ಕಲಬುರಗಿ: ರಾಜ್ಯದಲ್ಲಿ ೧೫೬ ಬರಪೀಡಿತ ತಾಲ್ಲೂಕುಗಳನ್ನು ಘೋಷಿಸಿದರೂ ಸಹ ಸಮರ್ಪಕವಾಗಿ ಪರಿಹಾರ ಕಾಮಗಾರಿಗಳನ್ನು ಆರಂಭಿಸದೇ ಇರುವುದರಿಂದ ಜುಲೈ ೧೫ರಂದು ರಾಜ್ಯವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಭಾರತ್ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಕಾ. ಸಾತಿ ಸುಂದರೇಶ್ ಅವರು ಇಲ್ಲಿ ಹೇಳಿದರು.
ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರ ಇದ್ದರೂ ಸಹ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರವು ಅಧಿಕಾರ ಉಳಿಸಿಕೊಳ್ಳಲು ಯತ್ನಿಸುತ್ತಿದೆ. ಇನ್ನು ವಿರೋಧ ಪಕ್ಷವಾದ ಬಿಜೆಪಿಯು ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಹೀಗಾಗಿ ರಾಜ್ಯದ ಅಮಾಯಕ ಜನತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ವೀಕ್ಷಕರ ತಂಡವು ರಾಜ್ಯಕ್ಕೆ ಬಂದು ಹೋಗಿದ್ದು, ಬರ ನಿರ್ವಹಣೆಗೆ ೩೦,೦೦೦ ಕೋಟಿ ರೂ.ಗಳ ನೆರವು ಅಗತ್ಯವಿದ್ದರೂ ಸಹ ಕೇಂದ್ರವು ಕೇವಲ ೯೫೦ ಕೋಟಿ ರೂ.ಗಳನ್ನು ಮಾತ್ರ ಬಿಡುಗಡೆ ಮಾಡಿದೆ. ರಾಜ್ಯದ ಸಂಕಷ್ಟಕ್ಕೆ ಕೇಂದ್ರ ಅಗತ್ಯ ನೆರವು ನೀಡಿಲ್ಲ ಎಂದು ಅವರು ಖಂಡಿಸಿದರು. ಆನೇಕಲ್‌ನಲ್ಲಿ ಸಾಕಷ್ಟು ಜಾನುವಾರುಗಳಿದ್ದ ಗೋಶಾಲೆಗಳನ್ನು ಜೂನ್ ೩೦ರಂದು ಮುಚ್ಚಿಸಲಾಯಿತು. ಮಳೆ ಬರುವವರೆಗೂ ಗೋಶಾಲೆ ಮುಂದುವರೆಸಲು ಕೋರಿದರೂ ಸಹ ಕೇಳಲಿಲ್ಲ. ಇನ್ನು ಮಾನ್ವಿ ತಾಲ್ಲೂಕಿನ ಪೋತನೂರಿನಲ್ಲಿ ಸುಮಾರು ೨ ಕಿ.ಮೀ. ದೂರದವರೆಗೆ ಹೋಗಿ ನೀರು ತರುತ್ತಾರೆ. ಅಲ್ಲಿನ ಸಮಸ್ಯೆಗೆ ಜಿಲ್ಲಾಡಳಿತ ಸ್ಪಂದಿಸಿಲ್ಲ ಎಂದು ಅವರು ದೂರಿದರು.
ಬರಗಾಲದಲ್ಲಿ ಪ್ರವಾಸ ಮಾಡದೇ ಈಗ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಹಾಗೂ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಪ್ರವಾಸ ಮಾಡುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರವು ಸಂಕಷ್ಟ ಸಮಯದಲ್ಲಿಯೂ ಬಾಕಿ ಉಳಿಸಿಕೊಂಡ ಮನರೇಗಾ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಹಾಘೂ ರಾಜ್ಯ ಸರ್ಕಾರವು ಸೂಕ್ತ ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸುವಂತೆ ಒತ್ತಾಯಿಸಿ ಹೋರಾಟ ರೂಪಿಸಲಾಗಿದೆ ಎಂದು ಅವರು ಹೇಳಿದರು.
ರಾಜ್ಯ ಮಂಡಳಿ ಸದಸ್ಯ ಮೌಲಾ ಮುಲ್ಲಾ ಅವರು ಮಾತನಾಡಿ, ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವಾಗಲೂ ದತ್ತಾತ್ರೇಯ್ ದೇವಸ್ಥಾನಕ್ಕೆ ಭೇಟಿ ನೀಡಿ ಕಾಲಹರಣ ಮಾಡಿದ್ದಾರೆ. ಸಂಕಷ್ಟದ ಸಮಯದಲ್ಲಿ ಪರಿಹಾರ ಕಾರ್ಯಗಳನ್ನು ಸಮರ್ಪಕವಾಗಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಹ ಕಾರ್ಯದರ್ಶಿ ಕೆ.ಎಸ್. ಜನಾರ್ಧನ್, ರಾಜ್ಯ ಮಂಡಳಿ ಸದಸ್ಯ ಪ್ರಸನ್ನ ಪಾಲವನಹಳ್ಳಿ, ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ್ ಮಾಡಿಯಾಳ್, ಹೆಚ್.ಎಂ. ಸಂತೋಷ್, ಪ್ರಭುದೇವ್ ಯಳಸಂಗಿ, ಪದ್ಮಾಕರ್ ಜಾನಿಬ್ ಮುಂತಾದವರು ಉಪಸ್ಥಿತರಿದ್ದರು.