ಕಲಬುರಗಿ: ಶೋಷಿತರ-ದಮನಿತರ ಬಾಗ್ಯದ ಬೆಳಕಾಗಿ,ಅವರೆಲ್ಲರಿಗೂ ಸ್ವಾಭಿಮಾನದ ಬದುಕಿನ ದಾರಿ ತೋರಿಸಿದ ಧೀಮಂತ ನಾಯಕ ಡಾ ಬಾಬಾಸಾಹೇಬ ಅಂಬೇಡ್ಕರ ಎಂದು ಕಲಬುರಗಿ ಲೋಕಸಭಾ ಸದಸ್ಯರಾದ ಡಾ ಉಮೇಶ ಜಾಧವ ನುಡಿದರು.
ನಗರದ ಜಗತ ವೃತ್ತದಲ್ಲಿರುವ ಡಾ. ಬಾಬಾಸಾಹೇಬ ಅಂಬೇಡ್ಕರ ರವರ ಪ್ರತಿಮೆಗೆ ಗೌರವ ಸಮರ್ಪಿಸಿ ಡಾ ಅಂಬೇಡ್ಕರರವರ 65 ಮಹಾಪರಿನಿರ್ವಾಣ ದಿನದ ಅಂಗವಾಗಿ ಮಾತನಾಡಿದ ಅವರು ಇಡೀ ವಿಶ್ವವೇ ಮೆಚ್ಚಿಕೊಂಡಾಡುವ ಭಾರತದ ಸಂವಿಧಾನ ರಚನೆಯ ರೂವಾರಿಯಾಗಿ ನಮಗೆ ಉತ್ಕೃಷ್ಟವಾದ ಸಂವಿಧಾನ ನೀಡಿರುವ ಡಾ. ಅಂಬೇಡ್ಕರ್ ಅವರದ್ದು ವಿಶ್ವ ಕಂಡ ಮೇರುವ್ಯಕ್ತಿತ್ವ ಎಂದು ಬಣ್ಣಿಸಿದರು.
ಶಾಸಕ ಹಾಗೂ ಕೆ ಕೆ ಆರ್ ಡಿ ಬಿ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ಈ ಭೂಮಿಯ ಮೇಲೆ ಬದುಕಿದ ಓರ್ವ ವ್ಯಕ್ತಿ ಸರ್ವಮಾನ್ಯ ಮಹಾನ್ ಶಕ್ತಿಯಾಗಿ ಬೆಳೆದು, ಒಂದು ಸಂಸ್ಥೆಯಾಗಿ ರೂಪುಗೊಂಡು ಕೋಟ್ಯಂತರ ಜನರ ಹೃದಯ ಕಮಲಗಳಲ್ಲಿ ಬಲಿಷ್ಠವಾಗಿ ಬೇರೂರಿದ್ದಾರೆ ಎಂಬುದಕ್ಕೆ ಅತ್ಯುತ್ತಮ ಪ್ರತಿಮಾತ್ಮಕ ಘನ ವ್ಯಕ್ತಿತ್ವ ಬಾಬಾ ಸಾಹೇಬ್ ಅಂಬೇಡ್ಕರ ರವರದು ಎಂದರು.
ಶಾಸಕರಾದ ಬಸವರಾಜ್ ಮತ್ತಿಮುಡ, ಅವಿನಾಶ್ ಜಾಧವ್, ಎಂಎಲ್ಸಿ ಅಭ್ಯರ್ಥಿ ಬಿಜಿ ಪಾಟೀಲ್, ಎಂಎಲ್ಸಿ ಶಶಿಲ್ ನಮೋಶಿ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ, ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಟಗಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ್, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಠಗಿ ಸೇರಿದಂತೆ ಪಕ್ಷದ ನಾಯಕರು ಇದ್ದರು.