ಕಲಬುರಗಿ: ರಾಜ್ಯದಲ್ಲಿ ಅಲೆಮಾರಿ ಸಮುದಾಯಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಅಲೆಮಾರಿ/ಅರೆ-ಅಲೆಮಾರಿ ಜನಾಂಗಕ್ಕೆ ಉತ್ತಮವಾದ ಶಿಕ್ಷಣ ಹಾಗೂ ಶಾಶ್ವತವಾಗಿ ನೆಲೆಸಲು ವಸತಿ ಯೋಜನೆಯ ಅಗತ್ಯವಿದೆ. ಹೀಗಾಗಿ ವಿದ್ಯಾರ್ಥಿ ನಿಲಯಗಳ ಪ್ರವೇಶಾತಿಯಲ್ಲಿ ವಿಶೇಷ ಮೀಸಲಾತಿ, ವಿವಿಧ ವಸತಿ ಯೋಜನೆಯಡಿ ಶಾಶ್ವತ ಸೂರು ಕಲ್ಪಿಸುವುದು ಅವಶ್ಯಕವಾಗಿದೆ. ಈ ಸಮುದಾಯಗಳ ಶೈಕ್ಷಣಿಕ ಪ್ರಗತಿ ಮತ್ತು ಉತ್ತೇಜನಕ್ಕಾಗಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತ್ಯೇಕ ವಸತಿ ನಿಲಯ ಹಾಗೂ ಉದ್ಯೋಗಧಾರಿತ ತರಬೇತಿ ಕೇಂದ್ರ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸರಕಾರದಿಂದ ಅಲೆಮಾರಿ/ಅರೆ-ಅಲೆಮಾರಿ ಸಮುದಾಯಕ್ಕೆ ಸೇರಿದ ಭೂ ರಹಿತ ಕೃಷಿ ಕಾರ್ಮಿಕರಿಗೆ ಭೂಮಿ ಖರೀದಿಸಲು ಭೂ ಖರೀದಿ ಯೋಜನೆ ಬಹಳ ಉಪಕಾರಿಯಾಗಿದೆ. ಆದ್ದರಿಂದ ಶಾಶ್ವತ ಆಸ್ತಿಯಾಗಿ ಸೃಜನೆಯಾಗುವ ಭೂ ಖರೀದಿ (ಭೂ ಒಡೆತನ) ಯೋಜನೆ ಮುಂದುವರೆಸಬೇಕು. ಇದಕ್ಕಾಗಿಯೇ ವಿಶೇಷ ಅನುದಾನ ಮಿಸಲಿಡಬೇಕು. ಈ ಯೋಜನೆಯಡಿ ಭೂಮಿ ನೀಡಿದರೆ ಬೇರೆಯವರಿಗೆ ಮಾರಾಟ ಮಾಡಲು ಅವಕಾಶವಿರುವುದಿಲ್ಲ. ಇಂತಹ ಯೋಜನೆಗಳಿಂದ ಅಲೆಮಾರಿಗಳು ಒಂದೇ ಕಡೆ ನೆಲೆಸಿ ಸರಳ ಜೀವನ ಸಾಗಿಸಲು ಬಹಳ ಅನುಕೂಲವಾಗುತ್ತದೆ.
ಅಲೆಮಾರಿ/ಅರೆ-ಅಲೆಮಾರಿ ಬುಡಕಟ್ಟು ಜನಾಂಗದಲ್ಲಿ ಬರುವ 46 ಜಾತಿ ಜನಾಂಗಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಮುಂಬರುವ ಬಜೆಟ್‍ನಲ್ಲಿ ಸರಕಾರ ಇನ್ನು ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಅಖಿಲ ಕರ್ನಾಟಕ ಹೆಳವ ಸಮಾಜದ ರಾಜ್ಯ ನಿರ್ದೇಶಕ ಬಸವರಾಜ ಹೆಳವರ ಯಾಳಗಿ ಸರಕಾರಕ್ಕೆ ಮನವಿ ಮಾಡಿದ್ದಾರೆ.