ಕೇಂದ್ರದಿಂದ ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ಅವಮಾನ: ಮಾಜಿ ಸಚಿವ ಶರಣಪ್ರಕಾಶ ಪಾಟೀಲ್

0
62

ಕಲಬುರಗಿ: ಅಸ್ಪೃಶ್ಯತೆ, ಅಸಮಾನತೆಯನ್ನ ತೊಡೆದು ಹಾಕುವ ಆದರ್ಶಗಳನ್ನು ಪ್ರತಿಪಾದಿಸಿದ ಮಹಾನ್ ದಾರ್ಶನಿಕ ಶ್ರೀ ನಾರಾಯಣಗುರು ಅವರ ಸ್ತಬ್ಧಚಿತ್ರವನ್ನು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ತಿರಸ್ಕರಿಸಿದೆ, ಈ ಮೂಲಕ ದ್ರಾವಿಡ ನೆಲದ ಅಸ್ಮಿತೆಗೆ, ನಾರಾಯಣಗುರುಗಳಿಗೆ, ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ಬಿಜೆಪಿ ಸರಕಾರ ಅವಮಾನಿಸಿದೆ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರರಾದ ಡಾ. ಶರಣಪ್ರಕಾಶ ಆರ್. ಪಾಟೀಲ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾರಾಯಣ ಗುರುಗಳನ್ನು ಬಿಜೆಪಿ ಸರ್ಕಾರ ತಿರಸ್ಕರಿಸಲು ಕಾರಣವೇನು? ಅವರ ಸಮಾನತೆಯ ತತ್ವಗಳ ಬಗ್ಗೆ ಅಸಹಯೇ? ಅವರ ಸಾಮಾಜಿಕ ಪರಿವರ್ತನೆಯ ಬಗ್ಗೆ ಅಸಡ್ಡೆಯೇ? ಅವರು ಹೇಳಿದ ಹಾಗೂ ಮಾಡಿದ ಸಾಮಾಜಿಕ ಸುಧಾರಣೆಗಳು ಬಿಜೆಪಿಗೆ ಇಷ್ಟವಿಲ್ಲವೇ? ಬಿಜೆಪಿ ತನ್ನ ಆಂತರ್ಯದ ಸತ್ಯವನ್ನು ಬಹಿರಂಗವಾಗಿ ಒಪ್ಪಿಕೊಳ್ಳಲಿ ಎಂದು ಒತ್ತಾಯಿಸಿದ್ದಾರೆ.

Contact Your\'s Advertisement; 9902492681

ಅಂದು ನಾರಾಯಣಗುರುಗಳು ಯಾವ ಶಕ್ತಿಗಳ ವಿರುದ್ಧ ಹೋರಾಡಿದ್ದರೋ ಇಂದು ಅದೇ ಶಕ್ತಿಗಳ ಅವರನ್ನು ತಿರಸ್ಕಾರದಿಂದ ಕಾಣುತ್ತಿವೆ, ಅಂದು ಅವರು ಯಾವ ಶೋಷಣೆಯ ಮನೋಧರ್ಮದವರ ವಿರುದ್ಧ ಸಾಮಾಜಿಕ ಚಳವಳಿ ಕಟ್ಟಿದ್ದರೋ ಇಂದು ಅದೇ ಶೋಷಕ ಮನಸ್ಥಿತಿಯವರು ಅಧಿಕಾರ ಹಿಡಿದು ಬೇರೊಂದು ಬಗೆಯಲ್ಲಿ ಶೋಷಣೆ ನಡೆಸುತ್ತಿದ್ದಾರೆ.

ಈ ದೇಶದಲ್ಲಿ ಬುದ್ಧನ ಕಾಲದಿಂದಲೂ ಸಮಸಮಾಜ ನಿರ್ಮಿಸಲು ನಿರಂತರ ಪ್ರಯತ್ನಗಳು ನಡೆಯುತ್ತಲೇ ಇವೆ, ಇಂತಹ ಪ್ರಕ್ರಿಯೆಯಲ್ಲಿ ಬುದ್ಧ, ಬಸವ, ನಾರಾಯಣಗುರು, ಅಂಬೇಡ್ಕರ್ ಅವರುಗಳಂತಹಾ ಮಾಹಾ ಚೇತನಗಳು ಬಂದು ಹೋದರೂ, ಶತಶತಮಾನಗಳು ಕಳೆದರೂ, ಮಹೋನ್ನತ ಆದರ್ಶಗಳನ್ನು ತಿಳಿಸಿದರೂ ಇಂದಿಗೂ ಅಸಮಾನತೆ, ಶೋಷಣೆ, ಶ್ರೇಣೀಕೃತ ವ್ಯವಸ್ಥೆಯನ್ನು ಸಂಪೂರ್ಣ ಇಲ್ಲವಾಗಿಸಲು ಆಗದಿರುವುದು ವಿಪರ್ಯಾಸವೇ ಸರಿ ಎಂದಿದ್ದಾರೆ.

ಇಂತಹ ಕಾಲಘಟ್ಟದಲ್ಲಿ ಬುದ್ಧ, ಬಸವಣ್ಣ, ಅಂಬೇಡ್ಕರ್, ನಾರಾಯಣಗುರುಗಳಂತಹ ಮಹಾನ್ ಚೇತನಗಳೇ ನಮ್ಮ ಶಕ್ತಿಯಾಗಿದ್ದಾರೆ, ಅವರುಗಳನ್ನು ನಾವು ಫೋಟೋ, ಮೂರ್ತಿಗಳಿಗೆ ಮಾತ್ರ ಸೀಮಿತಗೊಳಿಸದೆ ಅವರ ತತ್ವಾದರ್ಶಗಳ ಸತ್ವವನ್ನು ಹೆಚ್ಚು ಹೆಚ್ಚು ಅರಿಯುವ ಪ್ರಯತ್ನ ಮಾಡಬೇಕು, ಹಾಗೂ ಈಗ ವಿಜೃಂಭಿಸುತ್ತಿರುವ ಆ ಪಟ್ಟಭದ್ರ ಹಿತಾಸಕ್ತಿಗಳ ನಡುವೆ ಸಮಸಮಾಜ ನಿರ್ಮಿಸಲು ಅವರು ಹೇಳಿಕೊಟ್ಟ ಆದರ್ಶಗಳ ತಳಹದಿಯಲ್ಲಿ ಪ್ರಯತ್ನಿಸಬೇಕು. ಅಂದಿನ ಕಾಲಘಟ್ಟದಲ್ಲಿ ಅವರೆಲ್ಲರ ಅವಶ್ಯಕತೆ ಎಸ್ಟಿತ್ತೋ, ಇಂದು ಅಷ್ಟೇ ಇದೆ.

ಕೇಂದ್ರ ಸರ್ಕಾರ ಈ ನಿರಾಕರಣೆಗೆ ಕ್ಷಮೆ ಕೇಳಬೇಕು, ಮತ್ತು ಬೇಷರತ್ತಾಗಿ ನಾರಾಯಣಗುರುಗಳ ಸ್ತಬ್ಧ ಚಿತ್ರಕ್ಕೆ ಅವಕಾಶ ಮಾಡಿಕೊಡಬೇಕೆಂದು ಅರವರು ಆಗ್ರಹಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here