ಸುರಪುರದಲ್ಲಿ ಸೆಮಿ ಲಾಕ್‌ಡೌನ್ ಮೊದಲ ದಿನ ಯಶಸ್ವಿ: ಡಿವೈಎಸ್ಪಿಯಿಂದ ದಂಡಾಸ್ತ್ರ

0
13

ಸುರಪುರ: ರಾಜ್ಯದಲ್ಲಿ ಕೊರೊನಾ ಎರಡನೆ ಅಲೆ ವ್ಯಾಪಕವಾಗಿ ಹೆಚ್ಚುತ್ತಿರುವುದಕ್ಕೆ ಕಡಿವಾಣ ಹಾಕಲು ಸರಕಾರ ಘೋಷಣೆ ಮಾಡಿರುವ ಸೆಮಿ ಲಾಕ್‌ಡೌನ್ ಸುರಪುರ ನಗರದಲ್ಲಿ ಮೊದಲ ದಿನ ಯಶಸ್ವಿಯಾಗಿದೆ.

ಸರಕಾರದ ಆದೇಶದಂತೆ ಬೆಳಿಗ್ಗೆ ೬ ಗಂಟೆಯಿಂದ ೧೦ ಗಂಟೆಯವರೆಗೆ ಅಗತ್ಯ ವಸ್ತುಗಳ ಖರಿದಿಗೆ ಅವಕಾಶ ನೀಡಲಾಗಿತ್ತು.ಆದರೆ ಯಾವುದೇ ವಾಹನವನ್ನು ತರದೆ ಕಾಲ್ನಡಿಗೆಯಲ್ಲಿ ಬಂದು ಖರಿದಿ ಮಾಡಬಹುದು ಎಂದು ತಿಳಿಸಲಾಗಿತ್ತು.ಆದರೆ ಅನೇಕ ಜನರು ವಾಹನಗಳ ಮೂಲಕವೆ ಬಂದು ಖರಿದಿಯಲ್ಲಿ ತೊಡಗಿದ್ದರು.ಅಲ್ಲದೆ ಅನೇಕ ಜನ ಬೀದಿ ಬದಿಯ ವ್ಯಾಪಾರಸ್ಥರು ಮಾಸ್ಕ್ ಧರಿಸದೆ ವ್ಯಾಪಾರ ನಡೆಸುತ್ತಿದ್ದವರಿಗೆ ಸುರಪುರ ಪೊಲೀಸ್ ಉಪ ವಿಭಾಗದ ಉಪ ಅಧೀಕ್ಷಕ ವೆಂಕಟೇಶ ಹುಗಿಬಂಡಿ ದಂಡ ವಿಧಿಸುವ ಮೂಲಕ ಎಚ್ಚರಿಕೆಯನ್ನು ನೀಡಿದರು.ಅಲ್ಲದೆ ಅನೇಕ ಜನರ ಬೈಕ್‌ಗಳನ್ನು ಸೀಜ್ ಮಾಡುವ ಮೂಲಕ ಇತರರಿಗೆ ಎಚ್ಚರಿಕೆಯನ್ನು ನೀಡಿದರು.

Contact Your\'s Advertisement; 9902492681

೧೦ ಗಂಟೆಯ ನಂತರ ರೋಡಿಗಿಳಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಟ್ಟು ನಿಟ್ಟಿನ ಲಾಕ್‌ಡೌನ್ ಜಾರಿಗಾಗಿ ಬೈಕ್ ಹತ್ತಿ ಓಡಾಡುತ್ತಿರುವವರಿಗೆ ಲಾಠಿ ರುಚಿಯ ಜೊತೆಗೆ ಬೈಕ್‌ಗಳನ್ನು ವಶಕ್ಕೆ ಪಡೆದು ಕಳುಹಿಸಿದರು.ಅಲ್ಲದೆ ನಗರಕ್ಕೆ ಯಾರೂ ಪ್ರವೇಶ ಮಾಡದಂತೆ ನಗರದ ನಾಲ್ಕು ದ್ವಾರಗಳಾದ ಕುಂಬಾರಪೇಟೆ ಹಸನಾಪುರ ಪೆಟ್ರೋಲ್ ಬಂಕ್ ಕೆಂಭಾವಿ ರಸ್ತೆ ಮತ್ತು ವೆಂಕಟಾಪುರ ರಸ್ತೆಗಳಲ್ಲಿ ಬ್ಯಾರಕ್ ಹಾಕಿ ಬರುವವರಿಗೆ ನಿರ್ಬಂಧ ಹಾಕಿದರು.

ಅಲ್ಲದೆ ನಗರದಲ್ಲಿ ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ಪೊಲೀಸ್ ಇನ್ಸ್ಪೇಕ್ಟರ್ ಎಸ್.ಎಮ್.ಪಾಟೀಲ್ ಪಿಎಸ್‌ಐ ಚಂದ್ರಶೇಖರ ನಾರಾಯಣಪುರ ಮತ್ತು ಅನೇಕ ಜನ ಸಿಬ್ಬಂದಿಗಳು ಎಲ್ಲೆಡೆ ಗಸ್ತು ತಿರಗುವ ಮೂಲಕ ಜನರು ಮನೆಯಿಂದ ಹೊರಬರದಂತೆ ಎಚ್ಚರಿಸಿದರು.ಇದರಿಂದಾಗಿ ನಗರದಲ್ಲಿನ ಎಲ್ಲಾ ರಸ್ತೆಗಳು ಬಿಕೋ ಎನ್ನುತ್ತಿದ್ದವು,ಅಲ್ಲದೆ ಸದಾ ಜನಜಂಗುಳಿ ಇರುತ್ತಿದ್ದ ಮಹಾತ್ಮ ಗಾಂಧಿ ವೃತ್ತ ಮತ್ತು ಸರದಾರ ವಲ್ಲಭಬಾಯಿ ಪಟೇಲ್ ವೃತ್ತ ದರಬಾರ ರಸ್ತೆ ಮತ್ತು ಶ್ರೀ ವೇಣುಗೋಪಾಲ ಸ್ವಾಮಿ ರಸ್ತೆ ಖಾಲಿ ಖಾಲಿ ಕಂಡುಬಂದವು.ಒಟ್ಟಾರೆಯಾಗಿ ಮೊದಲ ದಿನದ ಸೆಮಿ ಲಾಕ್‌ಡೌನ್ ಯಶಸ್ವಿಯಾಗಿದ್ದು ಇನ್ನುಳಿದ ೧೩ ದಿನಗಳು ಇದೇ ರೀತಿಯ ಕ್ರಮ ಕೈಗೊಂಡಲ್ಲಿ ಕೊರೊನಾ ನಿಯಂತ್ರಣ ಸಾಧ್ಯ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here