ಕಲಬುರಗಿ; ಕೇಂದ್ರ ಸರಕಾರದ ನವೀಕೃತ ಇಂಧನ ಖಾತೆ ರಾಜ್ಯ ಸಚಿವರಾದ ಶ್ರೀ ಭಗವಂತ ಖೂಬಾ ಅವರು ಮಂಗಳವಾರ ರಾತ್ರಿ ಕಲಬುರಗಿ ನಗರದ ಪ್ರಸಿದ್ಧ ಶ್ರೀ ಶರಣಬಸವೇಶ್ವರ ದೇಗುಲಕ್ಕೆ ಭೇಟಿ ನೀಡಿ ಶ್ರೀ ಶರಣಬಸವೇಶ್ವರ ಮೂರ್ತಿಗೆ ಪೂಜೆ ಸಲ್ಲಿಸಿದರು.
ಕೇಂದ್ರ ಸಚಿವ ಖೂಬಾ ಅವರೊಂದಿಗೆ ಕಲಬುರಗಿ ಲೋಕಸಭಾ ಸಂಸದ ಉಮೇಶ್ ಜಾಧವ್, ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ್, ಬಸವರಾಜ ಮತ್ತಿಮೂಡ್, ಬಿ.ಜಿ. ಪಾಟೀಲ್, ಸಫಾಯಿ ಕರ್ಮಚಾರಿಗಳ ರಾಷ್ಟ್ರೀಯ ಆಯೋಗದ ಮಾಜಿ ಸದಸ್ಯ ಜಗದೀಶ್ ಹಿರೇಮನಿ, ಮಾಜಿ ಶಾಸಕ ದೊಡ್ಡಪ್ಪ ಗೌಡ ಪಾಟೀಲ್ ನರಿಬೋಳ ಸೇರಿದಂತೆ ಇತರರಿದ್ದರು. ಇದಕ್ಕೂ ಮೊದಲು ಶ್ರೀ ಶರಣಬಸವೇಶ್ವರರ ಸನ್ನಿಧಿಗೆ ಪ್ರಾರ್ಥನೆ ಸಲ್ಲಿಸಲು ದೇಗುಲಕ್ಕೆ ಭೇಟಿ ನೀಡಿದರು. ನಂತರ, ಸಚಿವರು ಇತರರೊಂದಿಗೆ ದಾಸೋಹ ಮಹಾಮನೆಗೆ ಭೇಟಿ ನೀಡಿ ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಮಹಾದಾಸೋಹಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಅವರಿಗೆ ಗೌರವ ಸಲ್ಲಿಸಿದರು.
ಪೂಜ್ಯ ಡಾ ಅಪ್ಪಾಜಿ ಅವರು ಕೇಂದ್ರ ಸಚಿವ ಸಂಪುಟದಲ್ಲಿ ಖೂಬಾ ಅವರು ಸಚಿವರಾಗಿದಕ್ಕಾಗಿ ಅಭಿನಂದಿಸಿ ಆಶೀರ್ವದಿಸಿದರು. ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ ದಾಕ್ಷಾಯಿಣಿ ಅವ್ವಾಜಿಯವರಿಗೆ ಸಚಿವರು ಗೌರವ ಸಲ್ಲಿಸಿದರು.
ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಡೀನ್ ಡಾ. ಲಕ್ಷ್ಮಿ ಪಾಟೀಲ್ ಮಾಕಾ, ಡಾ. ಅಲ್ಲಮಪ್ರಭು ದೇಶಮುಖ ಸೇರಿದಂತೆ ಇತರರು ಉಪಸ್ಥಿತರಿದ್ದರು.