ಸುರಪುರ: ಬಸವಣ್ಣನವರ ಸಮಕಾಲೀನರಾದ ಹಡಪದ ಅಪ್ಪಣ್ಣನವರ ಹಲವಾರು ವಚನಗಳನ್ನು ರಚಿಸಿದ್ದಾರೆ. ಅವರ ವಚನಗಳೂ ಇಂದಿಗೂ ಪ್ರಸ್ತುತವಾಗಿವೆ ಎಂದು ಉಪನ್ಯಾಸಕ ಹಾಗೂ ಚುಟುಕು ಸಾಹಿತಿ ಬೀರಣ್ಣ ಬಿ.ಕೆ.ಆಲ್ದಳ ಹೇಳಿದರು.
ನಗರದ ವಾಲ್ಮೀಕಿ ಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸನೀಡಿ ಮಾತನಾಡಿದ ಅವರು ಬಸವಣ್ಣನವರ ಕ್ರಾಂತಿಯಲ್ಲಿ ಅಪ್ಪಣ್ಣನವರೂ ತೊಡಗಿಸಿಕೊಂಡಿದ್ದರು. ಶರಣರು ಭಕ್ತಿಯಿಂದ ಜ್ಞಾನವನ್ನು ಸಂಪಾದಿಸುವ ಮೂಲಕ ವಚನ ಸಾಹಿತ್ಯಗಳನ್ನು ರಚಿಸಿ ಸಮಾಜಕ್ಕೆ ಇಂದಿಗೂ ದಾರಿದೀಪವಾಗಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಗ್ರೇಡ್-೨ ತಹಶಿಲ್ದಾರ ಸುಫಿಯಾ ಸುಲ್ತಾನ ಮಾತನಾಡಿ ಶರಣರ ವಚನ ಸಾಹಿತ್ಯಗಳನ್ನು ಅಭ್ಯಾಸ ಮಾಡುವ ಮೂಲಕ ಅದರಲ್ಲಿನ ಸಿದ್ದಾಂತ, ಸಂದೇಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಎಪಿಎಮ್‌ಸಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ ಹಾಗೂ ಇನ್ನೊರ್ವ ಉಪನ್ಯಾಸಕ ಬಸವರಾಜ ಮಾಸ್ಟರ್ ಮಾತನಾಡಿದರು ಕಾರ್ಯಕ್ರಮಕ್ಕೂ ಮೂದಲು ನಗರದ ಡಾ.ಬಾಬಾ ಸಾಹೇಬ ಅಂಬೇಡ್ಕರ ವೃತ್ತದಿಂದ ವಾಲ್ಮೀಕಿ ಭವನದ ವರೆಗೆ ಹಡಪದ ಅಪ್ಪಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆಯನ್ನು ಮಾಡಲಾಯಿತು. ಸಮಾಜದ ಅಧ್ಯಕ್ಷ ನಿಂಗಣ್ಣ ಯಾಳಗಿ ಸೇರಿದಂತೆ ಸಮಾಜಭಾಂದವರು ಸೇರಿ ಇನ್ನಿತರರಿದ್ದರು.