ನಾದಪ್ರಿಯ ಶಿವನೆಂಬರು ನಾದಪ್ರಿಯ ಶಿವನಲ್ಲಯ್ಯಾ
ವೇದಪ್ರಿಯ ಶಿವನೆಂಬರು ವೇದಪ್ರಿಯ ಶಿವನಲ್ಲಯ್ಯಾ
ನಾದವ ನುಡಿಸಿದ ರಾವಳಂಗೆ ಅರೆ ಅಯುಷ್ಯವಾಯಿತ್ತು
ವೇದವನೋದಿದ ಬ್ರಹ್ಮನ ಶಿರ ಹೋಯಿತ್ತು
ನಾದಪ್ರಿಯನೂ ಅಲ್ಲ ವೇದಪ್ರಿಯನೂ ಅಲ್ಲ
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವಾ
ದೇವರ ಒಲುಮೆಯಾಗಬೇಕಾದರೆ ಅನೇಕ ಮಹಾಪುರುಷರು ಜ್ಞಾನಮಾರ್ಗ, ಕರ್ಮಮಾರ್ಗ ತೋರಿಸಿದ್ದಾರೆ. ಆದರೆ ಬಸವಾದಿ ಶರಣರು ಎಲ್ಲರಿಗೂ ಸಹಜವಾಗಿ ನಡೆದುಕೊಳ್ಳುವ ಭಕ್ತಿಮಾರ್ಗವನ್ನು ತೋರುತ್ತಾರೆ. ಭಕ್ತಿಯೆಂದರೆ, ಸೃಷ್ಟಿಕರ್ತ ಪರಮಾತ್ಮನ ಮೇಲೆ ಇರುವ ನಿಸ್ಸೀಮ ಪ್ರೀತಿ. ಅನೇಕರು ಶಿವನ ವರ್ಣನೆಯನ್ನು ನಾದಪ್ರಿಯ, ವೇದಪ್ರಿಯ ಎಂದು ಮಾಡಿದ್ದಾರೆ. ನಾದವ ನುಡಿಸಿದ ರಾವಳಂಗೆ ಅರೆ ಆಯುಷ್ಯವಾಯಿತ್ತು. ವೇದನೋದಿದ ಬ್ರಹ್ಮನ ಶಿರ ಹೋಯಿತ್ತು ಎನ್ನುವ ಮೂಲಕ ಬಸವಣ್ಣನವರು ಶಿವ ಭಕ್ತಿಪ್ರಿಯ ಎಂದು ಹೇಳುತ್ತಾರೆ.
ತಮಿಳುನಾಡಿನ ಮಹಾರಾಜನಾದ ಜೋಳರಾಜ ದಿನಾಲು ಪಂಚಪಕ್ವಾನ ಅಡುಗೆಯನ್ನು ಮಾಡಿಕೊಂಡು ಶಿವನಿಗೆ ಅರ್ಪಿಸುವುದಕ್ಕೆ ಶಿವಮಂದಿರಕ್ಕೆ ಹೋಗುತ್ತಿದ್ದ. ಅವನ ಭಕ್ತಿಯನ್ನು ಕಂಡು ಶಿವನು ಆ ನೈವೇದ್ಯವನ್ನು ಸ್ವೀಕರಿಸುತ್ತಿದ್ದನಂತೆ. ಆದರೆ ಒಂದು ದಿವಸ ರಾಜನು ಬರುವುದಕ್ಕಿಂತ ಮುಂಚೆಯೇ ಮಾದಾರ ಚೆನ್ನಯ್ಯ ಅಂಬಲಿಯನ್ನು ತೆಗೆದುಕೊಂಡು ಶಿವನಿಗೆ ಅರ್ಪಿಸುತ್ತಾನೆ.
ಮಾದಾರ ಚೆನ್ನಯ್ಯನ ಭಕ್ತಿಯನ್ನು ಕಂಡು ಶಿವನು ಅದನ್ನು ಸ್ವೀಕರಿಸುತ್ತಾನೆ. ಆಮೇಲೆ ಪ್ರತಿನಿತ್ಯದಂತೆ ಜೋಳರಾಜನು ತಮ್ಮ ಪಂಚಪಕ್ವಾನ ನೈವೇದ್ಯ ಮಾಡಿಕೊಂಡು ಶಿವಮಂದಿರಕ್ಕೆ ಬರುತ್ತಾನೆ. ಅಂದಿನ ದಿವಸ ಶಿವನು ಆ ನೈವೇದ್ಯವನ್ನು ಸ್ವೀಕರಿಸಲಿಲ್ಲ. ಆವಾಗ ರಾಜನು ಪರಿಪರಿಯಾಗಿ ಶಿವನಿಗೆ ಪ್ರಾರ್ಥಿಸುತ್ತಾನೆ. ಆದರೂ ಶಿವನು ನೈವೇದ್ಯ ಸ್ವೀಕರಿಸುವುದಿಲ್ಲ. ಅದಕ್ಕೆ ರಾಜನು ಸಿಟ್ಟಿನಿಂದ ತನ್ನ ಹತ್ತಿರವಿದ್ದ ಖಡ್ಗದಿಂದ ತನ್ನ ಶಿರವನ್ನು ಕಡಿದುಕೊಳ್ಳಲು ನಿರ್ಧರಿಸುತ್ತಾನೆ. ಆಗ ಶಿವನು ಪ್ರತ್ಯಕ್ಷವಾಗಿ ನೀನು ಶಿರವನ್ನು ಕಡಿದುಕೊಳ್ಳಬೇಡಿ ನಿನಗಿಂತ ಮುಂಚೆ ಮಾದಾರ ಚನ್ನಯ್ಯನು ಬಂದು ಅಂಬಲಿಯನ್ನು ಅರ್ಪಿಸಿದ್ದನು.
ಆ ಅಂಬಲಿಯನ್ನು ಕುಡಿದ ನನಗೆ ಎಷ್ಟು ಹಸಿವು ಇಲ್ಲ. ಅದು ಬಹಳಷ್ಟು ರುಚಿಕರವಾಗಿತ್ತು ಎಂದು ನುಡಿಯುತ್ತಾನೆ. ಅದನ್ನು ಕೇಳಿ ರಾಜನಿಗೆ ಆಶ್ಚರ್ಯವಾಗುತ್ತದೆ. ರಾಜ ಮಾದಾರ ಚೆನ್ನಯ್ಯನ ಮನೆಗೆ ಹೋಗಿ ಅವನ ಶಿವಭಕ್ತಿಯನ್ನು ಕಂಡು ಅವನಿಗೆ ಸಾಷ್ಟಾಂಗ ನಮಸ್ಕಾರ ಹಾಕುತ್ತಾನೆ. ಈ ಕಥೆಯ ತಾತ್ಪರ್ಯವೆಂದರೆ, ಶಿವ ಭಕ್ತಿಪ್ರಿಯನು. ಹಾಗಾಗಿ ವಿಶ್ವಗುರುಬಸವಣ್ಣನವರು ತಮ್ಮ ವಚನದಲ್ಲಿ ಶಿವನು ಭಕ್ತಿಪ್ರಿಯ ಎನ್ನುತ್ತಾರೆ.
ಭಕ್ತಿ ನಿಸ್ಕಾಮವಾಗಿರಬೇಕು. ಯಾವುದೇ ಫಲಾಪೇಕ್ಷಯಿಂದ ಭಕ್ತಿಯನ್ನು ಮಾಡಬಾರದು. ನಮ್ಮ ಇಚ್ಚೆ ಆಕಾಂಕ್ಷೆಗಳನ್ನು ಪೂರೈಸುವುದಕ್ಕಾಗಿ ಮಾಡುವ ಭಕ್ತಿ ಅದು ಭಕ್ತಿ ಅಲ್ಲ. ವ್ಯವಹಾರವಾಗುತ್ತದೆ. ಆದರೆ ನಾವು ಗುಡಿಗೆ ಹೋಗಿ ಒಂದು ಟೆಂಗಿನ ಕಾಯಿ ಒಡೆದು ನಮ್ಮ ಬೇಡಿಕೆಗಳ ಪಟ್ಟಿಯನ್ನೇ ಓದುತ್ತೇವೆ. ಆಗ ಪರಮಾತ್ಮ ಅನ್ನುತ್ತಾನೆ, ನೀನು ನನಗಾಗಿ ಬಂದವನಲ್ಲ, ನಿನ್ನ ಬೇಡಿಕೆಗಳನ್ನು ಈಡಲಿಸಕ್ಕೆ ಬಂದಿರುವೆ.
ಅನೇಕ ಗುಡಿ ಗುಂಡಾರಗಳಲ್ಲಿ ದೇವರಿಗೆ ರುದ್ರಾಭೀಷೆಕ, ಜಾವಳ ಕಾರ್ಯಕ್ರಮ ಇತರ ಅನೇಕ ರೀತಿಯ ಪೂಜೆಯ ದರದ ಪಟ್ಟಿಯನ್ನು ತೂಗುಹಾಕಿರುತ್ತಾರೆ. ದೇವಸ್ಥಾನಗಳು ಕಿರಾಣಿ ಅಂಗಡಿಗಳಂತೆ ಆದರೆ ಹೇಗೆ. ಹಾಗಾಗಿ ಬಸವಾದಿ ಶರಣರು ದೇವಸ್ಥಾನಗಳು ತಿರಸ್ಕರಿಸಿ, ದೇಹವೇ ದೇವಾಲಯವನ್ನಾಗಿ ಮಾಡಿಕೊಂಡರು.
ನಾವು ಪರಿಶುದ್ಧವಾದ ಭಕ್ತಿಯನ್ನು ಮಾಡಲು ಯಾವುದೇ ದೇವಸ್ಥಾನಗಳಿಗೆ ಹೋಗುವ ಅವಶ್ಯಕತೆ ಇಲ್ಲ. ಭಕ್ತಿಯನ್ನು ಮಾಡುವುದೆಂದರೆ, ನಮ್ಮೊಳಗಿರುವ ದೇವರ ಅರಿವುವನ್ನು ಮಾಡಿಕೊಳ್ಳುವುದು. ಭಕ್ತಿಯ ಜೊತೆಗೆ ನಮಗೆ ಅರಿವು ಮತ್ತು ಕ್ರಿಯೆ ಇರಬೇಕು. ಅರಿವು ಇಲ್ಲದ ಭಕ್ತಿ ಮೂಢಭಕ್ತಿಯಾಗುತ್ತದೆ. ಬರೀ ಅರಿವು ಇದ್ದರೆ ಸಾಲದು ಅರಿವಿನ ಜೊತೆ ಕ್ರಿಯೆಯು ಬೇಕು. ಕ್ರಿಯೆ ಇಲ್ಲದ ಜ್ಞಾನ ನಿಶಪ್ರಯೋಜಕವಾದದ್ದು. ನಾವು ಜ್ಞಾನ, ಕ್ರಿಯೆ ಅಳವಡಿಸಿಕೊಂಡು ನಿಸ್ಕಾಮಭಕ್ತಿಯನ್ನು ಮಾಡುವ ಮೂಲಕ ದೇವರ ಒಲುಮೆಗೆ ಪಾತ್ರರಾಗೋಣ.