ವಚನ ದರ್ಶನ ಪ್ರವಚನ ಭಾಗ-೧೩

0
14

ಕಟ್ಟಿಗೆಯಲ್ಲಿ ಬೆಂಕಿ ಇದೆ. ನಿಜ ಪ್ರಕಟವಾಗಬೇಕಾದರೆ ಬಾಹ್ಯ ಸಂಪರ್ಕದಿಂದ ಮಾತ್ರ ಒಳಗಿರುವ ಅಗ್ನಿ ಹೊರಹೊಮ್ಮುತ್ತದೆ. ಒಂದು ಕಟ್ಟಿಗೆ ಇನ್ನೊಂದು ಕಟ್ಟಿಗೆ ತೆಗೆದುಕೊಂಡು ತಿಕ್ಕಿದಾಗ ಅಗ್ನಿ ಪ್ರಕಟವಾಗುತ್ತದೆ. ಅಗ್ನಿಯಲ್ಲಿ ಈ ಕಟ್ಟಿಗೆ ಹಾಕಿದಾಗ ಅಗ್ನಿ ರೂಪ ತಾಳುತ್ತದೆ. ಕಟ್ಟಿಗೆಯೊಳಗೆ ಬೆಂಕಿ ಇದೆ. ನಾನು ಬೆಂಕಿ ರೂಪ ಪಡೆಯುತ್ತೇನೆಂದರೆ ಸಾಧ್ಯವಾಗಲಾರದು. ಸ್ವಯಂ ಪ್ರಕಟವಾಗುವುದಿಲ್ಲ. ಅದಕ್ಕೆ ಬೆಂಕಿ ಸ್ಪರ್ಶಬೇಕು ಅಥವಾ ಇನ್ನೊಂದು ಕಟ್ಟಿಗೆಯಾದರೂ ತೆಗೆದುಕೊಂಡು ತಿಕ್ಕಬೇಕು. ಆವಾಗ ಒಳಗಿರುವ ಅಗ್ನಿ ಪ್ರಕಟವಾಗುತ್ತದೆ. ಆ ಅಗ್ನಿಯೊಳಗೆ ಮತ್ತೆ ಕಟ್ಟಿಗೆ ಹಾಕತೊಡಗಿದಾಗ ಅದೆಲ್ಲವೂ ಕಟ್ಟಿಗೆ ತಾನು ಕಳೆದುಕೊಂಡು ಬೆಂಕಿರೂಪ ಪಡೆಯುತ್ತದೆ.

ಅದೇ ರೀತಿಯಾಗಿ ದೇಹವೇ ಒಂದು ಕಟ್ಟಿಗೆ. ದೇಹದೊಳಗೆ ಪರವಸ್ತು ಇದೆ. ಆತ್ಮ ಇದೆ. ಸತ್ಯವಸ್ತುವಿದೆ. ಅದು ತಾನೆ ಹೊರಹೊಮ್ಮುವುದಿಲ್ಲ. ಗುರುವಿನ ಹಸ್ತವಿಟ್ಟು ಒಳಗಿರುವ ಪರಾತ್ಪರ ಪರವಸ್ತು ಹೊರತಂದು ಇಷ್ಟಲಿಂಗ ರೂಪದಲ್ಲಿ ಅಂಗೈಯಲ್ಲಿ ಪ್ರತಿಷ್ಠಾಪಿಸಿದಾಗ ಸಾಧನೆ ಮಾಡುತ್ತ ಹೋದಂತೆ ಕಟ್ಟಿಗೆ ಬೆಂಕಿಯಲ್ಲಿ ಹಾಕಿದಾಗ ಅಗ್ನಿರೂಪ ಪಡೆದಂತೆ ದೇಹವೂ ಅಂಗವೂ ಲಿಂಗರೂಪವಾಗುತ್ತದೆ. ಕಟ್ಟಿಗೆಯಲ್ಲಿ ಬೆಂಕಿ ಇದೆ ನಿಜ. ನೂರು ವರ್ಷ ಹಾಗೆಯಿಟ್ಟರೂ ಒಳಗಿರುವ ಬೆಂಕಿ ಹೊರಬರುವುದಿಲ್ಲ. ಅದೇ ರೀತಿ ನಮ್ಮೊಳಗೆ ಸತ್ಯವಸ್ತು ಇದೆ ನಿಜ. ಆದರೆ ಹೊರಬರಲು ಸಾಧ್ಯವಿಲ್ಲ. ಇಷ್ಟಲಿಂಗದ ಸಂಗದಿಂದ ಹೊರಹೊಮ್ಮುತ್ತದೆ.

Contact Your\'s Advertisement; 9902492681

ಅಂತರಂಗದಲ್ಲಿ ಪ್ರಾಣಲಿಂಗ ಇದೆ. ಆತ್ಮಲಿಂಗವಿದೆ ನಿಜ. ಅದನ್ನು ಹೊರಬರಬೇಕಾದರೆ ಸದ್ಗುರು ಬಂದು ಹಸ್ತಮಸ್ತಕದ ಮೇಲಿಟ್ಟು ಒಳಗಿರುವ ಮಲತ್ರಯ ನಿವಾರಣೆ ಮಾಡಿ ಭಾವಕ್ಕೆ ಭಾವಲಿಂಗ ಸಂಬಂಧ ಮಾಡಿ ಪ್ರಾಣಕ್ಕೆ ಪ್ರಾಣಲಿಂಗ ಸಂಬಂಧ ಮಾಡಿ ಭಾವದಿಂದ ಪ್ರಾಣಕ್ಕೆ ಪ್ರಾಣದಿಂದ ದೃಷ್ಟಿ ಮುಖಾಂತರ ಹೊರತಂದು ಇಷ್ಟಲಿಂಗ ರೂಪದಲ್ಲಿ ಕರಕ್ಕೆ ತಂದಿಟ್ಟಾಗ ಅಂಗಹೋಗಿ ಲಿಂಗರೂಪ ತಾಳುತ್ತದೆ. ಅಂಗ-ಲಿಂಗ ಬೇರೆಯಲ್ಲ ಎರಡು ಒಂದಾಗುತ್ತದೆ.

ನಮ್ಮ ದೇಹದೊಳಗೆ ದೇಹಿ ಇದ್ದಾನೆ. ಅಂದರೆ ಸತ್ಯವಸ್ತು ಇದೆ ಎಂದರೆ ಆನಂದವಾಗುವುದಿಲ್ಲ. ತಾಯಿಯ ಹೊಟ್ಟೆಯಲ್ಲಿ ಶಿಶುವಿದೆ ನಿಜ. ಆದರೆ ತಾಯಿ ಜೋಗುಳ ಹಾಡುವುದಿಲ್ಲ. ಹೊಟ್ಟೆಯಲ್ಲಿದ್ದ ಮಗು ಹೊರಬಂದಾಗ ಮುದ್ದುಕೊಟ್ಟು ಆನಂದವಾಗಿ ಜೋಗುಳ ಹಾಡುತ್ತ ಹಾಡುತ್ತ ಮಗು ಆನಂದವಾಗಿ ಮಲಗುತ್ತದೆ. ತಾಯಿ ಆನಂದವಾಗಿ ಮಲಗುತ್ತಾಳೆ. ಅದೇ ರೀತಿ ನಮ್ಮೊಳಗಿರುವ ಸತ್ಯವಸ್ತು ಲಿಂಗರೂಪ ತಾಳಿ ಗುರುವಿನ ಕಾರುಣ್ಯದಿಂದ ಅಂಗೈಯಲ್ಲಿ ತಂದುಕೊಟ್ಟಾಗ ಲಿಂಗದ ಸುಖ ಅನುಭವಿಸುತ್ತ ಅನುಭವಿಸುತ್ತ ಲಿಂಗವೇ ನಾವಾಗುತ್ತೇವೆ. ಅಂಗವೇ ಇರುವುದಿಲ್ಲ. ಲಿಂಗ ಸ್ವರೂಪವೇ ಆಗುತ್ತೇವೆ. ಲಿಂಗದಲ್ಲಿದ್ದ ಪರಮಾಥ್ಮನ ಅರಿದವಂಗೆ ತಾನೆ ತಾನಾಗುತ್ತಾನೆ. ಏಕೋಭಾವ ಒಡವೆರೆದು ಒಂದಾಗಿ ಲಿಂಗಾಂಗ ಸಾಮರಸ್ಯದ ಸುಖ ಅನುಭವಿಸುತ್ತಾನೆ. ನಾವು ಆ ಲಿಂಗಸುಖ ಅನುಭವಿಸಿ ಶರಣರ ಮಾರ್ಗದಲ್ಲಿ ಸಾಗೋಣ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here