ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ಪಡೆಯಲು ರೈತರಿಗೆ ಡಿಸಿ ಕರೆ

0
88

ಕಲಬುರಗಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು ಸೇರಿದಂತೆ ಎಲ್ಲಾ ರೈತರಿಗೆ ಕೃಷಿ ಇಲಾಖೆಯು ರೈತ ಸಂಪರ್ಕ ಕೇಂದ್ರದ ಮೂಲಕ ಸಬ್ಸಿಡಿ ದರದಲ್ಲಿ ಬಿತ್ತನೆ ಬೀಜ ವಿತರಿಸುತ್ತಿದ್ದು, ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಾದ ಆರ್. ವೆಂಕಟೇಶ್ ಕುಮಾರ್ ಅವರು ಕರೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಅನುಸೂಚಿತ ಬುಡಕಟ್ಟುಗಳ ಉಪ ಯೋಜನೆಯಡಿ ಕಾರ್ಯಕ್ರಮ ಅನುಷ್ಠಾನದ ಕುರಿತ ಜಿಲ್ಲಾ ಮಟ್ಟದ ಮೇಲ್ವಿಚಾರಣೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ತೊಗರಿ, ಉದ್ದು, ಹೆಸರು, ಸೋಯಾಬೀನ್ ಬಿತ್ತನೆ ಬೀಜಗಳನ್ನು ಪ್ರತಿ ಕಿಲೋ ಗ್ರಾಂ.ಗೆ ಎಸ್‌ಸಿ-ಎಸ್ಟಿ ಜನಾಂಗದ ರೈತರಿಗೆ ೩೭.೫೦ ರೂಪಾಯಿ ಸಬ್ಸಿಡಿ ಹಾಗೂ ಇತರೆ ರೈತರಿಗೆ ೨೫ ರೂಪಾಯಿ ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತದೆ ಎಂದು ಅವರು ತಿಳಿಸಿದರು.

Contact Your\'s Advertisement; 9902492681

ಭತ್ತದ ಬಿತ್ತನೆ ಬೀಜವನ್ನು ಎಸ್‌ಸಿ-ಎಸ್ಟಿ ಜನಾಂಗದ ರೈತರಿಗೆ ೧೨ ರೂಪಾಯಿ ಸಬ್ಸಿಡಿ ಹಾಗೂ ಇತರೆ ರೈತರಿಗೆ ೮ ರೂಪಾಯಿ ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ. ಸೂರ್ಯಕಾಂತಿ ಬಿತ್ತನೆ ಬೀಜ ಎಸ್‌ಸಿ-ಎಸ್ಟಿ ಜನಾಂಗದ ರೈತರಿಗೆ ೧೨೦ ರೂಪಾಯಿ ಸಬ್ಸಿಡಿ ಹಾಗೂ ಇತರೆ ರೈತರಿಗೆ ೮೦ ರೂಪಾಯಿ ಸಬ್ಸಿಡಿ ದರದಲ್ಲಿ ದೊರೆಯಲಿವೆ. ಹಾಗೆಯೇ ಸಜ್ಜೆ, ಮುಸುಕಿನ ಜೋಳದ ಬಿತ್ತನೆ ಬೀಜಗಳನ್ನೂ ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತಿದ್ದು, ರೈತರು ಬಿತ್ತನೆ ಬೀಜ ಪಡೆಯುವ ಮೂಲಕ ಕೃಷಿ ಚಟುವಟಿಕೆ ಕೈಗೊಳ್ಳುವಂತೆ ಅವರು ಕೋರಿದ್ದಾರೆ.

ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಬಿತ್ತನೆ ಬೀಜ ವಿತರಣೆ ಯಾವ ರೀತಿ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿಗಳು ಕೇಳಲಾಗಿ, ಇದಕ್ಕೆ ಉತ್ತರಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ರತೇಂದ್ರನಾಥ ಸೂಗೂರು ಅವರು, ೨೦೧೯-೨೦ನೇ ಸಾಲಿನಲ್ಲಿ ಎಸ್‌ಸಿಪಿ ಯೋಜನೆಯಡಿಯಲ್ಲಿ ಮುಂಗಾರು ಬಿತ್ತನೆ ಬೀಜಕ್ಕಾಗಿ ರಾಜ್ಯ ವಲಯದ ಅನುದಾನದಲ್ಲಿ ೨ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಈಗಾಗಲೇ ೧.೦೭ ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಈ ಪೈಕಿ ೧.೦೧ ಕೋಟಿ ರೂಪಾಯಿ ಖರ್ಚಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ವಾರ್ಷಿಕ ೨೦೬೫೧ ಫಲಾನುಭವಿಗಳ ಗುರಿ ಹೊಂದಲಾಗಿದ್ದು, ಇದುವರೆಗೆ ೧೬೦೦೪ ಫಲಾನುಭವಿ ರೈತರಿಗೆ ೧೪ ಸಾವಿರ ಕ್ವಿಂಟಲ್ ಬಿತ್ತನೆ ಬೀಜ ವಿತರಿಸಲಾಗಿದೆ. ಇದುವರೆಗೆ ಶೇಕಡ ೭೭.೫೦ರಷ್ಟು ಸಾಧನೆ ಮಾಡಲಾಗಿದೆ ಎಂದು ಅಂಕಿ-ಅಂಶ ಸಹಿತ ಅವರು ವಿವರಿಸಿದರು. ನರೇಗಾದಡಿ ಬೆಕ್ ಡ್ಯಾಂ, ಕೃಷಿ ಹೊಂಡ, ಕಂದಕ ಬದುಗಳ ನಿರ್ಮಾಣ ಮುಂತಾದವುಗಳ ಕಾಮಗಾರಿ ನಡೆಸುವ ಮೂಲಕ ಅಂತರ್ಜಲ ವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಪಿ ರಾಜಾ ಅವರು, ಬಳ್ಳಾರಿ ಜಿಲ್ಲೆಯಲ್ಲಿ ಪ್ರತಿದಿನ ನರೇಗಾದಡಿ ೧೦ ಸಾವಿರ ಕಾಮಗಾರಿ ನಡೆಸಲಾಗುತ್ತದೆ. ಕಲಬುರಗಿ ಜಿಲ್ಲೆಯಲ್ಲಿ ದಿನವೊಂದಕ್ಕೆ ಕನಿಷ್ಠ ೫ ಸಾವಿರ ನಡೆಸಬೇಕು ಎಂದು ತಾಕೀತು ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here