ಬಾಗಲಕೋಟೆ : ಮಜೂರಿ (ಕೂಲಿ) ಮೊತ್ತ ಹೆಚ್ಚಳಕ್ಕೆ ಆಗ್ರಹಿಸಿ ನೇಕಾರರು ಮುಷ್ಕರ ಕೈಗೊಂಡಿದ್ದಾರೆ. ಹೀಗಾಗಿ ಜಿಲ್ಲೆಯ ನೇಕಾರಿಕೆ ಪಟ್ಟಣಗಳಾದ ರಬಕವಿ, ರಾಂಪುರ ಹಾಗೂ ತೇರದಾಳದಲ್ಲಿನ 2,500ಕ್ಕೂ ಹೆಚ್ಚು ವಿದ್ಯುತ್ ಮಗ್ಗಗಳು ಡಿ.22ರಿಂದ ಸ್ತಬ್ಧಗೊಂಡಿವೆ.
ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಿದೆ. ನಿತ್ಯದ ಬದುಕು ಕಷ್ಟವಾಗಿದೆ. ಈಗಿರುವ ಕೂಲಿ ದರ ಶೇ 30ರಷ್ಟು ಹೆಚ್ಚಳಗೊಳಿಸಿ ಎಂಬುದು ಮುಷ್ಕರ ನಿರತರ ಆಗ್ರಹ. ‘ಕೋವಿಡ್‌ನಿಂದ ವ್ಯಾಪಾರ ಕಡಿಮೆ ಆಗಿದೆ. ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿ ನಾವೂ ಸಂಕಷ್ಟದಲ್ಲಿದ್ದೇವೆ. ಶೇ 5ರಷ್ಟು ಮಾತ್ರ ಹೆಚ್ಚಿಸುತ್ತೇವೆ’ ಎನ್ನುವುದು ಮಗ್ಗಗಳ ಮಾಲೀಕರ ವಾದ. ಇದು ಸಮಸ್ಯೆಯನ್ನು ಕಗ್ಗಂಟಾಗಿಸಿದೆ.
‘ಮಗ್ಗಗಳಲ್ಲಿ ಇಡೀ ದಿನ ಕೆಲಸ ಮಾಡಿದರೂ ಈಗ ₹200 ಕೂಲಿ ಸಿಗುತ್ತದೆ. ಹೋಟೆಲ್‌ಗಳಲ್ಲಿ ಕ್ಲೀನರ್‌ಗೆ ದಿನಕ್ಕೆ ₹300 ಕೂಲಿ ಕೊಟ್ಟು ಊಟ, ತಿಂಡಿ ಕೊಡುತ್ತಾರೆ’ ಎಂದು ಜಮಖಂಡಿ ತಾಲ್ಲೂಕು ವಿದ್ಯುತ್ ಮಗ್ಗಗಳ ನೇಕಾರರ ಸಂಘದ ಅಧ್ಯಕ್ಷ ಸಂಗಪ್ಪ ಕುಂದಗೋಳ ಆಕ್ರೋಶ ವ್ಯಕ್ತಪಡಿಸುತ್ತಾರೆ.
‘ಕೂಲಿ ನಿಗದಿಗೆ ಸಂಬಂಧಿಸಿದಂತೆ ನೇಕಾರರು ಹಾಗೂ ಮಗ್ಗಗಳ ಮಾಲೀಕರ ನಡುವೆ ಪ್ರತಿ ಮೂರು ವರ್ಷಕ್ಕೊಮ್ಮೆ ಒಪ್ಪಂದ ಆಗುತ್ತದೆ. ಕಳೆದ ಬಾರಿಯ ಒಪ್ಪಂದ 2020ರ ಮೇ 21ಕ್ಕೆ ಮುಗಿದಿದೆ. ಕೋವಿಡ್ ಕಾರಣ ನಾವೇ ಕೂಲಿ ಹೆಚ್ಚಳದ ಪ್ರಸ್ತಾಪ ಮಾಡಿರಲಿಲ್ಲ. ಈಗ ನಾವು ಬದುಕುವುದೇ ಕಠಿಣವಾಗಿರುವುದರಿಂದ ಬೇಡಿಕೆ ಇಟ್ಟಿದ್ದೇವೆ’ ಎನ್ನುತ್ತಾರೆ.
‘ಕೋವಿಡ್ ಸಂಕಷ್ಟದ ನಂತರ ನೇಯ್ಗೆಗೆ ಬಳಸುವ ನೂಲಿನ ದರ ಪ್ರತಿ ಬೇಲ್‌ಗೆ (100 ಕೆ.ಜಿ) ₹2ರಿಂದ 4 ಸಾವಿರ ಹೆಚ್ಚಳಗೊಂಡಿದೆ. ಬಣ್ಣ ಪ್ರತಿ ಕೆ.ಜಿಗೆ ₹2,000 ಹೆಚ್ಚಿದೆ. ಈಗ ಜನರ ಬಳಿ ಹಣವಿಲ್ಲ. ಇದ್ದರೂ ಖರ್ಚು ಮಾಡಲು ಹಿಂದೇಟು ಹಾಕುತ್ತಾರೆ. ಇದರಿಂದ ಸೀರೆ ವ್ಯಾಪಾರ ಶೇ 50ರಷ್ಟು ಕುಸಿದಿದೆ. ಇಂತಹ ಸಂಕಷ್ಟದಲ್ಲಿ ಶೇ 30ರಷ್ಟು ಮಜೂರಿ ಹೆಚ್ಚಿಸಲು ಕೇಳಿದರೆ ಹೇಗೆ’ ಎಂದು ವಿದ್ಯುತ್ ಮಗ್ಗಗಳ ಮಾಲೀಕರ ಸಂಘದ ಅಧ್ಯಕ್ಷ ನೀಲಕಂಠ ಮುತ್ತೂರ ಪ್ರಶ್ನಿಸುತ್ತಾರೆ.
‘ಮಗ್ಗಗಳ ಆಶ್ರಯಿಸಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ 4,500 ಮಂದಿ ಕೆಲಸ ಮಾಡುತ್ತಿದ್ದೇವೆ. ಹಲವು ಬಾರಿ ಸಂಧಾನ ಸಭೆ ನಡೆದರೂ ಒಮ್ಮತ ಮೂಡಿಲ್ಲ. ಈ ನೀ ಕೊಡೆ, ನಾ ಬಿಡೆ ಆಟದಲ್ಲಿ 15 ದಿನಗಳಿಂದ ಕೆಲಸವಿಲ್ಲದೇ ದಿನದೂಡುತ್ತಿದ್ದೇವೆ’ ಎಂದು ನೇಕಾರ, ತೇರದಾಳದ ಹಣಮಪ್ಪ ಸೂರೇಬಾನ ಅಳಲು ತೋಡಿಕೊಳ್ಳುತ್ತಾರೆ.
ಮಗ್ಗಗಳಲ್ಲಿ ಕೆಲಸ ಮಾಡುವ ನಮಗೆ ಸಿಗುವ ಕೂಲಿ, ಹೋಟೆಲ್‌ಗಳಲ್ಲಿ ಕ್ಲೀನರ್‌ಗೆ ಸಿಗುವ ಕೂಲಿಗಿಂತ ಕಡಿಮೆ. ಹೀಗಾಗಿ ಮಜೂರಿ ಹೆಚ್ಚಿಸಲೇಬೇಕು – ಸಂಗಪ್ಪ ಕುಂದಗೋಳ, ಜಮಖಂಡಿ, ವಿದ್ಯುತ್ ಮಗ್ಗಗಳ ನೇಕಾರರ ಸಂಘದ ಅಧ್ಯಕ್ಷ
ಮಜೂರಿ ಶೇ 30ರಷ್ಟು ಹೆಚ್ಚಿಸಬೇಕೆಂದರೆ ಹೇಗೆ? ಶೇ 5ರಷ್ಟು ಹೆಚ್ಚಿಸುತ್ತೇವೆ. ನಾವೂ ಬದುಕುತ್ತೇವೆ. ಅವರೂ ಬದುಕಲಿ. – ನೀಲಕಂಠ ಮುತ್ತೂರವಿದ್ಯುತ್ ಮಗ್ಗಗಳ ಮಾಲೀಕರ ಸಂಘದ ಅಧ್ಯಕ್ಷ