ಕಲಬುರಗಿ: ಕಳೆದ ಜೂನ್ ೨೬ರಂದು ನಗರದ ಸರ್ವೋದಯ್ ನಗರದ ಬಾಲಾಜಿ ಆಸ್ಪತ್ರೆಯ ಹತ್ತಿರ ಹಿಂದಿನಿಂದ ಎರಡು ದ್ವಿಚಕ್ರವಾಹನಗಳ ಮೇಲೆ ಬಂದ ನಾಲ್ವರು ಸುಲಿಗೆಕೋರರು ದ್ವಿಚಕ್ರವಾಹನದ ಮೇಲಿದ್ದ ನನಗೆ ಹೆದರಿಸಿ ಹಣ ಹಾಗೂ ಮೊಬೈಲ್ ಮುಂತಾದವುಗಳನ್ನು ಸುಲಿಗೆ ಮಾಡಿಕೊಂಡು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಪೂರ್ ಠಾಣೆಯ ಪೋಲಿಸರು ಇಲ್ಲಿಯವರೆಗೆ ಆರೋಪಿಗಳನ್ನು ಬಂಧಿಸಿಲ್ಲ. ಗೆಳೆಯನ ಮೇಲೆ ಸಂಶಯವಿದ್ದು, ಆ ಕುರಿತು ವಿಚಾರಣೆ ಕೈಗೊಳ್ಳಬೇಕು ಎಂದು ದೂರಿ ಜೈಹನುಮಾನ್ ದೇವಸ್ಥಾನ ಹಾಗೂ ಶ್ರೀ ಲಕ್ಷ್ಮೀ ದೇವಸ್ಥಾನ ಟ್ರಸ್ಟ್‌ಗಳ ಅಧ್ಯಕ್ಷರೂ ಆದ ನಿವೃತ್ತ ನೌಕರ ಸಾಯಬಣ್ಣ ತಂದೆ ಮಸಾಜಿ ಹೋಳಕರ್ ಅವರು ಬುಧವಾರ ಈಶಾನ್ಯ ವಲಯ ಪೋಲಿಸ್ ಮಹಾನಿರೀಕ್ಷಕ ಮನೀಷ್ ಖರ್ಬೆಕರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕಳೆದ ಜೂನ್ ೨೬ರಂದು ರಾತ್ರಿ ದ್ವಿಚಕ್ರವಾಹನದ ಮೇಲೆ ಗೆಳೆಯ ಮರೆಪ್ಪ ಸುಂಗಂಧಿಯನ್ನು ರಾಜಾಪೂರ್ ಮನೆಗೆ ಬಿಟ್ಟು ಮರಳಿ ಸರ್ವೋದಯ ನಗರದ ನನ್ನ ಮನೆಗೆ ಹೋಗುವಾಗ ನಾಲ್ವರು ಸುಲಿಗೆಕೋರರು ಎರಡು ದ್ವಿಚಕ್ರವಾಹನಗಳ ಮೇಲೆ ಬಂದು ನನಗೆ ತಡೆದು ಹೆದರಿಸಿ ೧೫೯೯೦ರೂ.ಗಳ ಮೌಲ್ಯದ ಮೊಬೈಲ್ ಫೋನ್, ೪೫೦೦ರೂ.ಗಳು, ೨೦೦೦ರೂ.ಗಳ ಮೌಲ್ಯದ ಕೈಗಡಿಯಾರ, ಒಂದು ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್ ಶಾಖೆಯ ಎಟಿಎಂ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ತೆರಿಗೆ ಪಾವತಿಸಿದ ರಸೀದಿಗಳನ್ನು ತೆಗೆದುಕೊಂಡು ರಾಜಾಪೂರ್ ಕಡೆಗೆ ಪರಾರಿಯಾದರು. ನಾಲ್ವರೂ ೨೦ರಿಂದ ೩೦ ವರ್ಷ ವಯೋಮಿತಿಯೊಳಗೆ ಇದ್ದಾರೆ. ಈ ಕುರಿತು ಮರುದಿನ ೨೭ರಂದು ಬ್ರಹ್ಮಪೂರ್ ಪೋಲಿಸ್ ಠಾಣೆಗೆ ದೂರು ಸಲ್ಲಿಸಿದರೂ ಸಹ ಇಲ್ಲಿಯವರೆಗೆ ಆರೋಪಿಗಳನ್ನು ಪೋಲಿಸರು ಪತ್ತೆ ಹಚ್ಚಿಲ್ಲ ಎಂದು ಹೋಳ್ಕರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಘಟನೆ ಸಂಭವಿಸಿ ೧೫ ದಿನಗಳು ಕಳೆದಿವೆ. ಕೂಡಲೇ ಸೂಕ್ತ ತನಿಖೆ ಕೈಗೊಳ್ಳಬೇಕೆಂದು ಆಗ್ರಹಿಸಿದ ಅವರು, ಗೆಳೆಯ ಮರೆಪ್ಪ ಸುಂಗಂಧಿಯ ಮೇಲೆ ಸಂಶಯ ಇದ್ದು, ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಅಶೋಕ್ ಸಿಂಧೆ, ಬಾಬುರಾವ್ ಕಟ್ಕೆ, ಮನೋಹರ್ ಗಾಜರೆ ಮುಂತಾದವರು ಉಪಸ್ಥಿತರಿದ್ದರು.