ಕಲಬುರಗಿ: ಉತ್ತಮ ಚಾರಿತ್ರ್ಯ ಮತ್ತು ನೈತಿಕ ಹಾದಿಯಲ್ಲಿ ನಡೆಯುವ ಬದ್ಧತೆಯೇ ಶಿಕ್ಷಣದ ನೈಜ ಆಶಯ ಎಂಬುದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯದ ಡೀನರಾದ ಪ್ರೊ. ವಿ. ಟಿ ಕಾಂಬಳೆ ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಇತಿಹಾಸ ಅಧ್ಯಯನ ವಿಭಾಗದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿ, ವಿದ್ಯಾರ್ಥಿ ಹಂತದಿಂದಲೇ ಏಕಾಗ್ರತೆಗೆ ಒತ್ತು ನೀಡಬೇಕಾಗುತ್ತದೆ. ಆದರೆ, ಅಪರಿಶುದ್ಧ ಭಾವದಿಂದಾಗಿ ಏಕಾಗ್ರತೆ ಸಾಧಿಸುವುದು ಕಷ್ಟವಾಗುತ್ತಿದೆ. ಇದನ್ನು ಮೀರಿ ಬೆಳೆಯಬೇಕಾದರೆ ವಿದ್ಯಾರ್ಥಿಗಳು ಸೇರಿದಂತೆ ಈ ದೇಶದ ಮಹಾನ್ ವ್ಯಕ್ತಿಗಳಾದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಜ್ಯೋತಿಬಾ ಫುಲೆ ಇವರ ತತ್ತ್ವದಡಿಯಲ್ಲಿ ಯುವ ಪೀಳಿಗೆ ಸಂಸ್ಕಾರ ಹಾಗೂ ಸಂಸ್ಕೃತಿಯತ್ತ ಮುಖ ಮಾಡುವ ಶಿಕ್ಷಣ ಪಡೆಯಬೇಕಿದೆ ಎಂದರು.
ಶಿಕ್ಷಣ ನಮ್ಮೊಳಗಿನ ವೈಚಾರಿಕತೆಗೆ ಇಂಬು ನೀಡುವಂತಾಗಬೇಕು. ಸ್ವಂತಿಕೆ ಬೆಳೆದು ಕೀಳರಿಮೆ ದೂರಾಗಬೇಕು. ಇದಕ್ಕೆ ಪೂರಕವಾಗಿ ನಮಲ್ಲಿ ಇಚ್ಛಾಶಕ್ತಿ ಇದ್ದಾಗ ಮಾತ್ರ ಸಾಮಾನ್ಯ ಹಂತದಿಂದ ಅಸಾಮಾನ್ಯತೆ ಕಡೆಗೆ ಹೆಜ್ಜೆ ಹಾಕಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಇತಿಹಾಸ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ, ಮಂಜುಳಾ ಚಿಂಚೋಳಿ ಅಧ್ಯಕ್ಷತೆ ವಹಿಸಿ ಮಾತನಾಡಿ ಇತಿಹಾಸ ಅಧ್ಯಯನ ಅನ್ನೋದು ತುಂಬಾ ಆಳವಾಗಿ ಅಧ್ಯಯನ ಮಾಡಿದಾಗ ಇತಿಹಾಸ ತಿಳಿಯುತ್ತದೆ ಹೊರತು ಪುಸ್ತಕದ ಮುಖಪುಟ ನೋಡಿದರೆ ಇತಿಹಾಸ ಅಷ್ಟೊಂದು ಬೇಗ ಆಗುವುದಕ್ಕೆ ಸಾಧ್ಯವಿಲ್ಲ ಎಂದು ಇತಿಹಾಸ ವಿಷಯದ ಬಗ್ಗೆ ಕುಲಂಕುಶವಾಗಿ ಮಾತನಾಡಿದರು.
ಸಂಶೋಧನಾ ವಿದ್ಯಾರ್ಥಿ ಗೌತಮ್ ಕರಿಕಲ್, ಆನಂದ ರೆಡ್ಡಿ, ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಬಾಬುರಾವ ಬಿಳಗಿ, ಸಂತೋಷ ಹೊಸಮನಿ, ಚಂದ್ರಕಲಾ ಚವ್ಹಾಣ, ಶರಣಗೌಡ ಪಾಟೀಲ, ಮದುಸುಧನ ರೆಡ್ಡಿ, ಸಿದ್ದಣಗೌಡ ಪಾಟೀಲ ಇದ್ದರು.
ರೇವಣ್ಣಸಿದ್ದ ಅತಿಥಿ ಪರಿಚಯ ಮಾಡಿದರು.