ಸುರಪುರ: ನಾರಾಯಣಪುರ ಜಲಾಶಯದ (ಬಸವಸಾಗರ ಜಲಾಶಯ) ಎಡ ಮತ್ತು ಬಲದಂಡೆ ಕಾಲುವೆಗಳಿಗೆ ಹಿಂಗಾರು ಬೆಳೆಗಳಿಗೆ ನೀರು ಹರಿಸಲು ಶೀಘ್ರವೆ ನೀರಾವರಿ ಸಲಹಾ ಸಮಿತಿ ಸಭೆ ಕರೆಯಲು ಬೃಹತ್ ಮತ್ತು ಮದ್ಯಮ ನೀರಾವರಿ ಸಚಿವರಾದ ಗೋವಿಂದ್ ಎಮ್.ಕಾರಜೋಳರವರಿಗೆ ಶಾಸಕ ನರಸಿಂಹ ನಾಯಕ (ರಾಜುಗೌಡ) ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸಚಿವರನ್ನು ಭೇಟಿ ಮಾಡಿದ ಶಾಸಕ ರಾಜುಗೌಡ ಮನವಿ ಸಲ್ಲಿಸಿ ಈಗಾಗಲೇ ಮುಂಗಾರು ಬೆಳೆಗಳು ಕಟಾವಿಗೆ ಬಂದಿದ್ದು,ಹಿಂಗಾರು ಬೆಳೆಗಳಿಗಾಗಿ ನಾರಾಯಣಪುರ ಜಲಾಶಯದಿಂದ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯದ ಮೇಲೆ ಬೆಳೆ ಬೆಳೆಯಲು ನಿರ್ಧರಿಸಲಿರುವ ಕಾರಣ ಶೀಘ್ರವೆ ಕೃಷ್ಣಾ ಭಾಗ್ಯ ಜಲ ನಿಗಮದ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಿಗೆ ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ನೀರಾವರಿ ಸಲಹಾ ಸಮಿತಿ ಸಭೆ ಕರೆಯಲು ಆದೇಶಿಸುವಂತೆ ಮನವಿಯಲ್ಲಿ ವಿನಂತಿಸಿದ್ದಾರೆ.
ಶಾಸಕರ ಮನವಿ ಪೂರಕವಾಗಿ ಪ್ರತಿಕ್ರೀಯಿಸಿರುವ ಸಚಿವ ಗೋವಿಂದ ಕಾರಜೋಳವರು ಕೂಡಲೇ ಕ್ರಮ ಕೈಗೊಳ್ಳುವಂತೆ ತಮ್ಮ ಇಲಾಖೆಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.ಈ ಸಂದರ್ಭದಲ್ಲಿ ಮುಖಂಡ ಬಸನಗೌಡ ಹಳ್ಳಿಕೋಟಿ ಇತರರಿದ್ದರು.