ಸುರಪುರ: ನಗರದ ಜಿಲ್ಲಾ ಪಂಚಾಯತಿ ಕಚೇರಿ ಬಳಿಯಲ್ಲಿನ ರೇಣುಕಾ ಫೋಟೊ ಸ್ಟುಡಿಯೋಗೆ ಬೆಂಕಿ ಬಿದ್ದು ಅಪಾರ ಪ್ರಮಾಣದಲ್ಲಿ ನಷ್ಟವುಂಟಾಗಿರುವ ಘಟನೆ ಶನಿವಾರ ತಡರಾತ್ರಿ ಜರುಗಿದೆ.
ರಾತ್ರಿ ಸ್ಟುಡಿಯೋ ಕೆಲಸ ಮುಗಿಸಿ ಬಂದ್ ಮಾಡಿಕೊಂಡು ಮನೆಗೆ ಹೋಗಲಾಗಿದೆ,ಆದರೆ ತಡರಾತ್ರಿ ೨ ಗಂಟೆಯ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ.ನಂತರ ಸುದ್ದಿ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದರು,ಆಗಲೇ ಎಲ್ಲಾ ವಸ್ತುಗಳು ಸುಟ್ಟು ಭಸ್ಮವಾಗಿವೆ.ಸ್ಟುಡಿಯೋದಲ್ಲಿ ಆಧುನಿಕ ತಂತ್ರಜ್ಞಾನವುಳ್ಳ ಕ್ಯಾಮೆರಾಗಳು,ಡ್ರೋಣ್ ಕ್ಯಾಮೆರಾ,ಪ್ರಿಂಟರ್,ಸ್ಕ್ಯಾನರ್,ಕಂಪ್ಯೂಟರ್,ಹಾರ್ಡ್ ಡಿಸ್ಕ್ ಸೇರಿದಂತೆ ಸುಮಾರು ೧೦ ಲಕ್ಷ ರೂಪಾಯಿಗಳ ವಸ್ತುಗಳು ಸುಟ್ಟು ಭಸ್ಮವಾಗಿವೆ ಎಂದು ಮಾಲೀಕ ರವಿ ಹುಲಿಕಲ್ ಮಾಹಿತಿ ನೀಡಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆಯಷ್ಟೆ ಎರಡು ಲಕ್ಷ ರೂಪಾಯಿಗಳ ನೂತನ ಕ್ಯಾಮೆರಾ ತರಲಾಗಿತ್ತು ಎಂದು ಹೇಳಿದ್ದು ಎಲ್ಲವು ಸುಟ್ಟು ಹೋಗಿವೆ,ಸಾಲ ಮಾಡಿ ಸ್ಟುಡಿಯೋ ನಡೆಸಲಾಗುತ್ತಿತ್ತು ಈಗ ಸಾಲ ಹೇಗೆ ತೀರಿಸುವುದು ಎಂದು ತಿಳಿಯದಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಅಲ್ಲದೆ ಸರಕಾರ ನಮ್ಮ ನೆರವಿಗೆ ಬರಬೇಕೆಂದು ವಿನಂತಿಸಿದ್ದಾರೆ.
ಬೆಂಕಿ ಶಾರ್ಟ್ ಸರ್ಕ್ಯೂಟ್‌ನಿಂದ ಬಿದ್ದಿದೆಯಾ ಅಥವಾ ಯಾರಾದರೂ ದುಷ್ಕರ್ಮಿಗಳು ಬೆಂಕಿ ಹಾಕಿದ್ದಾರಾ ಎನ್ನುವ ಅನುಮಾನವಿದೆ ಎಂದು ಹೇಳುತ್ತಿದ್ದು ಈ ಕುರಿತು ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಲ್ಲದೆ ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮ ಲೇಕಪಾಲಕ ಪ್ರದೀಪಕುಮಾರ ನಾಲ್ವಡೆ ಇತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಘಟನೆಯ ಕುರಿತು ಶಾಸಕರಾದ ನರಸಿಂಹ ನಾಯಕ ರಾಜುಗೌಡ ಬೇಸರ ವ್ಯಕ್ತಪಡಿಸಿದ್ದಾರೆ.ಅಲ್ಲದೆ ಸಾಂತ್ವಾನ ಹೇಳಿ ೧೦ ಸಾವಿರ ರೂಪಾಯಿಗಳ ನೆರವು ನೀಡಿದ್ದಾರೆ.ಈ ಸಂದರ್ಭದಲ್ಲಿ ಮುಖಂಡರಾದ ಶಂಕರ ನಾಯಕ,ಜಯರಾಮ್ ನಾಯಕ,ಶ್ರೀನಿವಾಸ ನಾಯಕ ದರಬಾರಿ,ಮಲ್ಲು ದಂಡಿನ್,ರವಿಕುಮಾರ ನಾಯಕ ಬೈರಿಮಡ್ಡಿ,ರಮೇಶಗೌಡ ಗುತ್ತೇದಾರ,ಬಸವರಾಜ ಮುಷ್ಠಳ್ಳಿ ಸೇರಿದಂತೆ ಅನೇಕರು ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ.