ಮೈಸೂರು ದಸರಾ ಎಷ್ಟೊಂದು ಸುಂದರ

0
36

ದಸರಾ ಹಬ್ಬವು ಸುಮಾರು 9 ದಿನಗಳ ಕಾಲ ನಡೆಯುವ ಸಲುವಾಗಿ ಈ ಹಬ್ಬವನ್ನು ನವರಾತ್ರಿ ಎಂದು ಕರೆಯುವವರು ಹಾಗೂ ಒಂದು ಹಿಂದೂ ಹಬ್ಬವು . ಈ ಹಬ್ಬ ಬಂತೇದರೆ ಸಾಕು ಎಲ್ಲರೂ ಅತ್ಯಂತ ಸಂತೋಷ ದಿಂದ ಆಚರಿಸುವ ಒಂದು ಸುಂದರ ಹಬ್ಬ. ಈ ಹಬ್ಬದ ಮಹತ್ವದ ಸಾರವನ್ನು ಎತ್ತಿ ತೋರಿಸು ಹಾಗೂ ಹೆಮ್ಮೆಯ ಹಬ್ಬ ಇದಾಗಿದೆ ಎಂದು ಹೇಳಲು ತುಂಬಾ ಆನಂದವಾಗುತ್ತದೆ

ಹಬ್ಬಗಳ ತವರೂರಾದ ಭಾರತ ದೇಶದಲ್ಲಿ ನವರಾತ್ರಿ ಅಥವಾ ‘ದಸರಾ’ ಹಬ್ಬಕ್ಕೆ ತನ್ನದೇ ಆದ ಮಹತ್ವ, ಪೌರಾಣಿಕ ಹಿನ್ನೆಲೆ ಇದೆ. ಭಾರತಾದ್ಯಂತ ‘ದಸರಾ’ ಹಬ್ಬವನ್ನು ತುಂಬಾ ಉತ್ಸಾಹದಿಂದ ವಿಜೃಂಭಣೆಯಿಂದ ಆಚರಿಸುತ್ತಾರೆ. ‘ನಮ್ಮೂರ ದಸರ ಎಷ್ಟೊಂದು ಸುಂದರ ಎನ್ನುವಂತೆ’ 2021ರಲ್ಲಿ ಮತ್ತೆ ದಸರಾ ಹೊಸ ಹುರುಪಿನೊಂದಿಗೆ ಮರಳಿ ಬಂದಿದೆ.. 9 ದಿನಗಳ ಕಾಲ ನಡೆಯುವ ದಸರಾ ಹಬ್ಬಕ್ಕೆ ಮೈಸೂರು ಅಲಂಕೃತಗೊಳ್ಳುತ್ತಿದೆ.

Contact Your\'s Advertisement; 9902492681

ನಾಡಿಗೆ ನಾಡೇ ಕುಣಿದು ಸಂಭ್ರಮಿಸುವ ನಾಡ ಹಬ್ಬವಾಗಿ ದಸರಾ ಹಬ್ಬವನ್ನು ಆಚರಿಸುತ್ತಾರೆ. ನವರಾತ್ರಿಯನ್ನು ಭಾರತದಾದ್ಯಂತ ಸಂಭ್ರಮದಿಂದ ಆಚರಿಸಿದರೂ ನವರಾತ್ರಿ ಸಮಯದಲ್ಲಿ ಮೈಸೂರಿನಲ್ಲಿ ನಡೆಯುವ ದಸರಾ ವೈಭವವೇ ಬೇರೆಯಾಗಿರುತ್ತದೆ. ಸಾಮಾನ್ಯವಾಗಿ ಮೈಸೂರು ದಸರಾವನ್ನು 9 ದಿನಗಳ ಕಾಲ ಸುದೀರ್ಘ ಹಬ್ಬವಾಗಿ ಆಚರಿಸುತ್ತಾರೆ ಕರ್ನಾಟಕ, ಭಾರತ ಮಾತ್ರವಲ್ಲದೇ ದಸರಾ ವೈಭವವನ್ನು ಕಣ್ತುಂಬಿಕೊಳ್ಳಲು ವಿದೇಶಿಗರೂ ಮೈಸೂರಿಗೆ ಆಗಮಿಸುತ್ತಾರೆ.

ಒಂದು ಕಾಲಘಟ್ಟದಲ್ಲಿ ಆಳರಸರ ಮಹೋತ್ಸವವಾಗಿ ಆಚರಿಸಲಾಗುತ್ತಿದ್ದ ದಸರಾ ಮಹೋತ್ಸವಕ್ಕೆ ನಾಲ್ಕು ಶತಮಾನಕ್ಕಿಂತಲೂ ಹೆಚ್ಚಿನ ಇತಿಹಾಸವಿದೆ. ಭಾರತೀಯ ಸಂಸ್ಕೃತಿಯ ಚರಿತ್ರೆಯಲ್ಲೇ ಇಷ್ಟೊಂದು ಕಾಲ ನಡೆದು ಬಂದಿರುವ ಮತ್ತೊಂದು ಹಬ್ಬ ಕಾಣಸಿಗುವುದು ಬಹಳ ಅಪರೂಪ. ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿಯ ಆರಾಧನೆಯೊಂದಿಗೆ ಆರಂಭವಾಗುವ ನವರಾತ್ರಿ ಹಾಗೂ 9ನೇ ದಿನದಂದು ನಡೆಯುವ ವೈಭವದ ವಿಜಯ ದಶಮಿಯ ಮೈಸೂರು ದಸರಾ ಮಹೋತ್ಸವಕ್ಕೆ ಅದರದೇ ಆದ ಐತಿಹಾಸಿಕ ಪರಂಪರೆ ಹಾಗೂ ಸಾಂಸ್ಕ್ರತಿಕ ಹಿನ್ನೆಲೆ ಇದೆ.

ಮಹಿಷಾಸುರನ ಊರು ಮೈಸೂರು ಮೈಸೂರು ಎಂಬುದು “ಮಹಿಷಾಸುರ” ಎಂಬ ಅಸುರನ ಹೆಸರಿನಿಂದ ಮೂಲವಾಗಿ ಬಂದಿದೆ. ಇದನ್ನು ಹಿಂದೆ “ಮಹಿಷಾಸುರನ ಊರು” ಎಂದೂ ಕರೆಯಲಾಗುತ್ತಿತ್ತು. ದೇವೀ ಭಾಗವತದಲ್ಲಿ ಬರುವ ಪೌರಾಣಿಕ ಕಥನಕ್ಕೆ ಮೈಸೂರು ಸಂಬಂಧ ಹೊಂದಿದೆ. ದೇವಿ ಪುರಾಣದಲ್ಲಿ ಇರುವ ಕಥೆಯ ಪ್ರಕಾರ, ಅಸುರರ ದೊರೆ, ಕೋಣನ ತಲೆಯುಳ್ಳ ಮಹಿಷಾಸುರ ಎಂಬಾತನು ಮೈಸೂರು ಪಟ್ಟಣವನ್ನು ಆಳುತ್ತಿದ್ದನು. ಮಹಿಷಾಸುರನ ಉಪಟಳ ತಾಳಲಾರದೆ ದೇವಾನುದೇವತೆಗಳು ತಮ್ಮನ್ನು ರಕ್ಷಿಸುವಂತೆ ಪಾರ್ವತೀ ದೇವಿಯ ಮೊರೆ ಹೋದರು.

ದೇವಾನು ದೇವತೆಗಳ ಮೊರೆಯನ್ನು ಆಲಿಸಿದ ಪಾರ್ವತಿಯು ಚಾಮುಂಡೇಶ್ವರಿಯಾಗಿ ಅವತಾರವೆತ್ತಿ ಮೈಸೂರು ಸಮೀಪದ ಚಾಮುಂಡಿ ಬೆಟ್ಟದ ತುತ್ತ ತುದಿಯಲ್ಲಿ ಅಸುರನನ್ನು ಸಂಹರಿಸಿದಳು. ಇದೇ ಕಾರಣದಿಂದಾಗಿ ಬೆಟ್ಟಕ್ಕೆ ಚಾಮುಂಡಿ ಬೆಟ್ಟವೆಂದೂ, ನಗರಕ್ಕೆ ಮೈಸೂರು ಎಂದೂ ಹೆಸರು ಬಂತು. ರಕ್ಕಸನನ್ನುಸಂಹರಿಸಿದ ಬಳಿಕ ಶ್ರೀದೇವಿಯು ಬೆಟ್ಟದ ತುದಿಯಲ್ಲಿ ನೆಲೆ ನಿಂತಳು. ಅಂದಿನಿಂದ ಇಂದಿನವರೆಗೂ ದೇವಿಯನ್ನು ಅಲ್ಲಿ ಭಕ್ತಿ ಭಾವಗಳಿಂದ ಪೂಜಿಸಿಕೊಂಡು ಬರಲಾಗುತ್ತಿದೆ.

ಚಾಮುಂಡೇಶ್ವರಿಯು ಮಹಿಷಾಸುರನನ್ನು ವಧಿಸಿದ ಸತ್ಕಾರ್ಯದ ಸ್ಮರಣಾರ್ಥವಾಗಿ, ದುಷ್ಟ ಶಕ್ತಿಯ ಮೇಲೆ ಶಿಷ್ಟ ಶಕ್ತಿಯ ವಿಜಯದ ಸಂಕೇತವಾಗಿ ಪ್ರತಿವರ್ಷ 9 ದಿನಗಳ ಪ್ರಖ್ಯಾತ ದಸರಾ ಉತ್ಸವವನ್ನು ಮೈಸೂರಿನಲ್ಲಿ ಆಚರಿಸಲಾಗುತ್ತದೆ ಹಾಗಾದ್ರೆ ಮೈಸೂರು ದಸರಾ ಹಬ್ಬದ ಇತಿಹಾಸ ಕರ್ನಾಟಕ ಇತಿಹಾಸದಲ್ಲಿ ಸುವರ್ಣಯುಗವನ್ನು ಸೃಷ್ಟಿಸಿ ವಿಜಯ ನಗರ ಸಾಮ್ರಾಜ್ಯವನ್ನು ಕಟ್ಟಿ ವೈಭವದಿಂದ ಮೆರೆದವರು ವಿಜಯನಗರ ಅರಸರು.

ಇವರ ಕಾಲದಿಂದ ಆರಂಭಗೊಂಡು ಆಚರಿಸಲ್ಪಡುತ್ತಿದ್ದ ನವರಾತ್ರಿ ಉತ್ಸವದ ವಿಜಯ ದಶಮಿಯ ದಸರಾ ಹಬ್ಬಕ್ಕೆ ಹೆಚ್ಚಿನ ಕಳೆ ತಂದುಕೊಟ್ಟವರು ವಿಜಯನಗರ ಅರಸರಲ್ಲೇ ಅತ್ಯಂತ ಪ್ರಖ್ಯಾತರಾಗಿದ್ದ ಶ್ರೀಕೃಷ್ಣದೇವರಾಯ. ಆ ಕಾಲದಲ್ಲಿ ಹಂಪೆಯಲ್ಲಿರುವ ಮಹಾನವಮಿ ದಿಬ್ಬ ಮತ್ತು ವಿಜಯ ವಿಠಲ ದೇವಾಲಯಗಳು ದಸರಾ ಮಹೋತ್ಸವದ ಕೇಂದ್ರಗಳಾಗಿದ್ದವು.

ವಿಜಯನಗರ ಸಾಮ್ರಾಜ್ಯದ ಶಕ್ತಿ ಸಾಮರ್ಥ್ಯ, ಸಂಪತ್ತು, ವೈಭವ, ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಸಂಸ್ಕೃತಿ, ಶ್ರೀಮಂತಿಕೆಯನ್ನು ತೋರ್ಪಡಿಸಿಕೊಳ್ಳುವ ಹಿನ್ನಲೆಯಲ್ಲಿ ಬಹು ಮುಖ್ಯವಾಗಿ ವಿಜಯದಶಮಿಯ ದಸರಾ ಮಹೋತ್ಸವವನ್ನು ವಿಜಯ ನಗರ ಅರಸರು ಆಚರಿಸುತ್ತಿದ್ದರು. ಈ ಸಂಭ್ರಮದ ಉತ್ಸವವನ್ನು ವೀಕ್ಷಿಸಲು ದೇಶ- ವಿದೇಶಗಳ ಗಣ್ಯರು, ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ ಉಲ್ಲೇಖಗಳಿವೆ.

ವಿಜಯದಶಮಿ ದಸರಾ ಮಹೋತ್ಸವವನ್ನು ವಿಜಯನಗರ ಸಾಮ್ರಾಜ್ಯ ಪತನದ ನಂತರ ಮುಂದುವರಿಸಿಕೊಂಡು ಬಂದವರು ಯದು ವಂಶದ ಮೈಸೂರು ಒಡೆಯರು. ಯದುವಂಶದ ಆಳ್ವಿಕೆಯ 9ನೇ ಅರಸರಾದ ರಾಜ ಒಡೆಯರ ತಮ್ಮ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲಿ 1610ರಲ್ಲಿ ವಿಜಯನಗರದ ರಾಜಪರಂಪರೆಯಂತೆ ನವರಾತ್ರಿ ಉತ್ಸವದಂದು ದಸರಾ ಮಹೋತ್ಸವವನ್ನು ಆರಂಭಿಸಿದರು.

ವಿಜಯನಗರ ಅರಸರ ಸಂಪ್ರದಾಯದಂತೆ ದಸರಾಗೆ ಸಂಬಂಧಿಸಿದ ಎಲ್ಲಾ ರೀತಿಯ ಶಾಸ್ತ್ರ ಹಾಗೂ ವಿಧಿ ವಿಧಾನಗಳನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಯದುವಂಶಸ್ಥರೂ ಅನುಸರಿಕೊಂಡು ಬಂದರು. ಹೈದರಾಲಿ ಮತ್ತು ಟಿಪ್ಪುವಿನ ಆಳ್ವಿಕೆಯ ನಂತರ ಮತ್ತೆ ಅಧಿಕಾರಕ್ಕೆ ಬಂದ ಯದುಕುಲತಿಲಕ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಆಳ್ವಿಕೆಯ ಕಾಲದಲ್ಲಿ ರಾಜ್ಯದ ರಾಜಧಾನಿ ಶ್ರೀರಂಗಪಟ್ಟಣದಿಂದ ಮೈಸೂರಿಗೆ ವರ್ಗವಾಯಿತು. ಅಲ್ಲಿಂದ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅವರ ಅತೀವ ಕಾಳಜಿಯಿಂದ ಮತ್ತಷ್ಟು ವಿಜೃಂಭಣೆಯಿಂದ 1800ರಲ್ಲಿ ಮೈಸೂರಿನಲ್ಲಿ ದಸರಾ ಪ್ರಾರಂಭವಾಗಿ ”ಮೈಸೂರು ದಸರಾ” ಎಂದು ವಿಶ್ವವಿಖ್ಯಾತಿಯನ್ನು ಪಡೆಯಿತು

ವಿಜಯದಶಮಿಯ ದಿನ ಸುಮಂಗಲೆಯರು ಪರಸ್ಪರ ಮುಖಕ್ಕೆ ಸಿಂಧೂರವನ್ನು ಹಚ್ಚಿ, ದೇವಿಯ ಹತ್ತಿರ ಆಶಿರ್ವಾದ ಬೇಡುತ್ತಾರೆ. ತದನಂತರ ಭವ್ಯ ಮೆರವಣಿಗೆಯ ಮೂಲಕ ದೇವಿಯ ವಿಸರ್ಜನೆ ಮಾಡುತ್ತಾರೆ. ಇದು ಬಂಗಾಳಿಯವರಿಗೆ ನಾಡಹಬ್ಬವಾಗಿದೆ. ಪಂಜಾಬದಲ್ಲಿ ಭಕ್ತರು ೭ ದಿನಗಳ ಉಪವಾಸ ಮಾಡಿದ ನಂತರ ಏಂಟನೇ ದಿನ ಪುಟ್ಟ ಬಾಲಕಿಯರನ್ನು ದೇವಿಯರ ಪ್ರತಿರೂಪವೆಂದು ಭಾವಿಸಿ ಅವರಿಗೆ ಪುರಿ, ಹಲವಾ ಮತ್ತು ಕಡಲೆಯ ನೈವೇದ್ಯ ನೀಡುತ್ತಾರೆ. ಹೊಸ ಕೆಂಪು ಬಣ್ಣದ ’ರವಿಕೆಗಳನ್ನು ಕಾಣಿಕೆಯಾಗಿ ನೀಡುತ್ತಾರೆ.
ಗುಜರಾತ ಮತ್ತು ರಾಜಸ್ಥಾನದ ಕೆಲವು ಪ್ರಾಂತಗಳಲ್ಲಿ, ನವರಾತ್ರಿಯ ಸಮಯದಲ್ಲಿ ದಾಂಡಿಯ, ಗರ್ಬಾ, ಕೋಲಾಟ ಪ್ರಸಿದ್ಧವಾಗಿದೆ.

ಕರ್ನಾಟಕ, ಆಂಧ್ರ ಮತ್ತು ತಮಿಳನಾಡದಲ್ಲಿ ದಸರಾ ಹಬ್ಬವು ಪಾರಂಪಾರಿಕ ರೀತಿಯಲ್ಲಿ ಆಚರಿಸಲಾಗುತ್ತದೆ. ಸುಮಂಗಲೆಯರು ಮನೆಯಲ್ಲಿ ಗೊಂಬೆಗಳನ್ನು ಅಲಂಕರಿಸಿ ಇಟ್ಟು ಪೂಜಿಸುತ್ತಾರೆ. ರಂಗೋಲಿ, ಪುಷ್ಪಗಳ ಅಲಂಕಾರವು ವಿಶೇಷವಾಗಿರುತ್ತದೆ. ಅನೇಕರನ್ನು ಕರೆಸಿ ಅವರಿಗೆ ಕುಂಕುಮ, ಅರಿಶಿಣ ನೀಡಿ, ಪ್ರಸಾದ ಕೊಡುತ್ತಾರೆ. ಉತ್ತರಭಾರತದಲ್ಲಿ ದುರ್ಗಾಪೂಜೆ ವಿಶೇಷವೆನಿಸಿದರೆ ದಕ್ಷಿಣಭಾರತದಲ್ಲಿ ಚಾಮುಂಡಿಯ ಆರಾಧನೆ ವಿಶಿಷ್ಟವಾದುದು.

ವಿಜಯ ನಗರ ಇತಿಹಾಸ ಕರ್ನಾಟಕದಲ್ಲಿ ನಾಡಹಬ್ಬಕ್ಕೆ ಐತಿಹಾಸಿಕ ಹಿನ್ನೆಲೆಯೂ ಇದೆ. ದಸರಾ ಹಬ್ಬವನ್ನು ಕನ್ನಡಿಗರ ಹಬ್ಬವನ್ನಾಗಿಸಿದವರು ಕರ್ನಾಟಕ ರತ್ನ ಸಿಂಹಾಸನಾಧೀಶ್ವರರಾದ ವಿಜಯನಗರದ ಅರಸರು. ವಿಜಯನಗರದ ಅರಸರು ಹಂಪಿಯ ಮಹಾನವಮಿ ದಿಬ್ಬದಲ್ಲಿ ಅಂದಿನ ಕಾಲಘಟ್ಟದಲ್ಲಿ ವಿಜೃಂಭಣೆಯಿಂದ ನವರಾತ್ರಿ ಉತ್ಸವ ನಡೆಸುತ್ತಿದ್ದರು.

ವಿಜಯನಗರ ಸಾಮ್ರಾಜ್ಯದ ಪತನಾದನಂತರ ಪ್ರವರ್ಧಮಾನಕ್ಕೆ ಬಂದ ಮೈಸೂರು ಒಡೆಯರ ಮನೆತನದವರು ದಸರಾ ಉತ್ಸವಕ್ಕೆ ಸಾಂಸ್ಕೃತಿಕ ಆಯಾಮವನ್ನೇ ನೀಡಿದರು. ಈ ಪರಂಪರೆಯನ್ನು ಇಂದಿನವರೆಗೂ ಸಾಗಿಸಿಕೊಂಡು ಬಂದ ಕೀರ್ತಿ ಮೈಸೂರಿನ ಒಡೆಯರಿಗೆ ಸಲ್ಲುತ್ತದೆ. ಮೈಸೂರಿನ ಮಹಾರಾಜರ ಕಾಲದಲ್ಲಿ ಮಹಾರಾಜರ ಮೆರವಣಿಗೆ ಜಗತ್ಪ್ರಸಿದ್ಧವಾಗಿತ್ತು.

ಕ್ರಿ.ಶ. ೧೬೧೦ ರಲ್ಲಿ ರಾಜ ಒಡೆಯರ್ ಅವರಿಂದ ಆರಂಭಿಸಲಾದ ಜಂಬೂಸವಾರಿ ಇಂದಿಗೂ ದಸರೆಯ ಪ್ರಮುಖ ಆಕರ್ಷಣೆಯಾಗಿ, ನವರಾತ್ರಿಯ ವಿಶೇಷತೆಯಾಗಿ ಗಮನ ಸೆಳೆಯುತ್ತದೆ. ಈಗ ಅದು ಸರಕಾರದಿಂದ ನಡೆಸುವ ಭುವನೇಶ್ವರಿಯ ಮೆರವಣಿಗೆಯಾಗಿದೆ. ಜಂಬೂಸವಾರಿ, ದೀಪಾಲಂಕಾರ, ಲಲಿತ ಕಲೆಗಳ ಪ್ರದರ್ಶನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ 9 ದಿನಗಳಕಾಲ ನಡೆಯುವ ದಸರಾ ಮಹೋತ್ಸವ ದೇಶ ವಿದೇಶಗಳ ಜನರನ್ನು ಆಕರ್ಷಿಸುತ್ತದೆ.

ಅಮಾವಾಸೆ ನವರಾತ್ರಿಯ ಹಿಂದಿನ ದಿನವಾದ ಮಹಾಲಯ ಅಮಾವಾಸ್ಯೆ. ಅಮಾವಾಸ್ಯೆ ಎಂದರೆ ಕತ್ತಲು, ಈ ಕತ್ತಲಿನಲ್ಲೂ ಮಹಾ+ಲಯ, ಮಹಾ ವಿನಾಶ ಅಂದರೆ ಮಹಾನ ಪರಿವರ್ತನೆ ಆಗುವುದು. ಆ ದಿನ, ಗತಿಸಿದ ಸರ್ವ ಪಿತೃಗಳಿಗೆ ತರ್ಪಣ ಹಾಗೂ ಭಕ್ಷ, ಭೋಜನಾದಿಗಳನ್ನು ಮಾಡಿ ಅರ್ಪಿಸುತ್ತಾರೆ. ಆದರಿಂದ ಈ ದಿನಕ್ಕೆ ಸರ್ವಪಿತೃ ಅಮಾವಾಸ್ಯೆ ಎಂದೂ ಕರೆಯುತ್ತಾರೆ.

ಪಾಂಡವರಿಗೆ ವಿಜಯಮಾಲೆ ಬಂದಿರುವ ದಿನವೆ ವಿಜಯದಶಮಿ. ಈ ದಿನದಂದು ಶಮಿಪೂಜೆಯೆಂದು ಬನ್ನಿಮರಕ್ಕೆ ಪೂಜಿಸುವರು. ‘ಶಮಿ’ ಎಂದರೆ ಶಾಂತಿ, ಸಮಾಧಾನವೆಂದರ್ಥ. ಆ ದಿನ ಬನ್ನಿ ಮರಕ್ಕೆ ಪೂಜಿಸುವುದರೊಂದಿಗೆ ಬನ್ನಿಮರದ ಎಲೆಗಳನ್ನು ಪರಸ್ಪರ ಕೊಟ್ಟು, ಬಂಗಾರದ ಹಾಗೆ ಇರಿ ಎಂದು ಶುಭ ಹಾರೈಸುತ್ತಾರೆ.

‘ಬನ್ನಿ’ ಎಂಬ ಶಬ್ದವೇ ಸ್ವಾಗತ ಶಬ್ದಾರ್ಥವಾಗಿರುವುದರಿಂದ ತಮ್ಮ ಆಪ್ತಸ್ನೇಹಿತರಿಗೆಲ್ಲಹಾಗೂ ಸಂಬಧಿಕರಿಗೂ ನಿಮಂತ್ರಣ ನೀಡಿ ಸಿಹಿ ಹಂಚುತ್ತಾರೆ. ಹೊಲಗಳಲ್ಲಿ ಬೆಳೆದ ಜೋಳದ, ಗೋಧಿಯ ಹುಲ್ಲನ್ನು ಶಾಂತಿಯ ಸಂಕೇತವೆಂದು ಹಸಿರನ್ನು ಪೂಜಿಸುತ್ತಾರೆ. ವಿಜಯದಶಮಿ ಶಾಂತಿ, ಸಮಾಧಾನ ನೀಡುವ ಹಬ್ಬವೇ ಈ ದಸರಾ ಹಬ್ಬ.

ಹಾಗಾದರೆ ಬನ್ನಿ, ನಾವು ಈ ದಸರಾ ಹಬ್ಬದ ಆಧ್ಯಾತ್ಮಿಕ ಹಿನ್ನೆಲೆಯನ್ನು ತಿಳಿದುಕೊಂಡು , ವಿಶ್ವಪಿತನಾದ ನಿರಾಕಾರ ಭಗವಂತನ ಮಕ್ಕಳು ಎಂದು, ಪರಸ್ಪರರಲ್ಲಿ ಸ್ನೇಹ ಆತ್ಮೀಯತೆಯನ್ನು ಬೆಳೆಸಿ, ವಿಶ್ವಶಾಂತಿಯ ಉಗಮಕ್ಕೆ ನಾಂದಿಯನ್ನು ಹಾಡಿ ಉತ್ಸಾಹದಿಂದ ಹಬ್ಬ ಆಚರಣೆ ಮಾಡೊಣೋ ಎನ್ನುತ್ತಾ ಬನ್ನಿ ಬಂಗಾರವಾಗಲಿ ತಮ್ಮೆಲ್ಲರ ಜೀವನ ಸುಂದರವಾಗಿರಲಿ ಎಂದು ಆಶಿಸುತ್ತಾ ನಾಡಿನ ಸಮಸ್ತ ಜನತೆಗೆ ನಾಡಿನ ದೊಡ್ಡ ಹಬ್ಬವಾದಂತಹ ದಸರಾ ಹಬ್ಬದ ಶುಭಾಶಯಗಳು

ಕಾಶಿಬಾಯಿ. ಸಿ. ಗುತ್ತೇದಾರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here