ಕಲಬುರಗಿ: ಭೂಕಂಪದಿಂದ ನಲುಗಿದ ಪ್ರದೇಶಕ್ಕೆ ಭೇಟಿ ನೀಡಿ ಜನರ ಸಂಕಷ್ಟ ಆಲಿಸಿದ ಮಾಜಿ ಮುಖ್ಯಮಂತ್ರಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗಡಿಕೇಶ್ವರ ಗ್ರಾಮದಿಂದ ಕಂದಾಯ ಇಲಾಖೆಯ ಸಚಿವ ಆರ್. ಅಶೋಕ ಅವರಿಗೆ ಕರೆ ಮಾಡಿ ಸೂಕ್ತ ವ್ಯವಸ್ಥೆ ಕಲ್ಪಿಸಿ ಎಂದು ಕೇಳಿಕೊಂಡಿದ್ದಾರೆ.
3-4 ವರ್ಷದಿಂದ ಭೂಮಿಯಿಂದ ಸತತವಾಗಿ ಸದ್ದು ಬರುತ್ತಿದ್ದು, ಜನ ರೋಸಿ ಹೋಗಿದ್ದಾರೆ. ಕಳೆದ 15 ದಿನಗಳಿಂದ ಸದ್ದಿನೊಂದಿಗೆ ಭೂಕಂಪನದ ಅನುಭವ ಸಹ ಆಗಿದೆ.ಇದರಿಂದ ತೊಂದರೆ ಅನುಭವಿಸಿರುವ ಕಾರಣ ಈಗಾಗಲೇ ಶೇ. 75 ರಷ್ಟು ಜನ ಊರು ತೊರೆದಿದ್ದಾರೆ. ಇರುವ ಜನರು ಆತಂಕದಿಂದ ದಿನ ಕಳೆಯುತ್ತಿದ್ದಾರೆ. ಇವರಿಗೆ ತಾತ್ಕಾಲಿಕ ಶೆಡ್ ನಿರ್ಮಿಸಿಕೊಟ್ಟು ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕು. ಊಟ, ಬಟ್ಟೆ ಬೆಡ್‌ಶಿಟ್ ಸೇರಿದಂತೆ ಜೀವನಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ನೀಡುವ ವ್ಯವಸ್ಥೆ ತಕ್ಷಣ ಮಾಡುವಂತೆ ಹೇಳಿದರು.
ಚಿಂಚೋಳಿ, ಕಾಳಗಿ, ಸೇಡಂ ತಾಲೂಕಿನ ಬಹುತೇಖ ಗ್ರಾಮಗಳಲ್ಲಿ ಭೂಕಂಪನ ಆಗಿದ್ದು, ರಿಕ್ಟರ್ ಮಾಪನದಲ್ಲಿ 4.1 ತೀವ್ರತೆ ದಾಖಲಾಗಿದೆ. ಇದರಿಂದ ಕಲಬುರಗಿ ಜಿಲ್ಲೆಯ ಜನರು ಆತಂಕದಲ್ಲಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ಅವರು, ಹಾಗೂ ಜಿಲ್ಲಾ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾದ ಜಗದೇವ್ ಗುತ್ತೇದಾರ್ ಜೀವರ್ಗಿ ಶಾಸಕರಾದ ಅಜಯ್ ಸಿಂಗ್, ಅಳಂದ ಮಾಜಿ ಎಂ ಎಲ್ಎ ಆದ ಬಿಆರ್ ಪಾಟೀಲ್, ಚಿಂಚೋಳಿಯ ಕಾಂಗ್ರೆಸ್ ಮುಖಂಡರಾದ ಸುಭಾಶ್ ರಾಥೋಡ್, ಕಾಂಗ್ರೆಸ್ ಮುಖಂಡರಾದ ವಿಜಯಕುಮಾರ್ ಜಿ ರಾಮಕೃಷ್ಣ , ಕಲ್ಬುರ್ಗಿಯ ಕಾಂಗ್ರೆಸ್ ಪಕ್ಷದ ಮುಖಂಡರಾದ ಅಲ್ಲಂಪ್ರಭು ಪಾಟೀಲ್, ಮಾಜಿ ಎಂಎಲ್ಸಿ ಯಾದ ತಿಪ್ಪಣ್ಣಪ್ಪ ಕಮಕನೂರ, ಸೇಡಂ ಮುಧೋಳ ಚಿಂಚೋಳಿ ಹಾಗೂ ಕೊಡ್ಲಿ ಕಾಳಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುಗಳು, ಅನೇಕ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರುಗಳು, ಕಾಂಗ್ರೆಸ್ ಪಕ್ಷದ ಯುವಕರು ಹಾಗೂ ಅಭಿಮಾನಿಗಳು ಪಾಲ್ಗೊಂಡಿದ್ದರು.