ಸುರಪುರ : ನಾರಾಯಣಪುರ ಜಲಾಶಯಕ್ಕೆ ಸಂಬಂಧಿಸಿದಂತೆ ಹಿಂಗಾರು ಹಂಗಾಮಿಗೆ ರೈತರ ಜಮೀನಿಗೆ ಕಾಲುವೆ ಮುಖಾಂತರ ನೀರು ಹರಿಸಲು ಶೀಘ್ರವೇ ನೀರಾವರಿ ಸಲಹಾ ಸಮಿತಿಯ ಸಭೆಯನ್ನು ಆಯೋಜಿಸಿ ರೈತರಿಗೆ ಕಾಲುವೆ ನೀರಿನ ಕುರಿತಂತೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿರುವ ಅವರು, ಈಗಾಗಲೇ ನಾರಾಯಣಪುರ ಮತ್ತು ಆಲಮಟ್ಟಿ ಜಲಾಶಯಗಳು ಸಂಪೂರ್ಣ ಭರ್ತಿಯಾಗಿವೆ. ೨೦೨೧-೨೨ನೇ ಸಾಲಿನ ಹಿಂಗಾರು ಹಂಗಾಮಿಗೆ ರೈತರ ಜಮೀನುಗಳಿಗೆ ಸಂಪೂರ್ಣ ನೀರು ಒದಗಿಸುವ ನಿಟ್ಟಿನಲ್ಲಿ ರೈತರ ಹಿತದೃಷ್ಟಿಯನ್ನು ಕಾಪಾಡಲು ತಕ್ಷಣ ನೀರಾವರಿ ಸಲಹಾ ಸಮಿತಿ ಸಭೆ ಕರೆಯಬೇಕು ಎಂದು ತಿಳಿಸಿದ್ದಾರೆ.
ಜಲಾಶಯದಲ್ಲಿ ನೀರಿನ ಮಟ್ಟ ಎಷ್ಟಿದೆ ಮತ್ತು ಹಿಂಗಾರು ಹಂಗಾಮಿಗೆ ಎಲ್ಲಿಯವರೆಗೆ ರೈತರ ಜಮೀನುಗಳಿಗೆ ನೀರು ಹರಿಸಲಾಗುವುದು ಎನ್ನುವ ಕುರಿತು ನಿಖರವಾದ ಮಾಹಿತಿಯನ್ನು ಅಧಿಕಾರಿಗಳು ರೈತರಿಗೆ ಈಗಾಗಲೇ ತಿಳಿಸಬೇಕಾಗಿತ್ತು. ಆದರೆ, ಇಲ್ಲಿಯವರೆಗೆ ಹೇಳಿರುವುದಿಲ್ಲ ಮತ್ತು ಸಭೆಯ ಆಯೋಜನೆ ಕುರಿತಂತೆ ಯಾವುದೇ ಮಾಹಿತಿ ಇಲ್ಲದ ಕಾರಣ ರೈತರು ಗೊಂದಲದಲ್ಲಿದ್ದಾರೆ ಎಂದು ಹೇಳಿದ್ದಾರೆ.
ರೈತರ ಜಮೀನಿಗೆ ಹಿಂಗಾರು ಹಂಗಾಮಿನ ಬೆಳೆಗಳಿಗೆ ಈ ಬಾರಿ ನೀರು ಸರ್ಮಪಕವಾಗಿ ಒದಗಿಸಲು ಆಗುವುದಿಲ್ಲಾ ಎನ್ನುವ ವದಂತಿಗಳು ಹರಿದಾಡುತ್ತಿವೆ. ಹೀಗಾಗಿ ಕ್ಷೇತ್ರದ ರೈತರು ಆತಂಕದಲ್ಲಿದ್ದಾರೆ. ಕಾರಣ ರೈತರಿಗೆ ಸರಿಯಾದ ಮಾಹಿತಿ ನೀಡುವಲ್ಲಿ ತಾವುಗಳು ಶೀಘ್ರವಾಗಿ ನೀರಾವರಿ ಸಲಹಾ ಸಮಿತಿ ಸಭೆಯನ್ನು ಕರೆಯಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು.
ಅಲ್ಲದೆ, ರೈತರ ಹಿಂಗಾರು ಬೆಳೆಗಳಿಗೆ ನೀರನ್ನು ಒದಗಿಸುವ ಸ್ಪಷ್ಟ ಮಾಹಿತಿಯನ್ನು ನೀಡಲು ಹಾಗೂ ರೈತರ ಹಿತ ಕಾಯುವ ನಿರ್ಣಯಗಳನ್ನು ಸಭೆಯಲ್ಲಿ ಕೈಗೊಂಡು ರೈತರಿಗೆ ಅನುಕೂಲ ಮಾಡಿಕೊಡಲು ನಿರ್ದೇಶನ ನೀಡಬೇಕು. ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೂ ಕೂಡ ಪತ್ರ ಬರೆದು ತಿಳಿಸಿರುತ್ತೇನೆ ಎಂದು ಮಾಜಿ ಶಾಸಕ ಆರ್‌ವಿಎನ್ ಅವರು ಸಿಎಂಗೆ ಬರೆದ ಪತ್ರದಲ್ಲಿ ಹೇಳಿದ್ಧಾರೆ.