“ಕೆ.ಬಿ. ಶಾಣಪ್ಪನವರಿಲ್ಲದ ನೃಪತುಂಗ ಬಡಾವಣೆ ಅನಾಥಪ್ರಜ್ಞೆ ಅನುಭವಿಸುವಂತಾಗಿದೆ”

0
26

ಕಲಬುರಗಿ: ರಾಜ್ಯಸಭೆಯ ಮಾಜಿ ಸದಸ್ಯ, ಮಾಜಿ ಸಚಿವ, ವಿಧಾನ ಪರಿಷತ್‌ನ ಮಾಜಿ ಸದಸ್ಯ ಕೆ.ಬಿ. ಶಾಣಪ್ಪನವರ ನಿಧನದಿಂದ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಬಹಳ ನಷ್ಟವಾಗಿದೆ. ಶಹಾಬಾದ ಸಿಮೆಂಟ್ ಕಾರ್ಖಾನೆಯಲ್ಲಿ ಕಾರ್ಮಿಕ ನಾಯಕರಾಗಿದ್ದ ಅವರು ಅಲ್ಲಿನ ಉದ್ಯೋಗಿಗಳನ್ನು ಒಂದುಗೂಡಿಸಿ ರಾಜಾಪುರ ಸಮೀಪದ ಕಲಬುರಗಿ ನಗರದ ಹೊರ ವಲಯದಲ್ಲಿ ನೂತನ ಬಡಾವಣೆ ನಿರ್ಮಿಸುವ ಮೂಲಕ ಅತ್ಯಂತ ಕಡಿಮೆ ದರದಲ್ಲಿ ಎಲ್ಲರಿಗೂ ವಸತಿ ಸೌಲಭ್ಯ ಕಲ್ಪಿಸಿರುವುದು ಅವರಲ್ಲಿನ ಜನಕಾಳಜಿಯನ್ನು ಪ್ರದರ್ಶಿಸುವಂತಿದೆ ಎಂದು ಪತ್ರಕರ್ತ-ಸಾಹಿತಿ ಡಾ. ಶಿವರಂಜನ್ ಸತ್ಯಂಪೇಟೆ ಅಭಿಪ್ರಾಯಪಟ್ಟರು.

ನಗರದ ನೃಪತುಂಗ ಬಡಾವಣೆಯಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ “ಕೆ.ಬಿ. ಶಾಣಪ್ಪ- ನುಡಿ ನಮನ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಂದಿರ, ಮಸೀದಿ, ಚರ್ಚ್‌ಗಳಿಲ್ಲದ ನೂತನ ಪರಿಕಲ್ಪನೆಯ ಬಡಾವಣೆಯನ್ನು ನಿರ್ಮಿಸುವುದರ ಜೊತೆಗೆ ಉದ್ಯಾನ ಹಾಗೂ ಹಸಿರೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದರು. ಪ್ರತಿ ದಿನ ಒಂದೆರಡು ತಾಸು ಇಲ್ಲಿನ ಉದ್ಯಾನಕ್ಕೆ ಆಗಮಿಸಿ ತಮ್ಮ ವಾರಿಗೆಯವರ ಕುಟುಂಬದ ಕಷ್ಟ ದುಃಖಗಳನ್ನು ವಿಚಾರಿಸುತ್ತಿದ್ದರು. ಅವರಿಲ್ಲದ ಬಡವಾಣೆ ಈಗ ಅನಾಥಪ್ರಜ್ಞೆ ಅನುಭವಿಸುವಂತಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ರಾಜ್ಯಸಭೆಯಲ್ಲಿ ತಮ್ಮ ಅವಧಿ ಮುಗಿಯುವ ವೇಳೆ ಹಿಂದಿಯಲ್ಲಿ ಅವರು ಮಾಡಿದ್ದ ಭಾಷಣ “ವಕ್ತ್ ಆಯೇತೋ ಫಿರ್ ಮಿಲೇಂಗೆ” ಎಂಬ ಮಾತು ಇಂದಿಗೂ ಮನಕಲಕುವಂತಹ ಸಾಲುಗಳಾಗಿವೆ ಎಂಬುದನ್ನು ಸ್ಮರಿಸಿಕೊಂಡರು. ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿದ್ದರೂ ತಮ್ಮ ಕಮ್ಯೂನಿಷ್ಟ ತತ್ವ-ಸಿದ್ಧಾಂತಗಳನ್ನು ಬಿಟ್ಟಿರಲಿಲ್ಲ. ತಮ್ಮ ಸರಳ ಹಾಗೂ ನೇರ ನಡೆ-ನುಡಿ ಹೊಂದಿದ್ದರು. ಕೆ.ಬಿ. ಶಾಣಪ್ಪನವರು ಇಂದು ದೈಹಿಕವಾಗಿ ನಮ್ಮೊಂದಿಗಿಲ್ಲದಿರಬಹುದು. ಆದರೆ ಅವರು ತಮ್ಮ ಕ್ರಿಯಾಶೀಲ ಸ್ವಭಾವದಿಂದ ಎಲ್ಲರ ಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದರು.

ಬಡಾವಣೆಯ ನಿವಾಸಿಗಳಾದ ಆರ್.ಎ. ಮಹೇಂದ್ರಕರ್, ಡಿ.ಎಸ್. ಸಂಗಮ್, ಮಲ್ಲಣ್ಣ ವಾಲೀಕಾರ, ಪರುಶುರಾಮ ಹುಕ್ಕೇರಿ ಅವರೊಂದಿಗಿನ ಒಡನಾಟದ ಕ್ಷಣಗಳನ್ನು ನೆನಪಿಸಿಕೊಂಡು ಕಣ್ಣೀರಾದರು. ಎಲ್ಲರ ಕಷ್ಟ ಸುಖಗಳಲ್ಲಿ ಭಾಗಿಯಾಗುವ ಅವರು ಗುಣ ಸ್ವಭಾವವನ್ನು ಸ್ಮರಿಸಿಕೊಂಡರು. ಅವರಿಲ್ಲದ ಉದ್ಯಾನದ ಗಿಡಮರ ಹೂ ಬಳ್ಳಿಗಳೂ ಸಹ ಕಣ್ಣೀರಿಡುವಂತಾಗಿದೆ ಎಂದು ಭಾವುಕರಾದರು. ಇದಕ್ಕೂ ಮುನ್ನ ಮೃತರ ಆತ್ಮಕ್ಕೆ ಶಾಂತಿಗಾಗಿ ಪ್ರಾರ್ಥಿಸಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.

ಸೂರ್ಯಕಾಂತ ನಾಶಿ, ಮಲ್ಲಿನಾಥ ಪಾಟೀಲ, ಶರಣಪ್ಪ ಕಟ್ಟಿಮನಿ, ಸಾಯಬಣ್ಣ ಕೊಳ್ಳಿ, ತುಕಾರಾಮ ಬಗಾಡೆ, ಜಯರಾಜ ನರಗುಂದ, ರಾಮಚಂದ್ರ ನಾಟೀಕರ್, ಶಿವಶರಣಪ್ಪ ಹರನಾಳ, ವೀಣಾ ಸಂಗಮ್, ಪ್ರೇಮಾ ಮಠ, ಕಮಲಾ ಅಂಬೇಕರ್, ಶೈಲಜಾ ಪಂಡರಾಪುರಕರ್ ಸೇರಿದಂತೆ ಬಡಾವಣೆಯ ಅನೇಕ ಗಣ್ಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here