ಆಳಂದ: ಶಾಸಕ ಸುಭಾಷ ಗುತ್ತೇದಾರ ಅವರನ್ನು ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಹಾಗೂ ಸಂಬಂಧಿತರಿಗೆ ಹೇಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯದ ಬಿಜೆಪಿ ವರಿಷ್ಠ ನಾಯಕರಾದ ಬಿ.ಎಸ್. ಯಡಿಯೂರಪ್ಪನವರು ಮಠಾಧೀಶರ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಬೆಂಗಳೂರಿನ ತಮ್ಮ ಕಾವೇರಿ ನಿವಾಸಕ್ಕೆ ಗುರುವಾರ ಭೇಟಿ ನೀಡಿದ ತಾಲೂಕಿನ ಕೆಲವು ಮಠಾಧೀಶರ ನಿಯೋಗವು ಸಲ್ಲಿಸಿದ ಮನವಿ ಸ್ವೀಕರಿಸಿ ಅವರು ಈ ಕುರಿತು ಮಾತನಾಡುವುದಾಗಿ ಅವರು ಹೇಳಿದರು.
ಶಾಸಕ ಸುಭಾಷ ಗುತ್ತೇದಾರ ಅವರು, ನಾಲ್ಕು ಬಾರಿ ಶಾಸಕರಾಗಿ, ಕಲ್ಯಾಣ ಕರ್ನಾಟಕದಲ್ಲಿ ಪಕ್ಷದ ಹಿರಿಯರಾಗಿದ್ದು, ಆಡಳಿತ ಸಾಮರ್ಥ್ಯ ಹೊಂದಿ ಅಭಿವೃದ್ಧಿ ಕೈಗೊಳ್ಳುವಂತ ವ್ಯಕ್ತಿತ್ವ ಹೊಂದಿರುವ ಗುತ್ತೇದಾರ ಅವರನ್ನು ಹಿಂದೆ ಮುಂದೆ ನೋಡದೆ ಸಚಿವ ಸ್ಥಾನ ನೀಡುವಂತೆ ಹೇಳಿ ಪ್ರಯತ್ನಿಸುತ್ತೇನೆ ಎಂದು ಯಡಿಯೂರಪ್ಪನವರು ಭರವಸೆ ನೀಡಿದರು.
ಮಠಾಧೀಶರ ನಿಯೋಗದ ರೂವಾರಿ ಚಿಕ್ಕಮಂಗಳೂರಿನ ತರಕೇರಿ ಹಾಗೂ ಹೊದಲೂರ ಮಠದ ಶ್ರೀ ವೃಷಬೇಂದ್ರ ಮಹಾಸ್ವಾಮಿಗಳು, ಪಡಸಾವಳಿ, ಡೊಣಗಾಂವ ಮಠದ ಶ್ರೀ ಶಂಭುಲಿಂಗ ಶಿವಾಚಾರ್ಯರು ಅವರ ಮುಂದಾಳತ್ವದಲ್ಲಿ ಇನ್ನಿತರ ಮಠಾಧೀಶರು, ಮುಖಂಡರು ಪಾಲ್ಗೊಂಡಿದ್ದರು. ನಾಳೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿರುವ ಮಠಾಧೀಶರ ನಿಯೋಗವು ಕ್ಷೇತ್ರದ ಶಾಸಕ ಗುತ್ತೇದಾರ ಪರ ಭರ್ಜರಿಯ ಬ್ಯಾಟಿಂಗ್ ಮಾಡಿ ಒತ್ತಡ ಹಾಕಲಾಗುವುದು ಎಂದು ವೃಷಬೇಂದ್ರ ಶ್ರೀಗಳು ಹೇಳಿಕೊಂಡಿದ್ದಾರೆ. ಮಲ್ಲಿಕಾರ್ಜುನ ಕಂದಗುಳೆ, ಮಲ್ಲಿಕಾರ್ಜುನ ತಡಕಲ್, ಶರಣು ಕುಮಸಿ, ಕುಮಾರ ಬಂಡೆ ಮತ್ತಿತರು ಇದ್ದರು.
ಅಲ್ಪಸಂಖ್ಯಾತರ ಘಟಕ ಒತ್ತಾಯ: ಬಿಜೆಪಿ ಪಕ್ಷವನ್ನು ಬೆಳೆಸಿ ಅಧಿಕಾರಕ್ಕೆ ಬಂದ ಶಾಸಕ ಸುಭಾಷ ಗುತ್ತೇದಾರ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನವನ್ನು ಕಲ್ಪಿಸಿ ಕೊಡುವ ಮೂಲಕ ಕಲ್ಯಾಣ ಕರ್ನಾಟಕಕ್ಕೆ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಜಿಲ್ಲಾ ಹಾಗೂ ತಾಲೂಕು ಅಲ್ಪಸಂಖ್ಯಾತರ ಘಟಕವು ಬಿಜೆಪಿ ವರಿಷ್ಠರನ್ನು ಒತ್ತಾಯಿಸಿದೆ.
ಈ ಕುರಿತು ಪ್ರಕಟಣೆ ಮೂಲಕ ಮನವಿ ಮಾಡಿರುವ ಬಿಜೆಪಿ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಉಪಾಧ್ಯಕ್ಷ ಮಹಿಬೂಬ ಶೇಖ ತೆಲಾಕುಣಿ, ತಾಲೂಕು ಅಧ್ಯಕ್ಷ ಇಸೂಫ್ ರಮ್ಮು ಅನ್ಸಾರಿ, ದರ್ಗಾ ಕಮೀಟಿ ಅಧ್ಯಕ್ಷ ಆಸೀಫ್ ಅನ್ಸಾರಿ, ಮಿರ ಅಹ್ಮದ್ ಮತ್ತು ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಕುಮಾರ ಬಂಡೆ, ಉಪಾಧ್ಯಕ್ಷ ಪ್ರಕಾಶ ತೋಳೆ ಮತ್ತಿತರು ರಾಜ್ಯದ ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳು ಮತ್ತು ಪಕ್ಷದ ರಾಜಾಧ್ಯಕ್ಷರನ್ನು ಅವರು ಮನವಿ ಮಾಡಿ ಕ್ಷೇತ್ರದ ಶಾಸಕ ಸುಭಾಷ ಗುತ್ತೇದಾರಗೆ ಸಚಿವ ಸ್ಥಾನ ನೀಡಿ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಒತ್ತಾಯಿಸಿದ್ದಾರೆ.