ಜೇವರ್ಗಿ: ಜೇವರ್ಗಿ ಮತಕ್ಷೇತ್ರದ ಹಂಗರಗಾ ಬಿ, ಸೈದಾಪುರ ಮತ್ತು ಹಾಲಗಡ್ಲಾ ಸೀಮೆಯಲ್ಲಿ ಬರುವ 26 ಹಳ್ಳಿಗಳ ಜನ ಬುಧವಾರ ತಾಲೂಕಿನ ರೈತರ ಭಾಗ್ಯದ ಬಾಗಿಲು ತೆರೆಯುವಂತಹ ಮಹತ್ವದ ಯೋಜನೆಯೊಂದರ ಭೂಮಿ ಪೂಜೆಯ ಐತಿಹಾಸಿಕ ಗಳಿಗೆಗೆ ಸಾಕ್ಷಿಯಾದರು.
ಮಲ್ಲಾಬಾದ್ ಏತ ನೀರಾವರಿ ಯೋಜನೆಯ ಮುಖಾಂತರ ಹಂಗರಗಾ ಬಿ, ಸೈದಾಪುರ ಮತ್ತು ಹಾಲಗಡ್ಲಾ ಕೆರೆ ತುಂಬುವ ಅಂದಾಜು 74. 36 ಕೋಟಿ ರು. ವೆಚ್ಚದ ಯೋಜನೆಗೆ ಈ ದಿನ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ, ಜೇವರ್ಗಿ ಶಾಸಕರಾದ ಡಾ. ಅಜಯ್ ಸಿಂಗ್ ಕರ್ಕಿಹಳ್ಳಿ ಹಾಗೂ ಇಜೇರಿಯಲ್ಲಿ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ನಂತರ ಇಜೇರಿಯ ಬಸ್ ನಿಲ್ದಾಣದ ಬಳಿ ಆಯೋಜಿಸಲಾಗಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಶಾಸಕ ಡಾ. ಅಜಯ್ ಸಿಂಗ್ ಕೃಷ್ಣಾ ಭಾಗ್ಯ ಜಲ ನಿಗಮದ ಅಡಿಯಲ್ಲಿನ ಈ ಮಹತ್ವಕಾಂಕ್ಷಿ ಯೋಜನೆ ಜೇವರ್ಗಿ ತಾಲೂಕಿನ ಬರ ಪೀಡಿತ ಸೀಮೆಯ 26 ಹಳ್ಳಿಗಳ 16, 722 ಹೆಕ್ಟರ್ ಭೂ ಪ್ರದೇಶದಲ್ಲಿ ಹಸಿರು ಚಿಗುರಿಸಲಿದೆ. ಈಗಾಗಲೇ ಹಸಿರು ಕ್ರಾಂತಿಯ ದಾರಿಯಲ್ಲಿರುವ ಜೇವರ್ಗಿ ತಾಲೂಕು ಈ ಬಹುಕೋಟಿ ಮೊತ್ತದ ಕೆರೆ ತುಂಬುವ ಯೋಜನೆಯೊಂದಿಗೆ ಹಸಿರು ಕ್ರಾಂತಿಯತ್ತ ಮತ್ತೂ ಒಂದು ಹೆಜ್ಜೆ ಮುಂದೆ ಇಟ್ಟಂತಾಗಿದೆ ಎಂದು ಹೇಳಿದರು.
4 ಟಿಎಂಸಿ ನೀರಿನ ಹಂಚಿಕೆಯ ಈ ಯೋಜನೆಯಿಂದ ಹಂಗರಗಾ ಬಿ, ಸೈದಾಪುರ ಮತ್ತು ಹಾಲಗಡ್ಲಾ ಕೆರೆ ತುಂಬಿ ತುಳುಕಲಿವೆ. ರೈತರ ಹೊಲಗಳಿಗೇ ಗಂಗೆ ಹರಿದು ಬರಲಿದ್ದಾಳೆ. ಈ ಯೋಜನೆಯ ಅನುಷ್ಠಾನದಲ್ಲಿ ಅನೇಕ ರೈತರ ಹೊಲಗಳ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇದಕ್ಕಾಗಿ ಪರಿಹಾರ ಹಣ ನೀಡಲಾಗುತ್ತದೆ. ರೈತರ ಪಾಲ್ಗೊಳ್ಳುವಿಕೆ ಇದ್ದರೆ ಮಾತ್ರ ಇಂತಹ ಬೃಹತ್ ನೀರಾವರಿ ಯೋಜನೆಗಳು ಕೈಗೂಡುತ್ತವೆ. ನೀರು ಜೀವಜಲ, ರೈತರು ಅದನ್ನು ಸರಿಯಾಗಿ ಬಳಸೋದನ್ನ ಕಲಿತುಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಶಾಸಕರು ಇಜೇರಿಯಲ್ಲಿ 65 ಲಕ್ಷ ರು ವೆಚ್ಚದ ಮೇಲ್ಮಟ್ಟದ ನೀರು ಸಂಗ್ರಹಾಗಾರ ಕಾಮಗಾರಿ ಹಾಗೂ 216 ಲಕ್ಷ ರು ಮೊತ್ತದ ಮನೆಗಳಿಗೆ ನಲ್ಲಿ ನೀರು ಒದಗಿಸುವ ಯೋಜನೆಗೆ ಚಾಲನೆ ನೀಡಿದರಲ್ಲದೆ, ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿದರು. ಕರ್ಕಿಹಳ್ಳಿ ಗ್ರಾಪಂ ಅಧ್ಯಕ್ಷೆ ಭಾಗಮ್ಮ ಬೆಣ್ಣೂರ, ಇಜೇರಿ ಗ್ರಾಪಂ ಅಧ್ಯಕ್ಷೆ ಸೀತಾಬಾಯಿ ಕಟ್ಟೀಮನಿ, ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನ ಕಾಂಗ್ರೆಸ್ ಮುಖಂಡರು, ಗ್ರಾಮದ ಹಿರಿಯರು ಸಮಾರಂಭದಲ್ಲಿ ಹಾಜರಿದ್ದರು.
26 ಹಳ್ಳಿಗಳ 16 ಸಾವಿರ ಹೆಕ್ಟರ್ ನೀರಾವರಿ: ಈ ಕೆರೆ ತುಂಬುವ ಯೋಜನೆಯಿಂದಾಗಿ ಜೇವರ್ಗಿ ತಾಲೂಕಿನ 26 ಹಳ್ಳಿಗಳ 16 ಸಾವಿರ ಹೆಕ್ಟರ್ ಭೂಭಾಗ ನೀರಾವರಿಗೊಳಪಡಿಲಿದ್ದು ವಿವರ (ಹೆಕ್ಟರ್‍ಗಳಲ್ಲಿ) ಹೀಗಿದೆ.
ಸೈದಾಪುರ- 80. 22 ಹೆಕ್ಟರ್, ಕುಕನೂರ್- 569 , ಹಿರೇ ಹಂಗರಗಾ- 885, ಕರ್ಕಿಹಳ್ಳಿ- 532, ಯಲಗೋಡ- 1080, ಗೋಗಿಹಾಳ- 250, ನಂದಿಹಳ್ಳಿ- 412 , ಜವಳಗಾ- 383, ಆಲೂರ- 1941, ಗೊಬ್ಬೂರವಾಡಿ- 472, ಮುತ್ತಕೋಡ- 344, ನೀರಲಕೋಡ್- 263, ಸಾಥಖೇಡ- 14, 46, ಮಾಡಗಿ- 930, ಕಾಖಂಡಕಿ- 492, ನೆರಡಗಿ- 333, ಇಜೇರಿ- 284, ಹಾಲಗಡ್ಲಾ- 828, ಸಿಗರಥ ಹಳ್ಳಿ- 242, ಯಾಲವಾರ- 1398, ಕಾಸರಬೋಸಗಾ- 078, ಚಿಗರಳ್ಳಿ- 66. 57, ಸೋಮನಾಥಹಳ್ಳಿ- 260, ಅಣಜಗಿ- 186, ವರವಿ- 439, ಔರಾದ್- 55. 26.