ವಾಡಿ: ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬದ ಪ್ರಯುಕ್ತ ಜು.22ರ ವರೆಗೆ ಗೋವುಗಳ ಸಾಗಾಟ, ಮಾರಾಟ ಮತ್ತು ಖರೀದಿ ಪ್ರಕ್ರಿಯೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಚಿತ್ತಾಪುರ ಸಿಪಿಐ ಕೃಷ್ಣಪ್ಪ ಕಲ್ಲೆದೇವರು ಹೇಳಿದರು.
ಇದೇ ಜು.21 ರಂದು ಆಚರಿಸಲಾಗುತ್ತಿರುವ ಬಕ್ರೀದ್ ಹಬ್ಬದ ಪ್ರಯುಕ್ತ ಶನಿವಾರ ಸಂಜೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಲಾಗಿದ್ದ ಮುಸ್ಲಿಂ ಧಾರ್ಮಿಕ ಮುಖಂಡರ ಶಾಂತಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಗೋವುಗಳ ಸಾಗಾಟ ಮಾಡುವಂತಿಲ್ಲ. ಕೃಷಿಗೆ ಸಂಬಂದಿಸಿದ ಗೋವುಗಳನ್ನು ಮಾತ್ರ ಸಂಬಂದಿಸಿದ ಅಧಿಕಾರಿಗಳ ಪರವಾನಿಗೆ ಮೇರೆಗೆ ಸಾಗಿಸಬಹುದಾಗಿದೆ.
ಗೋವುಗಳ ರಕ್ಷಣೆ ಹೆಸರಿನಲ್ಲಿ ಯಾರಾದರೂ ಹೆದ್ದಾರಿಗಳಲ್ಲಿ ಗೂಂಡಾಗಿರಿ ಪ್ರದರ್ಶನಕ್ಕೆ ಇಳಿದರೆ ಅಂಥಹವರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ. ಯಾವುದೇ ಪ್ರಕರಣಗಳು ನಡೆದರೂ ವಾದ ವಾಗ್ವಾದಕ್ಕಿಳಿಯದೆ ಠಾಣಾಧಿಕಾರಿಯ ಗಮನಕ್ಕೆ ತನ್ನಿ. ನಾವು ಗುಂಡಾಗಿರಿಗೆ ಪಾಠ ಕಲಿಸುತ್ತೇವೆ ಎಂದು ತಿಳಿಸಿದರು.
ಕೊರೊನಾ ಮಹಾಮಾರಿ ಇನ್ನೂ ಜೀವಂತ ಇರುವುದರಿಂದ ಹಬ್ಬದ ದಿನದಂದು ಕೈಗೊಳ್ಳಲಾಗುವ ಸಾಮೂಹಿಕ ಪ್ರಾರ್ಥನೆಗೆ ಸಂಬಂದಿಸಿದಂತೆ ಸರಕಾರ ಕೆಲವು ನಿರ್ಬಂಧಗಳನ್ನು ವಿಧಿಸಿದೆ.
ಅಂದು ಬೆಳಗ್ಗೆ ನಮಾಜ್‍ಗಾಗಿ ಈದ್ಗಾ ಮೈದಾನ ಪ್ರವೇಶ ನಿಷೇಧಿಸಲಾಗಿದ್ದು, ಮಸೀದಿಯಲ್ಲಿ 50 ಜನರ ಸಹಭಾಗಿತ್ವದಲ್ಲಿ ನಮಾಜ್ ಮಾಡಲು ಅವಕಾಶ ನೀಡಲಾಗಿದೆ. ಮೊದಲ ತಂಡದ ನಮಾಜ್ ನಂತರ ಮಸೀದಿ ಆವರಣವನ್ನು ಸ್ಯಾನಿಟೈಸ್ ಮಾಡಿದ ಬಳಿಕ ಮತ್ತೆ 50 ಜನಕ್ಕೆ ಪ್ರಾರ್ಥನೆಗೆ ಅವಕಾಶವಿದೆ. 65 ವರ್ಷಕಿಂತ ಮೇಲ್ಪಟ್ಟ ವಯಸ್ಸಿನ ಹಿರಿಯರನ್ನು ಮತ್ತು ಹತ್ತು ವರ್ಷದೊಳಗಿನ ಮಕ್ಕಳನ್ನು ಮಸೀದೆ ಕರೆತರಬಾರದು. ವ್ಯಕ್ತಿಯಿಂದ ವ್ಯಕ್ತಿಗೆ ಆರು ಅಡಿ ಅಂತರ ಕಾಯ್ದುಕೊಳ್ಳಬೇಕು.
ನಮಾಜ್ ನಂತರ ಪರಸ್ಪರ ಶುಭಾಶಯಗಳನ್ನು ಕೋರಲು ಸಾಂಪ್ರದಾಯಿಕ ಹಸ್ತಲಾಘವ ಮತ್ತು ಆಲಿಂಗನಕ್ಕೆ ಅವಕಾಶ ಇರುವುದಿಲ್ಲ. ರೋಗದ ಕುರಿತು ನಿರ್ಲಕ್ಷ್ಯ ವಹಿಸದೆ ಮನೆಯ ಮಕ್ಕಳು ಮತ್ತು ಹಿರಿಯ ಆರೋಗ್ಯ ದೃಷ್ಠಿಯಿಂದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮಾಂಸ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬೀದಿಗೆ ಎಸೆಯದೆ ಪೌರಕಾರ್ಮಿಕರಿಗೆ ನೀಡಿ ನಗರದ ಸ್ವಚ್ಚತೆ ಕಾಪಾಡಬೇಕು. ಅಂತ್ಯ ಸರಳವಾಗಿ ಮತ್ತು ಶಾಂತಿ ಸೌಹಾರ್ಧತೆಯಿಂದ ಹಬ್ಬವನ್ನು ಆಚರಿಸಬೇಕು ಎಂದು ಕಿವಿಮಾತು ಹೇಳಿದರು.
ಪಿಎಸ್‍ಐ ವಿಜಯಕುಮಾರ ಭಾವಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಾಧಿಕಾರಿ ಚಿದಾನಂದ ಸ್ವಾಮಿ, ಕ್ರೈಂ ಪಿಎಸ್‍ಐ ತಿರುಮಲೇಶ, ಜೆಸ್ಕಾಂ ಸಿಬ್ಬಂದಿ ನೀಲಕಂಠ ರಾಠೋಡ, ಕಿರಿಯ ನೈರ್ಮಲ್ಯ ನಿರೀಕ್ಷಕ ಬಸವರಾಜ ಪೂಜಾರಿ, ಪುರಸಭೆ ಸದಸ್ಯರಾದ ಮಹ್ಮದ್ ಗೌಸ್, ಶರಣು ನಾಟೇಕರ, ಮಲ್ಲಯ್ಯ ಗುತ್ತೇದಾರ, ಮುಸ್ಲಿಂ ಧಾರ್ಮಿಕ ಮುಖಂಡರಾದ ಫೇರೋಜ್ ಖಾನ್, ಬಾಬುಮಿಯ್ಯಾ, ಮಹ್ಮದ್ ಖಾದರ್, ರಹೆಮಾನ ಖುರೇಶಿ, ಅಶ್ರಫ್ ಖಾನ್, ಉದಯಕುಮಾರ ಯಾದಗಿರಿ, ರಾಜಾ ಪಟೇಲ, ನಾಸೀರ ಹುಸೇನ ಪಾಲ್ಗೊಂಡಿದ್ದರು.