ಶಾಸಕ ಡಾ.ಅಜಯಸಿಂಗ್ ಅವರ ಗ್ರಾಮಕ್ಕೆ ಬೆಳೆ ಹಾನಿ ಪರಿಹಾರ ಸಿಗುತ್ತೆ ಯಡ್ರಾಮಿಗೇಕೆ ಸಿಗಲ್ಲ? ನೆಲೋಗಿ ಜನ ಮಾತ್ರ ಮತ ಹಾಕ್ತಾರಾ? ಎಂದು ಜನ ಪ್ರಶ್ನಿಸುತ್ತಿದ್ದಾರೆ.
ನೆಲೋಗಿಯ ಬೆಳೆ ಪರಿಹಾರ ಹಾನಿಯ ಬಗ್ಗೆ ದಾಖಲಿಸಲು ಎರಡು ದಿನ ಲಾಗಿನ್ ಓಪನ್ ಮಾಡಿಸಿ ದಾಖಲಿಸಲಾಗಿದೆ. ಯಡ್ರಾಮಿ ತಾಲ್ಲೂಕಿನ ಬಗ್ಗೆಯೂ ಅದೇ ನಿರ್ಧಾರ ಯಾಕೆ ಮಾಡ್ಲಿಲ್ಲ? ಶಾಸಕರಿಗೆ ಅತಿ ಹೆಚ್ಚು ಮತ ಕೊಡುವ ಯಡ್ರಾಮಿ ತಾಲ್ಲೂಕಿನ ಗತಿ ಹೀಗಾದರೆ ಹೇಗೆ? ಶಾಸಕರಿಗೆ ಇದು ಗೊತ್ತಾಗುವುದಿಲ್ಲವೆ? ಎಲ್ಲವೂ ಗೊತ್ತಿದೆ. ರೈತರಿಗೆ ದಕ್ಕಬೇಕಾದ ಪರಿಹಾರ ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಇರಲಿ ಬಿಡು ಎನ್ನುವ ಮನೋಭಾವ ಅವರದು.
ರೈತರಿಗೆ ಬೆಳೆ ಹಾನಿಯ ಪರಿಹಾರ ನೀಡುವಂತೆ ಯುವಕರುˌ ಕನ್ನಡಪರ ಸಂಘಟನೆಯ ಹೋರಾಟಗಾರರು ಯಡ್ರಾಮಿ ತಹಸೀಲ್ ಕಚೇರಿಯ ಮುಂದೆ ಅಹೋರಾತ್ರಿ ಹೋರಾಟ ಮಾಡ್ತಿದ್ದಾರೆ. ಯುವಕರು ರೈತರಿಗೆ ಸಹಾಯವಾಗಲಿ ಎಂದು ಹೋರಾಟ ಮಾಡ್ತಿದ್ದರೆ ಮೂರು ಪಕ್ಷಗಳ ಮುಖಂಡರಿಗೆ ಈಗ ರೈತರೇ ನೆನಪಾಗುತ್ತಿಲ್ಲ. ಯಡ್ರಾಮಿಯಲ್ಲಿ ಎಲ್ಲ ಪಕ್ಷಗಳ ಮುಖಂಡರಿದ್ದರೂ ಸಹ ಎಲ್ಲರೂ ಗಪ್ ಚುಪ್ ಕುಳಿತಿದ್ದಾರೆ. ರೈತರ ಮೇಲೆ ಕನಿಷ್ಟ ಗೌರವವೂ ಈ ನಾಯಕರಿಗೆ ಇಲ್ಲ. ಕನಿಷ್ಟ ಪಕ್ಷ ಈ ಯುವಕರ ಬೆನ್ನಿಗಾದರೂ ನಿಲ್ಲಬೇಕು. ಬೆಳೆ ಪರಿಹಾರ ದಾಖಲಿಸುವಲ್ಲಿ ಶಾಂತಗೌಡ ಬಿರಾದಾರ ವಿಫಲರಾಗಿದ್ದಾರೆ. ತಹಸೀಲ್ ಆಫೀಸಿನಲ್ಲಿ ಪಹಣಿ ತಿದ್ದುಪಡಿಯ ಲಂಚ ಬಂದರೆ ಸಾಕು ಅನ್ನುವ ಮನೋಭಾವ ಅವರದ್ದು.
ಹುಟ್ಟುರಿಗೆ ಬೆಳೆಹಾನಿ ಕೊಡಿಸಿ ಯಡ್ರಾಮಿ ಕೈ ಬಿಟ್ಟು ತಪ್ಪು ಮಾಡಿದ್ದು ಶಾಸಕ ಡಾ.ಅಜಯ್ ಧರ್ಮಸಿಂಗ್ ಅವರೇˌ ಸರಿಪಡಿಸಬೇಕಾದವರು ಅವರೆ. ಕೂಡಲೇ ಜಿಲ್ಲಾಧಿಕಾರಿಗಳಿಗೆ ಹಾಗೂ ಕ್ರಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಮಾತನಾಡಿ ಲಾಗಿನ್ ಓಪನ್ ಮಾಡಿಸಬೇಕು. ಯಡ್ರಾಮಿ ತಾಲ್ಲೂಕಿನಲ್ಲಿ ಸುಮಾರು 10ಕೋಟಿ ಬೆಳೆ ಹಾನಿಯಾಗಿದೆ. ಪರಿಹಾರ ಕೇಳುವಲ್ಲಿ ನ್ಯಾಯವೂ ಇದೆ. ಜೇವರ್ಗಿ ತಾಲ್ಲೂಕಿನ ಆಂದೋಲಾˌ ನೆಲೋಗಿˌ ಜೇವರ್ಗಿ ಹೊಬಳಿಗೆ ಪರಿಹಾರ ಸಿಗುತ್ತೆ ಯಡ್ರಾಮಿಗೆ ಸಿಗುವುದಿಲ್ಲ ಅಂದ್ರೆ ಏನರ್ಥ.
ಕೂಡಲೇ ಶಾಸಕರು ಡಿಸಿˌ ಜಂಟಿ ನಿರ್ದೇಶಕರಿಗೆ ಮಾತನಾಡಿ ಎರಡು ದಿನದ ಮಟ್ಟಿಗೆ ಲಾಗಿನ್ ಓಪನ್ ಮಾಡಿಸಿ ಬೆಳೆ ಹಾನಿಯನ್ನು ದಾಖಲಿಸಲು ಅವಕಾಶ ಮಾಡಿಕೊಡಬೇಕೆಂಬುದು ರೈತರ ಆಗ್ರಹವಾಗಿದೆ.