ಸುರಪುರ: ದಕ್ಷಿಣ ಶ್ರೀಶೈಲ ಎಂದು ಖ್ಯಾತಿಯಾಗಿರುವ ಲಕ್ಷ್ಮೀಪುರ ಬಿಜಾಸಪುರ ಮರಡಿ ಮಲ್ಲಿಕಾರ್ಜುನ ದೇವಸ್ಥಾನ ಹಾಗು ನಾಡಿನ ಹೆಸರಾಂತ ಮಠಗಳಲ್ಲಿ ಒಂದಾಗಿರುವ ಶ್ರೀಗಿರಿ ಮಠದ ಪೀಠಾಧಿಪತಿಗಳಾಗಿರುವ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರಿಗೆ ಇಂಡಿಯನ್ ಎಂಪಾಯರ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಿದ ಹಿನ್ನೆಲೆಯಲ್ಲಿ ಶ್ರೀಗಳಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ ಎಂದು ಶ್ರೀಗಿರಿ ಮಠದ ಭಕ್ತರು ಮತ್ತು ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೂಗುರೇಶ ವಾರದ ತಿಳಿಸಿದರು.
ಶ್ರೀಗಿರಿ ಮಠದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಶ್ರೀಗಳ ಸಾಮಾಜಿಕ ಸೇವೆಯನ್ನು ಗುರತಿಸಿರುವ ಭಾರತ ಸರಕಾರದ ಇಂಡಿಯನ್ ಎಂಪಾಯರ್ ವಿಶ್ವವಿದ್ಯಾಲಯವು ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯವರ ಸಾಮಾಜಿಕ,ಧಾರ್ಮಿಕ ಮತ್ತು ಆಧ್ಯಾತ್ಮಿಕ ರಂಗದಲ್ಲಿನ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ,ಆದ್ದರಿಂದ ಶ್ರೀಗಳಿಗೆ ಸಮಸ್ತ ಶ್ರೀಮಠಧ ಭಕ್ತರಿಂದ ೧೯ನೇ ತಾರೀಖು ಮಂಗಳವಾರ ಬೆಳಿಗ್ಗೆ ೧೧ ಗಂಟೆಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದ್ದು ಎಲ್ಲಾ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಮತ್ತೋರ್ವ ಶ್ರೀಗಳ ಅನುಯಾಯಿ ಹಾಗು ವೀರಶೈವ ಲಿಂಗಾಯತ ಯುವ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಡೊಣೂರ ಮಾತನಾಡಿ,ಅಭಿನಂಧನಾ ಸಮಾರಂಭದಲ್ಲಿ ೪೦ಕ್ಕೂ ಹೆಚ್ಚು ಜನ ವಿವಿಧ ಮಠಾಧೀಶರು,ಸ್ವಾಮೀಜಿಗಳು ಹಾಗು ರಾಜಕೀಯ ಮುಖಂಡರು,ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗು ಶ್ರೀ ಮಠದ ಎಲ್ಲಾ ಭಕ್ತಾದಿಗಳು ಭಾಗವಹಿಸಿ ಅದ್ಧೂರಿಯಾಗಿ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶರಣಪ್ಪ ಕಲಕೇರಿ,ರಾಮರಡ್ಡಿ ದೇಸಾಯಿ ಬಿಜಾಸಪುರ,ಲಚಮರಡ್ಡಿ ಮಾಲಿ ಪಾಟೀಲ್ ಬಿಜಾಸಪುರ,ಗಂಗಾಧರ ಶಾಸ್ತ್ರಿ,ಸೋಮನಗೌಡ ಹಾಲಗೇರಾ,ಶಂಕ್ರಪ್ಪ ಸಗರ ಸೇರಿದಂತೆ ಅನೇಕರಿದ್ದರು.