ವಾಡಿ: ಪಟ್ಟಣದ ಎಸಿಸಿ ಸಿಮೆಂಟ್ ಕಾರ್ಖಾನೆಯ ಕಾರ್ಮಿಕ ಸಂಘ (ಎಐಟಿಯುಸಿ)ದ ಅಧ್ಯಕ್ಚ ಶಿವಾಜಿ ಕೋಮಟೆ, ಮಹಾಮಾರಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಕೋವಿಡ್ ಸೋಂಕು ದೃಢಪಟ್ಟು ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಕಲಬುರಗಿ ಇಎಸ್‌ಐಸಿ ಆಸ್ಪತ್ರೆಗೆ ದಾಖಲಿಸಿ ಕಳೆದ ಹತ್ತು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ.
ಆರೋಗ್ಯವಾಗಿದ್ದ ಶಿವಾಜಿ ಕೊಮಟೆ ಏಕಾಏಕಿ ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದಿದ್ದರು. ಜ್ವರ ಮತ್ತು ಉಸಿರುಗಟ್ಟಿದ ಲಕ್ಷಣಗಳು ಕಾಣಿಸಿಕೊಂಡ ಪರಿಣಾಮ ಅವರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಡ್ ಸಿಗದೆ ಕೆಲಹೊತ್ತು ಪರದಾಡಿದ್ದಾರೆ. ಶಾಸಕ ಪ್ರಿಯಾಂಕ್ ಖರ್ಗೆ ಅವರನ್ನು ಸಂಪರ್ಕಿಸಿದ ಬಳಿಕ ಇಎಸ್‌ಐಸಿಯಲ್ಲಿ ಆಕ್ಸಿಜನ್ ಸಹಿತ ಬೆಡ್ ವ್ಯವಸ್ಥೆಯಾಗಿತ್ತು. ಚಿಕಿತ್ಸೆಯಿಂದ ಚೇತರಿಸಿಕೊಂಡು ಸೋಮವಾರ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಲು ಸಿದ್ಧತೆಗಳು ಮಾಡಿಕೊಳ್ಳಲಾಗಿತ್ತು ಎನ್ನಲಾಗಿದ್ದು, ಏಕಾಏಕಿ ಮದುಮೇಹ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಪರಿಣಾಮ ಕಾರ್ಮಿಕ ನಾಯಕ ಶಿವಾಜಿ ಕೋಮಟೆ ಅವರು ಕೋಮಾ ಸ್ಥಿತಿಗೆ ತಲುಪಿದ್ದರು. ವೈದ್ಯರು ಅವರಿಗೆ ಮತ್ತೆ ಚಿಕಿತ್ಸೆ ಮುಂದುವರೆಸಿದ್ದಾರೆ. ಅನಾರೋಗ್ಯದಿಂದ ಚೇತರಿಸಿಕೊಂಡು ಮನೆಗೆ ಮರಳುತ್ತಾರೆ ಎಂಬ ಪಾಜಿಟೀವ್ ಸುದ್ದಿ ಹರಿದಾಡುತ್ತಿದ್ದಂತೆ, ಕ್ರೂರಿ ಕೊರೊನಾ ಕಾರ್ಮಿಕ ನಾಯಕನ ಉಸಿರನ್ನೇ ನಿಲ್ಲಿಸಿಬಿಟ್ಟಿತು.
ಮೂರು ಬಾರಿ ಕಾರ್ಮಿಕ ಸಂಘದ ಅಧ್ಯಕ್ಷರಾಗಿ ಚುನಾಯಿತರಾಗುವ ಮೂಲಕ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿದ ಸರಳ ವ್ಯಕ್ತಿತ್ವದ ಶಿವಾಜಿ ಕೋಮಟೆ ಅವಿವಾಹಿತರಾಗಿದ್ದರು. ಸಹೋದರ, ಕಾಂಗ್ರೆಸ್ ಹಿರಿಯ ನಾಯಕ ಟೋಪಣ್ಣ ಕೋಮಟೆ ಹಾಗೂ ೯೦ ವರ್ಷದ ತಾಯಿಯನ್ನು ಮತ್ತು ತಂಗಿಯನ್ನು ಅವರು ಕಳೆದುಕೊಂಡಿದ್ದಾರೆ. ಸೋಮವಾರ ಮದ್ಯಾಹ್ನ ನಗರದ ಅವರ ಸ್ವಂತ ಜಮೀನಿನಲ್ಲಿ ಬೌದ್ಧ ಧರ್ಮದ ಸಂಪ್ರದಾಯದಂತೆ ಅಂತ್ಯಕ್ರೀಯೆ ನೆರವೇರಿಸಲಾಯಿತು.
ಸಂತಾಪ: ಶಾಸಕ ಪ್ರಿಯಾಂಕ್ ಖರ್ಗೆ, ಎಪಿಎಂಸಿ ಮಾಜಿ ಅಧ್ಯಕ್ಷ ಶಂಕ್ರಯ್ಯಸ್ವಾಮಿ ಮದರಿ, ಕಾರ್ಮಿಕ ಸಂಘದ ಉಪಾಧ್ಯಕ್ಷ ಮಹ್ಮದ್ ಮನ್ಸೂರ್ ಅಲಿ, ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ, ಮಹರ್ಷಿ ವಾಲ್ಮೀಕ ಸಮಾಜದ ಅಧ್ಯಕ್ಷ ಭೀಮರಾವ ದೊರೆ, ವೀರಶೈವ ಸಮಾಜದ ಅಧ್ಯಕ್ಷ ಸಿದ್ದಣ್ಣ ಕಲಶೆಟ್ಟಿ, ಕೋಲಿ ಸಮಾಜದ ಅಧ್ಯಕ್ಷ ನಾಗೇಂದ್ರ ಜೈಗಂಗಾ, ಬಿಜೆಪಿ ಪ್ರಧಾನ ಕಾರ್ಯದರ್ಶಿ ವೀರಣ್ಣ ಯಾರಿ, ಮುಖಂಡರಾದ ಚಂದ್ರಸೇನ ಮೇನಗಾರ, ಶರಣು ನಾಟೀಕಾರ, ವಿಶಾಲ ನಂದೂರಕರ, ಸೂರ್ಯಕಾಂತ ರದ್ದೇವಾಡಿ, ರಾಜು ಮುಕ್ಕಣ್ಣ, ದೇವಿಂದ್ರ ಕರದಳ್ಳಿ, ಅನೀಲ ಶಿಬೋನೋರ ಹಾಗೂ ಮತ್ತಿತರರು ಶಿವಾಜಿ ಕೋಮಟೆ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.