ಕರ್ನಾಟಕದ ಪ್ರಮುಖ ಹೋರಾಟಗಾರ್ತಿ ಕೆ. ನೀಲಾ ಅವರು ಕನ್ನಡದ ಕಥೆಗಾರರಲ್ಲಿ ಒಬ್ಬರು. ನೀಲಾರವರು 1966ರ ಆಗಸ್ಟ್ 1 ರಂದು ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ ಜನಿಸಿದರು.ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿಯೇ ಓದು, ಬರಹದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು ಕೆ. ನೀಲಾರವರು. ಇವರ ಕತೆ, ಕವನ, ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ತೊಗರಿ ಬೆಳೆಗೆ ಬೆಂಬಲ ಬೆಲೆ ಸಿಗಬೇಕೆಂದು ರೈತಪರ ಹೋರಾಟದಲ್ಲಿ ಜೈಲು ಸೇರಿದಾಗ ಬರೆದ ಬದುಕು ಬಂದೀಖಾನೆ ಕೃತಿಯು ಜೈಲಿನ ಕಥನ ಒಳಗೊಂಡಿದೆ.
ಮಹಿಳೆಯರ ಸಮಸ್ಯೆ ಸವಾಲುಗಳು ಪ್ರಚಾರೋಪನ್ಯಾಸ ಮಾಲೆಯ ಕಿರು ಹೊತ್ತಿಗೆ, ಜ್ಯೋತಿಯೊಳಗಣ ಕಾಂತಿ, ತಿಪ್ಪೆಯನರಸಿ ಮತ್ತು ಇತರ ಕತೆಗಳು ಎಂಬ ಕತಾ ಸಂಕಲನ ಹಾಗೂ ರೈಲು ಚಿತ್ರಗಳು ಅಂಚಿನಲ್ಲಿ ಪ್ರವಾಸ ಕಥನ ಪ್ರಕಟಿಸಿದ್ದಾರೆ.
ನೆಲದ ಪಿಸಿಮಾತು, ನೆಲದ ನಂಟು, ಬಾಳ ಕೌದಿ ಅಂಕಣ ಬರಹಗಳು. ಕರುಳಿರಿಯುವ ನೋವು -ಕತೆ ಬಿ.ಎ ಮತ್ತು ಬಿ,ಕಾಂ ನಾಲ್ಜನೆ ಸೆಮಿಸ್ಟರ್‍ಗೆ ಪಠ್ಯವಾಗಿದೆ.
ಕೊಂದಹರುಳಿದರೆ ಕತೆಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ರಾಜಪುರೋಹಿತ ದತ್ತಿ ಪುರಸ್ಕಾರ, ಚಿನ್ನದ ಪದಕದೊಂದಿಗೆ ಪ್ರಥಮ ಬಹುಮಾನ, ಸಂದಿದೆ.
ಮುನ್ನೂರು ಪ್ರತಿಷ್ಠಾನದ ಅಮ್ಮ ಪ್ರಶಸ್ತಿ(2009), ಪ್ರಜಾವಾಣಿ ದೀಪಾವಳಿ ಸಂಭ್ರಮದ ಕಥಾಸ್ಪರ್ಧೆಯಲ್ಲಿ ’ತಿಪ್ಪೆಯನರಸಿ’ ಕತೆಗೆ ದ್ವಿತಿಯ ಬಹುಮಾನ (2000), ಶ್ರೀಮತಿ ಯಶೋಧಾ ರಾಗೌ ಟ್ರಸ್ಟ್ ಮೈಸೂರು ವತಿಯಿಂದ ಶ್ರೀಮತಿ ಕವಿತಾ ಸ್ಮಾರಕ ಪ್ರಶಸ್ತಿ(2011), ಸಾಮಾಜಿಕ ಸೇವೆಗಾಗಿ ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿ (2019) ದೊರೆತಿವೆ.
ಬೇಲೂರಿನ ಉರಿಲಿಂಗ ಪೆದ್ದಿ ಟ್ರಸ್ಟ್ ನಡೆಸುವ ಬೀದರ ಜಿಲ್ಲಾ ಪ್ರಥಮ ಬಂಡಾಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ (2012) , ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಪ್ರಶಸ್ತಿ, ಬೀದರ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನ (2013) ಅಧ್ಯಕ್ಷತೆಯನ್ನೂ ವಹಿಸಿದ್ದರು ಕೆ. ನೀಲಾ.
ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿದರಾಗಿಯೂ ಕೆಲಸ ಮಾಡಿದವರು.
ವರದಕ್ಷಿಣೆಗಾಗಿ ನಡೆಯುವ ದೌರ್ಜನ್ಯ, ಅತ್ಯಾಚಾರ, ಕೊಲೆ, ಮಕ್ಕಳ ಮೇಲೆ ನಡೆಯುವ ಲೈಂಗಿಕ ಹಿಂಸೆ ಮುಂತಾದ ಪ್ರಕರಣಗಳನ್ನು ಕೈಗೆತ್ತಿಕೊಂಡು ಹೋರಾಟ ಮಾಡುವ ಮಹಿಳಾ ಹೋರಾಟಗಾರ್ತಿ ಕೆ. ನೀಲಾ.
ಸದ್ಯಕ್ಕೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯಡಿಯಲ್ಲಿ ಸಾವಿರಾರು ಕೂಲಿ ಕಾರ್ಮಿಕರ ಕೈಗೆ ಉದ್ಯೋಗ ಕೊಡಿಸಿದ್ದಾರೆ ಕೆ. ನೀಲಾರವರು.
ಇಂತಹ ಕೆ. ನೀಲಾ ಕಲಬುರಗಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಕಲ್ಯಾಣ ಕರ್ನಾಟಕ’ದ ಪರವಾಗಿ ಆಳುವ ಜನರ ವಿರುದ್ಧ ಚಾಟಿ ಏಟು ಬೀಸಿದ್ದರು ಎಂದಿನಂತೆಯೇ.
ಕಲಬುರಗಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೆ. ನೀಲಾ ಗುಡುಗು..!–
ಕಲಬುರಗಿ ಕನ್ನಡ ಸಾಹಿತ್ಯ ಸಮ್ಮೇಳನದ ‘ಕಲ್ಯಾಣ ಕರ್ನಾಟಕ: ಅಂದು- ಇಂದು- ಮುಂದು’ ಮೊದಲ ದಿನದ ಮೊದಲ ಗೋಷ್ಠಿ ವಿಷಯ ಪರಿಣಿತರ ನಡುವಿನ ಮಾತಿನ ಮಲ್ಲ ಯುದ್ಧಕ್ಕೆ ವೇದಿಕೆಯಾಯಿತು.
ಹಿಂದಿದ್ದ ‘ಹೈದ್ರಾಬಾದ್ ಕರ್ನಾಟಕ’ ಹೆಸರಿನ ’ಹೈದ್ರಾಬಾದ್’ ತೆಗೆದು ಆ ಜಾಗದಲ್ಲಿ ‘ಕಲ್ಯಾಣ’ ಸೇರಿಸಿ ಕಲ್ಯಾಣ ಕರ್ನಾಟಕವೆಂದರೆ ಈ ಹಿಂದುಳಿದ ನೆಲ ಉದ್ಧಾರವಾದೀತೆ? ಎಂದು ಸರ್ಕಾರಕ್ಕೆ ನೇರವಾಗಿ ಮಾತಿನಲ್ಲೇ ವಿಷಯ ಮಂಡಕರೊಬ್ಬರು ತಿವಿದಾಗ, ಅವರ ಮೊನಚು ಮಾತಿನ ಟೀಕಿಗೆ ಗೋಷ್ಠಿಯ ಅಧ್ಯಕ್ಷತೆ ವಹಿಸಿದವರೇ ಸರ್ಕಾರದ ಪರ ‘ಗುರಾಣಿ’ ಹಿಡಿದ ಪ್ರಸಂಗ ನಡೆಯಿತು.
ಇವೆಲ್ಲವುದಕ್ಕೂ ಕಳಶವಿಟ್ಟಂತೆ ಪ್ರಧಾನ ವೇದಿಕೆಯಲ್ಲೇ ಕಸಾಪ ರಾಜ್ಯಾಧ್ಯಕ್ಷ ಡಾ. ಮನು ಬಳಿಗಾರ ಅವರು ಶೃಂಗೇರಿ ಸಮ್ಮೇಳನದ ವಿಚಾರದಲ್ಲಿ ‘ಆಳುವವರ ಪರ’ವಾಗಿ ನಿಂತರು ಎಂದು ಆರೋಪಿ ಸುತ್ತ ಅವರ ಧೋರಣೆ ಖಂಡಿಸಲಾಯಿತ್ತಲ್ಲದೇ ರಾಜೀನಾಮೆಗೂ ಆಗ್ರಹ ಕೇಳಿ ಬಂದಿತು.
ನಾವು ಹಿಂದುಳಿದವರು ಎಂದು ನಿತ್ಯ ಅಳುತ್ತ ಕುಳಿತರೆ ಕೇಳೋರ್ಯಾರಿ ಕಾಯಕ ಸಂಸ್ಕೃತಿ ನಾಡಿಗೇ ನೀಡಿದ ನೆಲ ನಮ್ಮದು, ಹಿಂದುಳಿದವರೆಂಬ ಮಾನಸಿಕ ದಾರಿದ್ರ್ಯದಿಂದ ಹೊರಬರೋಣ ಎಂಬ ಕರೆಯೂ ಈ ಗೋಷ್ಠಿಯಲ್ಲಿ ಆಗ ಮಾರ್ದನಿಸಿತು.
ಗೋಷ್ಠಿಯಲ್ಲಿ ಸಾಮಾಜಿಕ, ಆರ್ಥಿಕ ವಿಚಾರಗಳ ಬಗ್ಗೆ ವಿಷಯ ಮಂಡಿಸಿದ ಹೋರಾಟಗಾರ್ತಿ ಕೆ. ನೀಲಾ ‘ಹೈದ್ರಾಬಾದ್’ ಹೆಸರು ಕಿತ್ತೊಗೆದು ‘ಕಲ್ಯಾಣ ಕರ್ನಾಟಕ’ ಮಾಡಿದಂತೆ ಈ ಭಾಗದ ಜನರ ಬಡತನ, ನಿರುದ್ಯೋಗ ಪೀಡಿತ ಬದುಕಿಗೂ ಮುಲಾಮು ಅರಿಯಬೇಕಿತ್ತು..? ಯಾಕಾಗಲಿಲ್ಲ ಈ ಕೆಲಸ..?
ನಿಜಾಂ ಆಡಳಿತ ಸರ್ವರನ್ನು ಒಳಗೊಂಡು ಇತ್ತಾದರೂ ಆ ಆಡಳಿತದ ಕೊನೆಯ 9 ತಿಂಗಳವನ್ನೇ ವೈಭವೀಕರಿಸುತ್ತ ಮತೀಯ ವಿಚಾರಗಳ ಬಗೆಗೆ ಮಾತನ್ನಾಡುವವರು ಇಂತಹ ಸಂಗತಿ ಅರಿಯಬೇಕಿತ್ತು ಎಂದು ನೇರವಾಗಿ ಆಳುವವರನ್ನು, ಈಗಿರುವ ಬಿಜೆಪಿ ಸರ್ಕಾರದತ್ತ ವಾಗ್ಬಾಣ ಬಿಟ್ಟರು.
ಇಂತಹ ಭಾವನಾತ್ಮಕ ವಿಚಾರ ಹರಿಬಿಡುತ್ತಾರೆಯೇ, ಜನ ತಮ್ಮ ಸಂಕಟ ಮರಿಯುವ್ಹಂಗ ಮಾಡ್ತಾರ, ಇದು ಆಳುವವರ ಷಡ್ಯಂತ್ರ, ಭಾಷಾವಾರು ಪ್ರಾಂತ ರಚನೆ ಕಾಲದಿಂದಲೂ ನಾವು ಅವಲೋಕನ ಮಾಡಿದಾಗ ಹಳೆ ಮೈಸೂರಿಗರು ನಮ್ಮನ್ನು ‘ಏಕೀಕರಣ ಕರ್ನಾಟಕ’ದಿಂದ ದೂರ ಇಡಲು ನೋಡಿದ್ರ ನಾವು ಕರ್ನಾಟಕದಲ್ಲೇ ಸೇರೋದು ಅಂತ ಹಠ ಹಿಡಿದಿದ್ವಿ, ಈಗ ನೋಡಿದ್ರ ನಮ್ಮ ಭಾಗದಿಂದಲೇ ಪ್ರತ್ಯೇಕತೆ ಕೂಗು ಎದ್ದಿದೆ. ಈ ಕೂಗಿಗೆ ನಾವು ಬೆಂಬಲ ನೀಡೋರಲ್ಲವಾದರೂ ಈ ಕೂಗಿನ ಹಿಂದಿರುವ ನೋವು, ಯಾತನೆ ಯಾರೂ ಗುರುತಿಸುತ್ತಿಲ್ಲ ಎಂದು ನೀಲಾ ವಿಷಾದಿಸಿದ್ದರು ಕೆ. ನೀಲಾ.
ನಂಜುಂಡಪ್ಪ ವರದಿ ಶಿಫಾರಸು ಜಾರಿಗೊಂಡಿಲ್ಲ, ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಬಂದ ಬಹುಕೋಟಿ ಅನುದಾನ ಮಾನವಾಭಿವೃದ್ಧಿಗಿಂತ ಚರಂಡಿ, ರಸ್ತೆಯಲ್ಲೇ ಕಳೆದು ಹೋಗುತ್ತಿದೆ. ಸರ್ವಸ್ಪರ್ಶಿ ಯೋಜನೆಗಳಿಲ್ಲದೆ ಮಂಡಲಿ ಬಡವಾಗುತ್ತಿದೆ. 2 ವರ್ಷ ಈ ಭಾಗದವರ ಪುಸ್ತಕ ಖರೀದಿಸಿದ ಮಂಡಳಿ ಇದೀಗ ಸುಮ್ಮನಾಯ್ತು. ಎಲ್ಲವೂ ಇದೇ ರೀತಿ ಅರ್ಧಮರ್ಧ ಕೆಲ್ಸವೆಂದು ನೀಲಾ ಟೀಕೆಗಳ ಸುರಿಮಳೆಗರೆದರು.
ಮತೀಯವಾದ, ಕೋಮು ಭಾವನೆ ಕರಾವಳಿಯನ್ನು ಸತ್ಯಾನಾಶ ಮಾಡುತ್ತಿದೆ ಎಂದು ಕೋಮು ದ್ವೇಷವನ್ನು ‘ಮಿಡಿ ನಾಗರ’ಕ್ಕೆ ಹೋಲಿಸಿದ ನೀಲಾ, ಅದೇ ಮಿಡಿ ನಾಗರ ‘ಕಲ್ಯಾಣ ಕರ್ನಾಟಕ’ದಾಗ ಹೆಡಿ ಎತ್ಲಿಕ್ಕಿ ನೋಡ್ಲಿಕತ್ತದ, ನಾವು ಸಾಹಿತಿಗಳು ಈ ನಾಗರ ಹೆಡಿ ಎತ್ತದ್ಹಂಗ ನಮ್ಮ ಪೆನ್ನ ಎತ್ತಿ ಬರೀಬೇಕು. ಜನಜಾಗೃತಿ ಮಾಡಬೇಕು ಎಂದು ಹೇಳುತ್ತ ಹೆಸರು ಪ್ರಸ್ತಾಪಿಸದೆ ಪರೋಕ್ಷವಾಗಿ ಸಂಘ ಪರಿವಾರದವರದತ್ತ ಮಾತಿನ ಚಾಟಿ ಬೀಸಿದ್ದರು.
ಆಳುವವರು ಕಸಾಪಕ್ಕೆ ಅನುದಾನ ಕೊಡಬಹುದು, ಹಾಗಂತ ತಾವು ಹೇಳಿದಂತೆಯೇ ನಡೆಯಬೇಕು ಎಂಬ ಷರತ್ತು ಹಾಕೋ ಹಾಗಿಲ್ಲ. ಜನರ ದೇಣಿಗೆ ಹಣ ಸರ್ಕಾರ ನೀಡುತ್ತದೆಯೇ ಹೊರತು ಬೇರೇನೂ ಅಲ್ಲ, ಈಚೆಗೆ ಶೃಂಗೇರಿ ಸಮ್ಮೇಳನದ ಅಧ್ಯಕ್ಷರ ಬದಲಾವಣೆಗೆ ಸೂಚಿಸಿದ ಸರ್ಕಾರದ ಕ್ರಮ ಸರಿಯಲ್ಲ, ಇದು ಖಂಡಿಸುತ್ತವೆ.
ಈ ಸಂದರ್ಭದಲ್ಲಿ ಸರ್ಕಾರದ ಪರ ನಿಲ್ಲದೇ ಸಾಹಿತ್ಯಾಸಕ್ತರ ಪರ ನಿಲ್ಲಬೇಕಾದಂತಹ ಮನು ಬಳಿಗಾರರ ಆ ಕೆಲಸ ಮಾಡಿಲ್ಲದ ಕಾರಣ ಅವರು ರಾಜೀನಾಮೆ ನೀಡಲಿ ಎಂದು ಈ ಹೋರಾಟಗಾರ್ತಿ ಕೆ. ನೀಲಾ ವೇದಿಕೆಯಲ್ಲೇ ಬಹಿರಂಗ ಆಗ್ರಹಿಸಿದರಲ್ಲದೇ ಬಾಂಬ್ ಹಾಕೋರಿಗೇ ಹಿಡಿಯಕ್ಕಾಗಿಲ್ಲ, ನುಡಿ ಜಾತ್ರೆಯ ಅಧ್ಯಕ್ಷರು ಇವರೇ ಆಗಲಿ ಅಂತಾರೆ ಎಂದು ಸರ್ಕಾರವನ್ನು ಟೀಕಿಸಿದ ಪ್ರಸಂಗ ನಡೆದಿತ್ತು.
ನಮ್ಮ ಆರ್ಥಿಕಾಭಿವೃದ್ಧಿ ಸೊರಗಲು ರಾಜಕೀಯ ಇಚ್ಛಾಶಕ್ತಿ ಕೊರತೆ ಕಾರಣ, ಯಾವೊಬ್ಬ ರಾಜಕಾರಣಿ ಉದ್ಯೋಗ ಖಾತ್ರಿ ದುಡ್ಡು ನಮಗ್ಯಾಕೆ ಬಂದಿಲ್ಲ. ನಮ್ಮಲಿರುವ ಶೇ.90 ರಷ್ಚು ಕೂಲಿಗಳು ಕೆಲಸವಿಲ್ಲದೇ ಯಾಕೆ ಹಿಂಗ ಕುಂತಾರ? ಅಂತ ಕೇಳೋದಿಲ್ಲ. ಬದಲಾಗಿ ವೈಯಕ್ತಿಕ ವಿಚಾರ ಪ್ರಸ್ತಾಪಿಸಿ ಜನರನ್ನ ಮೂರ್ಖ ಮಾಡ್ತಾರ. ಇದೆಲ್ಲ ಹೆಚ್ಚುದಿನ ನಡೆಯೋಲ್ಲ, ಸಾಹಿತಿಗಳು ಇಂತಹ ಸಂಗತಿ ಗಮನಿಸಿ ಸಾಹಿತ್ಯ ರಚಿಸಿ ಜನರ ಆರ್ಥಿಕ, ಸಾಮಾಜಿಕ ಪ್ರಗತಿಗೆ ಏಣಿಯಾಗೋಣ ಎಂದು ಹೋರಾಟಗಾರ್ತಿ ಕೆ. ನೀಲಾ ಅವರು ಹೇಳಿದ್ದರು.
ನಂಜುಂಡಪ್ಪ ವರದಿ ಶಿಫಾರಸಿನಂತೆ ಒಂದೂ ಸವಲತ್ತು ಈ ಭಾಗಕ್ಕೆ ಸರ್ಕಾರಗಳು ನೀಡಿಲ್ಲ, ಪ್ರತ್ಯೇಕ ಹಣಕಾಸು, ಕೃಷಿ ಅಭಿವೃದ್ಧಿ ಸಂಸ್ಥೆ ಸಿಕ್ಕಿಲ್ಲ, ನಮ್ಮ ಭಾಗದವರಿಗೆ ಎಲ್ಲ ಕಡೆ ಸಿಗಬೇಕಾದಂತಹ ಪಾಲು ಸಿಕ್ಕಿಲ್ಲ. ಬರುವ ದಿನಗಳಲ್ಲಿ ಪ್ರಾದೇಶಿಕ ಅಭಿವೃದ್ಧಿ ನೀತಿ ಸಿದ್ಧವಾಗಬೇಕು. ಕ.ಕ ಭಾಗಕ್ಕೆ ಪ್ರತ್ಯೇಕ ಸಚಿವಾಲಯ ಶುರುವಾಗಬೇಕು ಅಂತೆಲ್ಲಾ ಕೆ. ನೀಲಾ ಹೇಳಿದ್ದರು. ಇದು ಪ್ರತಿ ಸಂದರ್ಭಕ್ಕೂ ಸಕಾಲಿಕ.