ಜಿಕೆವಿಕೆಯಲ್ಲಿ 380 ಬೆಡ್ ಗಳ ಕೋವಿಡ್ ಕೇರ್ ಸೆಂಟರ್ ಆರಂಭ

0
33

ಬೆಂಗಳೂರು: ಬಿಬಿಎಂಪಿ ಯಲಹಂಕ ವಲಯ ವ್ಯಾಪ್ತಿಯಲ್ಲಿರುವ ಜಿಕೆವಿಕೆ ಆವರಣದಲ್ಲಿ ಆಕ್ಸಿಜನ್ ವ್ಯವಸ್ಥೆಯ ಕೋವಿಡ್ ಆರೈಕೆ ಕೇಂದ್ರಕ್ಕೆ ಸೋಮವಾರ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಕೇಂದ್ರದಲ್ಲಿ 380 ಹಾಸಿಗೆಗಳ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಈ ಪೈಕಿ ತಲಾ 80 ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, 170 ಹಾಸಿಗೆಗಳು ಸಾಮಾನ್ಯ ವರ್ಗ ಮತ್ತು 50 ಆಮ್ಲಜನಕ ಸೌಲಭ್ಯವುಳ್ಳ ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿರುವ ಈ ಆರೈಕೆ ಕೇಂದ್ರದ ಸುತ್ತಮುತ್ತಲಿನ ಪ್ರದೇಶ ಪರಿಸರ ಸ್ನೇಹಿಯಾಗಿದ್ದು, ರೋಗಿಗಳು ಶೀಘ್ರ ಗುಣಮುಖರಾಗಲು ನೆರವಾಗುತ್ತದೆ ಎಂದು ಹೇಳಿದ ಅವರು, ಇಲ್ಲಿ ತುರ್ತು ಸಂದರ್ಭಗಳಿಗಾಗಿ ಎರಡು ಆಂಬ್ಯುಲೆನ್ಸ್ ಸೇವೆಯನ್ನೂ ಒದಗಿಸಲಾಗಿದೆ ಎಂದರು.

ದಿನದ 24 ಗಂಟೆಯೂ 12 ವೈದ್ಯರು, 12 ದಾದಿಯರು, 24 ಆರೋಗ್ಯ ಸಹಾಯಕರು ಹಾಗೂ 36 ಕ್ಕೂ ಹೆಚ್ಚು ಮಂದಿ ಇತರೆ ಸಿಬ್ಬಂದಿ ಪಾಳಿಯ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ವಿವರಿಸಿದರು. ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಮಾತನಾಡಿ, ಬಿಡಿಎ ಅಧ್ಯಕ್ಷರೂ ಆಗಿರುವ ಯಲಹಂಕ ಶಾಸಕರಾದ ಎಸ್.ಆರ್.ವಿಶ್ವನಾಥ್ ಅವರು ವಿಶೇಷ ಕಾಳಜಿ ವಹಿಸಿ ಈ ಸೆಂಟರ್ ಆರಂಭ ಮಾಡುವಲ್ಲಿ ಶ್ರಮವಹಿಸಿದ್ದಾರೆ. ಇಲ್ಲಿ ಅಸಿಂಪ್ಟಮ್ಯಾಟಿಕ್ ಮತ್ತು ಮೈಲ್ಡ್ ಸಿಂಪ್ಟಮ್ಸ್ ರೋಗಿಗಳ ಆರೈಕೆ ನಡೆಯಲಿದೆ. ರೋಗಿಗಳ ಮೇಲ್ವಿಚಾರಣೆ ಮತ್ತು ಆರೈಕೆಗಾಗಿ ನುರಿತ ವೈದ್ಯ ವೃಂದ ಹಾಗೂ ಸಿಬ್ಬಂದಿಗಳು ಲಭ್ಯವಿದ್ದು, ರೋಗಿಗಳಿಗೆ ಅನುಕೂಲಕರವಾದ ವಾತಾವರಣ ಸೃಷ್ಟಿಸಲಾಗಿದೆ ಎಂದು ಹೇಳಿದರು.

ಸೋಂಕಿತರಿಗೆ ಕಾಲಕಾಲಕ್ಕೆ ಔಷಧೋಪಚಾರ ಮಾಡಲಾಗುತ್ತಿದ್ದು, ಅಗತ್ಯವಿರುವ ರೋಗಿಗಳಿಗೆ ಕೌನ್ಸಲಿಂಗ್ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಪೌಷ್ಟಿಕ ಹಾಗೂ ಆರೋಗ್ಯಕರವಾದ ಆಹಾರವನ್ನು ದಿನದಲ್ಲಿ ಆರು ಬಾರಿ ನೀಡಲಾಗುತ್ತಿದ್ದು, ನುರಿತ ತಜ್ಞರ ಸಲಹೆಯ ಮೇರೆಗೆ ಡಯಟ್ ಪ್ಲಾನ್ ಮಾಡಲಾಗಿರುತ್ತದೆ. ಈ ಸಂದರ್ಭದಲ್ಲಿ ಶಾಸಕ ಕೃಷ್ಣಬೈರೇಗೌಡ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹಾಗೂ ಹಿರಿಯ ಅಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here