ಪ್ರವಾಹ ಪರಿಹಾರ ವಂಚನೆ: ಪುರಸಭೆ ವಿರುದ್ಧ ಧರಣಿ

0
33

ವಾಡಿ: ಪ್ರವಾಹಕ್ಕೆ ತುತ್ತಾಗಿ ನಲುಗಿದವರನ್ನು ಹೊರಗಿಟ್ಟು ಲಂಚ ಕೊಟ್ಟವರನ್ನು ಪಟ್ಟಿಗೆ ಸೇರಿಸುವ ಮೂಲಕ ಪರಿಹಾರದಿಂದ ವಂಚಿಸಿದ್ದಾರೆ ಎಂದು ಆರೋಪಿಸಿ ಪಟ್ಟಣದ ಅಂಬೇಡ್ಕರ್ ಕಾಲೋನಿ ನಿವಾಸಿಗಳು ಶುಕ್ರವಾರ ಪುರಸಭೆ ಕಚೇರಿ ಮುಂದೆ ಧರಣಿ ನಡೆಸಿದ ಪ್ರಸಂಗ ನಡೆಯಿತು.

ಪುರಸಭೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ಹೊರಹಾಕಿದರು. ಅನರ್ಹರಿಂದ ಲಂಚ ಸ್ವೀಕರಿಸುವ ಮೂಲಕ ಅರ್ಹ ಫಲಾನುಭವಿಗಳಿಗೆ ಪ್ರವಾಹ ಪರಿಹಾರದಿಂದ ವಂಚಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ನಾಗೇಂದ್ರ ಜೈಗಂಗಾ, ಕಳೆದ ವರ್ಷ ೨೦೨೦ನೇ ಸಾಲಿನಲ್ಲಿ ಭಾರಿ ಮಳೆಯಾಗಿ ಪಟ್ಟಣದಲ್ಲಿ ಪ್ರವಾಹ ಪರಸ್ಥಿತಿ ಉಂಟಾಗಿತ್ತು. ಪುರಸಭೆ ವ್ಯಾಪ್ತಿಯ ಹಲವು ವಾರ್ಡ್‌ಗಳು ಜಲಾವೃತಗೊಂಡಿದ್ದವು. ನೂರಾರು ಕುಟುಂಬಗಳು ಮನೆಗಳನ್ನು ತೊರೆದು ಗಂಜಿ ಕೇಂದ್ರಕ್ಕೆ ಸ್ಥಳಾಂತರಗೊಂಡಿದ್ದವು. ದವಸದಾನ್ಯಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಬಡ ಕುಟುಂಬಗಳು ಕಂಗಾಲಾಗಿದ್ದವು. ಪ್ರವಾಹದಿಂದ ತೊಂದರೆಗೊಳಗಾದ ಮನೆಗಳನ್ನು ಸರ್ವೆ ಮಾಡಿರುವ ಅಧಿಕಾರಿಗಳು, ಈ ವರ್ಷ ತಲಾ ೧೦,೦೦೦ ಪರಿಹಾರ ಧನ ಖಾತೆಗೆ ಜಮೆ ಮಾಡಿದ್ದಾರೆ. ಆದರೆ ನೀರಿನಿಂದ ನಿರಾಶ್ರಿತರಾದ ಅರ್ಹ ಫಲಾನುಭವಿಗಳನ್ನು ಕೈಬಿಟ್ಟು ಸುರಕ್ಷಿತ ಶ್ರೀಮಂತ ಕುಟುಂಬಗಳಿಗೆ ಪರಿಹಾರ ಮೊತ್ತ ಪಾವತಿಯಾಗಿದೆ ಎಂದು ಆರೋಪಿಸಿದರು.

Contact Your\'s Advertisement; 9902492681

ಸ್ಥಳಕ್ಕಾಗಮಿಸಿದ ಪುರಸಭೆ ಮುಖ್ಯಾಧಿಕಾರಿ ವಿಠ್ಠಲ ಹಾದಿಮನಿ ಅವರೊಂದಿಗೆ ವಾಗ್ವಾದ ನಡೆಸಿದ ದಲಿತ ಕೇರಿಯ ಮಹಿಳೆಯರು, ಮಳೆಯಿಂದ ಮನೆಯಲ್ಲಾ ನೀರಾಗಿ ಮಕ್ಕಳ ಸಮೇತ ಸಮುದಾಯ ಭವನಗಳಲ್ಲಿ ದಿನಗಳನ್ನು ಕಳೆದಿದ್ದೇವೆ. ಗಂಜಿ ಕೇಂದ್ರಗಳಲ್ಲಿ ಊಟ ಮಾಡಿದ್ದೇವೆ. ಆದರೂ ನಮ್ಮನ್ನು ಪ್ರವಾಹ ಪರಿಹಾರ ನೀಡಿಲ್ಲ. ನಾವೇನು ನಿಮ್ಮ ಕಣ್ಣಿಗೆ ಶ್ರೀಮಂತರಂತೆ ಕಾಣುತ್ತಿದ್ದೇವಾ ಹೇಗೆ ಎಂದು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ಯಾರ‍್ಯಾರ ಮನೆಗೆ ನೀರು ನುಗ್ಗಿದೆ ಫೋಟೊ ತನ್ನಿ ಎಂದು ಹೇಳುತ್ತಿದ್ದಂತೆ ಆಕ್ರೋಶಗೊಂಡ ಮಹಿಳೆಯರು, ಮಳೆ ಬಂದಾಗ ಜೀವ ರಕ್ಷಣೆ ಮಾಡಿಕೊಳ್ಳುವುದನ್ನು ಬಿಟ್ಟು ಫೋಟೊ ತೆಗೆಸಿಕೊಳ್ಳಬೇಕಿತ್ತೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೊಂದ ಕುಟುಂಬಗಳಿಗೆ ಕೂಡಲೇ ನಮಗೆ ಪರಿಹಾರ ಮಂಜೂರು ಮಾಡಬೇಕು. ಇಲ್ಲದಿದ್ದರೆ ತಹಶೀಲ್ದಾರ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ರವಿ ಎಸ್.ಬಡಿಗೇರ ಎಚ್ಚರಿಕೆ ನೀಡಿದರು. ಮುಖಂಡರಾದ ಹಣಮಂತ ಹೇರೂರ, ಮಹಾದೇವ ನಾಟೇಕರ, ಮಹ್ಮದ್ ಗೌಸ್ ಧರಣಿಯಲ್ಲಿ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here