ಶಹಾಬಾದ:ಕನ್ನಡ ನಾಡು ನುಡಿ ವಿಶ್ವದಲ್ಲಿಯೇ ಅತ್ಯಂತ ಸಾಕಷ್ಟು ಉತ್ತಮ ಸಂಸ್ಕೃತಿ ಹೊಂದಿದ್ದರೂ ನಾವಿಂದೂ ಪಾಶ್ಚಿಮಾತ್ಯರ ಪ್ರಭಾವಕ್ಕೆ ಒಳಗಾಗುತ್ತಿರುವುದು ವಿಷಾಧನೀಯ ಎಂದು ತಹಸೀಲ್ದಾರ ಸುರೇಶ ವರ್ಮಾ ಹೇಳಿದರು.
ಅವರು ಸೋಮವಾರ ನಗರದ ಸರಕಾರಿ ಬಾಲಕರ ಪ್ರೌಢಶಾಲೆಯಲ್ಲಿ ತಾಲೂಕಾಡಳಿತದ ವತಿಯಿಂದ ಆಯೋಜಿಸಲಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಾಗತೀಕರಣ, ಉದಾರೀಕರಣಗಳ ಪ್ರಭಾವ ಹಾಗೂ ಇಂಗ್ಲೀಷನ ವ್ಯಾಮೋಹ ಕನ್ನಡವನ್ನು ದುಸ್ಥಿತಿಗೆ ತಂದಿದೆ. ಇಂದು ಕನ್ನಡದ ರಕ್ಷಣೆ ಕನ್ನಡಿಗರಾದ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಮನೆಯಲ್ಲಿ ಪ್ರತಿಯೊಬ್ಬರೂ ಕನ್ನಡ ಬಳಸುವ ಸಂಕಲ್ಪ ಮಾಡಬೇಕಾಗಿದೆ. ಪ್ರತಿಯೊಬ್ಬ ಕನ್ನಡಾಭಿಮಾನಿ ನಮ್ಮ ಮಕ್ಕಳನ್ನು ಕನ್ನಡ ಶಾಲೆಯಲ್ಲಿ ಕಳುಹಿಸುವುದರ ಮೂಲಕ ಇನ್ನೊಬ್ಬರಿಗೆ ಮಾದರಿಯಾಗಬೇಕು.
ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಮಾತನಾಡಿ, ಕನ್ನಡ ಭಾಷೆ, ಕನ್ನಡ ನುಡಿ, ನೆಲ ಹಾಗೂ ಜಲದ ಬಗ್ಗೆ ಕೇವಲ ನವೆಂಬರ್ ತಿಂಗಳಿಗೆ ಹಾಡೊಕೆ, ಆಡೋಕೆ ಸಿಮೀತವಾಗದೇ ಕನ್ನಡವನ್ನು ಬೆಳೆಸುವಲ್ಲಿ ಕಿಂಚಿತ್ತು ಪ್ರಾಮಾಣಿಕ ಪ್ರಯತ್ನ ನಮ್ಮೆಲ್ಲರದಿಂದಾಗಬೇಕೆಂದು ಹೇಳಿದರು.
ನಗರ ಪೊಲೀಸ್ ಠಾಣೆಯ ಪಿಐ ಸಂತೋಷ ಹಳ್ಳೂರ್ ಮಾತನಾಡಿ,ಕನ್ನಡದ ಬಗ್ಗೆ ಅಪಹಾಸ್ಯ ಬೇಡ. ಕನ್ನಡದ ಬಗ್ಗೆ ಆಭಿಮಾನ ಅಗತ್ಯ ಎಂದರು. ಕನ್ನಡ ಭಾಷೆಯ ಬೆಳವಣಿಗೆ ಮನೆಯಿಂದ ಅರಂಭವಾಗಬೇಕು. ಆಂಗ್ಲ ಭಾಷೆ ಕಲಿತರೂ ಕನ್ನಡತನ ಬಿಡಬಾರದು. ಮಾತೃಭಾಷೆಯ ಹೆತ್ತ ತಾಯಿಗೆ ಸಮಾನ. ಕೇವಲ ಕವಿಗಳು ಮತ್ತು ಶಿಕ್ಷಕರಿಂದ ಮಾತ್ರ ಕನ್ನಡ ಉಳಿಯಲು ಸಾಧ್ಯ ಎಂಬ ಮಾತಿನಲ್ಲಿ ಹುರುಳಿಲ್ಲ ಎಂದರು.
ಮಾಜಿ ನಗರಸಭೆಯ ಅಧ್ಯಕ್ಷ ಗಿರೀಶ ಕಂಬಾನೂರ, ನಗರಸಭೆಯ ಸದಸ್ಯ ಡಾ.ಅಹ್ಮದ್ ಪಟೇಲ್,ನಾಗಣ್ಣ ರಾಂಪೂರೆ, ಭರತ್ ರಾಠೋಡ, ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲ ಶಮಶೋದ್ದಿನ್ ಪಟೇಲ್, ಜೆ.ಆರ್.ಹೊಸಮನಿ, ಮುಖ್ಯಗುರುಗಳಾದ ಏಮನಾಥ ರಾಠೋಡ, ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.