ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಪತ್ರಿಕೋದ್ಯಮ

1
740

ವೈದಿಕಶಾಹಿ ವ್ಯವಸ್ಥೆ ಎನ್ನುವುದು ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ಚಳವಳಿ ಸಮಯದಲ್ಲಿ ಅದು ಕೇವಲ ಹಿಂದೂ ಮಹಾಸಭಾಕ್ಕೆ ಮಾತ್ರ ಮೀಸಲಾಗಿರಲಿಲ್ಲ. ಕಾಂಗ್ರೆಸ್‌ನಲ್ಲೂ ಅದು ನುಸುಳಿಕೊಂಡಿತ್ತು. ಸ್ವಾತಂತ್ರ್ಯ ಚಳವಳಿಯ ನೇತೃತ್ವ ವಹಿಸಿದ್ದ ಮಹಾತ್ಮ ಗಾಂಧೀಜಿಯವರ ಉದಾರವಾದ ನಿಲುವಿನಲ್ಲೂ ಈ ವೈದಿಕಶಾಹಿಯ ಪ್ರಾಧಾನ್ಯತೆ ಕಾಣಬಹುದಾಗಿತ್ತು.

ಗೋಪಾಲಕೃಷ್ಣ ಗೋಕಲೆ ಶಿಷ್ಯ ಗಾಂಧೀಜಿ ನೇತೃತ್ವದಲ್ಲಿ ಸ್ವಾತಂತ್ರ್ಯ ಚಳವಳಿ ಮುಂದುವರಿದಿದ್ದರೂ ಅಲ್ಲಿ ಬಾಲ ಗಂಗಾಧರ ತಿಲಕ್, ಲಾಲಾ ಲಜಪತರಾಯ ಮುಂತಾದವರ ಅಣತಿಯನ್ನೇ ಪಾಲಿಸಲಾಗುತ್ತಿತ್ತು. ಸ್ವತಂತ್ರವಾಗಿದ್ದ ಪ್ರೆಸ್‌ಗಳ ಮೇಲೂ ಅವರದ್ದೇ ಹಿಡಿತವಿತ್ತು. ಇದಕ್ಕಾಗಿಯೇ ಗಾಂಧೀಜಿ ಹರಿಜನ ಎಂಬ ಪತ್ರಿಕೆಯನ್ನು ಆರಂಭಿಸಿದರು. ಆದರೆ ಆ ಪತ್ರಿಕೆಗೂ ಕೂಡ ಹಿಂದುತ್ವದ ಬಗ್ಗೆ ಒಲವಿತ್ತು.

Dr. BR Ambedkar. *** Local Caption *** Dr. BR Ambedkar. Express archive photo
Contact Your\'s Advertisement; 9902492681

ಅಸ್ಪೃಶ್ಯರ ಸಮಸ್ಯೆಗಳ ಕುರಿತು ಚರ್ಚಿಸಲು ಮೀಸಲಾಗಿದ್ದ ಸೋಮವಂಶೀಯ ಮಿತ್ರ, ದಿನಮಿತ್ರ, ಹಿಂದು ನಾಗರಿಕ ಮತ್ತು ವಿಠ್ಠಲ ವಿದ್ವಂಸಕದಂತಹ ಪತ್ರಿಕೆಗಳು ಹುಟ್ಟಿಕೊಂಡಿದ್ದರೂ ಅವು ಬಹುಕಾಲ ಬಾಳಲಿಲ್ಲ. ಮೇಲಾಗಿ ಬಹು ಸಂಖ್ಯಾತ ಬ್ರಾಹ್ಮಣೇತರರ ಸಮಸ್ಯೆಗಳಿಗೆ ಇವು ಹೆಚ್ಚು ಪ್ರಾಧಾನ್ಯತೆ ನೀಡುತ್ತಿದ್ದವು. ಅಸ್ಪೃಶ್ಯರ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅವಕಾಶ ಕಲ್ಪಿಸುವುದು ಅವುಗಳಿಗೆ ಸಾಧ್ಯವಾಗುತ್ತಿರಲಿಲ್ಲ.

ಕಟ್ಟಾ ವಿಚಾರವಾದಿಯೂ, ಪ್ರಗತಿಪರರೂ ಮತ್ತು ಶೋಷಿತರ ಪರವಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ತಮ್ಮ ಜೀವಿತ ಅವಧಿಯಲ್ಲಿ ತಾವು ಅನುಭವಿಸಿದ, ತನ್ನ ಜನ ಅನುಭವಿಸುತ್ತಿರುವ ಘಟನೆಗಳನ್ನು ಹೇಳಿಕೊಳ್ಳಲು, ತಿಳಿಸಲು ಆ ಪತ್ರಿಕೆಗಳಲ್ಲಿ ಮನ್ನಣೆ ಸಿಗುತ್ತಿರಲಿಲ್ಲ. ಬದಲಿಗೆ ಅಂಬೇಡ್ಕರ್‌ರು ಬ್ರಿಟಿಷರ ವಿರುದ್ಧ ಬರೆದ ಲೇಖನಗಳನ್ನು ಮಾತ್ರ ಆ ಪತ್ರಿಕೆಗಳಲ್ಲಿ ಪ್ರಕಟಿಸಲಾಗುತ್ತಿತ್ತು. ಹೀಗಾಗಿ ತಮ್ಮದೇ ಆದ ನಿಲುವು, ವಿಚಾರಧಾರೆ ಪ್ರತಿಪಾದಿಸುವುದಕ್ಕಾಗಿ ಅಂಬೇಡ್ಕರ್ ಅವರು ಪತ್ರಿಕೆಗಳನ್ನು ಆರಂಭಿಸುತ್ತಾರೆ.

ಡಾ. ಬಿ.ಆರ್. ಅಂಬೇಡ್ಕರ್‌ರು ವಿದೇಶದಿಂದ ಉನ್ನತ ಬ್ಯಾರಿಸ್ಟರ್ ಪದವಿ ಪಡೆದು ಭಾರತಕ್ಕೆ ಮರಳಿದಾಗ, ಅಸ್ಪೃಶ್ಯ ಬ್ಯಾರಿಸ್ಟರ್ ಎಂದು ಅವಹೇಳನದ ಮಾತುಗಳನ್ನಾಡುತ್ತಾರೆ. ತನ್ನ ಜನಾಂಗದ ನೋವು-ಕಷ್ಟಗಳನ್ನು ಬಾಲ ಗಂಗಾಧರ ತಿಲಕ್ ಸಂಪಾದಕತ್ವದ ಕೇಸರಿ ಮತ್ತು ಮರಾಠಿ ಪತ್ರಿಕೆಗೆ ಬರೆದು ಕಳುಹಿಸಿದಾಗ ಅದನ್ನು ಅವರು ತಿರಸ್ಕರಿಸಿದರು. ತಮ್ಮ ಪತ್ರಿಕೆಗೆ ಕನಿಷ್ಠ ಜಾಹೀರಾತು ಒದಗಿಸದ ಮನುವಾದಿಗಳ ನಿಲುವಿನಿಂದ ಬೇಸತ್ತ ಅಂಬೇಡ್ಕರ್‌ರಿಗೆ ಪತ್ರಿಕೆ ಆರಂಭಿಸುವುದು ಅನಿವಾರ್ಯವಾಯಿತು. ಆದರೆ ಬಂಡವಾಳದ ಸಮಸ್ಯೆ ಎದುರಾಗುತ್ತದೆ. ಸಣ್ಣ ಪ್ರಮಾಣದ ಬಂಡವಾಳ ಹಾಕಿ ಪತ್ರಿಕೆಯನ್ನು ಆರಂಭಿಸುತ್ತಾರೆ. ಕೊಲ್ಲಾಪುರದ ಛತ್ರಪತಿ ಶಾಹು ಮಹಾರಾಜರು ಪತ್ರಿಕೆಗೆ ನೆರವು ನೀಡುತ್ತಾರೆ.

೧) ಮೂಕ ನಾಯಕ (೧೯೨೦, ಜನವರಿ ೩೧)

೨) ಬಹಿಷ್ಕೃತ ಭಾರತ (೧೯೨೭, ಏಪ್ರಿಲ್ ೩)

೩) ಜನತಾ (೧೯೩೦)

೪) ಪ್ರಬುದ್ಧ ಭಾರತ (೧೯೫೬)

ಮೂಕ ನಾಯಕ:

“ಹೀಗೆಕೆ ನಾನು ಸಂಕೋಚಪಡಬೇಕು

ಯಾವುದೇ ಹಿಂಜರಿಕೆಯಿಲ್ಲದೆ ನಾನು ಮಾತನಾಡುವೆ

ಮೂಕರ ನೋವುಗಳನ್ನು ಯಾರೂ ಅರಿಯರು

ಮಾತನಾಡಲು ಸಂಕೋಚಪಟ್ಟುಕೊಂಡರೆ ಏಳಿಗೆ ಸಾಧ್ಯವಿಲ್ಲ”

ಹೆಸರೇ ಸೂಚಿಸುವಂತೆ ಇದು ಧ್ವನಿ ಇಲ್ಲದವರಿಗೆ ಧ್ವನಿಯಾಯಿತು. ಬಾಯಿ ಇಲ್ಲದವರೆಗೆ ಬಾಯಿಯಾಯಿತು. ಇದು ಮರಾಠಿ ವಾರ ಪತ್ರಿಕೆಯಾಗಿತ್ತು. ಇದರ ಮೊದಲನೆ ಸಂಪಾದಕೀಯ ಬರಹದಲ್ಲಿ ” ಪತ್ರಿಕೆಗಳು ಜಾಹೀರಾತು ಹಿತಾಸಕ್ತಿಗೆ ಸೀಮಿತವಾಗಬಾರದು. ಅಸ್ಪೃಶ್ಯರ ಧ್ವನಿಯಾಗಿ ಹೊರ ಬರಬೇಕು” ಎಂಬುದಾಗಿತ್ತು. ಅದೇ ಧೋರಣೆಯಲ್ಲೇ ಪತ್ರಿಕೆ ಹೊರ ಬಂದಿತು.

ವಾರ್ಷಿಕ ಅಂಚೆ ದರ ಸೇರಿ ಕೇವಲ ೨.೫ ಅಣೆ ಮುಖ ಬೆಲೆ ಹೊಂದಿತ್ತು. ಜಾಹೀರಾತು ದರವೂ ತೀರಾ ಕಮ್ಮಿಯಾಗಿತ್ತು. (ಮೊದಲ ಸಲಕ್ಕೆ ೫ ಅಣೆ, ಎರಡನೆ ಸಲಕ್ಕೆ ೪ ಅಣೆ. ಯಾವಾಗಲೂ ೨.೫ ಅಣೆ ಆಗಿತ್ತು) ಮೂಕ ನಾಯಕ ಪತ್ರಿಕೆ ಆರಂಭಿಸಿದಾಗ ಡಾ. ಅಂಬೇಡ್ಕರ್‌ರಿಗೆ ಕೇವಲ ೨೮ ವರ್ಷಗಳಾಗಿದ್ದವು. ಪತ್ರಿಕೆಯ ಮೊದಲ ಸಂಚಿಕೆಯ ಕೊನೆಯಲ್ಲಿ ಅವರು ತಮ್ಮ ಚಂದಾದಾರರಿಗೆ ನೀಡಿರುವ ಭರವಸೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಒಂದು ವೇಳೆ ಚಂದಾದಾರರು ಸರಿಯಾದ ಬೆಂಬಲ ಬೆಲೆ ನೀಡಿದ್ದೆ ಆದಲ್ಲಿ ಮೂಕ ನಾಯಕ ಪತ್ರಿಕೆ ತನ್ನ ಜನರ ಅಭ್ಯುದಯಕ್ಕೆ ಧೈರ್ಯದಿಂದ ಕೆಲಸ ಮಾಡುವ ಮೂಲಕ ಸರಿದಾರಿ ಏನೆಂಬುದನ್ನು ಅವರಿಗೆ ತೋರಿಸಬಲ್ಲದು. ನಮ್ಮದು ಹುಸಿ ಭರವಸೆಯಾಗಿದ್ದಿಲ್ಲ ಎಂಬುದನ್ನು ನಿಮಗಾಗುವ ಅನುಭವವೇ ಹೇಳಲಿದೆ” ಎಂದು ಬರೆದಿದ್ದರು.

ಬಹಿಷ್ಕೃತ ಭಾರತ:

೧೯೨೭, ಏಪ್ರಿಲ್ ೩ರಂದು ಬಹಿಷ್ಕೃತ ಭಾರತ ಎಂಬ ಮರಾಠಿ ಪಾಕ್ಷಕಿ ಪತ್ರಿಕೆಯನ್ನು ಆರಂಭಿಸಿದರು. ಮೂಕ ನಾಯಕ ಪತ್ರಿಕೆಯಿಂದ ಎಚ್ಚೆತ್ತುಕೊಂಡ ಅಸ್ಪೃಶ್ಯರು ಸಮಾಜದಲ್ಲಿ ನಿತ್ಯ ನಡೆಯುವ ಪ್ರತಿಭಟನೆಗಳಿಗೆ ಪ್ರತಿಭಟನಾತ್ಮಕ ಹೋರಾಟ ನಡೆಸಬೇಕೆಂದಾಗಿತ್ತು. ಈ ಪತ್ರಿಕೆಯ ಮೂಲಕ ವೈಜ್ಞಾನಿಕ, ವೈಚಾರಿಕ, ಸಂಘಟನಾ ಶಕ್ತಿ ಬೆಳೆಸಲಾಯಿತು.

ಈ ಪತ್ರಿಕೆಯಲ್ಲಿ ಅಸ್ಪೃಶ್ಯರ ಗಂಭೀರ ಸಮಸ್ಯೆಗಳು ಪ್ರಾಶಸ್ತ್ಯ ಪಡೆದವು. ಸತ್ಯವಾದ ಇತಿಹಾಸ ಜನರಿಗೆ ತಿಳಿಸುವುದರ ಜತೆಗೆ ಜಾಗೃತಿ ಉಂಟುಮಾಡಲಾಯಿತು. ಹೀಗಾಗಿ ಇಲ್ಲಿ ಪ್ರಕಟವಾಗುವ ಲೇಖನಗಳು ಅನೇಕರನ್ನು ಚುಚ್ಚಲಾರಂಭಿಸಿದವು. ಅಂತೆಯೇ ಡಾ. ಅಂಬೇಡ್ಕರ್‌ರಿಗೆ ಬೆದರಿಕೆ ಹಾಕಲಾಯಿತು. ಬೆಂಕಿಯಲ್ಲಿ ತುಪ್ಪ ಸುರಿಯುವ ಕೇಸರಿ ಗುಣ, ಬಾಲಗಂಗಾಧರ ತಿಲಕ್‌ರ ಪರಂಪರೆಯ ಅಂತರಂಗ, ಗೋಪಾಲರಾವ ಗಣೇಶ ಅಗರಕರ್ ಮತ್ತು ತಿಲಕರ ಭಿನ್ನಾಭಿಪ್ರಾಯಗಳು, ಸಹಭೋಜನಗಳ ಬಗ್ಗೆ ಕುಚೇಷ್ಟೆ ಹೇಳಿಕೆಅಗರಕರ ಅವರ ಸುಧಾಕರ ಪತ್ರಿಕೆಯ ನಿಲುವು, ಹಿಂದು ಪತ್ರಿಕೆಗಳು ನಡೆದುಕೊಂಡು ಬಂದ ರೀತಿ, ತಿಲಕ್‌ರ ಸ್ವರಾಜ್ಯವೇ ನನ್ನ ಜನ್ಮ ಸಿದ್ಧ ಹಕ್ಕು ಎಂಬ ಹೇಳಿಕೆಗೆ ಅಂಬೇಡ್ಕರ್‌ರ ಪ್ರತಿಕ್ರಿಯೆ, ಮನುಸ್ಮೃತಿಯನ್ನು ಸುಟ್ಟು ಹಾಕಿದ ದಿಟ್ಟ ಹೆಜ್ಜೆ ದೇಶದಲ್ಲಿ ವಿವಾದ ಉಂಟು ಮಾಡಿತು. ಇದೆಲ್ಲದರ ವಿಶ್ಲೇಷಣಾತ್ಮಕ ವರದಿ, ಅಸ್ಪೃಶ್ಯರು ಹಾಗೂ ಕಮ್ಯೂನಿಸ್ಟ್ ಕ್ರಾಂತಿ ಪರಿವರ್ತನೆಯ ಮಾರ್ಗ, ಅಸ್ಪೃಶ್ಯರು ಮತ್ತು ಬ್ರಿಟಿಷ್ ಸರ್ಕಾರದ ಕಾರ್ಯ ವೈಖರಿ, ಧೋರಣೆಗಳನ್ನು ಎತ್ತಿ ಹೇಳಿತು. ಭಾರತದಲ್ಲಿದ್ದುಕೊಂಡೇ ಸಮಾಜದ ಮುಖ್ಯ ವಾಹಿನಿಯಿಂದ ಬಹಿಷ್ಕೃತಗೊಂಡ ದಲಿತರನ್ನು ಭಾರತದ ಮುಖ್ಯ ವಾಹಿನಿಗೆ ತರುವುದೇ ಪತ್ರಿಕೆಯ ಮುಖ್ಯ ಉದ್ದೇಶವಾಗಿತ್ತು.

ಜನತಾ ಪತ್ರಿಕೆ:

ದೇವರಾವ ನಾಯಕ ಅವರ ಸಂಪಾದಕತ್ವದಲ್ಲಿ ೧೯೩೦ರಲ್ಲಿ ಪ್ರಾರಂಭವಾದ ಜನತಾ ಪತ್ರಿಕೆಯ ಬೆನ್ನೆಲುಬು ಡಾ. ಬಿ.ಆರ್. ಅಂಬೇಡ್ಕರ್ ಆಗಿದ್ದರು. ಹೆಸರಿಗೆ ತಕ್ಕಂತೆ ಸರ್ವ ಜನರ ಸಂಕಷ್ಟಗಳನ್ನು ಹೇಳಿ ಆ ಮೂಲಕ ಜನಪರ ಪರಂಪರೆ ಮತ್ತು ಜನಪರ ಜೀವನ ಸಂಸ್ಕೃತಿ ಪರವಾದ ಜನಾಂದೋಲನ ಪ್ರಾರಂಭಿಸಿತು. ಇದನ್ನು ಸೂಕ್ಮವಾಗಿ ಅರಿತ ಹಿಂದುಗಳು ಅಂಬೇಡ್ಕರ್ ಅವರ ಕ್ರಾಂತಿಕಾರಿ ವಿವಚಾರಗಳನ್ನು ಅರಗಿಸಿಕೊಳ್ಳಬೇಖಾದ ಅನಿವಾರ್ಯತೆಯನ್ನು ಹುಟ್ಟು ಹಾಕಿತು. ಜನರ ಕಷ್ಟ-ನಷ್ಟಗಳಿಗೆ ಇದು ವೇದಿಕೆಯಾಯಿತು. ಆಮ್ ಆದ್ಮಿಗೆ ನ್ಯಾಯ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.

ಪ್ರಬುದ್ಧ ಭಾರತ:

ಅಂಬೇಡ್ಕರ್‌ರ ಹಿರಿಯ ಮಗ ಯಶವಂತರಾವ ಅಂಬೇಡ್ಕರ್ ೧೯೫೬ರಲ್ಲಿ ಈ ಪತ್ರಿಕೆಯ ಸಂಪಾದಕರಾಗಿ ಕಾರ್ಯ ನರ್ವಹಿಸುತ್ತಾರೆ. ಬುದ್ಧನ ಮಾರ್ಗದಲ್ಲಿ ಅಖಂಡ ಭಾರತವನ್ನು ತೆಗೆದುಕೊಂಡು ಹೋಗುವುದೇ ಈ ಪತ್ರಿಕೆಯ ಪ್ರಮುಖ ಉದ್ದೇಶವಾಗಿತ್ತು. ಕಾರ್ಲ್ ಮಾರ್ಕ್ಸ ಸಿದ್ಧಾಂತವನ್ನು ಅಧ್ಯಯನ ಮಾಡಿದ್ದ ಅಂಬೇಡ್ಕರ್ ಬುದ್ಧನ ಮಾರ್ಗದಲ್ಲಿ ಪ್ರಬುದ್ಧತೆಯಿದೆ ಎಂಬುದನ್ನು ಮನಗಂಡರು. ಇಡೀ ಭಾರತವನ್ನು ಬುದ್ಧ ಮಾರ್ಗದಲ್ಲಿ ತೆಗೆದುಕೊಂಡು ಹೋಗುವುದೇ ಅವರ ಆಶಯವಾಗಿತ್ತು. ವ್ಯಕ್ತಿಗತ ಉದ್ದಾರದ ಜತೆಗೆ ದೇಶದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರೂ ಪ್ರಬುದ್ಧರಾಗಬೇಕು ಎಂಬುದು ಈ ಪತ್ರಿಕೆಯ ಪ್ರಮುಖ ಧೋರಣೆಯಾಗಿತ್ತು.

ಅಂಬೇಡ್ಕರ್ ಬರಹದ ದಾಟಿ:

ತಾವು ನಂಬಿಕೊಂಡು ಬಂದಿದ್ದ ವಿಚಾರಗಳನ್ನು ನೇರವಾಗಿ, ಸ್ಪಸ್ಟವಾಗಿ ಹೇಳುತ್ತಿದ್ದರು. ಅವರ ಲೇಖನಗಳು ವಾಗ್ವಾದ, ಸಂವಾದ ಸ್ವರೂಪದಲ್ಲಿರುತ್ತಿದ್ದವು. ಜನರ ಪ್ರಜ್ಞೆ ಬಡಿದೆಬ್ಬಿಸುವಂತಿದ್ದವು. ಪತ್ರಿಕೆಗಳನ್ನು ಆರಂಭಿಸುವ ಮೂಲಕ ಅವರು ಸಾಮಾಜಿಕ ಕ್ರಾಂತಿ ಮಾಡಿದರು.

ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರೂ, ಬಾಲ ಗಂಗಾಧರ ತಿಲಕರಿಗೆ ರಾಜಕೀಯ ಸ್ವಾತಂತ್ರ್ಯ ಪಡೆಯುವುದು ಮುಖ್ಯವಾಗಿದ್ದರೆ, ನೇತಾಜಿ ಸುಭಾಶ್ಚಂದ್ರ ಬೋಸ್, ಲಾಲ್, ಬಾಲ್, ಪಾಲರಿಗೆ ಕ್ರಾಂತಿಕಾರಿಗಳ ಕೈಯಲ್ಲಿ ಸ್ವಾತಂತ್ರ್ಯ ದೊರೆಬೇಕು ಎಂಬುದಿತ್ತು. ಆದರೆ ಅಂಬೇಡ್ಕರ್‌ರಿಗೆ ಕೇವಲ ರಾಜಕೀಯ ಸ್ವಾತಂತ್ರ್ಯ ಬೇಕಾಗಿರಲಿಲ್ಲ. ಸಾಮಾಜಿಕ ಸ್ವಾತಂತ್ರ್ಯ ಅವರಿಗೆ ಮುಖ್ಯವಾಗಿತ್ತು. ಇದೇ ಹಿನ್ನೆಲೆಯಲ್ಲಿ ಅವರು ಪತ್ರಿಕೆಗಳನ್ನು ಆರಂಭಿಸಿ ಜನಜಾಗೃತಿ ಮೂಡಿಸಿದರು.

ಡಾ. ಬಿ.ಆರ್. ಅಂಬೇಡ್ಕರ್‌ರು ಈ ಪತ್ರಿಕೆಗಳಲ್ಲಿ ತಮ್ಮ ಪ್ರಖರವಾದ, ಸತ್ಯವಾದ ಹಾಗೂ ನ್ಯಾಯಪರವಾದ ವಿಚಾರಗಳನ್ನು ಹೇಳುತ್ತಿದ್ದರು. ಆದರೆ ಇವುಗಳಿಗೆ ಪ್ರಸಾರದ ಮಿತಿ ಇತ್ತು. ಬಾಬಾ ಸಾಹೇಬರು ಯಾರಿಗೆ ವಿಚಾರಗಳನ್ನು ಮುಟ್ಟಿಸಬೇಕೆಂದಿದ್ದರೋ ಅವರಿಗೆ ಓದು-ಬರಹ ಬರುತ್ತಿರಲಿಲ್ಲ. ಮೇಲಾಗಿ ಅವರಿಗೆ ಪತ್ರಿಕೆಗಳನ್ನು ಕೊಳ್ಳುವ ಶಕ್ತಿ ಇರಲಿಲ್ಲ. ಪತ್ರಿಕೆ ಕೊಳ್ಳುವ ಶಕ್ತಿ ಇರುವ ಜನರಿಗೆ ಡಾ. ಬಾಬಾ ಸಾಹೇಬರ ವಿಚಾರಗಳು ಬೇಕಿರಲಿಲ್ಲ.

ಅಂತೆಯೇ ಅವರು ತಮ್ಮ ಪತ್ರಿಕೆಯ ಪ್ರಸರಣಕ್ಕಾಗಿ ಮತ್ತೊಂದು ಹೊಸ ದಾರಿ ಕಂಡುಕೊಂಡಿದ್ದರು. ಕೊಲ್ಲಾಪುರದ ಛತ್ರಪತಿ ಶಾಹೂ ಮಹಾರಾಜರು ಈ ಕೆಲಸದಲ್ಲಿ ಅವರಿಗೆ ಸಾಥ್ ನೀಡಿದ್ದರು. ಅವರೇ ಹಣಕೊಟ್ಟು ಒಬ್ಬ ವ್ಯಕ್ತಿಯನ್ನು ನೇಮಿಸಿದ್ದರು. “ಬಾಬಾ ಸಾಹೇಬರ ಅನುಯಾಯಿಗಳಾದವರು, ಪತ್ರಿಕೆ ಓದಲು ಬರುವವರು ಅಕ್ಷರ ಬಾರದವರ ಎದುರಿಗೆ ಕುಳಿತು ಜೋರಾಗಿ ಓದಬೇಕು. ಉಳಿದವರು ಕೇಳಬೇಕು. ಇದು ಪಾರಾಯಣ ರೀತಿಯಲ್ಲಿ ನಡೆಯಬೇಕು ಎಂದು ಅಂಬೇಡ್ಕರ್‌ರು ತಾವು ಹೋದಲ್ಲಿ ಬಂದಲ್ಲಿ ಸದಾ ಹೇಳುತ್ತಿದ್ದರು.

ಪತ್ರಿಕೋದ್ಯಮ ಕುರಿತು ಅಂಬೇಡ್ಕರ್ ಅಭಿಪ್ರಾಯ:

*ಭಾರತದಲ್ಲಿ ಒಮ್ಮೆ ಪತ್ರಿಕೋದ್ಯಮವು ಒಂದು ವೃತ್ತಿಯಾಗಿತ್ತು. ಈಗ ಅದು ವ್ಯಾಪಾರವಾಗಿದೆ. ಸಾಬೂನು ಉತ್ಪಾದಿಸುವುದಕ್ಕಿಂತಲೂ ಹೆಚ್ಚಿನ ನೈತಿಕ ಹೊಣೆ ಅದಕ್ಕಿಲ್ಲ.

*ನಿಮ್ಮ ಕೈಯಲ್ಲೊಂದು ಮಾಧ್ಯಮವಿದ್ದರೆ (ಪತ್ರಿಕೆ ಅಥವಾ ಟಿವಿ ಮಾದ್ಯಮ) ರಾತೋರಾತ್ರಿ ಒಬ್ಬ ಹೀರೋನನ್ನು ತಯಾರಿಸಬಹುದು.

* ಭಾರತದಲ್ಲಿ ಹಿಂದೂಗಳು ಅಸ್ಪೃಶ್ಯರ ಮೇಲೆ ನಡೆಸುತ್ತಿರುವ ದೌರ್ಜನ್ಯ-ದಬ್ಬಾಳಿಕೆಗಳನ್ನು ಕಿಂಚತ್ ಬಹಿರಂಗಪಡಿಸಿದ್ದೇ ಆದರೆ ಇಡೀ ಜಗತ್ತಿನ ದೃಷ್ಟಿಯಲ್ಲಿ ತಮ್ಮ ಸ್ವಾತಂತ್ರ್ಯದ ಧ್ಯೇಯಕ್ಕೆ ಇದರಿಂದ ಸಂಪೂರ್ಣ ಹಾನಿಯಾಗಬಹುದು ಎಂಬುದನ್ನು ಅರಿತ ಹಿಂದೂಗಳ ಸ್ವಾಮ್ಯದಲ್ಲಿರುವ ಮಾಧ್ಯಮಗಳು ಇದನ್ನು ಪ್ರಚುರಪಡಿಸುವುದಿಲ್ಲ.

* ಪತ್ರಿಕೋದ್ಯಮವು ಭಾರತದಲ್ಲಿ ಒಂದು ವೃತ್ತಿಯಾಗಿ ಪ್ರಾರಂಭವಾಯಿತು. ಆದರೆ ಇಂದು ವಾಣಿಜ್ಯ ಹಿತಾಸಕ್ತಿಗಳ ಕಪಿಮುಷ್ಠಿಯಲ್ಲಿ ಸಿಲುಕಿ ಲಾಭಕೋರತನದ ಪ್ರತೀಕವಾಗಿ ಉಳಿದಿದೆ.

* ನಮ್ಮ ಪತ್ರಿಕೆಗಳು ಅವರಿಗೆ ತಮ್ಮದೇ ಆದ ರಾಗ-ದ್ವೇಷಗಳಿವೆ. ಅವರ ತೀರ್ಪುಗಳು ಎಂದೂ ಸುಸಂಬದ್ಧವಾಗಿರದೆ ತಮಗೆ ತಿಳಿದಂತೆ ಪ್ರಕಟಿಸುತ್ತಾರೆ. ನಿಜಾಂಶವನ್ನು ಅರಿಯುವ ಹವ್ಯಾಸ ಕಡಿಮೆ ಎಂದರೂ ಸರಿಯೇ, ತಮಗೆ ಬೇಕಾದವರನ್ನು ಹೊಗಳಿ ಬರೆಯುವುದು ಪತ್ರಿಕೆಗಳ ರೀತಿ. ಅದನ್ನು ಬದಲಾಯಿಸಲಾಗದು. ಇದಕ್ಕೆ ನನ್ನದೇ ಉದಾಹರಣೆ.

* ಗುಲಾಮಗಿರಿಯ ಬಲಿಪಶುಗಳಾಗಿರುವ ಜನಸಮೂಹವನ್ನು ಸ್ವಾತಂತ್ರ್ಯ ಮತ್ತು ಸ್ವಾಭಿಮಾನದೆಡೆಗೆ ಮುನ್ನಡೆಸಬಲ್ಲ ಬದ್ಧ ಮತ್ತು ದಿಟ್ಟ ಪತ್ರಿಕೋದ್ಯಮ ಭಾರತದಂತಹ ಅಭಿವೃದ್ಧಿಶೀಲ ದೇಶದಲ್ಲಿ ಅತ್ಯವಶ್ಯಕವಾಗಿದೆ.

 

ಶಿವರಂಜನ್ ಸತ್ಯಂಪೇಟೆ

ವಿಳಾಸ: ಬಸವ ಮಾರ್ಗ, ಪ್ಲಾಟ್ ನಂ. ೧೯

ನೃಪತುಂಗ ಕಾಲನಿ, ಶಹಾಬಾದ್ ರಸ್ತೆ

ಪೋಸ್ಟ್: ಕಲಬುರಗಿ-585105

ಮೊಬೈಲ್: 9448204548

ಈಮೇಲ್:shivaranjansatyampet@gmail.com

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here