ನಮ್ಮ ಭಾಗದ ಅಭಿವೃದ್ಧಿಗೆ ನಾವೇ ಕಾರಣರಾಗಬೇಕು!

0
121

ನಂಜುಂಡಪ್ಪ ವರದಿ ಆಧಾರದಂತೆ ಹೈದರಾಬಾದ್ ಕರ್ನಾಟಕ ಭಾಗ ಅತ್ಯಂತ ಹಿಂದುಳಿದಿರುವ ಪ್ರದೇಶ ಎಂದು ಹೇಳಿದಾಗ ಮಾತ್ರ ನಮ್ಮ ಆಡಳಿತಗಾರರಿಗೆ ಹೌದಲ್ಲ ಎಂದೆನಿಸಿತು. ಮಾಜಿ ಸಚಿವ ವೈಜನಾಥ ಪಾಟೀಲ ಮತ್ತಿತರರ ಹೋರಾಟದ ಫಲವಾಗಿ ಹಿಂದುಳಿದ ಈ ಭಾಗದ ಅಭಿವೃದ್ಧಿಗಾಗಿ ಸಂವಿಧಾನದ 371ನೇ(ಜೆ) ವಿಧಿಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದು ಅನುಷ್ಠಾನಗೊಳಿಸಿಯಾಗಿದೆ.

ಆರ್ಟಿಕಲ್ 371(ಜೆ) ಬಂದ ಮೇಲೆ ಈ ಭಾಗದ ಜನರಲ್ಲಿ ಹೊಸ ಭರವಸೆ ಮೂಡಿದೆ. ಆದರೆ ಈ ತಿದ್ದುಪಡಿಯಿಂದ ನಮ್ಮ ಭಾಗಕ್ಕಾಗುವ ಲಾಭ ಏನು ಎಂದು ಪರಾಮರ್ಶಿಸಿ ನೋಡಿದರೆ ಅಲ್ಲಿ ನಮಗೆ ನಿರಾಸೆಯೇ ಕಾದಿದೆ. ಉದ್ಯೋಗ, ಶಿಕ್ಷಣದಲ್ಲಿನ ಮೀಸಲಾತಿ ಕೂಡ ಸರಿಯಾಗಿ ಆಗುತ್ತಿಲ್ಲ. 371 ಆರ್ಟಿಕಲ್ ಪ್ರಮಾಣಪತ್ರ ಪಡೆಯುವುದಕ್ಕಾಗಿಯೇ ಅನೇಕರು ಒದ್ದಾಡುವಂತಾಗಿದೆ. ಒಂದುವೇಳೆ ಅದು ಸಿಕ್ಕರೂ ನೇಮಕಾತಿ ವೇಳೆ ಅದಿಕಾರಿಗಳು ಅಭ್ಯರ್ಥಿಗಳ ಜತೆ ಚಲ್ಲಾಟವಾಡುವುದನ್ನು ನಾವು ಕಾಣುತ್ತಿದ್ದೇವೆ.

Contact Your\'s Advertisement; 9902492681

ತಿದ್ದುಪಡಿಯಿಂದಾಗಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಸಿಗುತ್ತದೆ ಎನ್ನುವ ಅಂಶ ಬಿಟ್ಟರೆ, ಅಭಿವೃದ್ಧಿ ನಿಟ್ಟಿನಲ್ಲಿ ಯಾವುದೇ ಹೇಳಿಕೊಳ್ಳುವಂತಹ ಸೌಲಭ್ಯ ಸಿಗುವುದಿಲ್ಲ ಎಂಬುದು ಸತ್ಯ. ಕೇಂದ್ರ ಸರ್ಕಾರ ಕೇವಲ ಕಾಯ್ದೆ ತಿದ್ದುಪಡಿ ಮಾಡಿಕೊಟ್ಟಿತು. ಆದರೆ ಯಾವುದೇ ಕಾಯ್ದೆ ಜಾರಿಯಾಗುವುದರಿಂದ ಸುಧಾರಣೆಯಾಗುವುದಿಲ್ಲ. ಅದು ಅನುಷ್ಠಾನದಲ್ಲಿ ಬರಬೇಕು. ಅಂತಹ ಅನುಷ್ಠಾನಕ್ಕೆ ಬರುವ ಅಂಶಗಳು ತಿದ್ದುಪಡಿಯಲ್ಲಿ ವಿಶೇಷವಾಗಿ ಕಾಣಿಸದಿರುವುದರಿಂದ ಇದು ಕೂಡ ಕನ್ನಡಿಯೊಳಗಿನ ಗಂಟು ಆಗಲಿದೆಯೇ? ಎಂಬ ಅನುಮಾನಗಳು ಇಲ್ಲಿನ ಪ್ರಾಜ್ಞರನ್ನು ಕಾಡುತ್ತಿವೆ.

ಕೇಂದ್ರ ಸರ್ಕಾರದಿಂದ ಯಾವುದೇ ವಿಶೇಷ ಅನುದಾನ ಬರುವುದಿಲ್ಲ. ನಮ್ಮ ಸರ್ಕಾರಗಳಿಗೆ ಹೆಚ್ಚಿನ ಹಣ ಕೊಡುವ ಬದ್ಧತೆ ಇಲ್ಲ. ಈ ಭಾಗದ ಅಭಿವೃದ್ಧಿಗಾಗಿ ಸ್ಥಾಪಿಸಲಾಗಿದ್ದ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಸರಿಯಾದ ಬಜೆಟ್ ಒದಗಿಸದ ಸರ್ಕಾರಗಳು ಇದೀಗ ಈ ಭಾಗಕ್ಕೆ ವಿಶೇಷವಾದದ್ದನ್ನು ಕೊಡಬಲ್ಲವು ಎಂದು ಯೋಚಿಸುವುದು ತಪ್ಪಾಗುತ್ತದೆ. ಅದೇ ವೇಳೆಯಲ್ಲಿ ಎಚ್ಕೆಡಿಆರ್‌ಬಿಗೆ ಬಂದ ಅನುದಾನ ಬಳಕೆಯಾಗದೆ ವಾಪಸ್ಸಾಗಿರುವುದು ಕೂಡ ಅತ್ಯಂತ ಖೇದದ ಸಂಗತಿ.

ರಾಜ್ಯದ ಮುಖ್ಯಮಂತ್ರಿಯಾಗಿ ನನಗೆ ಸಮಗ್ರ ರಾಜ್ಯದ ಅಭಿವೃದ್ಧಿ ಮುಖ್ಯವಾಗಿರುತ್ತದೆ. ಅದೇವೇಳೆಗೆ ಹಿಂದುಳಿದ ಹೈಕ ಭಾಗದ ಅಭಿವೃದ್ಧಿ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದೇನೆ. ಅಂತೆಯೇ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಕಡೆ ಬಂದು ಗ್ರಾಮವಾಸ್ತವ್ಯ ಮಾಡಿದೇನೆ. ಮೇಳಾಗಿ ಆಯಾ ಜಿಲ್ಲೆಗಳ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನ ಸಹ ಬಿಡುಗಡೆ ಮಾಡುವ ಭರವಸೆ ಕೂಡ ನೀಡಿದ್ದೇನೆ. ಶೀಘ್ರದಲ್ಲೇ ಈ ಭಾಗದ ಜನಪ್ರತಿನಿಧಿಗಳ ಸಭೆ ಕರೆದು ಈ ಭಾಗದ ಅಭಿವೃದ್ಧಿ ವಿಶೇಷವಾಗಿ 371 (ಜೆ) ಅನುಷ್ಠಾನದ ತೊಂದರೆ ಬಗ್ಗೆ ಚರ್ಚೆ ನಡೆಸಲಾಗುವುದು.
                  -ಕುಮರಸ್ವಾಮಿ, ಮುಖ್ಯಮಂತ್ರಿಗಳು

1992 ರಿಂದ 2013 ರವರೆಗೆ ಕೆಲಸ ಮಾಡಿದ ಹೈ.ಕ. ಅಭಿವೃದ್ಧಿ ಮಂಡಳಿಗೆ ಯಾವುದೇ ಲಂಗು-ಲಗಾಮು ಇಲ್ಲದ್ದರಿಂದ ಜನನಾಯಕರ ಬದ್ಧತೆಯಿಲ್ಲದ ಆಡಳಿತದಿಂದಾಗಿ ಅದು ಕೂಡ ತನ್ನ ಪ್ರಾಧಾನ್ಯತೆಯನ್ನೇ ಕಳೆದುಕೊಂಡಿತ್ತು. ಕೇವಲ ರಸ್ತೆ, ಸೇತುವೆ ದುರಸ್ತಿ ಹೆಸರಿನಲ್ಲಿ ಖರ್ಚು ಮಾಡಿದರೆ ವಿನಃ ಸಾಮಾಜಿಕ ವಲಯದ ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಹಣವನ್ನೇ ವಿನಿಯೋಗಿಸಲಿಲ್ಲ. ಒಬ್ಬ ಶಾಸಕ-ಮಂತ್ರಿಯೂ ಕನಸು ಮನಸಿನಲ್ಲೂ ಈ ಬಗ್ಗೆ ಧ್ವನಿ ಎತ್ತಲಿಲ್ಲ. ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ ಬಂದ ಹಣವನ್ನು ಖರ್ಚು ಮಾಡಿದರು. ಕೆಲವೊಂದು ಬಾರಿ ಸರ್ಕಾರ ನೀಡಿದ ಹಣವನ್ನೂ ಇವರಿಗೆ ಖರ್ಚು ಮಾಡಲು ಬರಲಿಲ್ಲ.

ಯಥಾರಾಜಾ ತಥಾ ಪ್ರಜೆ ಎನ್ನುವಂತೆ ಈ ಭಾಗದ ಯಾರೊಬ್ಬರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಪ್ರಾದೇಶಿಕ ಅಸಮತೋಲನ ಹೋಗಲಾಡಿಸಲು ಯಾರೊಬ್ಬರೂ ಗಂಭೀರವಾಗಿ ಹೋರಾಟ ಮಾಡಲಿಲ್ಲ. ಆದರೆ ತಿದ್ದುಪಡಿಯಿಂದಾಗಿ ಹೈ.ಕ. ಭಾಗದ ಭಾಗ್ಯದ ಬಾಗಿಲು ತೆರೆಯಿತು ಎಂದು ರಾಜಕಾರಣಿಗಳು ಮಾತನಾಡಿದರೆ ಜನರೂ ಸಹ ನಮಗೇನೋ ಸಿಗಲಿದೆ ಎಂಬ ಭ್ರಮೆಯಲ್ಲಿದ್ದಾರೆ. ಆದರೆ ತೆಲಂಗಾಣ ಮತ್ತು ವಿದರ್ಭ ಎರಡು ಮಾದರಿ ಇಟ್ಟುಕೊಂಡು ಬಿಳಿ ಅನ್ನಕ್ಕೆ ಚಿತ್ರಾನ್ನ ಮಾಡಿಕೊಟ್ಟಿರುವುದನ್ನೇ ನಾವು ಮೃಷ್ಟಾನ್ನ ಎಂದು ಭಾವಿಸಿದ್ದೇವೆ ಇದು ಶುದ್ಧ ತಪ್ಪು.

ಹೀಗಾಗಿ ನಮ್ಮ ಮುಂದಿನ ದಾರಿ ತುಂಬಾ ಕಠಿಣವಿದೆ. ಈ ಬಾರಿ ತಿದ್ದುಪಡಿಯಾದಂತೆ ಮತ್ತೆ ಕೇಂದ್ರ ಸರ್ಕಾರವೇ ಪ್ರತ್ಯೇಕ ಅನುದಾನ ನೀಡಬೇಕು ಎಂಬ ನಿಟ್ಟಿನಲ್ಲಿ ಹೋರಾಟ ಮಾಡುವುದು ನಮ್ಮ ಮುಂದೆ ಈಗಿರುವ ದೊಡ್ಡ ಸವಾಲು. ಸಂವಿಧಾನದ ೩೭೧ನೇ (ಜೆ) ಕಲಂ ತಿದ್ದುಪಡಿ ಮಾಡುವ ಮೂಲಕ ನಾವು ನಿಮಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದೇವೆ ಎಂದು ಹೇಳಿಕೊಳ್ಳುವ ರಾಜಕಾರಣಿಗಳು ಕೊಟ್ಟಿರುವುದನ್ನು ತೆಗೆದುಕೊಳ್ಳಿ ಎಂಬಂತಹ ಮಾತುಗಳನ್ನು ಆಡುತ್ತಿದ್ದಾರೆ. ಇವರು ಕೊಟ್ಟಿರುವುದನ್ನು ತೆಗೆದುಕೊಳ್ಳಲು ನಾವೇನು ಬಿಕ್ಷುಕರಾ? ಇದು ನಮ್ಮ ಹಕ್ಕು. ಹೀಗಾಗಿ ಎಲ್ಲ ಪಕ್ಷದ ಮುಖಂಡರಿಗೆ ಈ ಭಾಗದ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವೇ ವಿಶೇಷ ಬಜೆಟ್ ಮೀಸಲಿಡುವಂತೆ ಒತ್ತಾಯಿಸಬೇಕು.

ತಿದ್ದುಪಡಿ ಕುರಿತಂತೆ ಪತ್ರಿಕೆಗಳು ಸಾಕಷ್ಟು ಉತ್ಪ್ರೇಕ್ಷೆ ಎನ್ನವಂತೆಯೇ ಬರೆದವು. ಜನರ ನಿಜವಾದ ಧ್ವನಿಯಾಗಿ ಕೆಲಸ ಮಾಡಿದವು. ಈಗಾಗದರೂ ಪತ್ರಿಕೆಗಳು ಜನರ ಧ್ವನಿಯಾಗಬಲ್ಲವೇ ವಿನಃ ಕೈ ಆಗಲು ಬರುವುದಿಲ್ಲ. ಹಿಂದುಳಿದ ಈ ಭಾಗದ ಅಭಿವೃದ್ಧಿಗೆ ಹೆಚ್ಚುವರಿ ಹೂಡಿಕೆ ಅಗತ್ಯ ಎಂಬುದರ ಬಗ್ಗೆ ಎಲ್ಲರೂ ಎಚ್ಚೆತ್ತು ಹೋರಾಡಬೇಕಿದೆ.

ತಿದ್ದುಪಡಿಯಾದ ನಂತರ ಗೌರ‍್ನರ್ ಅಧ್ಯಕ್ಷತೆಯಲ್ಲಿ ಬಂದ ಹೊಸ ಮಂಡಳಿ ಹಳೆಯ ಹೈ.ಕ. ಅಭಿವೃದ್ಧಿ ಮಂಡಳಿಗಿಂತ ಭಿನ್ನವೇನಿಲ್ಲ ಎಂಬುದು ಈಗಲೇ ಗೊತ್ತಾಗಿರುವುದರಿಂದ ಈ ಬಗ್ಗೆ ಮತ್ತೊಂದು ಹೋರಾಟ ರೂಪುಗೊಳ್ಳಬೇಕಿದೆ.

ಹೈ.ಕ. ಭಾಗದ ಸಮಗ್ರ ಅಭಿವೃದ್ಧಿ ಬಗ್ಗೆ ಶಾಸನಬದ್ಧ ಕಾನೂನು ಮತ್ತು ಕೇಂದ್ರದ ಪ್ರತ್ಯೇಕ ಅನುದಾನದ ನೆರವು ಸಿಕ್ಕಾಗ ಮಾತ್ರ ಅಭಿವೃದ್ಧಿ ಸಾಧ್ಯ. ಇಲ್ಲದಿದ್ದಲ್ಲಿ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗುವುದರಲ್ಲಿ ಸಂಶಯವಿಲ್ಲ. ಕಾಯ್ದೆ ಪುಸ್ತಕದಲ್ಲಿ ಬಂದಿದೆ ನಿಜ. ಆದರೆ ಅದು ಮನೆ ಬಾಗಿಲಿಗೆ ತಲುಪಬೇಕಾದರೆ ಯಾವುದೇ ರಾಜಕಾರಣಿ ಇಲ್ಲವೇ ಅಧಿಕಾರಿಯ ಮೋಡಿಯ ಮಾತಿಗೆ ಮರುಳಾಗದೆ ಹೋರಾಟ ಮಾಡುವುದು ಅನಿವಾರ್ಯವಿದೆ. ಈ ಭಾಗದ ಜನರಿಗೆ ಒದಗಿಬಂದಿರುವ ಮತ್ತೊಂದು ಸವಾಲು ಇದು. ಇದನ್ನು ಸಮರ್ಥವಾಗಿ ಎದುರಿಸುವ ಮೂಲಕ ನಮ್ಮ ಭಾಗದ ಅಭಿವೃದ್ಧಿಗೆ ನಾವೇ ಕಾರಣರಾಗಬೇಕಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here