ಹಾವೇರಿ: ‘ಗ್ರಾಮಗಳಲ್ಲೂ ಕರ್ಫ್ಯೂ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗಬೇಕು. ಈ ನಿಟ್ಟಿನಲ್ಲಿ ರಾತ್ರಿ ವೇಳೆ ತಹಶೀಲ್ದಾರ್‌ಗಳು ಹಳ್ಳಿಗಳಲ್ಲಿ ಸಂಚಾರ ಕೈಗೊಂಡು ಕರ್ಫ್ಯೂ ಪಾಲನೆ ಕುರಿತಂತೆ ಪರಿಶೀಲನೆ ನಡೆಸಬೇಕು’ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.
ಜಿಲ್ಲೆಯ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಬುಧವಾರ ‘ವಿಡಿಯೊ ಸಂವಾದ’ ನಡೆಸಿದ ಅವರು, ಮಾಸ್ಕ್ ಧರಿಸದೇ, ಅಂತರ ಕಾಯ್ದುಕೊಳ್ಳದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಿ, ದಂಡಹಾಕಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ದಿನದ 24 ತಾಸು ಕಾರ್ಯನಿರ್ವಹಿಸುವಂತೆ ಜಿಲ್ಲಾ ಮಟ್ಟದ ಕೋವಿಡ್ ಸಹಾಯವಾಣಿ ಹಾಗೂ ತಾಲ್ಲೂಕುವಾರು ಕೋವಿಡ್ ಸಹಾಯವಾಣಿಗಳನ್ನು ಆರಂಭಿಸಿ, ಸಾರ್ವಜನಿಕರಿಗೆ ಸಹಾಯವಾಣಿ ಕುರಿತಂತೆ ಮಾಹಿತಿ ನೀಡಬೇಕು.
ಕೋವಿಡ್ ಸೋಂಕಿತರು ಸಹಾಯಕೋರಿ ಸಹಾಯವಾಣಿಗೆ ಸಂಪರ್ಕಿಸಿದರೆ ಚಿಕಿತ್ಸೆ, ಹಾಸಿಗೆ ವ್ಯವಸ್ಥೆ, ಆಮ್ಲಜನಕ ವ್ಯವಸ್ಥೆ ಸೇರಿದಂತೆ ನೆರವು ನೀಡಬೇಕು. ಪ್ರತಿ ಸಹಾಯವಾಣಿಗೆ ಅಧಿಕಾರಿ ಮತ್ತು ಸಿಬ್ಬಂದಿ ನೇಮಕ ಮಾಡಿ ಸೂಕ್ತ ತರಬೇತಿ ನೀಡುವಂತೆ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿದರು.
ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ‘ಕಾಂಟ್ಯಾಕ್ಟ್ ಟ್ರೇಸಿಂಗ್ ಆಯಪ್’ ಹಾಗೂ ‘ಕ್ವಾರಂಟೈನ್ ವಾಚ್ ಆಯಪ್’ಗೆ ತಾಲ್ಲೂಕುವಾರು ಸಿಬ್ಬಂದಿ ನೇಮಕ ಮಾಡಬೇಕು. ‘ಕಾಂಟ್ಯಾಕ್ಟ್ ಟ್ರೇಸಿಂಗ್ ಆಯಪ್’ ಡೌನ್‍ಲೋಡ್ ಮಾಡಿಕೊಂಡು ಅದನ್ನು ಬಳಸುವ ಕುರಿತಂತೆ ತರಬೇತಿ ಆಯೋಜಿಸಬೇಕು. ಶಾಲಾ ಶಿಕ್ಷಕರನ್ನು ಹೊರತುಪಡಿಸಿ ಇತರ ಸಿಬ್ಬಂದಿಯನ್ನು ಈ ಕಾರ್ಯಕ್ಕೆ ನಿಯೋಜಿಸಿ ಪಟ್ಟಿ ನೀಡುವಂತೆ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಿದರು.
‘ಗಡಿ ಭಾಗದಲ್ಲಿ ಎಚ್ಚರಿಕೆ ವಹಿಸಿ’ —
ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಮಾಡಬೇಕು. ಗೋವಾ, ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯಗಳಿಂದ ಬರುವ ಬಸ್‍ಗಳ ಪ್ರಯಾಣಿಕರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಬೇಕು. ಗಡಿ ಭಾಗದಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.
ಶನಿವಾರ ಹಾಗೂ ಭಾನುವಾರ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸುವುದರಿಂದ ಈ ದಿನಗಳಲ್ಲಿ ನಡೆಯುವ ಸಂತೆಗಳನ್ನು ಬೇರೆ ದಿನ ನಿಗದಿಪಡಿಸಬೇಕು. ಬಾಕಿ ದಿನಗಳಲ್ಲಿ ನಡೆಯುವ ಸಂತೆಗಳಲ್ಲಿ ಕಟ್ಟುನಿಟ್ಟಾಗಿ ಕೋವಿಡ್ ಮಾರ್ಗಸೂಚಿಗಳು ಪಾಲನೆಯಾಗಬೇಕು. ಕಡ್ಡಾಯವಾಗಿ ವ್ಯಾಪಾರಸ್ಥರು ಮತ್ತು ಖರೀದಿದಾರರು ಮಾಸ್ಕ್ ಧರಿಸಬೇಕು, ಅಂತರ ಕಾಯ್ದುಕೊಳ್ಳಬೇಕು ಎಂದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಜಿ.ಪಂ.ಉಪಕಾರ್ಯದರ್ಶಿ ಮುಳ್ಳಳ್ಳಿ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ಡಿಎಚ್‌ಒ ಡಾ.ಎಚ್.ಎಸ್.ರಾಘವೇಂದ್ರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್.ಹಾವನೂರ ಇತರ ಆರೋಗ್ಯ ಅಧಿಕಾರಿಗಳು ಭಾಗವಹಿಸಿದ್ದರು.