ಯಾದಗಿರಿ: ದೇಶದ ಭವಿಷ್ಯ ರೂಪಿಸುವ ಚುನಾವಣೆ ನಡೆಯಲಿದ್ದು.ನೀವೆಲ್ಲ ಅಭಿವೃದ್ದಿಪರ, ಸಂವಿಧಾನಪರ, ಪ್ರಜಾಪ್ರಭುತ್ವದ ಉಳಿವಿಗಾಗಿ ಪರಿಶ್ರಮಿಸುತ್ತಿರುವವರಿಗೆ ಮತನೀಡಬೇಕು ಎಂದು ಕರೆನೀಡಿದರು.
ಗುರುಮಠಕಲ್ ಮತಕ್ಷೇತ್ರದ ಕೊಂಕಲ್ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ನಿಮ್ಮ ಆಶೀರ್ವಾದದಿಂದ 11 ಸಲ ಆರಿಸಿ ಬಂದಿದ್ದೇನೆ. ಗುರುಮಠಕಲ್ ಭಾಗದ ಜನರ ಪ್ರೀತಿ, ವಿಶ್ವಾಸ ಹಾಗೂ ಆಶೀರ್ವಾದಿಂದ ನಾನು ವಿಧಾನಸಭೆ ಪ್ರವೇಶ ಮಾಡಿದೆ. ನಿಮ್ಮ ಆಶಯಗಳಂತೆ ಕೆಲಸ ಮಾಡಿದ್ದೇನೆಯೇ ಹೊರೆತು ತಲೆ ತಗ್ಗಿಸುವ ಕೆಲಸ ಮಾಡಿಲ್ಲ ಎಂದರು.
ನನ್ನನ್ನು ಇಂದ್ರ ಚಂದ್ರ ಎಂದು ಹಾಡಿ ಹೊಗಳಿ ಅಭಿವೃದ್ದಿ ಹೊಂದಿದ ಕೆಲವರು ಈಗ ನನ್ನನ್ನು ಸೋಲಿಸಲು ಹೊರಟಿದ್ದಾರೆ. ಸಂಸತ್ತಿನಲ್ಲಿ ಮೋದಿಗೆ ನಾನು ಮುಳ್ಳಾಗಿ ನಿಂತಿದ್ದೇನೆ. ಹಾಗಾಗಿ ಇವರಿಗೆ ಮೋದಿ ಸಹಕಾರ ನೀಡುತ್ತಿದ್ದಾರೆ. ಎಲ್ಲಿಯವರೆಗೆ ಮತದಾರರ ಆಶೀರ್ವಾದ ಇರುವವರೆಗೆ ಈ ” ಸೋತವರ ಸಂಘ” ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಮಗೆ 15 ಲಕ್ಷ ಹಣ ನೀಡುವುದಾಗಿ ಭರವಸೆ ನೀಡಿದ್ದರಲ್ಲ ಯಾರಿಗಾದರು ಮೋದಿ ದುಡ್ಡು ತಲುಪಿದೆಯಾ ? ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಹೇಳಿದ್ದರು. ಇದರಲ್ಲಿ ಯಾವುದಾದರೂ ಬೇಡಿಕೆ ಈಡೇರಿದೆಯಾ ಎಂದು ಪ್ರಶ್ನಿಸಿದರು. ” ನ್ಯಾಯ್” ನೂತನ ಯೋಜನೆ ಪ್ರಕಾರ ದೇಶದ 25 ಕೋಟಿ ಕುಟುಂಬದವರಿಗೆ ವಾರ್ಷಿಕ ರೂ 72,000 ಕೋಟಿ ಹಣ ಹಾಕುವ ಯೋಚನೆ ಕಾಂಗ್ರೇಸ್ ಪಕ್ಷ ಹೊಂದಿದೆ ಎಂದು ಹೇಳಿದರು.
ಗುರುಮಠಕಲ್ ನ ಭಾಗದಲ್ಲಿ ಅನೇಲ ಜನಪರ ಕೆಲಸ ಮಾಡಿದ್ದೇನೆ. ಕುಡಿಯುವ ನೀರು, ಒಳಚರಂಡಿ, ಶಾಲೆಗಳನ್ನು ನಿರ್ಮಿಸುವ ಮೂಲಕ ನನ್ನ ಬದ್ದತೆ ತೋರಿಸಿದ್ದೇನೆ. ಆದರೆ ಈಗ ಕುಣಿದು ಕುಣಿದು ಮಾತನಾಡುವವರು ಅಭಿವೃಧ್ದಿ ಕೆಲಸವನ್ನೊಮ್ಮೆ ನೋಡಲಿ ಎಂದು ಟಾಂಗ್ ನೀಡಿದರು. ಸಂಸದನಾಗಿ ಕಲಬುರಗಿಯಲ್ಲಿ ಕೇಂದ್ರೀಯ ವಿವಿ, ಇಎಸ್ ಐಸಿ, ಜಯದೇವ, ಕ್ಯಾನ್ಸರ್ ಆಸ್ಪತ್ರೆ, ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಿದ್ದಲ್ಲದೇ ಹೈಕ ಭಾಗದ ಶೈಕ್ಷಣಿಕ ಹಾಗೂ ಔದ್ಯೋಗಿಕ ಸಮಸ್ಯೆಗಳನ್ನು ನೀಗಿಸಲು ಸಂವಿಧಾನಸ 371 ಕಲಂ ಗೆ ತಿದ್ದುಪಡಿ ತಂದು ವಿಶೇಷ ಸ್ಥಾನಮಾನ ಕಲ್ಪಿಸಿದ್ದು ಕಾಂಗ್ರೇಸ್ ಹಾಗೂ ನಾನು ಎಂದು ಒತ್ತಿ ಹೇಳಿದರು.
ಕೊಂಕಲ್ ಗ್ರಾಮವನ್ನು ಸಂಸದರ ಆದರ್ಶ ಗ್ರಾಮ ಯೋಜನೆಯಲ್ಲಿ ಸುಮಾರು 7 ಕೋಟಿ ಖರ್ಚು ಮಾಡಿ ರಸ್ತೆ, ಚರಂಡಿ ನಿರ್ಮಾಣ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿದ್ದೇನೆ. ಅಭಿವೃದ್ದಿ ಕೆಲಸ ಮಾಡಿ ಈಗ ಮಾಡಿದ ಕೆಲಕ್ಕೆ ಕೂಲಿ ಕೇಳುತ್ತಿದ್ದೇನೆ. ಮೋದಿ ಹೇಳುತ್ತಾರೆ 18,000 ಹಳ್ಳಿಗಳಿಗೆ ವಿದ್ಯುತ್ ಒದಗಿಸಿರುವುದಾಗಿ ಹೇಳುತ್ತಾರೆ. ಸ್ವಾತಂತ್ರ್ಯ ನಂತರ 6.32 ಲಕ್ಷ ಹಳ್ಳಿಗಳಿಗೆ ವಿದ್ಯುತ್ ಒದಗಿಸಲಾಗಿದೆ ಎನ್ನುವುದನ್ನು ಮರೆತಿದ್ದಾರೆ ಎಂದು ವ್ಯಂಗ್ಯವಾಡಿದರು.
ಮಲ್ಲಿಕಾರ್ಜುನ ಖರ್ಗೆ ಅವರ ಗೆಲುವು ನಿಶ್ಚಿತ ಎಂದು ಮಾಜಿ ಎಂ ಎಲ್ ಸಿ ಜಲಜಾ ನಾಯಕ್ ಅಭಿಪ್ರಾಯ ವ್ಯಕ್ತಪಡಿಸಿದರು. ಬಂಜಾರ ಸಮುದಾಯದಲ್ಲಿ ಹುಟ್ಟಿರುವ ನಮ್ಮಂತರವನ್ನು ರಾಜಕೀಯ ಗುರುತಿಸಿ ಬೆಳೆಸಿದ ಕೀರ್ತಿ ಖರ್ಗೆ ಸಾಹೇಬರಿಗೆ ಸೇರಬೇಕು. ಜನಪರ ನಿಲುವು ಹಾಗೂ ಕಳೆದ ನಾಲ್ಕು ದಶಕಗಳ ಕಾಲ ಅಭಿವೃದ್ದಿ ಕಾರ್ಯಕ್ರಮಗಳ ಮೂಲಕ ಈ ಭಾಗದ ಮಹಾನ್ ನಾಯಕರಾದ ಖರ್ಗೆ ಅವರನ್ನು ಗೆಲ್ಲಿಸಬೇಕು ಎಂದು ಕರೆನೀಡಿದರು.
ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ, ಕೇಂದ್ರ ಸರಕಾರ ಬಡವರ, ಕೂಲಿ- ಕಾರ್ಮಿಕರ ಹಾಗೂ ರೈತ ವಿರೋಧಿ ಅನುಸರಿಕೊಂಡಿದ್ದು ಬಂದಿದ್ದು ಮತದಾರರು ಈ ಸಲ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕಪಡಿಸಿದರು.
ಎಂಎಲ್ ಸಿಗಳಾದ ಶರಣಪ್ಪ ಮಟ್ಟೂರು, ಬಸವರಾಜ್ ಇಟಗಿ ಜಿಪಂ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಮರಿಗೌಡ ಹುಲಕಲ್, ಜಿಪಂ ಸದಸ್ಯ ಬಸರೆಡ್ಡಿ ಅನಪೂರ, ವಿಶ್ವನಾಥ ನೀಲಹಳ್ಳಿ ಸೇರಿದಂತೆ, ಸಿದ್ದಲಿಂಗರೆಡ್ಡಿ ಉಳ್ಳೆಸೂಗೂರು ಸೇರಿದಂತೆ ಹಲವರು ವೇದಿಕೆ ಮೇಲಿದ್ದರು.