ಆಳಂದ: ಹೆಣ್ಣು ಅಬಲೆಯಲ್ಲ ಸಬಲಳು ಎಂದು ವಿಶ್ವಕ್ಕೆ ತೋರಿಸಿಕೊಟ್ಟ ಕಿತ್ತೂರು ಸಂಸ್ಥಾನದ ವೀರವನಿತೆ ಬ್ರಿಟಿಷ ಸಾಮ್ರಾಜ್ಯದ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸಿದ ಕನ್ನಡ ನಾಡಿನ ಹೆಮ್ಮೆಯ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮನವರ ಇಂದಿನ ಮಹಿಳೆಯರಿಗೆ ದಾರಿದದೀಪವಾಗಿದ್ದಾರೆ ಎಂದು ಕದಂಬ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸುಮಾ ಪ್ಯಾಟಿ ಅವರು ಹೇಳಿದರು.
ತಾಲೂಕಿನ ಮಾಡಿಯಾಳ ಜೆಪಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅವರು ತ್ಯಾಗವನ್ನು ಮಾಡಿದ್ದಾರೆ. ಓರ್ವ ಮಹಿಳೆಯಾಗಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ರಾಣಿಚೆನ್ನಮ್ಮ ಬಿಲ್ಲು ವಿದ್ಯೆ ಕುದುರೆ ಸವಾರಿಯಲ್ಲಿ ಪರಿಣಿತ ಹೊಂದಿದ್ದರಿಂದ ಕೆಚ್ಚೆದೆಯ ಹೋರಾಟ ಮಾಡಿದ ವೀರಧೀರ ಮಹಿಳೆ ಎನಿಸಿಕೊಂಡು ನಾಡು ಮತ್ತು ಪ್ರಜೆಗಳ ರಕ್ಷಣೆಗೆ ಕಂಕಣಬದ್ಧವಾಗಿ ನಿಂತುಕೊಂಡಿದ್ದರು ಎಂದರು.
ವಿಜಾಪುರ ಸುಲ್ತಾನರ ಪತನದ ನಂತರ ಕಿತ್ತೂರು ಸಂಸ್ಥಾನದ ರಕ್ಷಣೆ ಮಾಡಲು ನಿಜಾಮ ಹೈದರಲ್ಲಿ, ಟಿಪ್ಪು, ಪೇಶ್ವೇಗಳೊಂದಿಗೆ ಹೋರಾಟ ಮಾಡಿದ ಇತಿಹಾಸ ಮರೆಯದಂತ್ತಿದೆ. ರಾಣಿ ಅವರಿಗೆ ನಿಷ್ಠಾವಂತ ಸೇವಕನಾಗಿದ್ದ ಸಂಗೋಳ್ಳಿ ರಾಯಣ್ಣ ಕಿತ್ತೂರಿನ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಚೆನ್ನಮ್ಮನ ಬೆಂಗಾವಲಾಗಿದ್ದ ಕ್ರಾಂತಿವೀರ ಸಂಗೋಳಿ ರಾಯಣ್ಣನನ್ನು ಬ್ರಿಟಿಷರು ಗಲ್ಲಿಗೇರಿಸಿದರು.
ಮುಂದೆ ಚೆನ್ನಮ್ಮ ಯಾರ ಸಹಕಾರವಿಲ್ಲದೆ ಎದೆಗುಂದದೆ ಕಚ್ಚೆದೆಯಿಂದ ಬ್ರಿಟಿಷರನ್ನು ಎದುರಿಸುತ್ತಾ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಧ್ವನಿ ಎತ್ತುದ್ದಾರೆ. ಇಂತ ಮಹಿಳೆಯ ಧೈರ್ಯ ಮೆಚ್ಚುವಂತದ್ದು ಎಂದು ಅವರು ಹೇಳಿದರು.
ಕಾರ್ಯಕ್ರಮದದಲ್ಲಿ ಗ್ರಾಪಂ ಅಧ್ಯಕ್ಷೆ ಗುರುಬಾಯಿ ಕೌಲಗಿ ಉದ್ಘಾಟಿಸಿದರು. ಸದಸ್ಯೆಯರಾದ ರೇಣುಕಾ ಬಂಡೆ, ಕಮಲಾಬಾಯಿ ಅರ್ಜುಣಗಿ, ಮುಖ್ಯ ಶಿಕ್ಷಕಿ ಆರತಿ ಬೆಳಂಗಿ, ಸಹ ಶಿಕ್ಷಕಿಯರಾದ ಶರಣಮ್ಮಾ ನಾಸಿ, ಸುರೇಖಾ ಮರಾಠಾ ಸೇರಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ರಾಷ್ಟ್ರಗೀತೆ ಹಾಡುವುದರೊಂದಿಗೆ ಕಾರ್ಯಕ್ರಮ ಜನಮನ ಸೆಳೆಯಿತು.