ಆಳಂದ: ಶತ ಶತಮಾನಗಳಿಂದ ಶೋಷಣೆಗೆ ಒಳಗಾಗಿ, ನಾಲ್ಕು ಗೋಡೆಗೆ ಸೀಮಿತವಾಗಿದ್ದ ಮಹಿಳೆಯರಿಗೆ ಅಕ್ಷರ ಕಲಿಸಿ,ಆತ್ಮಾಭಿಮಾನ ಮೂಡಿಸಿ ಪುರುಷರಿಗೆ ಸರಿಸಮನಾಗಿ ನಿಲ್ಲುವಂತೆ ಮಾಡಿರುವ ಸಾವಿತ್ರಿಬಾಯಿ ಪುಲೆ ಅವರು ಮಹಿಳೆಯರ ಬಾಳಿನ ಆಶಾಕಿರಣವಾಗಿದ್ದಾರೆ ಎಂದು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಶ್ರೀಶೈಲ ಮಾಡ್ಯಾಳೆ ಹೇಳಿದರು.
ತಾಲ್ಲೂಕಿನ ಕೊರಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಸೋಮವಾರ ನಡೆದ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಪುಲೆಯವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತ, ಮನುವಾದಿಗಳು ಎಷ್ಟೇ ತೊಂದರೆ ಕೊಟ್ಟರೂ ಎದೆಗುಂದದೆ ಪತಿಯ ಸಹಕಾರದಿಂದ ಸಮಾಜದ ಎಲ್ಲ ಸ್ತರದ ಮಹಿಳೆಯರ ಏಳಿಗೆಗಾಗಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು.ಅನಿಷ್ಟ ಪದ್ದತಿಗಳ ನಿರ್ಮೂಲನೆಗೆ ಶ್ರಮಿಸಿದರು. ವಿದ್ಯಾರ್ಥಿನಿಯರು ಅವರ ಬದುಕು ಆದರ್ಶವಾಗಿಟ್ಟುಕೊಳ್ಳಬೇಕೆಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಪ್ರಾಂಶುಪಾಲ ಡಾ.ರಾಜಶೇಖರ ಮಾಂಗ್ ಮಾತನಾಡಿ, ಮಹಿಳೆಯರು ಅದರಲ್ಲೂ ಶೋಷಿತ ವರ್ಗದ ಮಹಿಳೆಯರು ಘನತೆ ಗೌರವದಿಂದ ಜೀವನ ನಡೆಸುತ್ತಿರುವುದು ಪುಲೆ ದಂಪತಿಗಳ ಹೋರಾಟ ಹಾಗೂ ಬಾಬಾ ಸಾಹೇಬ್ ಡಾ.ಬಿ.ಅರ್.ಅಂಬೇಡ್ಕರ್ ಅವರ ಸಂವಿಧಾನದಿಂದ. ಭಾರತೀಯ ಮಹಿಳಾ ಸಮುದಾಯ ಅವರ ತ್ಯಾಗ, ಪರಿಶ್ರಮ ಸದಾ ಸ್ಮರಿಸಬೇಕೆಂದು ತಿಳಿಸಿದರು.
ವೇದಿಕೆಯ ಮೇಲೆ ಶಾಲಾ ಸಂಸತ್ತಿನ ಉಪ ಪ್ರಧಾನಿ ವರ್ಷಾ, ,ನಿಲಯ ಪಾಲಕಿ ನಾಗಮ್ಮ ಆವಟೆ ಉಪಸ್ಥಿತರಿದ್ದರು.
ಚೈತನ್ಯ ವಚನ ಹಾಡಿದರು. ಸಿಂಧೂ ಸ್ವಾಗತಿಸಿದರು. ಸೌಂದರ್ಯ ನಿರೂಪಿಸಿದರು. ಕೊನೆಯಲ್ಲಿ ಕಾವೇರಿ ವಂದಿಸಿದರು.ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.