಕ್ಕೆ ಅವರಲ್ಲಿ ಜಾಗವಿರಲಿಲ್ಲ. ಸಾಮಾನ್ಯವಾಗಿ ಖಾದಿ ಅಂಗಿ, ದೋತರ ಗಾಂಧಿ ಟೋಪಿ ಇವೆ ಇವರಿಗೆ ಭೂಷಣವಾಗಿತ್ತು. ಯಾವುದೇ ಬಂಗಾರದ ಪೀಠಕ್ಕೆ ಆಸೆ ಪಡಲಿಲ್ಲ ಎಲ್ಲಿಗೆ ಹೋದರು ಜೊತೆಯಲ್ಲಿ ತಮ್ಮದೇ ಹಾಸಿಗೆಯಲ್ಲಿ (ಕೌದಿ) ಆಸಿನರಾಗುತ್ತಿದ್ದರು. ಇಂಚಗೇರಿ ಭಕ್ತಿ ಪ್ರಚಾರದ ಜೊತೆಗೆ ಸ್ವಾತಂತ್ರ ಚಳುವಳಿಯಲ್ಲಿ ಕೂಡ ಭಾಗವಹಿಸಿದರು. ಅಪ್ರತಿಮ ಸ್ವಾತಂತ್ರ್ಯಯೋಧರಾದ ಮಹಾದೇವರು ತಮ್ಮ ಅನುಯಾಯಿಗಳೋಡನೆ ಸತ್ಯಾಗ್ರಹ, ರೇಲ್ವೆ ತಡೆ, ಕಚೇರಿ ಸುಡುವುದು,ಕಂದಾಯ ಕಸಿಯುವುದು ಮುಂತಾದವುಗಳನ್ನು ನಡೆಸಿದರು.

ಇದರಿಂದ ಬ್ರಿಟಿಷರಿಗೆ ಇವರು ಸಿಂಹಸ್ವಪ್ನರಾಗಿದ್ದರು ಹಲವಾರು ವರ್ಷ ನೂರಾರು ಕಾರ್ಯಕರ್ತರೊಂದಿಗೆ ಭೂಗತರಾಗಿ ಕೆಲಸಮಾಡಿದರು ನೂರೆಂಟು ವಾರೆಂಟ್, ನೂರೆಂಟು ಆರೋಪ,ಕಂಡಲ್ಲಿ ಗುಂಡಿಕ್ಕುವ ಆಜ್ಞೆ ಹೊರಡಿಸಲಾಗಿತ್ತು. ಇದರಿಂದಾಗಿ 72 ಸಲ ಜೈಲು ಕಂಡರೂ ಸಹ ಆದರೆ ಒಂದು ಆರೋಪವೂ ನಿಜವಾಗಲಿಲ್ಲ ನೀರ್ದೋಷಿಗಳಾಗಿ ಹೊರಬಂದರು. ಸಂಸ್ಥಾನಗಳ ವಿಲೀನೀಕರಣ ಕರ್ನಾಟಕ ಏಕೀಕರಣ ಗೋವಾ ವಿಮೋಚನೆ ಭಾಷಾವಾರು ಪ್ರಾಂತ ರಚನೆ ಇವುಗಳಿಗಾಗಿ ಅಹೋರಾತ್ರಿ ಹೋರಾಡಿದರು. ಅನ್ಯಾಯದ ವಿರುದ್ಧ ಹೋರಾಡುವುದು ಅವರ ದಿನಚರಿಯಾಗಿತ್ತು ಭೂಮಾಲೀಕರು ಬಡ ದೇಣಿಗೆಗಾರರನ್ನು ವಂಚಿಸಿದಾಗ ಬಡವರ ಪರವಾಗಿ ನಿಂತು ಶ್ರೀಮಂತರಿಗೆ ಸಾಮ, ದಾನ,ಭೇದ ಉಪಾಯಗಳಿಂದ ತಿಳಿ ಹೇಳಿ ಭೂಮಿ ಕೊಡಿಸುತ್ತಿದ್ದರು.

ಕೊನೆಗೆ ಕೇಳದಾದಾಗ ದಂಡೋಪಾಯ ಬಳಸಿ ಬಡವರ ಪಾಲಿಗೆ ದೇವರಾದರು ಎಷ್ಟೋ ಜನ ಬಡವರು ಕೂಲಿಕಾರರು ಇವರ ಹೆಸರು ಹೇಳಿಕೊಂಡು ಜೀವನ ಸಾಗಿಸುತ್ತಿದ್ದಾರೆ ಅಂದಿನಿಂದ ಇಂದಿನವರೆಗೂ ಅನ್ಯಾಯದಿಂದ ತುಳಿಯಲ್ಪಟ್ಟವರು ಇವರಲ್ಲಿ ಬಂದು ತಮ್ಮ ತೊಂದರೆ ಹೇಳಿಕೊಂಡರೆ ಅವರಿಗೆ ನ್ಯಾಯ ಕೊಡಿಸುವುದು ನಿಶ್ಚಿತ ಅಂದು ಜನರು ನ್ಯಾಯಾಲಯಕ್ಕೆ ಹೋಗುತ್ತಿರಲಿಲ್ಲ ನೇರವಾಗಿ ಇಂಚಗೇರಿ ಮಠಕ್ಕೆ ಬಂದು ಮಾಧವಾನಂದರು ಕೊಡುವ ತೀರ್ಪನ್ನು ಗೌರವಿಸುತ್ತಿದ್ದರು. ಅಷ್ಟೊಂದು ನಂಬಿದ್ದರು ಭಕ್ತರು ಇವರನ್ನು.ಇಷ್ಟೆಲ್ಲಾ ನಡೆದರೂ ತಾವು ತಮ್ಮ ಧ್ಯಾನ ಚಿಂತನೆಯ ಹಾದಿ ಬಿಟ್ಟಿದ್ದಿಲ್ಲ ತಮ್ಮ ಅಖಂಡ ತಪಸ್ಸನ್ನು ಸಿದ್ಧಿಯನ್ನು ಸಮಾಜಕ್ಕೆ ಮೀಸಲಿಟ್ಟು ಭಕ್ತರ ಏಳಿಗೆಗಾಗಿ ಅಹೋರಾತ್ರಿ ಸಂಚರಿಸಿದರು.

ಸಂಪ್ರದಾಯದ ಸಪ್ತಾಹದ ಕಾರ್ಯಕ್ರಮಗಳು ದಿನಕ್ಕೆ ಮೂರು ನಾಲ್ಕು ಕಡೆಗೆ ನಡೆಯುತ್ತಿದ್ದವು ಅಂದರೂ ಬಿಡದೆ ದಣಿವರಿಯದೆ ಎಲ್ಲಕಡೆ ಸಂಚರಿಸಿ ತಮಗಾಗಿ ಕಾಯುತ್ತಿದ್ದ ಸದ್ಭಕ್ತರಿಗೆ ದರ್ಶನವಿತ್ತು ಉಪದೇಶಿಸುತ್ತಿದ್ದರು. ಬಡವರು ನೆನೆಸಿದಾಗ ಅವರ ಮನೆಯ ಬಳಿಗೆ ಬಂದು ಅಪರಾತ್ರಿ ಆದರೂ ಎಬ್ಬಿಸಿ ಭೇಟಿಕೊಟ್ಟು ಸಂತೈಸಿ ಹೋಗುತ್ತಿದ್ದರು ಎಲ್ಲಿಯೋ ಊಟ ಎಲ್ಲಿಯೋ ನಿದ್ರೆ ಮತ್ತೆಲ್ಲಿಯೂ ವಿಶ್ರಾಂತಿ ಸದಾಕಾಲ ಸಂಚಾರದ ಬೋಧನೆಯು ಅವರ ಜೀವನದ ಉಸಿರಾಗಿತ್ತು. ಹೀಗೆ ಸಂಚರಿಸಿ ಕರ್ನಾಟಕ ಮಹಾರಾಷ್ಟ್ರಗಳಲ್ಲಿ ಅನೇಕ ಆಶ್ರಮಗಳನ್ನು ಸ್ಥಾಪಿಸಿದರು.

ಸಂಪ್ರದಾಯದ ನಿತ್ಯನೇಮಗಳಾದ 4 ವೇಳೆ ಭಜನೆ 2 ವೇಳೆ ಧ್ಯಾನ ವರ್ಷದಲ್ಲಿ ಐದು ಸಪ್ತಾಹ ಪ್ರತಿದಿನ ಸಮರ್ಥ ರಾಮದಾಸರ ದಾಸಭೋದ ಹಾಗೂ ಮನಾಚೆ ಶ್ಲೋಕಗಳ ಪಠಣ ಇವುಗಳನ್ನು ನಾಮಧಾರಿ ಆಚರಿಸಬೇಕೆಂದು ವಿಧಿವಿಧಾನ ರೂಪಿಸಿ ಅದರಂತೆ ನಡೆಯಲು ತಿಳಿಸಿದರು. ಮೂಡ ಸಂಪ್ರದಾಯದ ಕಂದಾಚಾರಗಳನ್ನು ಖಂಡಿಸುತ್ತಿದ್ದರು ನೂರೆಂಟು ದೇವರ ಕಲ್ಪನೆಯಿಂದ ಬಳಲುವ ಭಕ್ತರಿಗೆ ನಿಜವಾದ ಆತ್ಮಜ್ಞಾನದ ಉಪದೇಶವಿತ್ತರು. 12ನೇ ಶತಮಾನದಲ್ಲಿ ಬಸವಣ್ಣನವರು ಕೇವಲ ಒಂದು ಅಂತರ್ಜಾತಿ ವಿವಾಹ ಮಾಡಿಸಿದರು. ಇದರಿಂದ ಕಲ್ಯಾಣದಲ್ಲಿ ಕ್ರಾಂತಿ ಉಂಟಾಯಿತು ಇದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಮಾಧವಾನಂದರು ಸ್ವತ: ಮೊಮ್ಮಗಳನ್ನು ಮುಸಲ್ಮಾನ ಯುವಕನಿಗೆ ಕೊಟ್ಟು ಮದುವೆ ಮಾಡಿದರು.

ಅಲ್ಲದೆ ಅವರ ಒಂದು ಅಮೃತ ಹಸ್ತದಿಂದ ಸುಮಾರು ಇಪ್ಪತ್ನಾಲ್ಕು ಸಾವಿರಕ್ಕೂ ಹೆಚ್ಚು ಅಂತರ್ಜಾತಿ ವಿವಾಹ ಮಾಡಿದ್ದಾರೆ ಅವರು ಇಂದು ಸುಖಿ ಜೀವನ ನಡೆಸುತ್ತಿದ್ದಾರೆ ಎಷ್ಟೋ ಜನ ಸರ್ಕಾರದ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಈ ಮಠದಲ್ಲಿ ನಡೆಯುವಂತಹ ಮದುವೆ ವಿಶೇಷವಾಗಿದ್ದು ವಧು-ವರರ ನೇಮಕ ಗುರುಗಳಿಂದ ಅದು ಸಪ್ತಾಹದ ಕೊನೆಯ ದಿನದ ಕೆಲವು ಗಂಟೆ ಮೊದಲು ಗುರುಗಳ ನಿರ್ಣಯದ ಮುಂದೆ ಯಾರು ಕೂಡ ಚಕಾರ ಎತ್ತುವುದಿಲ್ಲ. ಶಿರಸಾವಹಿಸಿ ಆಜ್ಞೆ ಪಾಲಿಸುತ್ತಾರೆ. ಬಾಜಾ ಬಜಂತ್ರಿ ಮಂಟಪ ವರದಕ್ಷಿಣೆ ವರೋಪಚಾರ ಉಡುಗೊರೆ ಏನೇನು ಆಡಂಬರವಿಲ್ಲದೆ ನೆರೆದ ಸದ್ಭಕ್ತರ ಎದುರಲ್ಲಿ ಸರಳ ವಿವಾಹ ನಡೆದು ಗಂಡು ಹೆಣ್ಣಿನ ಕಡೆಯವರು ಸಾಲದ ಶೂಲದಲ್ಲಿ ಸಿಲುಕುವುದು ಸಂಪ್ರದಾಯದಲ್ಲಿ ಇಲ್ಲವೇ ಇಲ್ಲ. ಜಾತಿ ಜಾತಿಗಳ ಕಲಹ ವಿಲ್ಲದೆ ಅಂತರ್ಜಾತಿ ವಿವಾಹ ನಡೆದು ದಂಪತಿಗಳು ತಮ್ಮ ಮಕ್ಕಳೊಂದಿಗೆ ನೆಮ್ಮದಿಯಿಂದ ಬದುಕಿದ್ದಾರೆ.

ಅಲ್ಲದೆ ಕೃಷಿಗೂ ಹೆಚ್ಚಿನ ಮಹತ್ವವನ್ನು ನೀಡಿದ್ದರು.ಹಲವಾರು ಸಮಾಜ ಸೇವೆಗಳನ್ನು ಮಾಡಿ ಭಕ್ತರ ಪಾಲಿಗೆ ಇಂದಿಗೂ ದೇವರಾಗಿದ್ದಾರೆ. ಇವರ ನಂತರ ಮಠದ ಜವಾಬ್ದಾರಿಯನ್ನು ಗುರುಪುತ್ರೇಶ್ವರ ಮಹಾರಾಜರು ವಹಿಸಿದರು. ಇವರದು ಇನ್ನೊಂದು ವ್ಯಕ್ತಿತ್ವ ಮಠವನ್ನು ಅಭಿವೃದ್ಧಿಗೊಳಿಸಬೇಕು ಎಂಬುದು ಇವರ ಮಹದಾಸೆಯಾಗಿತ್ತು. ಅಲ್ಲದೆ ಹೇಗೆ ಅಮೇರಿಕಾದ ಚಿಕ್ಯಾಗೋದಲ್ಲಿ ನಡೆದ ವಿಶ್ವ ಶಾಂತಿ ಸಮ್ಮೇಳನದಲ್ಲಿ ಭಾರತದ ಪರವಾಗಿ ಸ್ವಾಮಿ ವಿವೇಕಾನಂದರು ಭಾಗವಹಿಸಿದ್ದರೋ ಅದೇ ರೀತಿ ಶ್ರೀ ಗುರುಪುತ್ರೇಶ್ವರ ಮಹಾರಾಜರು 1988 ರಲ್ಲಿ ರಷ್ಯಾದ ಜಕೋಸ್ಲೋವಾಕಿಯಾದ ಪ್ರಾಗ್ ನಲ್ಲಿ ನಡೆದ ವಿಶ್ವ ಸಾಹಿತ್ಯ ಸಮ್ಮೇಳನದಲ್ಲಿ ಆಧ್ಯಾತ್ಮ ಹಾಗೂ ಧ್ಯಾನದ ಕುರಿತು ಭಾರತದ ಪರವಾಗಿ ಮಾತನಾಡಿದ್ದರು.

ಇದು ಇಂಚಗೇರಿ ಮಠದ ಗುರುಗಳ ಇನ್ನೊಂದು ಮಹತ್ ಸಾಧನೆ.ಇವರ ನಂತರ ಮಠದ ಉಸ್ತುವಾರಿಯನ್ನು ಶ್ರೀ ಜಗನ್ನಾಥ ಮಹಾರಾಜರು ವಹಿಸಿಕೊಂಡರು ಶಾಂತ ಮೂರ್ತಿ ಎಂದೇ ಭಕ್ತರು ಕರೆಯುತ್ತಿದ್ದರು. ಪ್ರಸ್ತುತ ಇಂಚಗೇರಿ ಮಠದ ಪೀಠಾಧಿಪತಿ ಆಗಿರುವಂತ ರೇವಣಸಿದ್ಧಶ್ವರ ಮಹಾರಾಜರು ಕ್ಷೇತ್ರವನ್ನು ಪಾರಂಪರಿಕ ಕ್ಷೇತ್ರವನ್ನಾಗಿ ಅಭಿವೃದ್ಧಿಗೊಳಿಸಿದ್ದಾರೆ.ಇವರು ಹೆಚ್ಚು ಕೃಷಿಯಲ್ಲಿ ಉತ್ಸಾಹವನ್ನು ಹೊಂದಿದ್ದಾರೆ ಸದಾ ಕಾಲ ಹೊಲದಲ್ಲೇ ಇದ್ದು ಭೂಮಿಯನ್ನು ಹರಗುವುದು, ಬಿತ್ತುವುದು ಮಾಡುತ್ತಾರೆ. ಇತರರಿಗೆ ಇದನ್ನು ಮಾಡಿ ಎಂದು ಹೇಳಲ್ಲ ಸ್ವತಃ ತಾವೇ ಮಾಡುತ್ತಾರೆ.

ಇನ್ನೊಂದು ವಿಶೇಷ ಏನು ಅಂದ್ರೆ ಈ ಮಠಕ್ಕೆ ದೇಶದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಸದ್ಗುರುವಿನ ಆಶೀರ್ವಾದ ಪಡೆದು ಪುನೀತರಾಗುತ್ತಾರೆ. ದೇಶ ಅಷ್ಟೇ ಅಲ್ಲದೆ ವಿದೇಶಗಳಿಂದಲೂ ಹಲವಾರು ಭಕ್ತರು ಆಗಮಿಸಿ ಮರಾಠಿಯಲ್ಲಿ ಹಾಗೂ ಕನ್ನಡದಲ್ಲಿ ಭಜನೆ ಕೀರ್ತನೆ ಹಾಡುತ್ತಾರೆ. ಅಂದರೆ ಮಠದ ಕೀರ್ತಿ ಸಾಗರದಾಚೆಯಲ್ಲಿರುವ ವಿದೇಶಿಗರಿಗೆ ತಿಳಿದಿದೆ. ಈಗಲೂ ಎಲೆಮರೆ ಕಾಯಿಯಂತೆ ಸಮಾಜ ಸೇವೆ ಮಾಡುತ್ತ ಭಕ್ತರನ್ನು ಕಾಪಾಡುವ ಕಾಮಧೇನು ಶ್ರೀ ಕ್ಷೇತ್ರ ಇಂಚಗೇರಿ ಮಠ.

ಮಾಧವಾನಂದರ ಸಾಧನೆಯನ್ನು ಕಂಡು ಕರ್ನಾಟಕ ಸರ್ಕಾರ ಅಂದಿನ ಮುಖ್ಯಮಂತ್ರಿ ಆಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ‘ಕರ್ನಾಟಕ ಏಕೀಕರಣ ಪ್ರಶಸ್ತಿ’ ನೀಡಿದ್ದಾರೆ. ಅಲ್ಲದೆ ಇತ್ತಿಚ್ಚಿಗೆ ಅಂದರೆ 2018 ರಲ್ಲಿ ಪ್ರಸಿದ್ಧ ಚಲನಚಿತ್ರ ನಿರ್ದೇಶಕರಾದ ಓಂ ಸಾಯಿ ಪ್ರಕಾಶ್ ಅವರ ನಿರ್ದೇಶನದಲ್ಲಿ ‘ಕ್ರಾಂತಿ ಯೋಗಿ ಮಹಾದೇವರು’ ಎಂಬ ಚಲನಚಿತ್ರ ಕೂಡ ಬಿಡುಗಡೆಯಾಗಿದೆ.

ಸುರೇಶ ಡಿ. ಹೆಚ್, ಶರಣಬಸವ ವಿಶ್ವವಿದ್ಯಾಲಯ ಕಲಬುರ್ಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here