ಆಳಂದ: ಶುಕ್ರವಾರ ಆಳಂದ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಸುಭಾಷ್ ಆರ್ ಗುತ್ತೇದಾರ ಅವರು, ಈ ಬಸ್‍ನಿಂದ ತಾಲೂಕಿನ ಕೋವಿಡ್ ರೋಗಿಗಳಿಗೆ ಅನೂಕೂಲವಾಗಲಿದೆ ಅಲ್ಲದೇ ಇದು ಆಸ್ಪತ್ರೆಗಳ ಮೇಲಿನ ಹೊರೆಯನ್ನು ಕಡಿಮೆ ಮಾಡಲಿದೆ ಅದ್ದರಿಂದ ಸಾರ್ವಜನಿಕರು ಸರಿಯಾದ ಮಾಹಿತಿ ನೀಡಿ ಆಮ್ಲಜನಕಯುಕ್ತ ಬಸ್‍ನ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಕೋವಿಡನಿಂದ ಹೆಚ್ಚು ಸಾವುಗಳಾಗಿವೆ ಇದಕ್ಕೆ ಪ್ರಮುಖ ಕಾರಣ ಆರಂಭದಲ್ಲಿ ಕಂಡು ಬಂದ ಆಮ್ಲಜನಕ ಕೊರತೆ ಈಗ ಕ್ರಮೇಣ ಆಮ್ಲಜನಕ ಸಮಸ್ಯೆ ನಿವಾರಣೆಯಾಗುತ್ತಿದೆ. ಬರಲಿರುವ ದಿನಗಳಲ್ಲಿ ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ನೀಡಲು ಮತ್ತೊಂದು ಬಸ್ ವ್ಯವಸ್ಥೆ ಮಾಡಲಾಗುತ್ತಿದೆ ಇದು ರೆಫ್ರಿಜರೇಟರ್ ವ್ಯವಸ್ಥೆ ಹೊಂದಿರಲಿದೆ ಶೀಘ್ರವಾಗಿ ಇದು ತಾಲೂಕಿನಾದ್ಯಂತ ಕಾರ್ಯಾರಂಭ ಮಾಡಲಿದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿಯೇ ಇದೊಂದು ವಿಭಿನ್ನ ಪ್ರಯೋಗವಾಗಿದೆ ಇದರಿಂದ ರೋಗಿಗಳು ನಗರ ಪ್ರದೇಶಗಳಿಗೆ ಹೋಗುವುದು ತಪ್ಪುತ್ತದೆ ಅಲ್ಲದೇ ಉಚಿತವಾಗಿ ಈ ಸೇವೆ ದೊರೆತಂತಾಗುತ್ತದೆ ಎಂದು ಬಣ್ಣಿಸಿದರು.
ಈ ಸೇವೆಯನ್ನು ಒದಗಿಸಲು ವಿಶೇಷ ಆಸಕ್ತಿ ವಹಿಸಿ ಬಸ್ ನಿರ್ಮಿಸಿದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕ ಮಲ್ಲಿಕಾರ್ಜುನ ತಡಕಲ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜಿ.ಪಂ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ, ಕೆಎಂಎಫ್ ನಿರ್ದೇಶಕ ಸಂತೋಷ ಗುತ್ತೇದಾರ, ಪುರಸಭೆ ಅಧ್ಯಕ್ಷೆ ರಾಜಶ್ರೀ ಖಜೂರಿ, ಉಪಾಧ್ಯಕ್ಷ ಚಂದ್ರಕಾಂತ ಹತ್ತರಕಿ, ಮುಖಂಡರಾದ ಅಶೋಕ ಗುತ್ತೇದಾರ, ಮಲ್ಲಣ್ಣ ನಾಗುರೆ, ಆನಂದರಾವ ಪಾಟೀಲ, ಮಲ್ಲಿಕಾರ್ಜುನ ಕಂದಗೂಳೆ, ಶ್ರೀಮಂತ ನಾಮಣೆ, ಸುನೀಲ ಹಿರೋಳಿ, ಶರಣು ಕುಮಸಿ, ಗೌರಿ ಚಿಚಕೋಟಿ, ಸುಜ್ಞಾನಿ ಪೊದ್ದಾರ ಸೇರಿದಂತೆ ಇತರರು ಹಾಜರಿದ್ದರು.