ಸುರಪುರ: ನಗರದ ಪೊಲೀಸ್ ಠಾಣೆಯಿಂದ ವಿಜಯಪುರ ಜಿಲ್ಲೆಯ ಚಡಚಣ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡ ಪೊಲೀಸ್ ಇನ್ಸ್ಪೇಕ್ಟರ್ ಎಸ್.ಎಮ್.ಪಾಟೀಲ್ ಅವರಿಗೆ ಕರ್ನಾಟಕ ಪತ್ರಕರ್ತರ ಸಂಘದ (ಕೆಜೆಯು) ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಎಸ್.ಎಮ್.ಪಾಟೀಲ್,ಸುರಪುರ ಠಾಣೆಯಲ್ಲಿ ಕಳೆದ ಒಂದುವರೆ ವರ್ಷದಿಂದ ಕರ್ತವ್ಯ ನಿರ್ವಹಿಸಲು ಇಲ್ಲಿಯ ಜನರು,ಮುಖಂಡರು ಹಾಗು ಸಂಘ ಸಂಸ್ಥೆಗಳು ಜೊತೆಗೆ ಮುಖ್ಯವಾಗಿ ಪತ್ರಕರ್ತ ಮಿತ್ರರು ಸಹಕಾರವನ್ನು ನೀಡಿದ್ದೀರಿ.ಅನೇಕ ಸಂದರ್ಭಗಳಲ್ಲಿ ಸಲಹೆಗಳನ್ನು ನೀಡುವ ಮೂಲಕ ಉತ್ತಮವಾಗಿ ಸೇವೆ ಸಲ್ಲಿಸಲು ಸಹಕಾರ ನೀಡಿದ್ದೀರಿ.ಆದ್ದರಿಂದ ತಾಲೂಕಿನ ಎಲ್ಲಾ ಮುಖಂಡರು,ಸಂಘಟಕರು ಮತ್ತು ಪತ್ರಕರ್ತರಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕೆಜೆಯು ತಾಲೂಕು ಅಧ್ಯಕ್ಷ ರಾಜು ಕುಂಬಾರ ಮಾತನಾಡಿ,ಕಳೆದ ಒಂದುವರೆ ವರ್ಷದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮತ್ತು ಜನರು ಅವುಗಳನ್ನು ಪಾಲಿಸುವಲ್ಲಿ ಉತ್ತಮವಾಗಿ ಸೇವೆ ನೀಡಿದ್ದೀರಿ.ನಗರದಲ್ಲಿನ ಕೆಲವು ಸಮಸ್ಯೆಗಳನ್ನು ನಿವಾರಿಸುವಲ್ಲಿ ನೆರವಾಗಿದ್ದೀರಿ ಅಲ್ಲದೆ ಲಾಕ್‌ಡೌನ್ ಸಂದರ್ಭದಲ್ಲಿ ಸಾರ್ವಜನಿಕರ ಅಗತ್ಯತೆಗಳನ್ನು ಅರಿತುಕೊಂಡು ಯಾವುದೇ ರೀತಿಯ ಸಮಸ್ಯೆಯಾಗದಂತೆ ಜನರಿಗೆ ಅವಕಾಶ ಕಲ್ಪಿಸಿದ್ದೀರಿ.ಅದಕ್ಕಾಗಿ ತಾಲೂಕಿನ ಪರವಾಗಿ ತಮಗೆ ಧನ್ಯವಾದ ಸಲ್ಲಿಸುವ ಜೊತೆಗೆ ಶೀಘ್ರದಲ್ಲಿಯೆ ಉನ್ನತ ಹುದ್ದೆಗೆ ಪದೋನ್ನತಿ ಹೊಂದಿ ಮತ್ತೆ ಇಲ್ಲಿಗೆ ಆಗಮಿಸುವಂತಾಗಲಿ ಎಂದು ಹಾರೈಸಿದರು.
ದೇ ಸಂದರ್ಭದಲ್ಲಿ ಎಸ್.ಎಮ್.ಪಾಟೀಲ್ ಅವರಿಗೆ ಶಾಲು ಹೊದಿಸಿ ಹೂಮಾಲೆ ಹಾಕಿ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಕೆಜೆಯು ಉಪಾಧ್ಯಕ್ಷ ಮಲ್ಲು ಗುಳಗಿ,ಪ್ರಧಾನ ಕಾರ್ಯದರ್ಶಿ ಪರಶುರಾಮ ಮಲ್ಲಿಬಾವಿ,ಖಜಾಂಚಿ ಮಹಾದೇವಪ್ಪ ಬೊಮ್ಮನಹಳ್ಳಿ ಹಾಗು ಸದಸ್ಯರಾದ ಮುರಳಿಧರ ಅಂಬುರೆ,ಶ್ರೀಮಂತ ಚಲುವಾದಿ ಮತ್ತು ಪೊಲೀಸ್ ಪೇದೆಗಳಾದ ಮಂಜುನಾಥ ಹಿರೇಮಠ,ಬಸವರಾಜ ರಾಮಗೋಳ ಸೇರಿದಂತೆ ಅನೇಕರಿದ್ದರು.