ಬೆಂಗಳೂರು: ಯಲಹಂಕ ಕ್ಷೇತ್ರದ ಪೊಲೀಸ್ ಸಿಬ್ಬಂದಿ ಮತ್ತು ವಿವಿಧ ಗ್ರಾಮಪಂಚಾಯ್ತಿಗಳು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಕೊರೊನಾ ವಾರಿಯರ್ಸ್, ವಾಟರ್ ಮೆನ್, ಟ್ಯಾಕ್ಸಿ ಚಾಲಕರು ಸೇರಿದಂತೆ ವಿವಿಧ ವರ್ಗದ ಬಡ ಜನರಿಗೆ ಸಿದ್ಧಪಡಿಸಿದ ಆಹಾರ ಕಿಟ್ ಗಳನ್ನು ಶಾಸಕ ಮತ್ತು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ವಿತರಿಸಿದರು.
ರಾಜಾನುಕುಂಟೆಯಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಅವರು ಆಹಾರ ಕಿಟ್ ಗಳನ್ನು ವಿತರಿಸಿದರಲ್ಲದೇ, ತಮ್ಮ `ವಿಶ್ವವಾಣಿ’ ಪ್ರತಿಷ್ಠಾನದ ಮೂಲಕ ಸೊಣ್ಣೇನಹಳ್ಳಿ, ರಾಜಾನುಕುಂಟೆ ಸೇರಿದಂತೆ ಒಟ್ಟು 9 ಸಾರ್ವಜನಿಕ ಆರೋಗ್ಯ ಕೇಂದ್ರಗಳಿಗೆ ಆಮ್ಲಜನಕ ಕಾನ್ಸಂಟ್ರೇಟರ್ ಗಳನ್ನು ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವನಾಥ್ ಅವರು, ಪೊಲೀಸ್ ಸಿಬ್ಬಂದಿ ಕ್ಷೇತ್ರದ ಪ್ರತಿ ಗ್ರಾಮಗಳಿಗೂ ತೆರಳಿ ಕೊರೊನಾ ತಡೆಗಟ್ಟುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಸ್ತುತ್ಯಾರ್ಹವಾದ ವಿಚಾರವಾಗಿದೆ ಎಂದು ಶ್ಲಾಘಿಸಿದರು.
ಪೊಲೀಸರು ಕೇವಲ ಕಾನೂನು ರಕ್ಷಕರು ಮಾತ್ರವಲ್ಲ. ಅವರಲ್ಲಿಯೂ ಒಂದು ಮಾನವೀಯ ಗುಣವಿರುವುದರಿಂದ ತಮ್ಮದೇ ಖರ್ಚಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಕೊರೊನಾ ವಾರಿಯರ್ಸ್, ವಾಟರ್ ಮೆನ್, ಟ್ಯಾಕ್ಸಿ ಚಾಲಕರಿಗೆ ಆಹಾರ ಕಿಟ್ ಅನ್ನು ಸಿದ್ಧಪಡಿಸಿ ವಿತರಣೆ ಮಾಡುತ್ತಿರುವುದು ಸಮಾಜದ ಎಲ್ಲಾ ವರ್ಗದವರಿಗೆ ಮಾದರಿಯಾಗಿದೆ ಎಂದು ಬಣ್ಣಿಸಿದರು.
ಅದೇ ರೀತಿ ರಾಜಾನುಕುಂಟೆ ಸೇರಿದಂತೆ ವಿವಿಧ ಗ್ರಾಮಪಂಚಾಯ್ತಿಗಳು ತಮ್ಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳ ಬಡ ಕುಟುಂಬಗಳಿಗೆ ಪ್ರತಿನಿತ್ಯ ಊಟೋಪಚಾರ ಮಾಡುತ್ತಿರುವುದು ಮತ್ತು ಆಹಾರ ಕಿಟ್ ಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ ಎಂದರು.
ಕೊರೊನಾ ವಾರಿಯರ್ಸ್ ಗೆ ಆದ್ಯತೆಯಲ್ಲಿ ಮನೆ ಹಂಚಿಕೆ
ಇನ್ನು ರಾಜ್ಯ ಸರ್ಕಾರ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಅತ್ಯಂತ ಕಡಿಮೆ ದರದಲ್ಲಿ ಬಡವರಿಗೆ ಮನೆ ಕಟ್ಟಿಸಿಕೊಡುತ್ತಿದೆ. ಇದರಡಿ ಯಲಹಂಕ ಕ್ಷೇತ್ರದ ಸಾದೇನಹಳ್ಳಿ, ಸಿಂಗನಾಯಕನಹಳ್ಳಿ ಸೇರಿದಂತೆ ಹಲವು ಸ್ಥಳಗಳಲ್ಲಿ ಅಪಾರ್ಟ್ ಮೆಂಟ್ ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ವಸತಿ ಸಚಿವರೊಂದಿಗೆ ಈ ಸಂಬಂಧ ಸಭೆ ನಡೆಸಿದ್ದು, ಅಪಾರ್ಟ್ ಮೆಂಟ್ ಗಳ ಬೆಲೆಯೂ ನಿಗದಿಯಾಗಿದ್ದು, ಈ ಸಂಬಂಧ ಒಂದು ತಿಂಗಳೊಳಗೆ ಖುಷಿಯ ವಿಚಾರವನ್ನು ಹಂಚಿಕೊಳ್ಳಲಾಗುತ್ತದೆ ಎಂದು ತಿಳಿಸಿದ ಅವರು, ಅಪಾರ್ಟ್ ಮೆಂಟ್ ಹಂಚಿಕೆಯಲ್ಲಿ ಕೊರೊನಾ ವಾರಿಯರ್ಸ್ ಗೆ ಆದ್ಯತೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಮತ್ತೊಂದು ಸಮಾರಂಭದಲ್ಲಿ ವಿಶ್ವನಾಥ್ ಅವರು ಸೊನ್ನೇನಹಳ್ಳಿ ಮತ್ತು ರಾಜಾನುಕುಂಟೆ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿರುವ ಕೋವಿಡ್-19 ಸೋಂಕಿತರ ಚಿಕಿತ್ಸೆಗೆ ತಮ್ಮ `ವಿಶ್ವವಾಣಿ’ ಪ್ರತಿಷ್ಠಾನದ ವತಿಯಿಂದ ಅಗತ್ಯವಿರುವ ಆಮ್ಲಜನಕ ಕಾನ್ಸಂಟ್ರೇಟರ್ ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ರಂಗಪ್ಪ, ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರು ಹಾಜರಿದ್ದರು.
ಬಿಡಿಎ ಅಧ್ಯಕ್ಷ ಮತ್ತು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರು ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಿಸಿದರು. ಸೊಣ್ಣೇನಹಳ್ಳಿ ಮತ್ತು ರಾಜಾನುಕುಂಟೆ ಸಾರ್ವಜನಿಕ ಆರೋಗ್ಯ ಕೇಂದ್ರಗಳಿಗೆ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರು ತಮ್ಮ `ವಿಶ್ವವಾಣಿ’ ಪ್ರತಿಷ್ಠಾನದ ಮೂಲಕ ಆಮ್ಲಜನಕ ಕಾನ್ಸಂಟ್ರೇಟರ್ ಗಳನ್ನು ವಿತರಿಸಿದರು.