ಕಲಬುರಗಿ: ಅನ್ಯ ಇಲಾಖೆಗಳ ಕೆಲಸದ ಹೊರೆಯನ್ನು ಕಡಿತಗೊಳಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬುಧವಾರ ಕರ್ನಾಟಕ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಗ್ರಾಮ ಲೆಕ್ಕಾಧಿಕಾರಿಗಳು ಸಾಂಕೇತಿಕ ಮುಷ್ಕರ ಹಮ್ಮಿಕೊಂಡಿದ್ದರು.
ಸಂಘದ ಜಿಲ್ಲಾಧ್ಯಕ್ಷ ಗುರುಮೂರ್ತಯ್ಯ ಎಸ್. ಚತುರಾಚಾರಿಮಠ್, ಪ್ರಧಾನ ಕಾರ್ಯದರ್ಶಿ ನವಾಜ್ ಮೊಹ್ಮದ್, ಖಜಾಂಚಿ ಪ್ರಶಾಂತ್ ಬಿ. ಮಡಿವಾಳ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪದಾಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಗ್ರಾಮ ಲೆಕ್ಕಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಅನ್ಯ ಇಲಾಖೆಯ ಕೆಲಸದ ಒತ್ತಡವನ್ನು ಇಲಾಖೆಯ ನೌಕರರ ಮೇಲೆ ಹೇರುತ್ತಿರುವ ಕುರಿತು ಸ್ಪಷ್ಟ ಆದೇಶ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಜೆ ದಿನಗಳಲ್ಲಿ ಕೆಲಸದ ಒತ್ತಡ ಹೇರುವುದನ್ನು ನಿಷೇಧಿಸಿ ಸರ್ಕಾರದಿಂದ ಆದೇಶ ಮಾಡಿದ್ದರೂ ಹಲವಾರು ಜಿಲ್ಲೆಗಳಲ್ಲಿ ಪದೇ ಪದೇ ಸಾರ್ವತ್ರಿಕ ರಜೆ ದಿನಗಳಲ್ಲಿ ಕೆಲಸದ ಒತ್ತಡ ಹೇರುತ್ತಿರುವುದರಿಂದ ರಜೆ ದಿನಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯಲು ಆಗದೇ ಕೌಟುಂಬಿಕ ಕಲಹಗಳು ಉಂಟಾಗುತ್ತಿವೆ. ಇದರಿಂದ ಮಾನಸಿಕ ಹತಾಶರಾಗುತ್ತಿದ್ದು, ರಜೆ ದಿನಗಳಲ್ಲಿ ಕೆಲಸದ ಒತ್ತಡ ಹೇರುವುದನ್ನು ನಿಷೇಧಿಸಬೇಕು ಎಂದು ಅವರು ಒತ್ತಾಯಿಸಿದರು.
ಗ್ರಾಮ ಲೆಕ್ಕಾಧಿಕಾರಿಗಳ ಮುಂಬಡ್ತಿಯಲ್ಲಿ ಉಂಟಾಗುತ್ತಿರುವ ನಿರಂತರ ಅನ್ಯಾಯವನ್ನು ಸರಿಪಡಿಸಿ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಮತ್ತು ಗ್ರಾಮ ಲೆಕ್ಕಿಗರ ಜೇಷ್ಠತೆಗಳನ್ನು ಒಗ್ಗೂಡಿಸಿ ಪದ ನವೀಕರಿಸುವಂತೆ, ಗ್ರಾಮ ಲೆಕ್ಕಾಧಿಕಾರಿಗಳ ಪ್ರಯಾಣ ಭತ್ಯೆ ದರವನ್ನು ೧೦೦೦ರೂ.ಗಳಿಗೆ ಹೆಚ್ಚಿಸಲು ಪ್ರಧಾನ ಕಾರ್ಯದರ್ಶಿಗಳು ಕಂದಾಯ ಇಲಾಖೆಯವರೇ ತೀರ್ಮಾನಿಸಿರುವಾಗ ಹಾಗೂ ರಾಜ್ಯ ಸಂಘವು ೧೦೦೦ರೂ.ಗಳಿಗೆ ಹೆಚ್ಚಿಸಲು ಆರನೇ ವೇತನ ಆಯೋಗಕ್ಕೂ ಮನವಿ ಸಲ್ಲಿಸಿತ್ತು. ಆದಾಗ್ಯೂ, ಸರ್ಕಾರ ಕೇವಲ ೩೦೦ರೂ.ಗಳಿಂದ ೫೦೦ರೂ.ಗಳವರೆಗೆ ಮಾತ್ರ ಹೆಚ್ಚಿಸಿದ್ದು, ಅದನ್ನು ಪುನರ್ ಪರಿಶೀಲಿಸಿ ೧೦೦೦ರೂ.ಗಳಿಗೆ ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದರು.
ಗ್ರಾಮ ಲೆಕ್ಕಾಧಿಕಾರಿಗಳ ಜಾಬ್ ಚಾರ್ಟ್ ನೀಡುವ ಕುರಿತು ತೀರ್ಮಾನಿಸಿದ್ದರೂ ಇದುವರೆಗೂ ಪರಿಷ್ಕೃತ ಜಾಬ್ ಚಾರ್ಟ್ ಕೊಟ್ಟಿಲ್ಲ. ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಅವರು, ಮರಳು ಲಾರಿ ಹರಿದು ಗ್ರಾಮ ಲೆಕ್ಕಾಧಿಕಾರಿ ಸಾಹೇಬ್ ಪಟೇಲ್ ಅಸುನೀಗಿದ್ದು, ಆತನ ಸಂತ್ರಸ್ತ ಕುಟುಂಬಕ್ಕೆ ವಿಶೇಷ ಪರಿಹಾರವಾಗಿ ೨೦ ಲಕ್ಷ ರೂ.ಗಳನ್ನು ಕೊಡುವಂತೆ ಆಗ್ರಹಿಸಿದರು.